ರೈತನ ಬದುಕಿಗೆ ರೇಷ್ಮೆ ಹೊಳಪು

ಕೈಲಾಂಚ ಹೋಬಳಿಯ ನೆಲಮಲೆ ಗ್ರಾಮದ ರೈತ ಗಂಗಾಧರ್​ ಅವರ  ರೇಷ್ಮೆ ಸಾಕಣೆ.
ಕೈಲಾಂಚ ಹೋಬಳಿಯ ನೆಲಮಲೆ ಗ್ರಾಮದ ರೈತ ಗಂಗಾಧರ್​ ಅವರ ರೇಷ್ಮೆ ಸಾಕಣೆ.
Published on

ಉಪ ಕಸುಬು ಜೀವನಕ್ಕೆ ಆಧಾರ > ವೈಜ್ಞಾನಿಕ ಪದ್ಧತಿಯಿಂದ ಗಟ್ಟಿ ನಿಲುವು,

ಕೈಲಾಂಚ: ಸಮಗ್ರ ಕೃಷಿ ಜತೆಗೆ ಉಪ ಕಸುಬಾಗಿ ಕೋಳಿ, ಮೇಕೆ ಸಾಕಣೆ ಮಾಡಿ ಕೃಷಿಯಲ್ಲಿ ಲಾಭದ ಹೆಜ್ಜೆ ಇಡುತ್ತಾ ಖುಷಿ ಕಾಣುತ್ತಿರುವ ರೈತ ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ನೆಲಮಲೆ ಗ್ರಾಮದ ರೈತ ಗಂಗಾಧರ್​.
ಗಂಗಾಧರ್​ ಅವರು 19 ಎಕರೆ ಭೂಮಿ ಹೊಂದಿದ್ದು, ಜಮೀನಿನ ಒಂದೊಂದು ಭಾಗದಲ್ಲೂ ಒಂದೊಂದು ಬೆಳೆ ಬೆಳೆಯುವ ಮೂಲಕ ಉತ್ತಮ ಕೃಷಿಕರಾಗಿ ಜೀವನ ಕಟ್ಟಿಕೊಂಡಿದ್ದಾರೆ. ಅಡಕೆ, ತೆಂಗು, ಮಾವು ತೋಟದ ಬೆಳೆಗಳ ಜತೆಗೆ ರೇಷ್ಮೆ ಅವಲಂಬಿಸಿ ಅದರಲ್ಲೂ ಯಶಸ್ಸು ಕಂಡುಕೊಂಡಿದ್ದಾರೆ.
ಶ್ರೀಗಂಧ ಸೇರಿದಂತೆ ಅರಣ್ಯ ಮರಗಳ ಕೃಷಿಯನ್ನೂ ಮಾಡುತ್ತಿದ್ದಾರೆ. ಸದಾ ಕೃಷಿಯಲ್ಲಿ ಯಶಸ್ಸು ಕಾಣಬೇಕೆಂಬುದು ಇವರ ಹಂಬಲ. ಇವರ ಕೃಷಿಗೆ ಕುಟುಂಬ ಬೆನ್ನೆಲುಬಾಗಿ ನಿಂತಿದೆ. ಆಧುನಿಕ ಕೃಷಿ ಪದ್ಧತಿ ಮೂಲಕ ರೇಷ್ಮೆ ತೋಟ ನಿರ್ವಹಣೆ ಮಾಡುತ್ತಾ ಬಂದಿರುವ ಇವರು ರೇಷ್ಮೆಯಲ್ಲೇ ಬದುಕು ಕಟ್ಟಿಕೊಂಡಿದ್ದಾರೆ.
ನೀರಿನ ಮಿತ ಬಳಕೆ
ಎರಡು ಬೋರ್​ವೆಲ್​ ಕೊರೆಸಿದ್ದು ಒಂದು ನೆಲಬಾವಿ ಕೂಡ ಇದೆ. ಜತೆಗೆ ಕೃಷಿ ಹೊಂಡವಿದ್ದು, ವಿದ್ಯುತ್​ ಇಲ್ಲದಿರುವಾಗ ಕೃಷಿ ಹೊಂಡದಿಂದ ಬೆಳೆಗಳಿಗೆ ನೀರಿನ ಸಂಪರ್ಕ ಪಡೆಯುತ್ತಾರೆ. ಜತೆಗೆ ರೇಷ್ಮೆ, ಅಡಕೆ, ತೆಂಗು ಬೆಳೆಗಳಿಗೆ ಹನಿ ನೀರಾವರಿ ಅಳವಡಿಸಿಕೊಂಡಿದ್ದು ನೀರಿನ ಮಿತ ಬಳಕೆಗೆ ಒತ್ತು ನೀಡಿದ್ದಾರೆ.

ರೇಷ್ಮೆ

ಬಿಳಿಗೂಡು ಬೆಳೆಯುವ ಇವರು, ಪ್ರಮುಖವಾಗಿ ವರ್ಷದ 365 ದಿನವೂ ರೇಷ್ಮೆ ಬೆಳೆಯಲ್ಲಿ ತೊಡಗಿಕೊಂಡಿರುವ ಇವರು, ಎರಡು ಬ್ಯಾಚ್​ನಲ್ಲಿ ಒಂದು ಬಾರಿ 75 ಮೊಟ್ಟೆಯಂತೆ ರೇಷ್ಮೆ ಬೆಳೆಯುತ್ತಿದ್ದಾರೆ. ಎರಡು ಎಕರೆ ಪ್ರದೇಶದಲ್ಲಿ ರೇಷ್ಮೆ ಬೆಳೆ ಇದ್ದು, ಮಾವು 12, ಅಡಕೆ 1, ತೆಂಗು 4 ಎಕರೆ ಪ್ರದೇಶದಲ್ಲಿವೆೆ. ಜತೆಗೆ ಖಾಲಿ ಜಾಗದಲ್ಲಿ ಮಾವು, ತೆಂಗು ತೋಟಗಳಲ್ಲಿ ರಾಗಿ, ಜೋಳ, ಜಾನುವಾರು ಮೇವು, ಮನೆ ಬಳಕೆಗೆ ತರಕಾರಿ ಬೆಳೆಯುತ್ತಿದ್ದಾರೆ.
ಹೊಸ ಪ್ರಯೋಗ
ಸೇಬು ಹಣ್ಣಿನ ಬೆಳೆ ಬೆಳೆಯಲು ಮುಂದಡಿ ಇಟ್ಟಿರುವ ಇವರು ಪ್ರಾರಂಭಿಕವಾಗಿ 15 ಸೇಬು ಗಿಡ ನೆಟ್ಟಿದ್ದಾರೆ. ಜತೆಗೆ ಬಟರ್​ ್ರೂಟ್​, ನಿಂಬೆ, ನುಗ್ಗೆ ಬೆಳೆ ಬೆಳೆಯುತ್ತಿದ್ದು ಸೇಬನ್ನು ಮತ್ತಷ್ಟು ವಿಸ್ತರಿಸಲು ಉತ್ಸುಕರಾಗಿದ್ದಾರೆ.
ಕೊಟ್ಟಿಗೆ ಗೊಬ್ಬರ
ರಾಸಾಯನಿಕ ಗೊಬ್ಬರಕ್ಕೆ ಮುಖ ಮಾಡದೆ ಕೊಟ್ಟಿಗೆ ಗೊಬ್ಬರ, ಸಾವಯವ ಗೊಬ್ಬರಕ್ಕೆ ಒತ್ತುಕೊಟ್ಟಿದ್ದಾರೆ. ಕೊಳಿ ಗೊಬ್ಬರ, ಮೇಕೆ, ರೇಷ್ಮೆ ಗೊಬ್ಬರವನ್ನು ಜಮೀನಿನಲ್ಲೇ ಸಾವಯವ ಗೊಬ್ಬರವಾಗಿ ಪರಿವರ್ತಿಸಿ ಆ ಗೊಬ್ಬರವನ್ನು ಅಡಕೆ, ರೇಷ್ಮೆ, ಹಣ್ಣಿನ ಗಿಡ, ವಿವಿಧ ಬೆಳೆಗಳಿಗೆ ಉಪಯೋಗಿಸಿ ರಾಸಾಯನಿಕ ಗೊಬ್ಬರ ತ್ಯಜಿಸಿದ್ದಾರೆ. ಇದರೊಂದಿಗೆ ಜಮೀನಿನ ಫಲವತ್ತತೆಯತ್ತ ಹೆಚ್ಚು ಗಮನಹರಿಸಿದ್ದಾರೆ.
ಕೃಷಿಹೊಂಡ
ಜಮೀನಿನ ಎತ್ತರ ಭಾಗದಲ್ಲಿ ಕೃಷಿಹೊಂಡ ನಿರ್ಮಾಣ ಮಾಡಲಾಗಿದ್ದು, ವಿದ್ಯುತ್​ ಇರುವ ಸಮಯದಲ್ಲಿ ಬೋರ್​ವೆಲ್​ಗಳಿಂದ ನೀರು ಸಂಗ್ರಹಿಸಿಕೊಂಡು, ವಿದ್ಯುತ್​ ಇಲ್ಲದ ವೇಳೆ ತೋಟಕ್ಕೆ ನೀರುಣಿಸುತ್ತಿದ್ದಾರೆ. ಜಾನುವಾರುಗಳಿಗೆ ಮೇವು, ರೇಷ್ಮೆ, ತೆಂಗು, ಅಡಕೆ, ತರಕಾರಿ ಬೆಳೆಗಳಿಗೆ ನೀರು ಹಾಯಿಸಿಕೊಂಡು ವೈಜ್ಞಾನಿಕ ರೀತಿಯಲ್ಲಿ ಫಸಲು ಪಡೆಯುತ್ತಿದ್ದಾರೆ.
ತಟ್ಟೆ ರೇಷ್ಮೆ ಬೆಳೆಯಿಂದ ವೈಜ್ಞಾನಿಕ ಬೆಳವಣಿಗೆ
ಮೊದಲು ಬಿದಿರು ತಟ್ಟೆಯಲ್ಲಿ ರೇಷ್ಮೆ ಬೆಳೆಯಲಾಗುತ್ತಿತ್ತು. ಆಗ ಇಳುವರಿ ಕಡಿಮೆಯಾಗಿ ಲಾಭ ಹೆಚ್ಚು ಸಿಗುತ್ತಿರಲಿಲ್ಲ. ಈಗ ವೈಜ್ಞಾನಿಕ ರೀತಿಯಲ್ಲಿ ಹುಳು ಸಾಕಣೆ ಮಾಡುತ್ತಿದ್ದು, ಹೆಚ್ಚಿನ ಇಳುವರಿ ಜತೆಗೆ ಉತ್ತಮ ಲಾಭವೂ ಬರುತ್ತಿದೆ ಎನ್ನುತ್ತಾರೆ ರೈತ ಗಂಗಾಧರ್​.
ಮೇಕೆ, ಕೋಳಿ ಸಾಕಾಣಿಕೆ
ಪ್ರಸ್ತುತ ಕೃಷಿ ಜತೆಗೆ ಮೇಕೆ ಸಾಕಣೆ ಮತ್ತು ಬಾಯ್ಲರ್​ ಕೋಳಿ ಸಾಕಣೆ ಮಾಡುತ್ತಿದ್ದಾರೆ. 15 ಮೇಕೆಗಳು ಇವರಲ್ಲಿವೆ. ಪ್ರತಿ ಬ್ಯಾಚ್​ಗೆ ಏಳೂವರೆ ಸಾವಿರ ಬಾಯ್ಲರ್​ ಕೋಳಿ ಸಾಕಣೆ ಮಾಡುತ್ತಿದ್ದಾರೆ.
‘ಮಾವು, ರಾಗಿ ಬೆಳೆ
ವಾಣಿಜ್ಯ ಬೆಳೆಯಾಗಿ ಮಾವು ಬೆಳೆಯುತ್ತಿರುವ ಇವರು, ತಾವೇ ಕೊಯ್ಲುಮಾಡಿ ಮಾರುಕಟ್ಟೆಗೆ ಕೊಂಡೊಯ್ಯುತ್ತಾರೆ. ಜತೆಗೆ ಮಳೆಯಾಶ್ರಿತ ಹಾಗೂ ನೀರಾವರಿಯಿಂದ ರಾಗಿ ಬೆಳೆಯುತ್ತಿದ್ದು, ವರ್ಷದಲ್ಲಿ ನೀರಾವರಿ ಮುಖಾಂತರ ಮೂರು ಬಾರಿ ರಾಗಿ ಬೆಳೆಯುತ್ತಿದ್ದಾರೆ. ಒಂದು ಬಾರಿ ಒಂದು ತರಹದ ಬೆಳೆ ಹಾಕಿದರೆ, ಮತ್ತೆ ಅದೇ ಜಾಗದಲ್ಲಿ ಅದೇ ಬೆಳೆ ಹಾಕದೆ ಭೂಮಿಯ ಫಲವತ್ತತೆ ಕಾಪಾಡಿಕೊಳ್ಳುತ್ತಿದ್ದಾರೆ.
"

ಕೃಷಿ ನಮಗೆ ಜೀವಾಳ. ಅದರಲ್ಲೇ ಬದುಕು ಕಟ್ಟಿಕೊಂಡಿದ್ದೇವೆ. ರೇಷ್ಮೆ, ಮೇಕೆ, ಕೋಳಿ ಸಾಕಣೆಉಪ ಕಸುಬು ನಮ್ಮ ಕೈಹಿಡಿದಿದೆ. ಕೃಷಿಗೆ ಕೂಲಿ ಕಾರ್ಮಿಕರ ಕೊರತೆಯಿಂದಾಗಿ ಮತ್ತಷ್ಟು ಕೃಷಿ ವಿಸ್ತರಣೆ ಸಾಧ್ಯವಾಗಿಲ್ಲ. ಆಧುನಿಕ ಪದ್ಧತಿ ಮೂಲಕ ಯಂತ್ರಗಳ ಸಹಾಯದಿಂದ ಕೃಷಿಗೆ ಒತ್ತು ನೀಡಿದ್ದೇವೆ. ಜತೆಗೆ ಆನೆಗಳ ಕಾಟ ಇರುವ ಕಾರಣ ಬಾಳೆ ಇನ್ನಿತರ ತೋಟದ ಬೆಳೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಹಿಂದೆ ಹಲವಾರು ಬಾರಿ ಬೆಳೆ ನಾಶವಾಗಿ ನಷ್ಟ ಅನುಭವಿಸಿದ್ದೇವೆ.

"

ಗಂಗಾಧರ್​ ಪ್ರಗತಿಪರ ಕೃಷಿಕರಾಗಿದ್ದು ತೋಟದ ಬೆಳೆಗಳ ಜತೆಗೆ ಉತ್ತಮ ರಾಗಿ, ಜೋಳ ಸೇರಿದಂತೆ ಹಲವು ರೀತಿಯ ಬೆಳೆ ಬೆಳೆಯುತ್ತಾರೆ. ಇಲಾಖೆ ಅವರಿಗೆ ವೈಜ್ಞಾನಿಕ ಪದ್ಧತಿಯಲ್ಲಿ ಬೆಳೆ ಬೆಳೆಯುವ ಬಗ್ಗೆ ಕಾಲಕಾಲಕ್ಕೆ ಮಾಹಿತಿ ನೀಡಿ ಸಹಕಾರ ನೀಡುತ್ತಾ ಬರುತ್ತಿದೆ. ಅವರ ಕೃಷಿ ಚಟುವಟಿಕೆ ಇಲಾಖೆ ಮಾಹಿತಿ ನೀಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net