ನಾಡಿನ ಪ್ರಬುದ್ಧ ರಾಜಕಾರಣಿ ಶಾಂತವೇರಿ ಗೋಪಾಲಗೌಡ

ಚನ್ನಪಟ್ಟಣದ ಸಾರ್ವಜನಿಕ ವಿದ್ಯಾಸಂಸ್ಥೆ ಆವರಣದಲ್ಲಿ ಸಿಂ.ಲಿಂ.ನಾಗರಾಜು ಪ್ರತಿಷ್ಠಾನದಿಂದ ಆಯೋಜಿಸಿದ್ದ ಶಾಂತವೇರಿ ಗೋಪಾಲಗೌಡ ಜನ್ಮದಿನ ಕಾರ್ಯಕ್ರಮದಲ್ಲಿ ‘ಮೇದರದೊಡ್ಡಿ ಹನುಮಂತರವರ ನೆಲದಲ್ಲಿಯೂ ನಕ್ಷತ್ರಗಳಿವೆ’ ಕವನ ಸಂಕಲನವನ್ನು ವಿಚಾರವಾದಿ ಬಂಜಗೆರೆ ಜಯಪ್ರಕಾಶ್ ಲೋಕಾರ್ಪಣೆ ಮಾಡಿದರು. ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್, ಎಸ್‌ಡಿಎಂಸಿ ಸಮನ್ವಯ ವೇದಿಕೆ ಅಧ್ಯಕ್ಷ ಉಮೇಶ್ ಗಂಗವಾಡಿ, ಹಿರಿಯ ಸಾಹಿತಿ ಡಾ.ಕೂ.ಗಿ.ಗಿರಿಯಪ್ಪ, ಸಮಾಜಸೇವಕ ರುದ್ರಪ್ಪ ಇತರರು ಇದ್ದರು.
ಚನ್ನಪಟ್ಟಣದ ಸಾರ್ವಜನಿಕ ವಿದ್ಯಾಸಂಸ್ಥೆ ಆವರಣದಲ್ಲಿ ಸಿಂ.ಲಿಂ.ನಾಗರಾಜು ಪ್ರತಿಷ್ಠಾನದಿಂದ ಆಯೋಜಿಸಿದ್ದ ಶಾಂತವೇರಿ ಗೋಪಾಲಗೌಡ ಜನ್ಮದಿನ ಕಾರ್ಯಕ್ರಮದಲ್ಲಿ ‘ಮೇದರದೊಡ್ಡಿ ಹನುಮಂತರವರ ನೆಲದಲ್ಲಿಯೂ ನಕ್ಷತ್ರಗಳಿವೆ’ ಕವನ ಸಂಕಲನವನ್ನು ವಿಚಾರವಾದಿ ಬಂಜಗೆರೆ ಜಯಪ್ರಕಾಶ್ ಲೋಕಾರ್ಪಣೆ ಮಾಡಿದರು. ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್, ಎಸ್‌ಡಿಎಂಸಿ ಸಮನ್ವಯ ವೇದಿಕೆ ಅಧ್ಯಕ್ಷ ಉಮೇಶ್ ಗಂಗವಾಡಿ, ಹಿರಿಯ ಸಾಹಿತಿ ಡಾ.ಕೂ.ಗಿ.ಗಿರಿಯಪ್ಪ, ಸಮಾಜಸೇವಕ ರುದ್ರಪ್ಪ ಇತರರು ಇದ್ದರು.
Published on
ಚನ್ನಪಟ್ಟಣ: ಶಾಂತವೇರಿ ಗೋಪಾಲಗೌಡ ಅವರು ನಾಡಿನ ಪ್ರಬುದ್ಧ ರಾಜಕಾರಣಿ. ವೋಟನ್ನೂ ನೀವೇ ಕೊಡಿ, ನೋಟನ್ನೂ ನೀವೇ ಕೊಡಿ, ನಿಮ್ಮ ಸೇವೆಗೆ ಅವಕಾಶ ನೀಡಿ ಎಂದು ಜನರಬಳಿ ವಿನಯದಿಂದ ಕೇಳಿಕೊಂಡಅಪರೂಪದ ವ್ಯಕ್ತಿತ್ವ ಎಂದು ವಿಚಾರವಾದಿ ಬಂಜಗೆರೆ ಜಯಪ್ರಕಾಶ್ ಸ್ಮರಿಸಿದರು.
ಸಿಂ.ಲಿಂ. ನಾಗರಾಜು ಪ್ರತಿಷ್ಠಾನದಿಂದ ನಗರದ ಸಾರ್ವಜನಿಕ ವಿದ್ಯಾಸಂಸ್ಥೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಶಾಂತವೇರಿ ಗೋಪಾಲಗೌಡ ಜನ್ಮದಿನ ಹಾಗೂ ‘ಮೇದರದೊಡ್ಡಿ ಹನುಮಂತರವರ ನೆಲದಲ್ಲಿಯೂ ನಕ್ಷತ್ರಗಳಿವೆ’ ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರ್ನಾಟಕದಲ್ಲಿ ಆದರ್ಶ ರಾಜಕಾರಣಕ್ಕೆ ಹೆಸರುವಾಸಿಯಾದ ಗೌಡರು, ಸಾಹಿತ್ಯ ಪ್ರಿಯರು. ಹಲವಾರು ಸಾಹಿತಿಗಳು ಅವರ ಒಡನಾಟದಲ್ಲಿದ್ದರು. ಸಾಹಿತ್ಯದ ಬಗ್ಗೆ ನಿರರ್ಗಳವಾಗಿ ಮಾತನಾಡುತ್ತಿದ್ದ ಏಕೈಕ ರಾಜಕಾರಣಿ. ಅವರ ವ್ಯಕ್ತಿತ್ವ ಮತ್ತು ಚಿಂತನೆಗಳಿಂದ ರಾಷ್ಟ್ರಕವಿ ಕುವೆಂಪು, ಡಾ.ಪೂರ್ಣಚಂದ್ರ ತೇಜಸ್ವಿ, ಲಂಕೇಶ್ ಸೇರಿದಂತೆ ಆ ಕಾಲದ ಅನೇಕ ಸಾಹಿತಿಗಳು ಪ್ರಭಾವಿತರಾಗಿ, ಅವರೊಡನೆ ಆತ್ಮೀಯ ಒಡನಾಟ ಹೊಂದಿದ್ದರು. ಶಾಂತವೇರಿ ಗೋಪಾಲಗೌಡರಂತೆಯೇ ರಾಜಕೀಯದಲ್ಲಿದ್ದು, ಶುದ್ಧ ಹಸ್ತದವರಾಗಿದ್ದವರಲ್ಲಿ ಈ ನೆಲದ ಸಿಂ.ಲಿಂ.ನಾಗರಾಜು ಸಹ ಪ್ರಮುಖರು. ಮೌಲ್ಯಾಧಾರಿತ ರಾಜಕಾರಣಕ್ಕೆ ಮಾದರಿಯಾಗಿದ್ದ ಸಿಂಲಿಂ ಹೆಸರಿನ ಪ್ರತಿಷ್ಠಾನ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಅರ್ಥಪೂರ್ಣ ಎಂದರು.
ಅಪರೂಪದ ಕಾರ್ಯಕ್ರಮ! : ಸಮಾಜವಾದಿ ಚಿಂತನೆ, ಮೌಲ್ಯಾಧಾರಿತ ರಾಜಕಾರಣ ಮತ್ತು ಸಾಹಿತ್ಯ ಸಂಸ್ಕೃತಿಯ ನೆನಪುಗಳನ್ನು ಒಂದೇ ವೇದಿಕೆಯಲ್ಲಿ ನಡೆದ ಅಪರೂಪದ ಕಾರ್ಯಕ್ರಮಕ್ಕೆ ಸಾರ್ವಜನಿಕ ವಿದ್ಯಾಸಂಸ್ಥೆ ಸಾಕ್ಷಿಯಾಯಿತು. ಸಾಮಾಜಿಕ ಚಿಂತಕ ಎಚ್.ಕೆ.ವಿವೇಕಾನಂದ ಅವರು, ಶಾಂತವೇರಿ ಗೋಪಾಲಗೌಡರ ಜೀವನ ಹಾಗೂ ಚಿಂತನೆಗಳ ಕುರಿತು ಪ್ರಧಾನ ಭಾಷಣ ಮಾಡಿದರು. ಅವರ ರಾಜಕೀಯ ಜೀವನವು ಇಂದಿನ ಪೀಳಿಗೆಗೆ ಆದರ್ಶದ ದಾರಿ ತೋರಿಸುವಂತದ್ದು ಎಂದರು.
ಮತ್ತೋರ್ವ ಸಾಮಾಜಿಕ ಚಿಂತಕ ರೂಪೇಶ್ ಪುತ್ತೂರು ಅವರು ನೆಲದಲ್ಲಿಯೂ ನಕ್ಷತ್ರಗಳಿವೆ ಕವನ ಸಂಕಲನದ ಬಗ್ಗೆ ಮಾತನಾಡಿ, ಗ್ರಾಮೀಣ ಬದುಕಿನ ಸ್ಪಂದನೆ, ಬದುಕಿನ ಹೋರಾಟ ಮತ್ತು ಮಾನವೀಯ ಮೌಲ್ಯಗಳನ್ನು ಸ್ಪರ್ಶಿಸುವ ಕವನಗಳು ಓದುಗರ ಮನಸ್ಸಿಗೆ ಹತ್ತಿರವಾಗುತ್ತವೆ ಎಂದರು.
ಟ್ರಸ್ಟ್ ಅಧ್ಯಕ್ಷ ಶಂಭೂಗೌಡ ನಾಗವಾರ, ಸಂಚಾಲಕ ಎಸ್.ಎನ್.ಆದರ್ಶಕುಮಾರ್, ಬಿಸಿಯೂಟ ನೌಕರರ ಸಂಘದ ಜಿಲ್ಲಾಧ್ಯಕ್ಷೆ ನಿರ್ಮಲಾ, ಕಲಾವಿದೆ ಮಮತಾ ಯೋಗಾನಂದ್, ಪತ್ರಕರ್ತರಾದ ರಾಜೇಶ್ ರಾಂಪುರ, ಕುಂಬಾಪುರ ಬಾಬು, ಕವನ ಸಂಕಲನದ ಕರ್ತೃ ಮೇದರದೊಡ್ಡಿ ಹನುಮಂತ, ಯೋಗೇಶ್ ದ್ಯಾವಪಟ್ಟಣ, ಟ್ರಸ್ಟ್ ಕಾರ್ಯಕಾರಿ ಮಂಡಳಿ ಸದಸ್ಯರಾದ ರಜನಿ ಆದರ್ಶ ಕುಮಾರ್, ಹೇಮಂತ್ ಗೌಡ, ಪಿ.ಸುರೇಶ್, ವೈ.ಎಂ.ಸತೀಸ್, ಕುಮಾರ್, ಇತರರಿದ್ದರು.
ಕಾವ್ಯ ಮನುಷ್ಯನ ಬದುಕನ್ನು ಯಾವ ದಿಕ್ಕಿಗೆ ಬೇಕಾದರೂ ತೆಗೆದುಕೊಂಡು ಹೋಗುವ ಶಕ್ತಿ ಹೊಂದಿದೆ. ಏನನ್ನು ಹೇಳಬೇಕೋ ಅದನ್ನು ಮುಕ್ತ ಹಾಗೂ ಮುಗ್ಧತೆಯಿಂದ ಹೇಳುವುದೇ ಕವಿತೆ. ಪ್ರಸುತ್ತ ದಿನಮಾನದಲ್ಲಿ ಸಿದ್ಧಾಂತ ಗಾಳಿಗೆ ತೂರಿ ಬದುಕುತ್ತಿರುವ ರಾಜಕಾರಣಿಗಳ ಮಧ್ಯೆ ನಾವಿದ್ದೇವೆ. ಮಹನೀಯರು ಹುಟ್ಟಿದ ನಾಡಿನಲ್ಲಿ ಅಪ್ರಬುದ್ಧರು ಮೆರೆಯುತ್ತಿದ್ದಾರೆ.
- ಡಾ.ಎಂ.ಬೈರೇಗೌಡ, ಜಾನಪದ ವಿದ್ವಾಂಸ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net