ರಸ್ತೆ ಕೆಸರು ಮಯ, ಸಂಚಾರ ಅಯೋಮಯ

traffic is in chaos.
traffic is in chaos.
Published on

ಮಾಗಡಿ:

ಮಾಗಡಿ ಮುಖ್ಯ ರಸ್ತೆ ವರದೇನಹಳ್ಳಿ ಹ್ಯಾಂಡ್ ಪೋಸ್ಟ್‌ನಿಂದ ಮಹದೇವಪುರಕ್ಕೆ ತೆರಳುವ ಪ್ರಮುಖ ಮೋಟಗಾನಹಳ್ಳಿ ರಸ್ತೆ ಸಂಪೂರ್ಣ ಹಾಳಾಗಿದ್ದು, ಬೃಹತ್ ಗುಂಡಿಗಳು ಬಿದ್ದು ಕೆರೆಯಂತಾಗಿದೆ. ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಮಾರ್ಗದಲ್ಲಿ ಪ್ರಯಾಣಿಕರು ಪ್ರಾಣ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವ ವಾತಾವರಣ ನಿರ್ಮಾಣವಾಗಿದೆ.

ಈ ರಸ್ತೆಯು ಮಾಗಡಿ ಮುಖ್ಯ ರಸ್ತೆಯಿಂದ ನೆಲಮಂಗಲ ಕಡೆಗೆ ಸಂಪರ್ಕ ಕಲ್ಪಿಸುವ 15 ಕಿಮೀ ಪ್ರಮುಖ ಹಾದಿ. ನಿತ್ಯ ಜಲ್ಲಿ ಮತ್ತು ಜಲ್ಲಿಪುಡಿ ತುಂಬಿದ ಭಾರೀ ಲಾರಿಗಳು ಮಿತಿಯಿಲ್ಲದೆ ಸಂಚರಿಸುತ್ತಿರುವುದರಿಂದ ರಸ್ತೆ ತೀವ್ರವಾಗಿ ಹಾನಿಗೊಳಗಾಗಿದೆ. ಸಣ್ಣಪುಟ್ಟ ಗುಂಡಿ ಬೃಹತ್ ತಾಣವಾಗಿ ಮಾರ್ಪಟ್ಟಿದ್ದು, ಮಳೆ ಬಂದರಂತೂ ರಸ್ತೆಯಲ್ಲಿ ಸಂಚಾರ ಮಾಡುವುದು ನರಕಯಾತನೆಯಾಗಿದೆ. ರಸ್ತೆಯೋ ಅಥವಾ ಕೆರೆಯೋ ಎಂದು ಗುರುತಿಸಲಾಗದಷ್ಟು ನೀರು ತುಂಬಿಕೊಳ್ಳುತ್ತಿದ್ದು, ಪ್ರಯಾಣಿಕರು ಜೀವ ಕೈಯಲ್ಲಿಡಿದು ಪ್ರಯಾಣಿಸಬೇಕಾಗಿದೆ.
ಅರಣ್ಯ ಪ್ರದೇಶದ ಆತಂಕ ಜೀವಕ್ಕೆ ಕುತ್ತು :
ರಸ್ತೆಯು ಬಂಟರಕುಪ್ಪೆ ಅರಣ್ಯ ಪ್ರದೇಶದ ವ್ಯಾಪ್ತಿ ಬರುತ್ತದೆ. ರಸ್ತೆಯ ಎರಡೂ ಬದಿ ದಟ್ಟ ಕಾಡಿರುವುದರಿಂದ ರಾತ್ರಿ ವೇಳೆ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿರುತ್ತದೆ. ಒಂದೆಡೆ ರಸ್ತೆಯಲ್ಲಿ ಬಿದ್ದಿರುವ ಬೃಹತ್ ಗುಂಡಿ, ಇನ್ನೊಂದೆಡೆ ಕಾಡುಪ್ರಾಣಿಗಳ ಭಯ! ಅದರೊಂದಿಗೆ ಅಪಾಯಕಾರಿ ರಸ್ತೆಯಲ್ಲೇ ದ್ವಿಚಕ್ರ ವಾಹನ, ಕಾರು ಹಾಗೂ ಲಾರಿ ಅತಿ ವೇಗವಾಗಿ ಬರುವುದರಿಂದ ಅನೇಕ ಅಪಘಾತ ಸಂಭವಿಸುತ್ತಿವೆ.
ಸಾರ್ವಜನಿಕರ ಆಕ್ರೋಶ:
ಸಾವಿರಾರು ಸಾರ್ವಜನಿಕರು ಹಾಗೂ ವಾಹನ ಸವಾರರು ಪ್ರತಿನಿತ್ಯ ಅನುಭವಿಸುತ್ತಿರುವ ಈ ಸಂಕಟವನ್ನು ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ದಿನನಿತ್ಯ ರಸ್ತೆಯಲ್ಲೇ ಸಂಚರಿಸುವ ಅಧಿಕಾರಿ ವರ್ಗಕ್ಕೆ ಸಾರ್ವಜನಿಕರ ಆಕ್ರಂದನ ಕೇಳಿಸುತ್ತಿಲ್ಲವೇ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಮೂಡಿದೆ. ಅಧಿಕಾರಿಗಳು ಯಾವುದೋ ದೊಡ್ಡ ದುರಂತ ಸಂಭವಿಸುವುದನ್ನೇ ಕಾಯುತ್ತಿದ್ದಾರೆಯೇ?’ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮಾಗಡಿ - ನೆಲಮಂಗಲ ತಾಲೂಕಿನ ವ್ಯಾಪ್ತಿಯಲ್ಲಿ ಇರುವುದರಿಂದ ರಸ್ತೆ ಅಭಿವೃದ್ಧಿಗೆ ಅಧಿಕಾರಿಗಳಲ್ಲಿ ರಾಜಕಾರಣಿಗಳಲ್ಲಿ ಸಾಕಷ್ಟು ಮೀನಮೇಷದಿಂದಾಗಿ ವಾಹನಸವಾರರು ತೊಂದರೆ ಅನುಭವಿಸುವಂತಾಗಿದೆ. ರಸ್ತೆಯಲ್ಲಿ ಬಿದ್ದು ವಾಹನ ಸವಾರರು ಗಾಯಗೊಂಡರೆ ಚಿಕಿತ್ಸೆಗೆ ದೂರದ ಮಾಗಡಿ, ನೆಲಮಂಗಲ, ತಾವರೆಕೆರೆ ಇಲ್ಲವೇ ಬೆಂಗಳೂರಿನ ಆಸ್ಪತ್ರೆಗೆ ತೆರಳಬೇಕಿದ್ದು, ಚಿಕಿತ್ಸೆಗೆ ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ರವಾನಿಸಲು ಸಲ್ಪ ತಡವಾದರೆ ಜೀವಕ್ಕೆ ಕುತ್ತು ಗ್ಯಾರಂಟಿ ಎಂದು ನಾಗರಿಕರು ಆಕ್ರೊಶವ್ಯಕ್ತಪಡಿಸಿದರು.
ತಕ್ಷಣವೇ ರಸ್ತೆ ದುರಸ್ತಿಗೆ ಆಗ್ರಹ
ವರದೇನಹಳ್ಳಿ ಹ್ಯಾಂಡ್ ಪೋಸ್ಟ್‌ನಿಂದ ಮಹದೇವಪುರ ಮಾರ್ಗವಾಗಿ ನೆಲಮಂಗಲ ಸಂಪರ್ಕಿಸುವ ರಸ್ತೆ ತಕ್ಷಣವೇ ದುರಸ್ತಿಗೊಳಿಸಿ, ಸಂಚಾರಕ್ಕೆ ಯೋಗ್ಯವಾಗಿಸಬೇಕು. ಭಾರೀ ವಾಹನಗಳ ಅನಿಯಂತ್ರಿತ ಸಂಚಾರಕ್ಕೆ ಕಡಿವಾಣ ಹಾಕಿ, ಗುಂಡಿ ಮುಚ್ಚಿ ರಸ್ತೆಗೆ ಡಾಂಬರೀಕರಣ ಮಾಡಬೇಕು. ಬಂಟರಕುಪ್ಪೆ ಅರಣ್ಯ ವಲಯದ ಸೂಕ್ಷ್ಮ ರಸ್ತೆಯಲ್ಲಿ ನಾಗರಿಕರ ಸುರಕ್ಷತೆಗೆ ಸೂಕ್ತ ಬೆಳಕಿನ ಹಾಗೂ ಎಚ್ಚರಿಕೆ ಫಲಕದ ವ್ಯವಸ್ಥೆ ಕಲ್ಪಿಸಬೇಕು. ಇನ್ನಾದರೂ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜಡತ್ವದಿಂದ ಎದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ತಕ್ಷಣ ಕ್ರಮ ಕೈಗೊಳ್ಳಬೇಕಿದೆ.

ಶೀಘ್ರವೇ ಗುಂಡಿ ಮುಚ್ಚಿ ವಾಹನ ಸವಾರರಿಗೆ ಅನುಕೂಲ ಕಲ್ಪಿಸದೆ ನಿರ್ಲಕ್ಷ್ಯಿಸಿದರೆ ರಸ್ತೆ ಗುಂಡಿಗೆ ರಾಗಿ ನಾಟಿ ಮಾಡಿ ರಸ್ತೆ ತಡೆದು ಪ್ರತಿಭಟಿಸಲಾಗುವುದು.

ಹೋಸಪಾಳ್ಯ ಲೋಕೇಶ್ ತಾಲೂಕು ರೈತಸಂಘ

ಮಾಗಡಿ ವ್ಯಾಪ್ತಿಗೆ 4 ಕಿ.ಮೀ ರಸ್ತೆ ಬರಲಿದ್ದು ಉಳಿದದ್ದು ನೆಲಮಂಗಲ ವ್ಯಾಪ್ತಿಗೆ ಬರಲಿದೆ ಮಾಗಡಿ ವ್ಯಾಪ್ತಿಯ ರಸ್ತೆಗೆ ಡಾಂಬರ್ ಅಳವಡಿಸಿ ರಸ್ತೆ ಅಭಿವೃದ್ದಿ ಅನುದಾನಕ್ಕೆ ಮನವಿ ಮಾಡಲಾಗಿದೆ ಶೀಘ್ರವೇ ರಸ್ತೆ ಅಭಿವೃದ್ದಿಗೆ ಕ್ರಮಕೈಗೊಳ್ಳಲಾಗುವುದು.

ಶಿವಕುಮಾರ್, ಲೋಕೋಪಯೋಗಿ ಇಲಾಖೆ ಮಾಗಡಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net