ನೊಂದವರ ಸಮಸ್ಯೆ ತ್ವರಿತಗತಿಯಲ್ಲಿ ಪರಿಹರಿಸಿ

ಪೋಟೋ  ರಾಮನಗರದ ಜಿಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ ಅಧ್ಯಕ್ಷ ಡಾ.ಮೂರ್ತಿ ಎಲ್., ಅಹವಾಲು ಸ್ವೀಕರಿಸಿದರು. ಸದಸ್ಯರಾದ ಎಂ. ಕುಂಬಯ್ಯ, ಸುನಿಲ್ ಎಂ. ಉಕ್ಕಲಿ, ಎನ್.ದಿವಾಕರ್, ಗೀತಾ ಥಾವಂಶಿ, ಕಾರ್ಯದರ್ಶಿ ಡಾ. ಎಚ್.ಎಸ್.ಶಿವರಾಮು ಇದ್ದರು.
ಪೋಟೋ ರಾಮನಗರದ ಜಿಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ ಅಧ್ಯಕ್ಷ ಡಾ.ಮೂರ್ತಿ ಎಲ್., ಅಹವಾಲು ಸ್ವೀಕರಿಸಿದರು. ಸದಸ್ಯರಾದ ಎಂ. ಕುಂಬಯ್ಯ, ಸುನಿಲ್ ಎಂ. ಉಕ್ಕಲಿ, ಎನ್.ದಿವಾಕರ್, ಗೀತಾ ಥಾವಂಶಿ, ಕಾರ್ಯದರ್ಶಿ ಡಾ. ಎಚ್.ಎಸ್.ಶಿವರಾಮು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನೊಂದವರ ಸಮಸ್ಯೆ ತ್ವರಿತಗತಿಯಲ್ಲಿ ಪರಿಹರಿಸಿ
ನೊಂದವರ ಸಮಸ್ಯೆ ತ್ವರಿತಗತಿಯಲ್ಲಿ ಪರಿಹರಿಸಿ
ರಾಮನಗರ: ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ ಎಂಬುದನ್ನು ಅರಿತು ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು. ನೊಂದ ಜನರೊಂದಿಗೆ ಸೌಜನ್ಯದಿಂದ ವರ್ತಿಸಿ, ಅವರ ಅಹವಾಲು ಆಲಿಸಿ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಬಗೆಹರಿಸಬೇಕು ಎಂದು ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಡಾ.ಮೂರ್ತಿ ಎಲ್. ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದಿಂದ ಬುಧವಾರ ಹಮ್ಮಿಕೊಂಡಿದ್ದ ಅಹವಾಲು ಸ್ವೀಕಾರ ಹಾಗೂ ಕುಂದುಕೊರತೆ ಆಲಿಕೆ ಸಭೆಯಲ್ಲಿ ಮಾತನಾಡಿದ ಅವರು, ಆಯೋಗವು ಯಾವುದೇ ಹಿರಿಯ ಅಧಿಕಾರಿಗಳಿಗೆ ಕಾನೂನಿನ ಚಾಟಿ ಬೀಸಲು ಹಿಂದೆ ಮುಂದೆ ನೋಡುವುದಿಲ್ಲ. ಇಲ್ಲಿ ಸಲ್ಲಿಕೆಯಾದ ಅಹವಾಲುಗಳನ್ನು ಆಯೋಗವು ಗಂಭೀರವಾಗಿ ಪರಿಶೀಲಿಸಲಿದೆ. ಹಾಗಾಗಿ ಅಧಿಕಾರಿಗಳು ಸಮಸ್ಯೆಯನ್ನು ತ್ವರಿತಗತಿಯಲ್ಲಿ ಬಗೆಹರಿಸಬೇಕು ಎಂದು ನಿರ್ದೇಶನ ನೀಡಿದರು.
15 ದಿನಗಳಲ್ಲಿ ಸರ್ಕಾರಕ್ಕೆ ವರದಿ: ಕಳೆದ 7 ತಿಂಗಳಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆ ಸೇರಿ ರಾಜ್ಯದ 15 ಜಿಲ್ಲೆಗಳ ಪ್ರವಾಸ ಕೈಗೊಂಡು ಅಲ್ಲಿ ಅಹವಾಲು ಸ್ವೀಕರಿಸಿ, ಜನರ ಸಮಸ್ಯೆಗಳನ್ನು ಗಂಭೀರವಾಗಿ ಪರಿಶೀಲಿಸಲಾಗಿದ್ದು, ಈ ಕುರಿತ ವರದಿಯನ್ನು 15 ದಿನಗಳೊಳಗೆ ಸರ್ಕಾರಕ್ಕೆ ಆಯೋಗ ಸಲ್ಲಿಸಲಿದೆ. ಸಮುದಾಯದವರಿಂದ ಸ್ವೀಕರಿಸಿದ ಅಹವಾಲುಗಳನ್ನು ಸಂಬಂಧಿತ ಇಲಾಖೆಯ ಅಧಿಕಾರಿಗಳಿಗೆ ಕಳುಹಿಸಿ, ಬಗೆಹರಿಸಲಾಗುತ್ತಿದೆ. ಈ ಬಗ್ಗೆ ಅರ್ಜಿದಾರರಿಗೆ ದೂರವಾಣಿ ಕರೆ ಮೂಲಕವೂ ಮಾಹಿತಿ ನೀಡಲಾಗುತ್ತದೆ. ಅಹವಾಲುದಾರರು ಸಂಬಂಧಿಸಿದ ಇಲಾಖೆಗೆ ಆಯೋಗದ ಪ್ರತಿಯನ್ನು ತೋರಿಸಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಅದಾಗ್ಯೂ ಈ ಸಮಸ್ಯೆಗಳು ಬಗೆಹರಿಯದಿದ್ದಲ್ಲಿ ಮುಂದಿನ ಒಂದೂವರೆ ತಿಂಗಳೊಳಗೆ ಮತ್ತೊಮ್ಮೆ ಆಯೋಗ ಸಭೆ ನಡೆಸಲಿದೆ ಎಂದು ತಿಳಿಸಿದರು.
ಆಯೋಗವು ಪ್ರವಾಸ ಮಾಡಿದ ಹಲವು ಜಿಲ್ಲೆಗಳಲ್ಲಿ ಶೇ.50ರಿಂದ 60 ಸಮಸ್ಯೆಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸಲಾಗಿದೆ. ಆದರೆ ಬೆಂಗಳೂರು ದಕ್ಷಿಣ ಜಿಲ್ಲೆಯ ಸಮಸ್ಯೆಗಳು ಸಾಕಷ್ಟು ಗೋಚರಿಸುತ್ತಿವೆ. ಅವುಗಳನ್ನು ಪರಿಶೀಲಿಸಿ, ಪರಿಹರಿಸಲು ಆಯೋಗ ಅಗತ್ಯ ರೀತಿಯಲ್ಲಿ ಕಾರ್ಯ ಪ್ರವೃತ್ತರಾಗಲಿದೆ ಎಂದು ಅಧ್ಯಕ್ಷರು ತಿಳಿಸಿದರು.
ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ, ವಿವಿಧ ಸಂಘಟನೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು, ಮಹಿಳಾ ಸಂಘಟನೆಗಳ ಪದಾಧಿಕಾರಿಗಳು, ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿ ಆಯೋಗಕ್ಕೆ ಅಹವಾಲು ಸಲ್ಲಿಸಿದರು.
ಆಯೋಗದ ಸದಸ್ಯರಾದ ಎಂ.ಕುಂಬಯ್ಯ, ಸುನಿಲ್ ಎಂ. ಉಕ್ಕಲಿ, ಎನ್.ದಿವಾಕರ್, ಗೀತಾ ಥಾವಂಶಿ, ಕಾರ್ಯದರ್ಶಿಗಳಾದ ಡಾ.ಎಚ್.ಎಸ್.ಶಿವರಾಮು, ಅಪರ ಜಿಲ್ಲಾಧಿಕಾರಿ ಆರ್.ಚಂದ್ಯಯ್ಯ, ಅಪರ ಪೊಲೀಸ್ ವರಿಷ್ಠಾಧಿಕಾರಿ ರಾಮಚಂದ್ರಯ್ಯ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶಿವಕುಮಾರ್, ಶ್ರೀನಿವಾಸ್ ಉಪಸ್ಥಿತರಿದ್ದರು.
ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ: ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾ ದಂಡಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಸಂಬಂಧಿಸಿದ ಅಧಿಕಾರಿಗಳ ಸಮ್ಮುಖದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ನಡೆಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ಡಾ.ಮೂರ್ತಿ ಎಲ್. ತಿಳಿಸಿದರು.
ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಸ್ಮಶಾನದ ಸಮಸ್ಯೆಗಳನ್ನು ಆಲಿಸಿ ಅದನ್ನು ಪರಿಹರಿಸಬೇಕು. 25-30 ಮನೆಗಳು ಎಲ್ಲೆಲ್ಲಿ ಇವೆಯೋ ಅಲ್ಲಿ ಸ್ಮಶಾನ ಮಂಜೂರು ಮಾಡಬೇಕು. ಪೋಡಿ, ಜಮೀನಿನಲ್ಲಿ ದಾರಿ ಬಿಡಿಸುವುದು, ಸರ್ವೇ ಸೇರಿ ಇತರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮೂರು ತಿಂಗಳಿಗೊಮ್ಮೆ ಸಭೆ ನಡೆಸಬೇಕು ಎಂದು ಅಧ್ಯಕ್ಷರು ತಿಳಿಸಿದರು.
ಅಲೆಮಾರಿಗಳನ್ನು ಒಕ್ಕಲೆಬ್ಬಿಸಬೇಡಿ: ಎಸ್‌ಸಿಪಿ ಹಾಗೂ ಟಿಎಸ್‌ಪಿ ಅನುದಾನವನ್ನು ಸಮರ್ಪಕವಾಗಿ ಬಳಸಬೇಕು. ಈ ಅನುದಾನದಡಿ ಕೈಗೊಂಡಿರುವ ಕಾಮಗಾರಿಗಳಿಗೆ ಕಡ್ಡಾಯವಾಗಿ ಎಸ್.ಸಿ.ಪಿ ಹಾಗೂ ಟಿ.ಎಸ್.ಪಿ ಯೋಜನೆಯಡಿ ಕೈಗೊಳ್ಳಲಾಗಿದೆ ಎಂದು ಬೋರ್ಡ್ ಹಾಕಿ ನಮೂದಿಸಬೇಕು ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ತಿಳಿಸಿದ ಅಧ್ಯಕ್ಷರು, ಸುಪ್ರೀಂ ಕೋರ್ಟ್ ಆದೇಶದಂತೆ ಅರಣ್ಯಗಳಲ್ಲಿ ವಾಸಿಸುತ್ತಿರುವ ಅಲೆಮಾರಿಗಳನ್ನು ಒಕ್ಕಲೆಬ್ಬಿಸಬಾರದು ಎಂದು ಅರಣ್ಯ ಹಾಗೂ ಕಂದಾಯ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಮಾಹಿತಿ ನೀಡಿದರು.
ಸೌಲಭ್ಯ ಕಲ್ಪಿಸಿ: ಪೌರ ಕಾರ್ಮಿಕರು ಈ ಸಮಾಜದ ಕಟ್ಟಕಡೆಯ ಜನ. ಜನರ ಸ್ವಚ್ಛತೆಯನ್ನು ಕಾಪಾಡುವ ಅವರಿಗೆ ಅವರಿಗೆ ತೊಂದರೆಯಾದರೆ ಈ ಸಮಾಜಕ್ಕೆ ತೊಂದರೆಯಾದಂತೆ. ಪೌರ ಕಾರ್ಮಿಕರಿಗೆ ಸರಿಯಾಗಿ ವೇತನ ಪಾವತಿಸುತ್ತಿರುವುದಿಲ್ಲ, ವೈದ್ಯಕೀಯ ಸೌಲಭ್ಯ ನೀಡಬೇಕು. ಪರಿಶಿಷ್ಟ ಜಾತಿ ಹಾಗೂ ವರ್ಗದ ಜನರು ದಮನಿತರು. ಅವರ ಅಹವಾಲುಗಳನ್ನು ಅಧಿಕಾರಿಗಳು ಕಡ್ಡಾಯವಾಗಿ ಸ್ವೀಕರಿಸಲೇಬೇಕು ಎಂದು ಸೂಚಿಸಿದ ಅಧ್ಯಕ್ಷರು, ಈ ಜನಾಂಗದವರು ಸಲ್ಲಿಸುವ ಅರ್ಜಿಗಳಿಗೆ ತ್ವರಿತವಾಗಿ ವಿಲೇ ಮಾಡಿ, ಪರಿಹಾರ ಒದಗಿಸಬೇಕು ಎಂದು ಸೂಚಿಸಿದರು.
ಡಿಸಿ, ಎಸ್ಪಿ ಗೈರು ಖಂಡಿಸಿ ಪ್ರತಿಭಟನೆ: ಜಿಲ್ಲಾಧಿಕಾರಿಗಳು ದಲಿತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಆಯೋಗದ ಅಧ್ಯಕ್ಷರ ಜಿಲ್ಲಾ ಭೇಟಿಯ ವೇಳೆ ಡಿಸಿ, ಎಸ್ಪಿ ಗೈರಾಗಿರುವುದೇ ಇದಕ್ಕೆ ಸಾಕ್ಷಿ ಎಂದು ಆರೋಪಿಸಿ ದಲಿತ ಮುಖಂಡರು ಆಯೋಗದ ಅಧ್ಯಕ್ಷರ ಸಮ್ಮುಖದಲ್ಲೇ ಪ್ರತಿಭಟನೆ ನಡೆಸಿದರು. ಸಾರ್ವಜನಿಕ ಅಹವಾಲು ಸ್ವೀಕರಿಸುವ ವೇಳೆ ಈ ಬಗ್ಗೆ ಧ್ವನಿಎತ್ತಿದ ದಲಿತ ಮುಖಂಡರು, ಜಿಲ್ಲಾಧಿಕಾರಿ ದಲಿತರನ್ನು ಕಡೆಗಣಿಸುತ್ತಿದ್ದಾರೆ. ಜಿಲ್ಲೆಯಲ್ಲಿ ದಲಿತರ ಕುಂದುಕೊರತೆ ಸಭೆಗಳನ್ನು ನಡೆಸುತ್ತಿಲ್ಲ. ಡಾ.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನ್‌ರಾಂ ಅವರ ಜಯಂತಿ ಕಾರ್ಯಕ್ರಮಗಳಿಗೆ ಗೈರಾಗುತ್ತಿದ್ದಾರೆ. ಶೋಷಿತ ಸಮುದಾಯಗಳ ಹಕ್ಕುಗಳನ್ನು ಎತ್ತಿಹಿಡಿಯುತ್ತಿಲ್ಲ ಎಂದು ಆರೋಪಿಸಿದರು.
ಆಯೋಗದ ಅಧ್ಯಕ್ಷರು ಮತ್ತು ಸದಸ್ಯರಾದ ನಿಮ್ಮನ್ನೂ ಸಹ ಶಿಷ್ಟಾಚಾರದಂತೆ ಜಿಲ್ಲಾಡಳಿತ ಸ್ವಾಗತಿಸಿಲ್ಲ. ಜಿಲ್ಲೆಯ ಹಿರಿಯ ಅಧಿಕಾರಿಗಳು ಸಭೆಗೆ ಗೈರಾಗಿ ಅವರ ಕೈಕೆಳಗಿನ ಅಧಿಕಾರಿಗಳನ್ನು ಕಳುಹಿಸಿ ಸುಮ್ಮನಾಗಿದ್ದಾರೆ. ಇದರಿಂದಾಗಿ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು. ಇದೇ ವೇಳೆ ಆಯೋಗದ ಅಧ್ಯಕ್ಷರ ಮುಂದೆ ಅಳಲು ತೋಡಿಕೊಂಡ ಮಹಿಳೆಯೊಬ್ಬರು, ನಾನು ಕೂಲಿಕೆಲಸ ಮಾಡುತ್ತಿದ್ದು, ನನ್ನ ಮೇಲೆ ಮಾರಣಾಂತಿಕ ಹಲ್ಲೆಮಾಡಲಾಗಿದೆ. ಆದರೂ ಪೊಲೀಸರು ಎಫ್‌ಐಆರ್ ದಾಖಲಿಸುತ್ತಿಲ್ಲ ಎಂದು ದೂರಿದರು. ತಕ್ಷಣ ಎಫ್‌ಐಆರ್ ದಾಖಲಿಸುವಂತೆ ಆಯೋಗದ ಅಧ್ಯಕ್ಷರು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net