ಬಿಡದಿ ಟೌನ್‌ಶಿಪ್ ಭೂಮಿಗೆ ದಾಖಲೆ ದರ ನಿಗದಿ

ಗ್ರೆಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಾಣಗೊಳ್ಳುತ್ತಿರುವ ಟೌನ್ ಷಿಪ್ ನ ನಕ್ಷೆ.
ಗ್ರೆಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಾಣಗೊಳ್ಳುತ್ತಿರುವ ಟೌನ್ ಷಿಪ್ ನ ನಕ್ಷೆ.
Published on

ಪ್ರಮುಖ ಮುಖ್ಯಾಂಶಗಳು

  • ಸ್ವಾಧೀನದ ಜಮೀನಿಗೆ ದಾಖಲೆ ಪರಿಹಾರ
  • ಕಾನೂನು ತಜ್ಞರ ಜತೆ ಸಮಾಲೋಚಿಸಿ ಪರಿಹಾರ ನಿಗದಿ
  • ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಟೌನ್ ಷಿಪ್ ಯೋಜನೆ
ರಾಮನಗರ
ತೀವ್ರ ವಿರೋಧ ಮತ್ತು ಚರ್ಚೆಗೆ ಕಾರಣವಾಗಿರುವ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಾಣಗೊಳ್ಳುತ್ತಿರುವ ಬಿಡದಿ ಟೌನ್‌ಶಿಪ್‌ಗೆ ವಶಪಡಿಸಿಕೊಳ್ಳುತ್ತಿರುವ ಜಮೀನಿಗೆ ಪರಿಹಾರ ಮೊತ್ತವನ್ನು ಜಿಲ್ಲಾಧಿಕಾರಿ ನಿಗದಿ ಪಡಿಸಿದ್ದಾರೆ.
ಟೌನ್‌ಶಿಪ್‌ಗಾಗಿ ಬಿಡದಿ ಹೋಬಳಿಯ 9 ಗ್ರಾಮಗಳ ಒಟ್ಟು 7,481 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿತ್ತು. ನಂತರ ಕೆಲ ರೈತರು ಭೂಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸಿದರೆ, ಹೆಚ್ಚಿನ ರೈತರು ಭೂಮಿಗೆ ಹೆಚ್ಚಿನ ಪರಿಹಾರ ನೀಡುವಂತೆ ಕೋರಿದ್ದರು. ಎಲ್ಲವನ್ನೂ ಪರಿಗಣಿಸಿ ಮೊದಲ ಬಾರಿಗೆ ರೈತರಿಗೆ ಹೆಚ್ಚಿನ ಪರಿಹಾರ ಮೊತ್ತವನ್ನು ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ನಿಗದಿಪಡಿಸಿದ್ದಾರೆ.
ಮುಖ್ಯರಸ್ತೆಗೆ ಹೊಂದಿರುವ ಜಮೀನಿಗೆ ಭೈರಮಂಗಲದಲ್ಲಿ 255 ಲಕ್ಷ ರೂ.(2.55 ಕೋಟಿ ರೂ.) ಮತ್ತು ಮುಖ್ಯ ರಸ್ತೆಗೆ ಹೊಂದಿಕೊಂಡಿರದ ಜಮೀನಿಗೆ 242.75 ಲಕ್ಷ ರೂ.(2.42 ಕೋಟಿ ರೂ.) ನಿಗದಿಪಡಿಸಲಾಗಿದೆ. ಕೆಂಪಯ್ಯನಪಾಳ್ಯ ಸೇರಿ ಹಲವು ಗ್ರಾಮಗಳಲ್ಲಿ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಜಮೀನಿಗೆ 219.62 ಲಕ್ಷ ರೂ.(2.19 ಕೋಟಿ ರೂ.) ಮತ್ತು ಇತರ ಜಮೀನಿಗೆ 207.30 ಲಕ್ಷ ರೂ. (2.07 ಕೋಟಿ ರೂ.) ನಿಗದಿಪಡಿಸಲಾಗಿದೆ.

ಗ್ರಾಮವಾರು ಪರಿಹಾರ

ದರ ನಿಗದಿಗೂ ಮೊದಲು ನ.6ರಂದು ಭೂಮಾಲೀಕರೊಂದಿಗೆ ಸಭೆ ನಡೆಸಿ ಸಲಹೆ ಮತ್ತು ಅಭಿಪ್ರಾಯಗಳನ್ನು ಜಿಲ್ಲಾಧಿಕಾರಿ ಸಂಗ್ರಹಿಸಿದ್ದರು. ಇದರ ಜತೆಗೆ, ಡಿಸಿಎಂ ಡಿ.ಕೆ.ಶಿವಕುಮಾರ್, ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ರೈತರಿಗೆ ಹೆಚ್ಚಿನ ಪರಿಹಾರ ಕೊಡಲೇಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿದ್ದರು. ಈ ನಿಟ್ಟಿನಲ್ಲಿ ಭೂ ಸ್ವಾಧೀನ ಪಾರದರ್ಶಕತೆ, ಸೂಕ್ತ ಪರಿಹಾರ ಹಕ್ಕು, ಪುನರ್ವಸತಿ ಮತ್ತು ಪುನರ್ವ್ಯವಸ್ಥೆ ಹಕ್ಕು ನಿರ್ಮಾಣ ಕಾಯ್ದೆ-2013ರ ಅವಕಾಶಗಳನ್ವಯ ಗ್ರಾಮವಾರು ಪರಿಹಾರ ದರ ನಿಗದಿಪಡಿಸಲಾಗಿದೆ.

ಒಪ್ಪದಿದ್ದರೆ ಕಡಿತ

ಕಾನೂನಾತ್ಮಕವಾಗಿ ಸಾಧ್ಯವಿರುವ ಎಲ್ಲ ಆಯಾಮ ಪರಿಶೀಲಿಸಿ, ಕಾನೂನು ತಜ್ಞರ ಸಲಹೆ ಮೇರೆಗೆ ಪರಿಹಾರ ದರ ನಿಗದಿಪಡಿಸಲಾಗಿದೆ. ಈ ದರವು ರೈತರು ಒಪ್ಪಿಗೆ ಪಡೆದು ಭೂ ಸ್ವಾಧೀನ ಪಡಿಸಿಕೊಳ್ಳುವ ಜಮೀನಿಗೆ ಅನ್ವಯವಾಗಲಿವೆ. ಒಂದು ವೇಳೆ ಭೂ ಮಾಲೀಕರು ಈ ದರಕ್ಕೆ ಒಪ್ಪದೆ ಇದ್ದರೆ ನಿಗದಿ ಪಡಿಸಿರುವ ದರಕ್ಕಿಂತ ಶೇ.10 ಮೊತ್ತವನ್ನು ಕಡಿತಗೊಳಿಸಲಾಗುತ್ತದೆ. ಯಾವುದಾದರೂ ಜಮೀನುಗಳಿಗೆ ಮಾರ್ಗಸೂಚಿ ದರ ಆಧಾರಿತವಾಗಿ 2013ರ ಕಾಯ್ದೆಯನುಸಾರ ಮೇಲೆ ನಿರ್ಧರಿಸಿದ ದರಕ್ಕಿಂತ ಹೆಚ್ಚಿನ ಪರಿಹಾರ ನಿಗದಿಯಾಗುವ ಸಂದರ್ಭಗಳಲ್ಲಿ ಅಂತಹ ಜಮೀನುಗಳಿಗೆ ಮಾರ್ಗಸೂಚಿ ದರ ಆಧಾರಿತವಾಗಿ ಪರಿಹಾರ ನಿಗದಿಪಡಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಅವರು ತಿಳಿಸಿದ್ದಾರೆ.
ನಿಗದಿತ ದರಗಳ ಪಟ್ಟಿ (ಲಕ್ಷ ರೂ.ಗಳಲ್ಲಿ)
(ಒಪ್ಪಿಗೆ ನೀಡಿದ ಪ್ರತಿ ಎಕರೆ ಜಮೀನಿಗೆ)
ಗ್ರಾಮ ಪ್ರತಿ ಎಕರೆಗೆ ಮುಖ್ಯರಸ್ತೆಗೆ ಹೊಂದಿಕೊಂಡಿರುವುದು
ಕೆಂಪಯ್ಯನ ಪಾಳ್ಯ 207.30 219.62
ಕಂಚುಗಾರನಹಳ್ಳಿ 207.30 219.62
ಅರಳಾಳು ಸಂದ್ರ 214.50 226.68
ಹೊಸೂರು 214.50 226.68
ಬನ್ನಿಗಿರಿ 207.30 219.62
ಕೆ.ಜಿ.ಗೊಲ್ಲರ ಪಾಳ್ಯ 207.30 219.62
ಮಂಡಲಹಳ್ಳಿ 214.50 000
ವಡೇರಹಳ್ಳಿ 214.50 000
ಭೈರಮಂಗಲ 242.75 255.00
"
ಕಾನೂನಿನ ಎಲ್ಲ ಆಯಾಮಗಳಲ್ಲೂ ಪರಿಶೀಲಿಸಿ, ರೈತರಿಗೆ ಹೆಚ್ಚಿನ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ

ದರ ನಿಗದಿ ಮಾಡಲಾಗಿದೆ. ಇದು ಜಮೀನು ಮಾಲೀಕರಿಗೆ ದೊರಕಿಸಿಕೊಟ್ಟ ಹೆಚ್ಚಿನ ಪರಿಹಾರವಾಗಿದೆ.

ಯಶವಂತ್ ವಿ.ಗುರುಕರ್ಜಿಲ್ಲಾಧಿಕಾರಿ, ಬೆಂ. ದಕ್ಷಿಣ ಜಿಲ್ಲೆ

"

ರೈತರಿಗೆ ಹೆಚ್ಚಿನ ಪರಿಹಾರ ದೊರಕಿಸಿಕೊಡಬೇಕು ಎನ್ನುವುದು ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಂಸದ ಡಿ.ಕೆ.ಸುರೇಶ್, ಶಾಸಕ ಬಾಲಕೃಷ್ಣ ಆಶಯ, ಇದು ಈಡೇರಿದೆ. ರೈತರು ಇದರ ಲಾಭ ಪಡೆದುಕೊಳ್ಳಬೇಕು. ಯಾವುದೇ ಗೊಂದಲಗಳಿದ್ದರೆ ಪರಿಹಾರಕ್ಕಾಗಿ ರಾಮನಗರ ಜಿಬಿಡಿಎ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರ ತೆರೆಯಲಾಗಿದ್ದು, ಸಂಪರ್ಕಿಸಿ ಬಗೆಹರಿಸಿಕೊಳ್ಳಬಹುದು.

ಗಾಣಕಲ್ ನಟರಾಜ್. ಅಧ್ಯಕ್ಷ ಜಿಬಿಡಿಎ, ಬೆಂ.ದಕ್ಷಿಣ ಜಿಲ್ಲೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net