ಸಾರ್ವಜನಿಕರ ಸ್ಥಳಗಳಲ್ಲಿ ವಾಚನಾಲಯ

 ರಾಮನಗರದ ಕುವೆಂಪು ಉದ್ಯಾನವನ
ರಾಮನಗರದ ಕುವೆಂಪು ಉದ್ಯಾನವನ
Published on
ರಾಮನಗರ: ಬಸ್​ ನಿಲ್ದಾಣ, ಸಾರ್ವಜನಿಕ ಉದ್ಯಾನವನಗಳಲ್ಲಿ ದಿನಪತ್ರಿಕೆ ಓದಲು ಅನುಕೂಲವಾಗುವಂತೆ ನಗರಸಭೆ ಸಾರ್ವಜನಿಕ ವಾಚನಾಲಯಗಳ ಸ್ಥಾಪನೆಗೆ ಮುಂದಾಗಿದ್ದು, ನಗರಸಭೆ ಕಾರ್ಯಕ್ಕೆ ಮೆಚ್ಚುಗೆ ಕೇಳಿಬರುತ್ತಿದೆ.
ಹೌದು..., ವಾಚನಾಲಯ ಸ್ಥಾಪನೆ ಮೂಲಕ ನಗರಸಭೆ ಹೊಸ ಹೆಜ್ಜೆ ಇಟ್ಟಿದೆ. ವಿಹಾರಿಗಳು, ಪ್ರಯಾಣಿಕರು, ಹಿರಿಯ ನಾಗರಿಕರು ಮತ್ತು ಯುವಕರಲ್ಲಿ ಜ್ಞಾನಾರ್ಜನೆ ಹೆಚ್ಚಿಸುವುದು ಹಾಗೂ ಡಿಜಿಟಲ್​ ಜಗತ್ತಿನ ನಡುವೆಯೂ ಪತ್ರಿಕೋದ್ಯಮವನ್ನು ಜೀವಂತವಾಗಿಡುವುದು ನಗರಸಭೆ ಉದ್ದೇಶ. ಜು.2ರಂದು ಬೆಳಗ್ಗೆ 6 ಗಂಟೆಗೆ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ನಗರದ ಎಲ್ಲ ಉದ್ಯಾನವನಗಳು ಮತ್ತು ಬಸ್​ ನಿಲ್ದಾಣಗಳಿಗೆ ಭೇಟಿ ನೀಡಿ ದಿನಪತ್ರಿಕೆ ಓದುಗರ ವಾಚನಾಲಯಕ್ಕೆ ಚಾಲನೆ ನೀಡಲಿದ್ದಾರೆ. ಆಯುಕ್ತ ಡಾ.ಜಯಣ್ಣ, ಉಪಾಧ್ಯೆ ಗಿರಿಜಮ್ಮ ಗುರುವೇಗೌಡ ಸೇರಿ ಸದಸ್ಯರೂ, ಅಧಿಕಾರಿಗಳು ಹಾಜರಿರಲಿದ್ದಾರೆ ಎಂದು ನಗರಸಭೆ ಎಇಇ ಸುಬ್ರಹ್ಮಣ್ಯ ತಿಳಿಸಿದ್ದಾರೆ.
ವಾಚನಾಲಯ ಸ್ಥಳದಲ್ಲಿ ವಿಜಯವಾಣಿ ಸೇರಿ 5 ರಾಜ್ಯ ಕನ್ನಡ ದಿನಪತ್ರಿಕೆಗಳು, 5 ಸ್ಥಳಿಯ ದಿನಪತ್ರಿಕೆಗಳು ಇರಲಿವೆ. ಓದುಗರು ತಾವು ಓದಿದ ಪತ್ರಿಕೆಯನ್ನು ಪುನ@ ನಿಗದಿತ ಸ್ಥಳದಲ್ಲೆ ಇಡಲು ಕಬ್ಬಿಣದ ರ್ಯಾಕ್​ ಮಾಡಿಸಿ ಪತ್ರಿಕೆ ಜೋಡಣೆಗೆ ಆಯಾ ಸ್ಥಳಗಳಲ್ಲಿ ಅನುಕೂಲ ಕಲ್ಪಿಸಲಾಗಿದೆ. ಪ್ರಯಾಣಿಕರ ಬಿಡುವಿನ ವೇಳೆ ಸದ್ಬಳಕೆ: ಬಸ್​ ನಿಲ್ದಾಣಕ್ಕೆ ನಿತ್ಯ ವಿದ್ಯಾರ್ಥಿಗಳು, ಉದ್ಯೋಗಿಗಳು ಸೇರಿ ಸಾವಿರಾರು ಮಂದಿ ಆಗಮಿಸುತ್ತಾರೆ.
ಬಸ್​ಗಾಗಿ ಕಾಯುವ ಸಮಯದಲ್ಲಿ ಮೊಬೈಲ್​ ನೋಡುವ ಬದಲು, ದಿನಪತ್ರಿಕೆ ಓದುವುದರಿಂದ ಸಮಯ ಕಳೆಯುವ ಜತೆಗೆ ಜ್ಞಾನ ವೃದ್ಧಿಗೂ ಸಹಕಾರಿಯಾಗಲಿದೆ ಎನ್ನುವುದು ನಗರಸಭೆ ಅಧಿಕಾರಿಗಳ ಮಾತು. ಉದ್ಯಾನವನಗಳಿಗೆ ಮುಂಜಾನೆ ಮತ್ತು ಸಂಜೆ ವಿಹಾರಕ್ಕಾಗಿ ನೂರಾರು ಮಂದಿ ಬರುತ್ತಾರೆ. ಈ ವೇಳೆ ಒಂದಷ್ಟು ಸಮಯ ಪತ್ರಿಕೆ ಓದುವುದರಿಂದ ಅವರಿಗೆ ದೇಶ, ವಿದೇಶ, ರಾಜ್ಯ ಹಾಗೂ ಗ್ರಾಮೀಣ ಸುದ್ದಿಗಳನ್ನು ತಿಳಿಯಲು ಅನುಕೂಲವಾಗಲಿದೆ.
ಯಾವ ಯಾವ ಸ್ಥಳಗಳಲ್ಲಿ ಸ್ಥಾಪನೆ
ನಗರದ ಐಜೂರು ಕುವೆಂಪು ಉದ್ಯಾನವನ, ವಿನಾಯಕನಗರ ಉದ್ಯಾನವನ, ಕೋರ್ಟ್​ರಸ್ತೆ ಗಾಂಧಿ ಪಾರ್ಕ್​, ರಂಗರಾಯರದೊಡ್ಡಿ ಕೆರೆ ಉದ್ಯಾನವನ, ನಾಗನಕಟ್ಟೆ ಉದ್ಯಾನವನ, ಐಜೂರು ವಾಟರ್​ ಟ್ಯಾಂಕ್​ ಉದ್ಯಾನವನ, ಬಾಲಾಜಿ ಲೇಔಟ್​ ಉದ್ಯಾನವನ, ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದ ಸಿಗ್ನಲ್​ ಬಳಿ, ದ್ಯಾವರೇಸವಡನದೊಡ್ಡಿ ರಸ್ತೆ ಆರ್ಚ್​ ಸಮೀಪ, ಎಸ್​ಪಿ ಕಚೇರಿ ಮುಂಭಾಗದ ಬಸ್​ ನಿಲ್ದಾಣ, ಕಂದಾಯ ಭವನದ ಬಸ್​ ನಿಲ್ದಾಣ, ಗೌಸಿಯಾ ಕಾಲೇಜು ಬಸ್​ ನಿಲ್ದಾಣದ ಬಳಿ ಸ್ಥಾಪಿಸಲಾಗಿದೆ.
ಮತ್ತಷ್ಟು ಸ್ಥಳಗಳಲ್ಲಿ ಬೇಕು
ಕೆಂಗಲ್​ ಹನುಮಂತಯ್ಯ ವೃತ್ತ, ಹಳೇ ಬಸ್​ ನಿಲ್ದಾಣ, ಕಾಮಣ್ಣನಗುಡಿ ಸರ್ಕಲ್​, ಎಪಿಎಂಸಿ ಮಾರುಕಟ್ಟೆ, ಕೆಂಪೇಗೌಡ ಸರ್ಕಲ್​, ರೋಟರಿ ಸರ್ಕಲ್​, ರಾಯರದೊಡ್ಡಿ ಸರ್ಕಲ್​, ವಿಜಯನಗರ ಆರ್ಚ್​ ಬಳಿ ಓದುಗರ ವಾಚನಾಲಯ ಸ್ಥಾಪನೆಗೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
"

ಪ್ರತಿ ಬಜೆಟ್​ ಪೂರ್ವಭಾವಿ ಸಭೆಯಲ್ಲಿ ಉದ್ಯಾನವನ, ಬಸ್​ ನಿಲ್ದಾಣ, ಸಮುದಾಯ ಭವನಗಳಲ್ಲಿ ಓದುಗರಿಗೆ ದಿನಪತ್ರಿಕೆ ಒದಗಿಸುವಂತೆ ನಗರಸಭೆಗೆ ಸಾರ್ವಜನಿಕರು ಮನವಿ ಮಾಡುತ್ತಲೇ ಬಂದಿದ್ದರು. ಜನರ ಮನವಿ ಮೇರೆಗೆ ಈ ಬಾರಿಯ ಬಜೆಟ್​ನಲ್ಲಿ 2 ಲಕ್ಷ ರೂ. ಅನುದಾನ ಮೀಸಲಿಟ್ಟು, ವಾಚನಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ನಗರ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ಜು.2ರಂದು ವಾಚನಾಲಯ ಪ್ರಾರಂಭಿಸಲಾಗುತ್ತಿದೆ.

— > ಡಾ.ಜಯಣ್ಣ, ಆಯುಕ್ತರು, ನಗರಸಭೆ, ರಾಮನಗರ.
"

ಮಾಹಿತಿ ತಂತ್ರಜ್ಞಾನದ ಯುಗದಲ್ಲೂ ದಿನಪತ್ರಿಕೆಗಳ ಓದುವಿಕೆಗೆ ತನ್ನದೇ ಮಹತ್ವವಿದೆ. ರಾಮನಗರ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಅವರು ಸಾರ್ವಜನಿಕರ ಮನವಿಯನ್ನು ಪುರಸ್ಕರಿಸಿ ಪ್ರಮುಖ ಉದ್ಯಾನವನ, ಬಸ್​ ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ ಓದುಗರ ವಾಚನಾಲಯ ಸ್ಥಾಪಿಸುವ ಮೂಲಕ ರೇಷ್ಮೆ ನಗರಿಗೆ ಜ್ಞಾನ ನಗರಿ ಎಂಬ ಹಿರಿಮೆ ತರುತ್ತಿರುವುದು ಹೆಮ್ಮೆಯ ಸಂಗತಿ.

— > ಚಿಕ್ಕೇನಹಳ್ಳಿ ಸಿ. ನಾಗರಾಜು, ಐಜೂರು ಕುವೆಂಪು ಉದ್ಯಾನವನ ಅಧ್ಯಕ್ಷ.
"

ಬಸ್​ ನಿಲ್ದಾಣಗಳಲ್ಲಿ ಮೊಬೈಲ್​ ನೋಡಿ ಕಣ್ಣು ಕೆಡಿಸಿಕೊಳ್ಳುವ ಬದಲು, ಪತ್ರಿಕೆ ಓದುವ ವ್ಯವಸ್ಥೆ ಇದ್ದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಜತೆಗೆ ಉದ್ಯಾನವನಗಳಿಗೆ ಬರುವ ಹಿರಿಯ ನಾಗರಿಕರಿಗೆ ದಿನಪತ್ರಿಕೆ ಓದುವ ಹವ್ಯಾಸ ಹೆಚ್ಚುತ್ತದೆ. ಇದೊಂದು ಉತ್ತಮ ಸಾಮಾಜಿಕ ಬದಲಾವಣೆಗೆ ನಾಂದಿ. ಸಾರ್ವಜನಿಕರ ಒತ್ತಾಯ ಮತ್ತು ಅಭಿಪ್ರಾಯದ ಮೇರೆಗೆ ನಗರಸಭೆ ಕ್ರಮ ಕೈಗೊಂಡಿದೆ.

— > ಕೆ.ಶೇಷಾದ್ರಿ, ಅಧ್ಯಕ್ಷರು, ನಗರಸಭೆ, ರಾಮನಗರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net