ಕ್ರಷರ್​ ಲಾರಿ ಸದ್ದಿಗೆ ಬೇಸ್ತುಬಿದ್ದ ಜನ

ಧೂಳು ಎಬ್ಬಿಸುತ್ತಾ ಸಾಗುವ ಲಾರಿಗಳು
ಧೂಳು ಎಬ್ಬಿಸುತ್ತಾ ಸಾಗುವ ಲಾರಿಗಳು
Published on

ಪ್ರಮುಖ ಮುಖ್ಯಾಂಶಗಳು

  • ನಿಯಮ ಮೀರಿ ಸಂಚಾರದಿಂದ ನೆಮ್ಮದಿ ಕಳೆದುಕೊಂಡ ಗ್ರಾಮಸ್ಥರು
  • ಹಾರೋಹಳ್ಳಿ ತಾಲೂಕಿನ ಕೊಳ್ಳಿನಹಳ್ಳಿ ಗ್ರಾಮ
ಹಾರೋಹಳ್ಳಿ
ಕ್ರಷರ್​ ಲಾರಿಗಳ ಸಂಚಾರದಿಂದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಜನರು ಧೂಳಿನ ಮಧ್ಯದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ಕೊಳ್ಳಿಗನಹಳ್ಳಿ, ಸೊಂಟೇನಳ್ಳಿ, ಹೊನ್ನಾಲಗನದೊಡ್ಡಿ, ನಾರಾಯಣಪುರ, ಅಣೆದೊಡ್ಡಿ ಹುಳಗೊಂಡನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಕೈಲಾಂಚ ಮತ್ತು ಬಿಡದಿ ಹೋಬಳಿಗಳ ಕ್ರಷರ್​ ಲಾರಿಗಳು ಕಾನೂನು ನಿಯಮ ಮೀರಿ ಓವರ್​ ಲೋಡ್​ ಮಾಡಿಕೊಂಡು ಬೇಕಾಬಿಟ್ಟಿ ಚಾಲನೆ ಮಾಡಿಕೊಂಡು ಹೋಗುವುದರಿಂದ ರಸ್ತೆಗಳೆಲ್ಲ ಕಿತ್ತು ಹಾಳಾಗಿ ಸಾರ್ವಜನಿಕರು ಸಂಚರಿಸುವುದೇ ದುಸ್ತರವಾಗಿದೆ.
ರಸ್ತೆ ಅಕ್ಕಪಕ್ಕದ ಮನೆಗಳಲ್ಲಿ ವಾಸಿಸುವವರು ಧೂಳು ಕುಡಿದು ಹಲವಾರು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಅಸ್ತಮಾ, ಅಲರ್ಜಿ, ಉಸಿರಾಟದ ತೊಂದರೆ ಸೇರಿದಂತೆ ಚರ್ಮ ಕಾಯಿಲೆಗಳು ಹೆಚ್ಚುತ್ತಿದ್ದು, ರಾಜಕಾರಣಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.
ಇನ್ನು ಗ್ರಾಮಸ್ಥರು ಲಾರಿಗಳನ್ನು ತಡೆದರೆ ಲಾರಿ ಮಾಲೀಕರು ಸಾರ್ವಜನಿಕರಿಗೆ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕುತ್ತಿದ್ದಾರೆ. ಇದರಿಂದ ರಣೆ ನೀಡದಿದ್ದರೆ ರಸ್ತೆಗೆ ಅಡ್ಡ ಹಾಕುತ್ತೇವೆ. ಒಂದು ಲಾರಿಯನ್ನೂ ಬಿಡುವುದಿಲ್ಲ ಎಂದು ಗ್ರಾಮಸ್ಥರು ಹಾರೋಹಳ್ಳಿ ಪೊಲೀಸ್​ ಠಾಣೆ ಸೇರಿದಂತೆ ಜಿಲ್ಲಾಧಿಕಾರಿ, ಪರಿಸರ ಇಲಾಖೆ, ಆರ್​ಟಿಒ, ಗಣಿಗಾರಿಕೆ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ.

ಇನ್​ಸ್ಪೆಕ್ಟರ್​ ಭೇಟಿ

ಅಂತೂ ಇಂತೂ ಕೊಳ್ಳಿಗನಹಳ್ಳಿಗೆ ಮಂಗಳವಾರ ಹಾರೋಹಳ್ಳಿ ಠಾಣೆ ಪೊಲೀಸ್​ ಇನ್​ಸ್ಪೆಕ್ಟರ್​ ಮಲ್ಲೆಶ್​ ಭೇಟಿ ನೀಡಿ ಮಹಿಳೆಯರ ಅಹವಾಲು ಸ್ವೀಕರಿಸಿದರು. ಈ ಬಗ್ಗೆ ತಹಸೀಲ್ದಾರ್​ ಗಮನಕ್ಕೆ ತಂದು ಸಭೆ ಕರೆಯಲಾಗುವುದು. ಸಭೆಯಲ್ಲಿ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಜತೆಗೆ ಲಾರಿ ಮಾಲೀಕರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಗ್ರಾಮಸ್ಥರಾದ ಕೆಂಪಮ್ಮ, ಮಂಜುನಾಥ್​, ಲ್ಮದೇವಮ್ಮ, ಚೆನ್ನಪ್ಪ, ಯಶೋದಮ್ಮ, ತಮ್ಮಣ್ಣ, ಸರೋಜಮ್ಮ, ಕೃಷ್ಣಪ್ಪ, ನೀಲಮ್ಮ, ನಂಜುಂಡಪ್ಪ, ಗೌರಮ್ಮ, ನಾಗಣ್ಣ, ರಾಧಾಕೃಷ್ಣ, ಮೂರ್ತಿ, ಕುಮಾರಮ್ಮ, ಸಿದ್ದರಾಜು, ಶಿವಣ್ಣ, ಲಕ್ಲ್ಮಮ್ಮ, ದೇವಿರಮ್ಮ, ವೆಂಕಟಚಲಪ್ಪ, ಭಾಗ್ಯಮ್ಮ, ಸುರೇಶ್​, ನಂದೀಶ್​, ಗಂಗಮ್ಮ, ನಾಗರಾಜ್​, ವಿಜಯಮ್ಮ, ರಾಮಕೃಷ್ಣಪ್ಪ ಇತರರು ಪೊಲೀಸರಿಗೆ ತಮಗಾಗುತ್ತಿರುವ ಕಷ್ಟದ ಬದುಕಿನ ಕುರಿತು ಮಾಹಿತಿ ನೀಡಿದರು.
==
ಕ್ರಷರ್​ ಲಾರಿಗಳು ಓವರ್​ ಲೋಡ್​ ಮಾಡಿಕೊಂಡು ವೇಗವಾಗಿ ಹೋಗುವುದರಿಂದ ರಸ್ತೆಗಳು ಕಿತ್ತು ಹಾಳಾಗಿವೆ. ಜತೆಗೆ ಧೂಳು ಹೆಚ್ಚಾಗಿ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ರಾತ್ರಿಯಲ್ಲೂ ಲಾರಿಗಳು ಸಂಚರಿಸುವುದರಿಂದ ನಿದ್ದೆ ಮಾಡಲು ಆಗುತ್ತಿಲ್ಲ. ಕ್ರಷರ್​ ಲಾರಿಗಳಿಂದ ನೆಮ್ಮದಿ ಹಾಳಾಗಿದೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು.
ಗಂಗಮ್ಮ, ಕೊಳ್ಳಿಗನಹಳ್ಳಿ ಗ್ರಾಮಸ್ಥೆ.
ಕೊಳ್ಳಿಗನಹಳ್ಳಿಯಲ್ಲಿ ರಸ್ತೆ ಧೂಳು ವಿಚಾರವಾಗಿ ಮಹಿಳೆಯರು ಠಾಣೆಗೆ ಬಂದು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದಿದ್ದೇನೆ. ಈ ಬಗ್ಗೆ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ವರದಿ ನೀಡಲಾಗುವುದು. ಬಳಿಕ ಸಭೆ ಕರೆದು ಪರಿಹಾರ ಕಂಡುಕೊಳ್ಳುವತ್ತ ಕ್ರಮ ಕೈಗೊಳ್ಳಲಾಗುವುದು.
ಮಲ್ಲೆಶ್​, ಇನ್​ಸ್ಪೆಕ್ಟರ್​, ಹಾರೋಹಳ್ಳಿ ಪೊಲೀಸ್​ ಠಾಣೆ
--
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net