ಅರ್ಕಾವತಿ ನದಿ ದಂಡೆ ಹೊಸ ಸ್ಪರ್ಶಕ್ಕೆ ವಿರೋಧ

ರಾಮನಗರದ ಅರ್ಕಾವತಿ ನದಿ ದಂಡೆಯಲ್ಲಿರುವ ಅರ್ಕೇಶ್ವರಸ್ವಾಮಿ ದೇವಾಲಯ.
ರಾಮನಗರದ ಅರ್ಕಾವತಿ ನದಿ ದಂಡೆಯಲ್ಲಿರುವ ಅರ್ಕೇಶ್ವರಸ್ವಾಮಿ ದೇವಾಲಯ.
Published on

ಪ್ರಮುಖ ಮುಖ್ಯಾಂಶಗಳು

  • 28.18 ಎಕರೆ ಭೂಮಿಯ ಸ್ವಾಧಿನಕ್ಕೆ ಅಧಿಸೂಚನೆ
  • ಅರ್ಕೇಶ್ವರ ದೇಗುಲ, ಫೀರನ್​ ಷಾ ವಲಿ ದರ್ಗಾ ಜಾಗ ತೆರವಿಗೆ ವಿರೋಧ
ರಾಮನಗರ
ಜಿಲ್ಲಾ ಕೇಂದ್ರ ರಾಮನಗರದ ಮಧ್ಯಭಾಗದಲ್ಲಿ ಹರಿಯುವ ಅರ್ಕಾವತಿ ನದಿಯ ದಡವನ್ನು ಥೇಮ್ಸ್​ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಯೋಜನೆ ಸಲುವಾಗಿ ಭೂ ಸ್ವಾಧಿನಕ್ಕಾಗಿ ಹೊರಡಿಸಿರುವ ಅಧಿಸೂಚನೆ ತೀವ್ರ ವಿರೋಧಕ್ಕೆ ಕಾರಣವಾಗಿದೆ.
ಜೊಂಡು ಬೆಳೆದು ನಗರದ ಜನರ ಕಲುಷಿತ ನೀರನ್ನು ತನ್ನ ಒಡಲೊಳಗೆ ಸೇರಿಸಿಕೊಂಡು ಮುಂದೆ ಹೋಗುತ್ತಿದ್ದ ಅರ್ಕಾವತಿ ನದಿ ದಂಡೆ ಹೊಸ ಸ್ಪರ್ಶ ನೀಡುವ ಸಲುವಾಗಿ ಅರ್ಕಾವತಿ ನದಿ ದಂಡೆ ಅಭಿವೃದ್ಧಿ ಯೋಜನೆ ಘೊಷಣೆ ಮಾಡಿ, ಇದಕ್ಕಾಗಿ ಸರ್ಕಾರ 120 ಕೋಟಿ ರೂ. ಅನುದಾನವನ್ನೂ ಬಿಡುಗಡೆ ಮಾಡಿದೆ.
ಆದರೆ ಜ.20ರಂದು ಜಿಲ್ಲಾಧಿಕಾರಿ ನದಿ ದಂಡೆಗೆ ಹೊಂದಿಕೊಂಡಿರುವ 28.18 ಎಕರೆ ಭೂಮಿಯ ಸ್ವಾಧಿನಕ್ಕೆ ಅಧಿಸೂಚನೆ ಹೊರಡಿಸಿದ್ದಾರೆ. ಅರ್ಕಾವತಿ ನದಿ ಪಾತ್ರದಲ್ಲಿ ಅಭಿವೃದ್ಧಿ ವಿಚಾರದಲ್ಲಿ ಸಹಮತ ಹೊಂದಿರುವ ನಗರದ ಜನತೆ, ಭೂ ಸ್ವಾಧಿನಗೊಳ್ಳುವ ಪ್ರದೇಶದಲ್ಲಿ ನಗರದ ಅಸ್ಮಿತೆಯೂ ಆಗಿರುವ ಶತಮಾನಗಳ ಇತಿಹಾಸ ಹೊಂದಿರುವ ಶ್ರೀ ಅರ್ಕೇಶ್ವರ ಸ್ವಾಮಿ ದೇವಾಲಯ ಮತ್ತು ಫೀರನ್​ ಷಾ ವಲಿ ದರ್ಗಾ ಸಹ ಸೇರಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಏಕೆ ವಿರೋಧ?

ಜಿಲ್ಲಾಡಳಿತ ಹೊರಡಿಸಿರುವ ಅಧಿಸೂಚನೆಯಂತೆ ರಾಮನಗರ ನಗರದ ಸರ್ವೇ ನಂ.11ರಲ್ಲಿ ಅರ್ಕೇಶ್ವರ ಸ್ವಾಮಿ ದೇವಾಲಯ ಮತ್ತು ಸರ್ವೇ ನಂ.113ರಲ್ಲಿ ಫೀರನ್​ ಷಾವಲಿ ದರ್ಗಾ ಇದೆ. ಈ ಎರಡೂ ಧಾರ್ಮಿಕ ಕೇಂದ್ರಗಳಿಗೆ ನೂರಾರು ವರ್ಷಗಳ ಇತಿಹಾಸವಿದೆ. ಶ್ರೀ ಅರ್ಕೇಶ್ವರ ಸ್ವಾಮಿ ದೇವಾಲಯದ ಜೀಣೋರ್ದ್ಧಾರ ಸಹ ನಡೆಯುತ್ತಿದೆ. ಅಲ್ಲದೆ, ಈ ದೇವಾಲಯದೊಂದಿಗೆ ಸ್ಥಳಿಯರು ಅವಿನಾಭಾವ ಸಂಬಂಧ ಹೊಂದಿದ್ದು, ಪ್ರತಿ ವರ್ಷ ಶಿವರಾತ್ರಿ ವೇಳೆಯಲ್ಲಿ ಅದ್ದೂರಿ ಆಚರಣೆಗಳು ನಡೆಯುತ್ತವೆ. ಇದೇ ರೀತಿ, ಮೊಹಮದ್​ ಫೀರನ್​ ಷಾ ವಲಿ ಅವರು ಸುಮಾರು 200&300 ವರ್ಷಗಳ ಹಿಂದೆ ಪವಾಡ ಪುರುಷರಾಗಿದ್ದು, ಅಂದಿನಿಂದ ಇಂದಿಗೂ ಧರ್ಮಾತೀತವಾಗಿ ಅವರನ್ನು ಆರಾಧಿಸುವ ಜನರು ರಾಮನಗರದಲ್ಲಿ ಇದ್ದಾರೆ. ಈ ಹಿನ್ನೆಲೆಯಲ್ಲಿ ಈ ಎರಡೂ ಧಾರ್ಮಿಕ ಸ್ಥಳಗಳನ್ನು ಅಭಿವೃದ್ಧಿ ಹೆಸರಲ್ಲಿ ಭೂ ಸ್ವಾಧಿನಕ್ಕೆ ಒಳಪಡಿಸುವ ಪ್ರಕ್ರಿಯೆ ಭಾವನಾತ್ಮಕವಾಗಿ ಕೆರಳಿಸಿದೆ.

ಎಲ್ಲೆಲ್ಲಿ ಭೂ ಸ್ವಾಧಿನ?

ಯೋಜನೆಗಾಗಿ ಒಟ್ಟು 28 ಎಕರೆ 18 ಗುಂಟೆ ಜಮೀನು ಭೂ ಸ್ವಾಧಿನವಾಗಲಿದೆ. ಈ ಪೈಕಿ ರಾಮನಗರ ಗ್ರಾಮದ ವ್ಯಾಪ್ತಿಯಲ್ಲಿ 14 ಎಕರೆ 14 ಗುಂಟೆ, ಜಿಗೇನಹಳ್ಳಿಯಲ್ಲಿ 3 ಎಕರೆ 9 ಗುಂಟೆ, ಬೋಳಪ್ಪನಹಳ್ಳಿ ಅಮಾನಿಕೆರೆಯಲ್ಲಿ 3 ಎಕರೆ 7 ಗುಂಟೆ ಹಾಗೂ ಐಜೂರಿನಲ್ಲಿ 7 ಎಕರೆ 30 ಗುಂಟೆ ಜಮೀನು ಭೂ ಸ್ವಾಧಿನವಾಗಲಿದೆ. ರಾಮನಗರ ವ್ಯಾಪ್ತಿಯಲ್ಲಿ ನದಿಗೆ ಹೊಂದಿಕೊಂಡಿರುವ ಸರ್ವೇ ನಂ. 11ರಲ್ಲಿರುವ ಅರ್ಕೇಶ್ವರ ದೇವಸ್ಥಾನ ಹಾಗೂ ಸರ್ವೇ ನಂ. 113ರಲ್ಲಿರುವ ಮಹಮದ್​ ಫೀರ್​ ಬಾಬಾ ಸಾಬ್​ ದರ್ಗಾ ಹಾಗೂ ನದಿ ಪಕ್ಕದಲ್ಲಿರುವ ರಾಘವೇಂದ್ರ ಕಾಲನಿಯ 40ಕ್ಕೂ ಹೆಚ್ಚು ಮನೆಗಳು ಸಹ ಭೂ ಸ್ವಾಧಿನಕ್ಕೆ ಒಳಗಾಗಿವೆ.
ನದಿಯ ಮತ್ತೊಂದು ಭಾಗದಲ್ಲಿರುವ ಕನ್ಯಕಾ ಪರಮೇಶ್ವರಿ ದೇವಸ್ಥಾನ, ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮೀಸಲಿಟ್ಟಿರುವ ಜಾಗ, ಬಾಲಾಜಿ ಆಸ್ಪತ್ರೆ, ಷರೀಫ್​ ಕಾಂಪ್ಲೆಕ್ಸ್​, ಸಾಯಿಬಾಬಾ ದೇವಸ್ಥಾನದ ಜಾಗವನ್ನು ಸಹ ಸ್ವಾಧಿನಪಡಿಸಿಕೊಳ್ಳಲು ಗುರುತಿಸಲಾಗಿದೆ. ಐಜೂರು ಗ್ರಾಮದಲ್ಲಿ 25 ಮಂದಿಯ ಜಮೀನು ಸರ್ವೇ ನಂ. 21ರಲ್ಲಿ 8 ಎಕರೆ 35 ಗುಂಟೆ ಇರುವ ಕ್ರೈಸ್ತರ ಸ್ಮಶಾನ ಸಹ ಸ್ವಾಧಿನವಾಗಲಿದೆ. ಜ.20ರಂದೆ ಭೂ ಸ್ವಾಧಿನಕ್ಕೆ ಅಧಿಸೂಚನೆ ಹೊರಡಿಸಲಾಗಿದ್ದು, ಆಕ್ಷೇಪಣೆ ಸಲ್ಲಿಸಲು 60 ದಿನಗಳ ಗಡುವು ನೀಡಲಾಗಿದೆ.
ಅರ್ಕೇಶ್ವರ ಸ್ವಾಮಿ ದೇವಾಲಯ ಮತ್ತು ಫೀರನ್​ ಷಾ ವಲಿ ದರ್ಗಾಗಳೊಂದಿಗೆ ದೈವಿಕ ಮತ್ತು ಭಾವನಾತ್ಮಕ ಸಂಬಂಧವನ್ನು ರಾಮನಗರದ ಜನ ಹೊಂದಿದ್ದಾರೆ. ಇವುಗಳ ಸ್ವಾಧಿನವನ್ನು ಅಧಿಸೂಚನೆಯಿಂದ ಕೈ ಬಿಡಬೇಕು.
ಕೆ.ಶೇಷಾದ್ರಿ
ಅಧ್ಯಕ್ಷರು, ನಗರಸಭೆ, ರಾಮನಗರ
ಅರ್ಕೇಶ್ವರ ಸ್ವಾಮಿ ದೇವಾಲಯಕ್ಕೆ 7-8 ಶತಮಾನಗಳ ಇತಿಹಾಸವಿದೆ. ಅರ್ಕಾವತಿ ನದಿ ದಂಡೆ ಅಭಿವೃದ್ಧಿಗಾಗಿ ಭೂ ಸ್ವಾಧಿನ ಮಾಡಿಕೊಳ್ಳುವ ಅಧಿಸೂಚನೆಯಲ್ಲಿ ನಮ್ಮ ದೇವಾಲಯವೂ ಸೇರಿದೆ. ಸ್ವಾಧಿನ ಅಧಿಸೂಚನೆಯಿಂದ ಕೈ ಬಿಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗುವುದು.
ಸಿಎನ್​ಆರ್​ ವೆಂಕಟೇಶ್​
ಅಧ್ಯಕ್ಷರು,
ಶ್ರೀ ಅಕೇಶ್ವರ ಸ್ವಾಮಿ ಸೇವಾ ಟ್ರಸ್ಟ್​,
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net