ಅಕ್ರಮ ಪ್ರಶ್ನಿಸಿದ ಚಾಲಕನ ಮೇಲೆ

ಕನಕಪುರ ಸಾರಿಗೆ ಡಿಪೋದಲ್ಲಿ ಚಾಲಕ ಶಿವಕುಮಾರ್​ ಮೇಲೆ ಹಲ್ಲೆಯಾಗುತ್ತಿರುವ ದೃಶ್ಯ.
ಕನಕಪುರ ಸಾರಿಗೆ ಡಿಪೋದಲ್ಲಿ ಚಾಲಕ ಶಿವಕುಮಾರ್​ ಮೇಲೆ ಹಲ್ಲೆಯಾಗುತ್ತಿರುವ ದೃಶ್ಯ.
Published on
ಕನಕಪುರ: ಕನಕಪುರದಲ್ಲಿನ ರಾಜ್ಯ ರಸ್ತೆ ಸಾರಿಗೆ ನಿಗಮದ ಡಿಪೋದಲ್ಲಿನ ಅಕ್ರಮಗಳನ್ನು ಪ್ರಶ್ನಿಸಿದ ಸಂಸ್ಥೆಯ ಚಾಲಕನ ಮೇಲೆ ಟಕದ ವ್ಯವಸ್ಥಾಪಕ ಸಚಿನ್​ ಸಮ್ಮುಖದಲ್ಲಿಯೇ ಸಹೋದ್ಯೋಗಿಗಳು ಮಾರಣಾಂತಿಕ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದ್ದು, ಹಲ್ಲೆಯ ದೃಶ್ಯಗಳು ಎಲ್ಲೆಡೆ ವೈರಲ್​ ಆಗಿವೆ.
ಶುಕ್ರವಾರ ರಾತ್ರಿ 7.30ರ ಸುಮಾರಿಗೆ ಚಾಲಕ ಶಿವಕುಮಾರ್​ ಮೇಲೆ ಸಹೋದ್ಯೋಗಿಗಳಾದ ಕೆ.ಟಿ.ಕುಮಾರ್​ (ಚಾಲಕ), ದೇವರಾಜು, ಮುನಿಬಸವರಾಜು ಅಲಿಯಾಸ್​ ಹರೀಶ್​, ವಿ.ಆರ್​.ಶಿವಮೂರ್ತಿ(ನಿರ್ವಾಹಕರು) ಎಂಬುವವರು ಟಕ ವ್ಯವಸ್ಥಾಪಕರ ಸಮ್ಮುಖದಲ್ಲಿಯೇ ಮನಬಂದಂತೆ ಹಿಗ್ಗಾಮುಗ್ಗಾ ಥಳಿಸಿ, ಒದ್ದು, ಪ್ರಾಣ ಬೆದರಿಕೆ ಹಾಕಿದ್ದಾರೆ. ಸ್ಥಳದಲ್ಲಿದ್ದ ಟಕ ವ್ಯವಸ್ಥಾಪಕ ಸಚಿನ್​ ಹಲ್ಲೆ ತಡೆಯದೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪದಲ್ಲಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾಲಕ ಶಿವಕುಮಾರ್​ನನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಕೆಎಸ್​ಆರ್​ಟಿಸಿ ಜಿಲ್ಲಾ ಅಧಿಕಾರಿ ಪುರುಷೋತ್ತಮ್​, ಡಿಸಿಒ ಶ್ರೀನಿವಾಸ್​, ಡಿಎಂಇ ಮುತ್ತುರಾಜು, ಕೆಎಸ್​ಆರ್​ಟಿಸಿ ಕಾರ್ಮಿಕ ಇಲಾಖೆ ಅಧಿಕಾರಿ ಶೇಖರ್​ ಸ್ಥಳಕ್ಕೆ ಭೇಟಿ ನೀಡಿ, ಚಾಲಕನಿಗೆ ಸಾಂತ್ವನ ಹೇಳಿದ್ದಾರೆ.
ದೂರಿನಲ್ಲಿ ಏನಿದೆ?
ಚಾಲಕ ಶಿವಕುಮಾರ್​ ಪಾಳಿ ಆಧಾರದಲ್ಲಿ ಕೆಲಸ ನಿರ್ವಹಿಸುವ ಬಗ್ಗೆ ವ್ಯವಸ್ಥಾಪಕರನ್ನು ಪ್ರಶ್ನಿಸಿದ್ದರು. ಜತೆಗೆ ನಿಗದಿತ ರೂಟ್​ ನೀಡುವ ವಿಚಾರದಲ್ಲಿ ಹಣ ನೀಡಿದವರಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಲ್ಲದೇ ಟಕದಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಶುಕ್ರವಾರ ಸಂಜೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಶಿವಕುಮಾರ್​ ಅವರನ್ನು ಟಕ ವ್ಯವಸ್ಥಾಪಕ ಸಚಿನ್​ ಕರೆದು ಮಾತನಾಡುವ ನೆಪದಲ್ಲಿ ನಿಲ್ಲಿಸಿಕೊಂಡಿದ್ದರು. ಇದೇ ವೇಳೆ ಖಾಸಗಿ ಕಾರಿನಲ್ಲಿ ಬಂದ ನಾಲ್ವರು ಮನಬಂದಂತೆ ಶಿವಕುಮಾರ್​ಗೆ ಥಳಿಸಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ ಎನ್ನಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net