ಜೆಡಿಎಸ್ ಪಾದಯಾತ್ರೆಯಲ್ಲ, ನಿಖಿಲ್ ಪಟ್ಟಾಭಿಷೇಕ ಯಾತ್ರೆ

ಚನ್ನಪಟ್ಟಣದ ಕೆಂಗಲ್ ಬಳಿ ಸಚಿವ ಬಾಲಕೃಷ್ಣ ಅವರನ್ನು ಅಭಿನಂದಿಸಿದ ಕಾಂಗ್ರೆಸ್ ಮುಖಂಡರು.
ಚನ್ನಪಟ್ಟಣದ ಕೆಂಗಲ್ ಬಳಿ ಸಚಿವ ಬಾಲಕೃಷ್ಣ ಅವರನ್ನು ಅಭಿನಂದಿಸಿದ ಕಾಂಗ್ರೆಸ್ ಮುಖಂಡರು.
Published on

ಪ್ರಮುಖ ಮುಖ್ಯಾಂಶಗಳು

  • ಬಿಡದಿ ಟೌನ್‌ಶಿಪ್ ನಿರ್ಮಾಣ ವಿರೋಧಿ ಹೋರಾಟ
  • ಸಚಿವ ಎಚ್.ಸಿ. ಬಾಲಕೃಷ್ಣ ಲೇವಡಿ

ರಾಮನಗರ

ಬಿಡದಿ ಟೌನ್‌ಶಿಪ್ ನಿರ್ಮಾಣ ವಿರೋಧಿಸಿ ಜೆಡಿಎಸ್ ನಡೆಸುತ್ತಿರುವುದು ರೈತರ ಪರವಾದ ಪಾದಯಾತ್ರೆಯಲ್ಲ, ಬದಲಿಗೆ ಅದು, ನಿಖಿಲ್‌ಗಾಗಿ ನಡೆಯುತ್ತಿರುವ ಪಟ್ಟಾಭಿಷೇಕ ಯಾತ್ರೆ ಎಂದು ಸಚಿವ ಎಚ್.ಸಿ. ಬಾಲಕೃಷ್ಣ ಲೇವಡಿ ಮಾಡಿದರು.

ಬರ ಅಧ್ಯಯನ ಪ್ರವಾಸಕ್ಕೂ ಮುನ್ನ ಚನ್ನಪಟ್ಟಣ ತಾಲೂಕಿನ ಕೆಂಗಲ್ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ತಾವು ರೈತರ ಪರ ಎಂದು ಹೇಳಿಕೊಂಡು ಈಗ ಪಾದಯಾತ್ರೆ ಮಾಡುತ್ತಿದ್ದಾರೆ. ಆದರೆ, ಈ ಪಾದಯಾತ್ರೆ ಹಿಂದೆ ನಿಖಿಲ್ ಪಟ್ಟಾಭಿಷೇಕದ ಗುರಿಯಿದೆ. ಇದಕ್ಕೆ ಕುಮಾರಸ್ವಾಮಿ ಚಾಲನೆ ನೀಡಿದ್ದಾರೆ. ಸೋಮವಾರ ದೇವೇಗೌಡರು ಮೊಮ್ಮಗನ ಪಟ್ಟಾಭಿಷೇಕ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಟೀಕಿಸಿದರು.

ಈ ಯಾತ್ರೆಯಲ್ಲಿ ಸಮಸ್ಯೆ ಹೊತ್ತುಕೊಂಡು ಅಥವಾ ರೈತಪರ ಕಾಳಜಿ ಹೊತ್ತು ಯಾರೂ ಹೆಜ್ಜೆ ಹಾಕುತ್ತಿಲ್ಲ. ಬಿಜೆಪಿಯವರಿಗೆ ಸತ್ಯ ಅರ್ಥವಾಗಿದೆ. ವಾಸ್ತವಾಂಶದ ಅರಿವಾದ ಹಿನ್ನೆಲೆಯಲ್ಲಿ ಅವರು ಪಾದಯಾತ್ರೆಯಲ್ಲಿ ಅಂತರ ಕಾಯ್ದುಕೊಂಡಿದ್ದಾರೆ ಎಂದರು.

ಮಂತ್ರಿಗಿರಿ ನಮಗೆ ದೊಡ್ಡದೇ..!

ಕುಮಾರಸ್ವಾಮಿ ಅವರಿಗೆ ಮಂತ್ರಿಗಿರಿ ಯಕಶ್ಚಿತ್ ಇರಬಹುದು. ಆದರೆ, ನಮಗೆ ಅದೇ ದೊಡ್ಡದು. ಅವರು ಸಿಎಂ ಆಗಿ ಈಗ ಕೇಂದ್ರ ಸಚಿವರಾಗಿದ್ದಾರೆ. ಹಾಗಾಗಿ, ಅವರಿಗೆ ಇದು ಲೆಕ್ಕಕ್ಕಿಲ್ಲ. ಕುಮಾರಸ್ವಾಮಿ ಅವರು ಯಾರಿಗೂ ಪಟ್ಟಾಭಿಷೇಕ ಮಾಡಿದವರಲ್ಲ. ಅವರು ಅವರಿಗೆ ಮಾತ್ರ ಮಾಡಿಕೊಳ್ಳುತ್ತಾರೆ. ಆದರೆ, ನಮ್ಮ ನಾಯಕರು ಹಾಗೂ ಹೈಕಮಾಂಡ್‌ನವರು ನನಗೆ ಸ್ಥಾನ ಕೊಟ್ಟಿದ್ದಾರೆ. ಸಿಎಂ ತವರು ಜಿಲ್ಲೆಯಾದರೂ ಹಾಗೂ ಕೇವಲ ನಾಲ್ಕು ಕ್ಷೇತ್ರವಿದ್ದರೂ ನನಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಹಿಂದೆ ಜೆಡಿಎಸ್‌ನಲ್ಲಿದ್ದಾಗ ನನ್ನನ್ನು ಮಂತ್ರಿ ಮಾಡಲಿಲ್ಲ. ಕೊನೆಗೆ ಹಿರಿಯರಾದ ಚೆಲುವರಾಯಸ್ವಾಮಿ, ಹೊರಟ್ಟಿ ಹಾಗೂ ಚೆನ್ನಿಗಪ್ಪ ಕೊನೆಯಪಕ್ಷ ಬಾಲಕೃಷ್ಣರನ್ನು ಬಿಡಿಎ ಅಧ್ಯಕ್ಷರನ್ನಾಗಿ ಮಾಡಿ ಎಂದಿದ್ದರು. ಆಗ ಯಾಕೆ ದುಡ್ಡು ಹೊಡೆಯೋಕಾ ಎಂದಿದ್ದರು. ಇಂತಹ ಮನಸ್ಥಿತಿ ಇರೋರ ಬಳಿ ಏನು ನಿರೀಕ್ಷೆ ಮಾಡಬಹುದು ಎಂದು ಎಚ್ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net