ಅಭಿವೃದ್ಧಿಯಲ್ಲಿ ರಾಜಕೀಯ ಬೇಡ

ಹಾರೋಹಳ್ಳಿ ಪಟ್ಟಣದ ಗ್ರಾಮಾಂತರ ವಿದ್ಯಾಸಂಸ್ಥೆಯ ಆವರಣದಲ್ಲಿ ಬಮುಲ್​ ವತಿಯಿಂದ ಹಮ್ಮಿಕೊಂಡಿದ್ದ  ಕಾರ್ಯಕ್ರಮದಲ್ಲಿ ಹೆಚ್ಚು ಅಂಕ ಗಳಿಸಿದ ಹಾಲು ಉತ್ಪಾದಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಬಬುಲ್​ ಅಧ್ಯ ಡಿ ಕೆ ಸುರೇಶ್​, ವಿಧಾನ ಪರಿಷತ್​ ಸದಸ್ಯ ಎಸ್​. ರವಿ, ಬಮುಲ್​ ನಿರ್ದೇಶಕ ಎಚ್​.ಎಸ್​. ಹರೀಶ್​ ಕುಮಾರ್​ ಇತರರು ಇದ್ದರು.
ಹಾರೋಹಳ್ಳಿ ಪಟ್ಟಣದ ಗ್ರಾಮಾಂತರ ವಿದ್ಯಾಸಂಸ್ಥೆಯ ಆವರಣದಲ್ಲಿ ಬಮುಲ್​ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹೆಚ್ಚು ಅಂಕ ಗಳಿಸಿದ ಹಾಲು ಉತ್ಪಾದಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಬಬುಲ್​ ಅಧ್ಯ ಡಿ ಕೆ ಸುರೇಶ್​, ವಿಧಾನ ಪರಿಷತ್​ ಸದಸ್ಯ ಎಸ್​. ರವಿ, ಬಮುಲ್​ ನಿರ್ದೇಶಕ ಎಚ್​.ಎಸ್​. ಹರೀಶ್​ ಕುಮಾರ್​ ಇತರರು ಇದ್ದರು.
Published on
ಹಾರೋಹಳ್ಳಿ: ರೈತರು ಹಾಗೂ ಶ್ರೀಸಾಮಾನ್ಯರ ಬದುಕು ಹಸನಾಗಬೇಕೆಂದರೆ ಅಭಿವೃದ್ಧಿ ಕಾರ್ಯಗಳ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು, ಆಗ ಮಾತ್ರ ಬೆಂಗಳೂರು ದಕ್ಷಿಣ ಜಿಲ್ಲೆಗೆ ನೀವು ಕೇಳಿದ್ದೆಲ್ಲವೂ ಬರುತ್ತದೆ ಎಂದು ಬಮುಲ್​ ಅಧ್ಯಕ್ಷ ಡಿ.ಕೆ. ಸುರೇಶ್​ ತಿಳಿಸಿದರು.
ಪಟ್ಟಣದಲ್ಲಿ ಬಮುಲ್​ ಕಲ್ಯಾಣ ಟ್ರಸ್ಟ್​ ಹಾಗೂ ಬೆಂಗಳೂರು ಹಾಲು ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಟೀಕೆಗಳು, ವಿರೋಧಗಳು ಬರುತ್ತವೆ. ಅವುಗಳೆಲ್ಲವನ್ನು ಮೆಟ್ಟಿ ನಿಂತು ಅಭಿವೃದ್ಧಿ ಮಾಡುತ್ತೇವೆ. ಬೆಂಗಳೂರು ದಕ್ಷಿಣ ಜಿಲ್ಲೆಗೆ ಮುಂದಿನ ದಿನಗಳಲ್ಲಿ ಅಭಿವೃದ್ಧಿಯ ಮಹಾಪೂರವೆ ಹರಿದು ಬರಲಿದೆ ಎಂದು ಹೇಳಿದರು.
ಬಮುಲ್​ ಟ್ರಸ್ಟ್​ ವತಿಯಿಂದ ಹಾಲು ಉತ್ಪಾದಕರ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಗೌರವ ಸೂಚಿಸಲು ಪ್ರೋತ್ಸಾಹ ಧನ, ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಅಂತಿಮ ಪರೀಕ್ಷೆಗೆ ಪ್ರೋತ್ಸಾಹ, ಸಮಾಜದಲ್ಲಿ ಸಮರ್ಥವಾಗಿ ಎಲ್ಲ ರೀತಿಯ ಸಹಕಾರ ಒದಗಿಸುವ ಮೂಲಕ ಒಕ್ಕೂಟ ನಿಮ್ಮ ಜತೆ ನಿಂತಿದೆ, ಆರೋಗ್ಯ ತಪಾಸಣೆಗೆ 25 ಸಾವಿರ ರೂ.ಸೇರಿ ಆರೋಗ್ಯ ವಿಮೆ ಯೋಜನೆ ಜಾರಿಗೆ ತರಲಾಗುತ್ತದೆ ಎಂದರು. ಅಕಾಲಿಕ ಮರಣಕ್ಕೆ ತುತ್ತಾಗುವ ರಾಸುಗಳ ರೈತರಿಗೆ ತಕ್ಷಣ ಪರಿಹಾರ ಹಣವನ್ನು ನೀಡಲು ಈಗಾಗಲೇ 27.7 ಲಕ್ಷ ರಾಸುಗಳಿಗೆ 6 ಕೋಟಿ ರೂ. ವೆಚ್ಚದಲ್ಲಿ ವಿಮೆ ಮಾಡಿಸಲಾಗಿದೆ ಎಂದು ತಿಳಿಸಿದರು.
ವಿಧಾನ ಪರಿಷತ್​ ಸದಸ್ಯ ಎಸ್​. ರವಿ ಮಾತನಾಡಿ, ಮಾತಿಗೆ ಮೊದಲು ನಾವು ಮಣ್ಣಿನ ಮಕ್ಕಳು, ನಾವು ಮಣ್ಣಿನ ಮಕ್ಕಳು ಎಂದು ಬೊಬ್ಬೆ ಹೊಡೆಯುವ ಯಾರೂ ಈವರೆಗೂ ರೈತರ ಸಂಕಷ್ಟ್ಟಗಳಿಗೆ ಮಿಡಿದು ರೈತರ ಕೈ ಹಿಡಿಯುವ ಕಾರ್ಯಕ್ಕೆ ಮುಂದಾಗಿಲ್ಲ, ನಾಡಿನ ರೈತರಿಗೆ ಅವರ ಕೊಡುಗೆ ಏನೆಂಬುದನ್ನು ನಿರೂಪಿಸಲಿ ಎಂದು ವಿರೋಧಿಗಳಿಗೆ ನೇರ ಸವಾಲು ಎಸೆದರು.
ಡಿ.ಕೆ. ಸುರೇಶ್​ ಅವರು ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷರಾಗುವ ಮುನ್ನ ಒಕ್ಕೂಟವು ನಷ್ಟದ ಪರಿಸ್ಥಿತಿಯಲ್ಲಿತ್ತು. ನಂತರ 60 ಕೋಟಿ ರೂ. ಲಾಭಾಂಶದಲ್ಲಿದ್ದು, ಇದೆಲ್ಲವೂ ರೈತರು ಹಾಗೂ ಸಿಬ್ಬಂದಿಯ ನಿರಂತರ ಪರಿಶ್ರಮದಿಂದ ಸಾಧ್ಯವಾಗಿದೆ. ಚನ್ನಪಟ್ಟಣ ತಾಲೂಕು ಹೈನೋಧ್ಯಮ ಕ್ಷೇತ್ರದಲ್ಲಿ ರಾಜ್ಯದಲ್ಲಿಯೇ ನಂಬರ್​ ಒನ್​ ಸ್ಥಾನದಲ್ಲಿದೆ, ಇಂದು ಹೈನುಗಾರಿಕೆ ರೈತರ ಪಾಲಿಗೆ ಒಂದು ಬೃಹತ್​ ಉದ್ಯಮವಾಗಿ ಬದಲಾಗಿದೆ ಎಂದರು.
ಬಮುಲ್​ ನಿರ್ದೇಶಕ ಎಸ್​.ಎಸ್​. ಹರೀಶ್​ ಕುಮಾರ್​ ಮಾತನಾಡಿ, 2025& 26ನೇ ಸಾಲಿನಲ್ಲಿ 162 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ 8 ಲಕ್ಷ ರೂ. ವಿತರಿಸಲಾಗಿದೆ. ಸದಸ್ಯರ ಮರಣ ಪರಿಹಾರ ಯೋಜನೆಯಡಿ ಮರಣ ಹೊಂದಿದ 22 ರೈತರಿಗೆ 22 ಲಕ್ಷ ರೂ. ವಿತರಣೆ ಮಾಡಲಾಗಿದೆ. ಸ್ವಾಭಾವಿಕ ಮರಣ ಹೊಂದಿದ ಹಾಲು ಉತ್ಪಾದಕ ಸದಸ್ಯರಿಗೆ 2 ಲಕ್ಷ ವಿತರಣೆ 413 ರಾಸು ಮರಣ ಹೊಂದಿದ್ದಕ್ಕೆ ರಾಸುವಿಮೆ ಯೋಜನೆ ಅಡಿಯಲ್ಲಿ 2.8 ಕೋಟಿ ರೂ. ಪರಿಹಾರ ವಿತರಣೆ ಹಾಲು ಉತ್ಪಾದಕರಿಗೆ ಹಾಲಿನ ಕ್ಯಾನ್​ ವಿತರಣೆ ಸೇರಿ ಹಲವು ಯೋಜನೆಗಳನ್ನು ನೀಡಲಾಗಿದೆ ಎಂದು ಹೇಳಿದರು.
ಬೆರಗಾಗಿಸಿದ ವಿದ್ಯಾರ್ಥಿನಿ:
ಬಮುಲ್​ ಕಲ್ಯಾಣ ಟ್ರಸ್ಟ್​ ಪ್ರತಿಭಾ ಪುರಸ್ಕಾರದಲ್ಲಿ ರೈತರು ಅವಲಂಭಿಸಿರುವ ಹೈನುಗಾರಿಕೆಯ ಜತೆಗೆ ರೈತಾಪಿ ವರ್ಗ ಸ್ವಾವಲಂಭಿ ಬದುಕು ನಡೆಸಲು ಸಹಕಾರಿಯಾಗುವ ಭಾಷಣ ಮಾಡಿದ ಬಮುಲ್​ ಅಧ್ಯಕ್ಷ ಡಿ.ಕೆ.ಸುರೇಶ್​ ಅವರಿಗೆ ಸಭೆಯ ಮಧ್ಯೆ ಬಳೆ ಚನ್ನವಲಸೆ ಗ್ರಾಮದ ಇಂಜಿನಿಯರ್​ ವಿದ್ಯಾರ್ಥಿನಿ ಬಿ.ಎಸ್​.ಶ್ರುತಿ ನೇರ ಪ್ರಶ್ನೆಗಳನ್ನು ಕೇಳುವ ಮೂಲಕ ಸಭೆ ಬೆರಗಾಗುವಂತೆ ಮಾಡಿದಳು.
ರೈತ ಸ್ವಾವಲಂಭಿ ಬದುಕನ್ನು ನಡೆಸಬೇಕಾದರೆ ಕಾಂಕ್ರಿಟ್​ ನಾಡು ಮಾಡುವುದರಿಂದ ಸಾಧ್ಯವಿಲ್ಲ, ರೈತ ಪ್ರಕೃತಿಯ ನಡುವೆ ಬದುಕುತ್ತಾನೆ. ಪಕೃತಿ ರೈತರ ಬದುಕನ್ನು ಪೋಷಿಸುತ್ತದೆ. ಎಲ್ಲರೂ ಪ್ರಕೃತಿಯನ್ನು ರಕ್ಷಿಸಬೇಕು, ರೈತರ ಭೂಮಿಯಿಂದ ಬೆಳೆ, ನಾಡಿನ ಬದುಕು ಎಂಬಂತೆ ಮಾತುಗಳನ್ನು ಆಡಿ ಪರೋಕ್ಷವಾಗಿ ಉಪನಗರ ಹಾಗೂ ರೈತರ ಭೂಸ್ವಾಧಿನದ ವಿರುದ್ಧ ಧ್ವನಿ ಎತ್ತಿ ಅಚ್ಚರಿ ಮೂಡಿಸಿದಳು.
ಭೂಸ್ವಾಧಿನ ಪ್ರಕ್ರಿಯೆಯಲ್ಲಿ ಹಣ ನೀಡುವುದರಿಂದ ರೈತರ ಬದುಕು ಪ್ರಗತಿಯಾಗುವುದಿಲ್ಲ. ತಾವು ಸ್ವಾವಲಂಭಿಯಾಗಿ ಬದುಕಿ ಎನ್ನುತ್ತೀರಿ, ರೈತರ ಬದುಕು ಕಿತ್ತುಕೊಳ್ಳುವ ಸರ್ಕಾರ ಯಾವ ರೀತಿ ನೆಮ್ಮದಿ ನೀಡುತ್ತೀರಿ, ನೀವು ನೀಡುವ ಹಣ ಮಾಲೀಕರಿಗೆ ಸಂದಾಯವಾದರೂ ಮುಂದಿನ ತಲೆಮಾರಿನ ಜೀವನ ಹೇಗೆ? ಕಂಪನಿಗಳು ನೀಡುವ ಉದ್ಯೋಗ ಒಂದು ತಲೆಮಾರಿಗೆ ಸೀಮಿತವಾಗುತ್ತದೆ. ಮುಂದಿನ ತಲೆಮಾರು ಭಿಕ್ಷಾಟನೆ ಮಾಡಿ ಬದುಕಬೇಕಾಗುತ್ತದೆ. ಇದು ಸರ್ಕಾರದ ಕೊಡುಗೆಯೇ ಎಂದು ಭಾವನಾತ್ಮಕವಾಗಿ ಪ್ರಶ್ನಿಸಿ ಇದಕ್ಕೆ ಉತ್ತರಿಸುವಂತೆ ಹೇಳಿದಳು.
ಇದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಸುರೇಶ್​, ನಗರೀಕರಣದಿಂದ ರೈತರ ಪ್ರಗತಿಯಾಗುತ್ತದೆ. ಕಾಲಕ್ಕೆ ತಕ್ಕಂತೆ ಚಿಂತನೆಗಳು ಬದಲಾಗಬೇಕು, ಜತೆಗೆ ಪ್ರಗತಿಯ ಆಶಯಗಳು ಬದಲಾಗಬೇಕು. ರೈತರ ಬದುಕು ಹಸನಾಗಬೇಕಾದರೆ ಆಧುನಿಕವಾಗಿ ಮುಂದುವರಿಯಬೇಕು. ಇದಕ್ಕೆ ನಗರೀಕರಣದ ಅವಶ್ಯಕತೆ ಇದೆ. ಇಂದು ಬಹುತೇಕ ಜನರು ಹಳ್ಳಿಗಳಲ್ಲಿ ವಾಸ ಮಾಡುತ್ತಿಲ್ಲ, ಹಬ್ಬ ಹರಿದಿನಗಳಲ್ಲಿ ಬಂದು ಹೋಗುತ್ತಾರೆ. ಅತಿಹೆಚ್ಚು ನಗರವನ್ನೇ ಜನ ಅವಲಂಭಿಸಿದ್ದಾರೆ ಎಂದು ಉತ್ತರಿಸಿದರು.
ಮಾಜಿ ಶಾಸಕ ಕೆ.ರಾಜು, ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಜೆ.ಸಿ.ಬಿ ಅಶೋಕ್​, ಮುಖಂಡರಾದ ಡಿ.ಎಂ.ವಿಶ್ವನಾಥ್​, ಸರ್ದಾರ್​ ಹುಸೇನ್​, ಕೀರಣಗೆರೆ ಜಗದೀಶ್​, ಮೋಹನ್​ ಹೊಳ್ಳ, ಬೊಮುಲ್​ ನಿರ್ದೇಶಕರಾದ ಪಿ.ನಾಗರಾಜು, ಲಿಂಗೇಶ್​ಕುಮಾರ್​, ಸತೀಶ್​, ಆನಂದ ಮುಂತಾದವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net