ತಾಲೂಕಿನಲ್ಲಿ ನಡೆದಿರುವ ಜೆಜೆಎಂ ಕರ್ಮಕಾಂಡ ಬಗೆದಷ್ಟು ಬಯಲಾಗುತ್ತಿದೆ. ಆದರೆ, ಈ ಅಕ್ರಮಗಳಿಗೆ ಉತ್ತರಿಸುವವರು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ. ಇಡೀ ಅಕ್ರಮದ ಪ್ರಮುಖ ಸೂತ್ರಧಾರ ಈ ಹಿಂದಿನ ಎಇಇ. ಅವರೀಗ ಇಲ್ಲಿಂದ ವರ್ಗಾವಣೆ ಆಗಿ ಬೇರೆ ಕಡೆ ಇದ್ದಾರೆ. ಅವರ ಅವಧಿಯಲ್ಲಿ ನಡೆದಿರುವ ಅಕ್ರಮಗಳ ಸಾಲು ಹೇಳತೀರದಾಗಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಯೊಂದೇ ದಾರಿಯಾಗಿದೆ. ಜೆಜೆಎಂ ಕಾಮಗಾರಿಯ ಬಗ್ಗೆ ಅಧಿಕಾರಿಗಳು ಸ್ಥಳದಲ್ಲಿ ನಿಂತು ಕಾಮಗಾರಿಯ ಗುಣಮಟ್ಟ ನೋಡಿಕೊಳ್ಳಲು ರ್ನಿಲ್ಯ ವಹಿಸಿರುವುದು ಎಲ್ಲದಕ್ಕೂ ಕಾರಣ ಎಂದರೆ ತಪ್ಪಾಗಲಾರದು. ಕೆಲ ತಿಂಗಳುಗಳ ಹಿಂದೆ ಶಾಸಕ ಸಿ.ಪಿ.ಯೋಗೇಶ್ವರ್, ತಾಲೂಕಿನಲ್ಲಿ ನಡೆಸಿದ ಜನಸಂಪರ್ಕ ಸಭೆಗಳಲ್ಲಿ ಜೆಜೆಎಂ ಅವಾಂತರ ಜೋರಾಗಿ ಸದ್ದು ಮಾಡಿತ್ತು. ಈ ವೇಳೆ ಕಾಮಗಾರಿ ಅನುಷ್ಠಾನ ನಿರ್ವಹಣೆ ಮಾಡಿದ ಜಿಪಂ ಎಇಇ ಮಧುಸೂಧನ್ ಅವರನ್ನು ಶಾಸಕರು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. "ನಮ್ಮ ಜನರಿಗೆ ಯಾಕಯ್ಯ ಅನ್ಯಾಯ ಮಾಡುತ್ತಿದ್ದೀಯಾ..., ನಮ್ಮ ಜನ ನೀರಿಲ್ಲದೇ ಸಾಯುವ ಸ್ಥಿತಿ ತಂದಿದ್ದೀಯಾ..., ಎಲ್ಲ ಊರಿನಲ್ಲೂ ನೀನು ಅಧ್ವಾನ ಮಾಡಿದ್ದೀಯಾ.., ಇಷ್ಟರಲ್ಲೆ ನೀನು ಜೈಲಿಗೆ ಹೋಗುತ್ತಿಯಾ ಹುಷಾರ್' ಎಂದು ಎಚ್ಚರಿಕೆ ನೀಡಿದ್ದರು.