ತೆಂಗಿನಕಲ್ಲು ಅರಣ್ಯದಂಚಿನ ಸುಂದರ ತಾಣ 'ನೆಲಮಲೆ'

ನೆಲಮಲೆ ಗ್ರಾಮದ ಚಿತ್ರಣ
ನೆಲಮಲೆ ಗ್ರಾಮದ ಚಿತ್ರಣ
Published on
ರಾಮನಗರ: ಭಕ್ತರ ದಣಕಾಶಿ ಎಂದೇ ಪ್ರಸಿದ್ಧಿಯಾದ ರೇವಣಸಿದ್ದೇಶ್ವರ ಬೆಟ್ಟದ ಕೆಳಭಾಗದಲ್ಲಿ, ಸುಂದರ ಪ್ರಕೃತಿಯ ಮಡಲಿನಲ್ಲಿ ತೆಂಗಿನಕಲ್ಲು ಅರಣ್ಯದಂಚಿನಲ್ಲಿರುವ ಒಂದು ಚಾರಿತ್ರಿಕ ಗ್ರಾಮವೇ ಅಂದಿನ 'ಭೂಮಲೆ', ಇಂದಿನ 'ನೆಲಮಲೆ'.
ರಾಮನಗರ ಜಿಲ್ಲಾ ಕೇಂದ್ರದಿಂದ ಕೇವಲ 15 ಕಿ.ಮೀ ಅಂತರದಲ್ಲಿರುವ, ಈ ಗ್ರಾಮಕ್ಕೆ ಗಂಗರು ಮತ್ತು ಚೋಳರ ಕಾಲದ ಇತಿಹಾಸವಿದೆ. ಹಿಂದೆ ತೆಂಗಿನಕಲ್ಲು ಪಾಳೇಗಾರರಾದ ಚೋಳರಾಜ ಹಾಗೂ ಚಾಮರಾಜರು ಇಲ್ಲಿ ಆಡಳಿತ ನಡೆಸಿದ್ದರು ಎಂಬುದಕ್ಕೆ ಗ್ರಾಮದ ಪಕ್ಕದ ಬೆಟ್ಟದಲ್ಲಿರುವ ಕೋಟೆ, ರಾಜರ ಮನೆಗಳು ಹಾಗೂ ಸೊಣೆಗಳೇ ಸಾ.
"ನೆಲಮಲೆ' ಹೆಸರಿನ ಇತಿಹಾಸ: ರೇವಣಸಿದ್ದೇಶ್ವರ ಬೆಟ್ಟದ ಕೆಳಭಾಗದಲ್ಲೆ ಈ ಗ್ರಾಮವಿರುವುದರಿಂದ ಹಿಂದೆ ಇದನ್ನು "ಭೂಮಲೆ' (ಭೂ ಎಂದರೆ ಭೂಮಿ, ಮಲೆ ಎಂದರೆ ಬೆಟ್ಟ) ಎಂದು ಕರೆಯಲಾಗುತ್ತಿತ್ತು. ಕಾಲಾಂತರದಲ್ಲಿ ಆಡುಭಾಷೆಯಲ್ಲಿ ಭೂಮಿ ಎಂಬುದು "ನೆಲೆ'ಯಾಗಿ, 'ನೆಲಮಲೆ' ಎಂದು ಪ್ರಚಲಿತಕ್ಕೆ ಬಂತು ಎನ್ನುತ್ತಾರೆ ಗ್ರಾಮದ ನಂದೀಶ್​. ಆರಂಭದಲ್ಲಿ ಮೇದ ಜನಾಂಗದವರು ಈ ಗ್ರಾಮದ ಉದಯಕ್ಕೆ ಕಾರಣೀಭೂತರಾಗಿದ್ದರು ಎಂಬ ಪ್ರತಿತಿಯೂ ಇದೆ. ಆಸರೆಯಾದ ಹೈನುಗಾರಿಕೆ: ತೆಂಗು, ರೇಷ್ಮೆ ಮತ್ತು ಮಾವು ಇಲ್ಲಿನ ಪ್ರಮುಖ ಬೆಳೆಗಳು. ರೇಷ್ಮೆ ಕೃಷಿ ಮತ್ತು ಹೈನುಗಾರಿಕೆಯಿಂದ ಇಲ್ಲಿನ ರೈತರು ಉತ್ತಮ ಆದಾಯ ಕಂಡುಕೊಳ್ಳುತ್ತಿದ್ದಾರೆ.
ಕೇವಲ ಸ್ವಂತ ಕೃಷಿಯಷ್ಟೇ ಅಲ್ಲದೆ, ನೆರೆಹೊರೆಯ ಹಳ್ಳಿಗಳ ಮಾವಿನ ತೋಟಗಳನ್ನು ಗುತ್ತಿಗೆಗೆ ಪಡೆದು ಮಾವು ವ್ಯಾಪಾರದಲ್ಲೂ ಗ್ರಾಮಸ್ಥರು ಸಕ್ರಿಯರಾಗಿದ್ದಾರೆ. ಗ್ರಾಮದ ಹಾಲಿನ ಡೇರಿಗೆ ನಿತ್ಯ 1 ಸಾವಿರ ಲೀಟರ್​ ಹಾಲು ಪೂರೈಕೆಯಾಗುತ್ತಿದ್ದು, ಹೈನುಗಾರಿಕೆಯೇ ಜನರ ಜೀವನೋಪಾಯಕ್ಕೆ ಪ್ರಮುಖ ಬೆನ್ನೆಲುಬಾಗಿದೆ. ತಾಲೂಕು ಮಟ್ಟದಲ್ಲಿ ಪ್ರಗತಿಪರ ಕೃಷಿಕರಾಗಿ ಗುರುತಿಸಿಕೊಂಡು ಪ್ರಶಸ್ತಿ ಪಡೆದ ರೈತರೂ ಇಲ್ಲಿದ್ದಾರೆ.
ಪುರಾತನ ಕಾಲದಲ್ಲಿ ನಿರ್ಮಾಣವಾದ 'ಅಂಗಡಿಕೆರೆ'ಯು ಗ್ರಾಮದ ಅಂತರ್ಜಲ ಮಟ್ಟವನ್ನು ಕಾಯ್ದುಕೊಂಡಿದ್ದು, ಬೋರ್​ವೆಲ್​ಗಳಿಗೆ ಹಾಗೂ ಕುಡಿಯುವ ನೀರಿನ ಭವಣೆ ನೀಗಿಸಲು ಪ್ರಮುಖ ಆಸರೆಯಾಗಿದೆ.
ಗ್ರಾಮದ ಮೂಲಸೌಕರ್ಯಗಳು
ನೆಲಮಲೆಯು ಸುತ್ತಮುತ್ತಲಿನ 10ಕ್ಕೂ ಹೆಚ್ಚು ಹಳ್ಳಿಗಳಿಗೆ ಮೂಲ ಕಂದಾಯ ಗ್ರಾಮವಾಗಿದೆ. ಗ್ರಾಮದಲ್ಲಿ ಸುಮಾರು 150 ಕುಟುಂಬಗಳಿದ್ದು, 650ಕ್ಕೂ ಹೆಚ್ಚು ಜನಸಂಖ್ಯೆ ಇದೆ. 1 ರಿಂದ 5ನೇ ತರಗತಿಯವರೆಗಿನ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರ ಇಲ್ಲಿದೆ. ಇಲ್ಲಿನ ಶಿಕಿ ಅನುರಾಧಾ ಅವರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕಿ ಪ್ರಶಸ್ತಿ ಲಭಿಸಿರುವುದು ಗ್ರಾಮದ ಹೆಮ್ಮೆ.
ದೈವಿಕ ನೆಲೆ, ಸಂಸತಿ
ಗ್ರಾಮದಲ್ಲಿ ಸುಂಕತ್ತಿ ವೀರಭದ್ರಸ್ವಾಮಿ, ಮದ್ದೂರಮ್ಮ, ವಾಡೆ ಬಸಪ್ಪ ದೇವಾಲಯಗಳು ಹಾಗೂ ಶ್ರೀರಾಮ ಭಜನಾ ಮಂದಿರಗಳಿವೆ. ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಪ್ರತಿವರ್ಷ ಅಗ್ನಿಕೊಂಡ ಮಹೋತ್ಸವ ಜರುಗುತ್ತದೆ. ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆ, ಉತ್ಸವ ಹಾಗೂ ಅನ್ನಸಂತರ್ಪಣೆಗಳು ನಡೆಯುತ್ತವೆ. ಅಕ್ಕಪಕ್ಕದ ಪಾಂಡವರ ಗುಡಿಗಳಲ್ಲಿರುವ ವೀರಗಲ್ಲು ಮತ್ತು ಮಾಸ್ತಿಗಲ್ಲುಗಳು ಗ್ರಾಮದ ಪ್ರಾಚಿನ ಇತಿಹಾಸ ಸಾರುತ್ತವೆ. ಪ್ರತಿವರ್ಷ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದ ಜಾತ್ರೆ ಮುಗಿದ ಮರುದಿನ ನೆಲಮಲೆಯಲ್ಲಿ ಅದ್ದೂರಿಯಾಗಿ 'ಶ್ರೀ ರೇಣುಕಾಂಬಾ ರಥೋತ್ಸವ' ಜರುಗುತ್ತದೆ.
ಪ್ರವಾಸಿಗರ ಆಕರ್ಷಣೆ "ತಂಗಿನಕಲ್ಲು ಬೆಟ್ಟ'
ಗ್ರಾಮಕ್ಕೆ ಹೊಂದಿಕೊಂಡಂತಿರುವ ತೆಂಗಿನಕಲ್ಲು ಬೆಟ್ಟವು ಪ್ರಮುಖ ಆಕರ್ಷಣೆಯಾಗಿದೆ. ಹಿಂದೆ ಪಾಳೇಗಾರರು ಇದನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು ಎನ್ನಲಾಗಿದೆ. ಈ ಬೆಟ್ಟದ ಮೇಲಿನಿಂದ ನಿಂತು ನೋಡಿದರೆ 360 ಡಿಗ್ರಿಯಲ್ಲಿ ಸುತ್ತಮುತ್ತಲಿನ ಸುಮಾರು 20 ಕಿ.ಮೀ ವರೆಗಿನ ಅದ್ಭುತ ಪ್ರಕೃತಿ ಸೌಂದರ್ಯ ಕಣ್ಣಿಗೆ ಕಟ್ಟಿದಂತೆ ಕಾಣುತ್ತದೆ.
"

ಗ್ರಾಮ ಅರಣ್ಯ ಪ್ರದೇಶದ ಅಂಚಿನಲ್ಲಿರುವ ಕಾರಣ ಆನೆ ಸೇರಿ ವನ್ಯ ಪ್ರಾಣಿಗಳ ಉಪಟಳ ಹೆಚ್ಚಿದೆ. ತೋಟದ ಬೆಳೆಯಲ್ಲಿ ಆದಾಯ ಕಂಡುಕೊಂಡಿದ್ದ ಜನರು ಆನೆ ಉಪಟಳದಿಂದ ತೋಟದ ಬೆಳೆಯಿಂದ ಹಿಂದೆ ಸರಿದಿದ್ದಾರೆ. ತೆಂಗಿನಕಲ್ಲು ಅರಣ್ಯದಲ್ಲಿ ಆನೆ ಉಪಟಳಕ್ಕೆ ಬ್ರೇಕ್​ ಹಾಕಿದರೆ ಮತ್ತೆ ಗ್ರಾಮದ ರೈತರು ತೋಟದ ಬೆಳೆಗಳತ್ತ ಚಿತ್ತ ಹರಿಸಬಹುದು.

— > ಗಂಗಾಧರ್​, ರೈತ
"

ನೆಲಮಲೆ ಚಿಕ್ಕ ಗ್ರಾಮವಾದರೂ ಶಕ್ತಿ ಕೇಂದ್ರವಾಗಿದೆ. ತಾಯಿ ರೇಣುಕಾಂಬಾ ಆಶೀರ್ವಾದದಿಂದ ಗ್ರಾಮಸ್ಥರು ಅನ್ಯೋನ್ಯತೆಯಿಂದ ಜೀವನ ನಡೆಸುತ್ತಾ ಬಂದಿದ್ದಾರೆ. ಪ್ರಕೃತಿ ವನಸಿರಿ ಮಧ್ಯೆ ಜೀವನ ನಡೆಸುತ್ತಿರುವ ಇಂತಹ ಇತಿಹಾಸ ಗ್ರಾಮದಲ್ಲಿ ಜನಿಸಿರುವುದೇ ನಮ್ಮ ಪುಣ್ಯ.

— > ನವೀನ್​, ನೆಲಮಲೆ ಗ್ರಾಮಸ್ಥ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net