ಕುದೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ಅಂಗಡಿ ಮಾಲೀಕರಿಗೆ ಕೋಟ್ಪಾ ಕಾಯ್ದೆ ಬಗ್ಗೆ ಅರಿವು ಮೂಡಿಸಲಾಯಿತು. ಫಯಾಸ್ ಖಾನ್, ಎಚ್.ಸಿ ರಾಜೇಂದ್ರ, ಆರ್. ಪ್ರಕಾಶ್, ಉಮೇಶ್, ಮೋಹನ್ ಕುಮಾರ್ ಲೋಹಿತ್ ಇದ್ದರು.
Published on:
Copied
Follow Us
ಕುದೂರು :ವಿಶ್ವದಾದ್ಯಂತ ತಂಬಾಕು ಸೇವನೆಯಿಂದ ಪ್ರತಿ 4 ಸೆಕೆಂಡಿಗೆ ಒಬ್ಬರು ಹಾಗೂ ಭಾರತದಲ್ಲಿ ಪ್ರತಿ 8 ಸೆಕೆಂಡಿಗೆ ಒಬ್ಬರು ಮರಣ ಹೊಂದುತ್ತಿದ್ದು, ಭಾರತದಲ್ಲಿ ದಿನಕ್ಕೆ ಸುಮಾರು 2,500ಕ್ಕೂ ಹೆಚ್ಚು ಜನರು ತಂಬಾಕಿನಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ರಾಮನಗರ ಜಿಲ್ಲಾ ತಂಬಾಕು ನಿಯಂತ್ರಣ ಕೋಶಾಧಿಕಾರಿ ಫಯಾಸ್ ಖಾನ್ ಕಳವಳ ವ್ಯಕ್ತಪಡಿಸಿದರು.
ಬೆಂಗಳೂರು ದಕ್ಷಿಣ ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಮಾಗಡಿ ತಾಲೂಕು ಆರೋಗ್ಯ ಇಲಾಖೆ ಹಾಗೂ ಕುದೂರು ಪ್ರಾಥಮಿಕ ಆರೋಗ್ಯ ಕೇಂದ್ರ ಸಹಯೋಗದಲ್ಲಿ ಸಾರ್ವಜನಿಕರಿಗೆ ಮತ್ತು ಅಂಗಡಿ ಮಾಲೀಕರಿಗೆ ಕೋಟ್ಪಾ ಕಾಯ್ದೆ ಬಗ್ಗೆ ಅರಿವು ಮೂಡಿಸಿ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನ ಮಾರುವುದು, ಸೇದುವುದರ ಬಗ್ಗೆ ಅರಿವು ಮೂಡಿಸಿ ಮಾತನಾಡಿದರು.
ಸರ್ಕಾರಿ ಆಸ್ಪತ್ರೆ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಚ್. ಸಿ ರಾಜೇಂದ್ರ ಮಾತನಾಡಿ, ತಂಬಾಕಿನ ಹೊಗೆಯಲ್ಲಿ 7ಸಾವಿರಕ್ಕೂ ಹೆಚ್ಚು ರಾಸಾಯನಿಕಗಳಿದ್ದು, 70ಕ್ಕೂ ಹೆಚ್ಚು ರಾಸಾಯನಿಕ ಕ್ಯಾನ್ಸರ್‌ಗೆ ಕಾರಣವಾಗುತ್ತದೆ.
1 ಸಿಗರೇಟ್ ತಯಾರಿಸಲು 3 ಲೀಟರ್ ನೀರು ಬೇಕಾಗುತ್ತಿದ್ದು, ಕಾಗದಕ್ಕಾಗಿ ಪ್ರಪಂಚದಾದ್ಯಂತ ವರ್ಷಕ್ಕೆ 60 ಲಕ್ಷ ಮರ ಕಡಿಯಲಾಗುತ್ತಿದೆ ಎಂದರು.
ಅಂಗಡಿ ಮಾಲೀಕರಿಗೆ 60 ಅಡಿ 30 ಇಂಚು ಅಳತೆ ನಾಮಫಲಕದಲ್ಲಿ 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ಬೋರ್ಡ್ ಹಾಕುವಂತೆ ತಿಳಿಸಲಾಯಿತು.
ಧೂಮವ್ಯಸನಕ್ಕೆ ಅವಕಾಶ ನೀಡದಂತೆ ಎಚ್ಚರ ವಹಿಸುವುದು, ಬೆಂಕಿ ಪೊಟ್ಟಣ, ಲೈಟರ್ ಮುಂತಾದ ಧೂಮವ್ಯಸನಕ್ಕೆ ಉತ್ತೇಜಿಸುವ ವಸ್ತು ಸಾರ್ವಜನಿಕ ಸ್ಥಳದಲ್ಲಿ ಇಡಬಾರದು ಹಾಗೂ ಅಂಗಡಿಯಲ್ಲಿ ಅಪ್ರಾಪ್ತ ವಯಸ್ಕರನ್ನು ಕೆಲಸಕ್ಕೆ ಇರಿಸಿಕೊಳ್ಳದಿರುವ ಕುರಿತು ಮಾಹಿತಿ ನೀಡಲಾಯಿತು. ಪಟ್ಟಣದಲ್ಲಿ 15 ಪ್ರಕರಣ ಪತ್ತೆ ಮಾಡಿ 2500 ರೂ. ದಂಡ ವಿಧಿಸಲಾಯಿತು.
ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಆರ್. ಪ್ರಕಾಶ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಉಮೇಶ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮೋಹನ್ ಕುಮಾರ್, ಪೊಲೀಸ್ ಇಲಾಖೆ ಲೋಹಿತ್ ಇದ್ದರು.