ಅವೈಜ್ಞಾನಿಕ ಕಾಮಗಾರಿಯಿಂದ ಧೂಳಿನ ಮಜ್ಜನ

ಮಾಗಡಿ ಗಾಂಧಿನಗರದ ಬಳಿಯ ಪೈಪ್​ಲೈನ್​ ಕಾಮಗಾರಿ.
ಮಾಗಡಿ ಗಾಂಧಿನಗರದ ಬಳಿಯ ಪೈಪ್​ಲೈನ್​ ಕಾಮಗಾರಿ.
Published on
ಮಾಗಡಿ: ಸತ್ತೆಗಾಲದಿಂದ ದಾಬಸ್​ಪೇಟೆ ಕೈಗಾರಿಕಾ ಪ್ರದೇಶಕ್ಕೆ ನೀರು ಕೊಂಡೊಯ್ಯುವ ಬೃಹತ್​ ಪೈಪ್​ಲೈನ್​ ಕಾಮಗಾರಿ ಪಟ್ಟಣವಾಸಿಗಳ ಪಾಲಿಗೆ ಸಮಸ್ಯೆತಂದೊಡ್ಡಿದೆ.
ಪಟ್ಟಣದ ಪ್ರಮುಖ ವಾಣಿಜ್ಯ ಕೇಂದ್ರ ಹಾಗೂ ಜನನಿಬಿಡ ಪ್ರದೇಶವಾದ ಹೊಸಪೇಟೆಯಿಂದ ಗಾಂಧಿನಗರ ಸರ್ಕಲ್​ ಮಾರ್ಗವಾಗಿ ಸಾಗುತ್ತಿರುವ ಈ ಕಾಮಗಾರಿಯ ಅವೈಜ್ಞಾನಿಕ ನಿರ್ವಹಣೆಯಿಂದಾಗಿ ಸಾರ್ವಜನಿಕರು ಪರದಾಡುವಂತಾಗಿದೆ. ಹಿಟಾಚಿ ಮತ್ತು ಜೆಸಿಬಿ ಯಂತ್ರಗಳಿಂದ ರಸ್ತೆಯನ್ನು ಅಗೆಯಲಾಗಿದ್ದು, ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚದೆ ಹಾಗೇ ಬಿಟ್ಟಿರುವುದು ಹಾಗೂ ರಸ್ತೆಯ ಒಂದು ಬದಿಯನ್ನು ಸಂಪೂರ್ಣವಾಗಿ ಬಂದ್​ ಮಾಡಿರುವುದರಿಂದ ಇಡೀ ರಸ್ತೆಯೇ ನರಕಸದೃಶವಾಗಿದೆ.
ಕಾಮಗಾರಿ ನಡೆಯುತ್ತಿರುವ ಜಾಗದಲ್ಲಿ ಕನಿಷ್ಠ ಜವಾಬ್ದಾರಿಯನ್ನೂ ಪ್ರದರ್ಶಿಸದ ಗುತ್ತಿಗೆದಾರರು, ಧೂಳು ತಡೆಯಲು ನೀರನ್ನೂ ಸಿಂಪಡಿಸುತ್ತಿಲ್ಲ. ಇದರಿಂದ ಇಡೀ ರಸ್ತೆ ಧೂಳುಮಯವಾಗಿದೆ. ಕಾಮಗಾರಿ ಸ್ಥಳದಲ್ಲಿ ನೀರು ಸಿಂಪಡಿಸಲು ಅಧಿಕಾರಿಗಳಿಗೆ ಸ್ಥಳಿಯರು ಮತ್ತು ವರ್ತಕರು ಹಲವು ಬಾರಿ ಮನವಿ ಮಾಡಿದರೂ, ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವ ಸೌಜನ್ಯವನ್ನೂ ತೋರಿಲ್ಲ. ನಾಗರಿಕರ ಮನವಿಗೆ ಇಲ್ಲಿ ಕವಡೆ ಕಿಮ್ಮತ್ತು ಸಿಗುತ್ತಿಲ್ಲ. ಇಲಾಖೆಯ ಉನ್ನತಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣವೇ ಮಧ್ಯಪ್ರವೇಶಿಸಿ ಗುತ್ತಿಗೆದಾರರಿಗೆ ಸೂಕ್ತ ನಿರ್ದೇಶನ ನೀಡಬೇಕು. ಇಲ್ಲದಿದ್ದರೆ ಪ್ರತಿಭಟನೆ ಮಾಡುವುದಾಗಿ ವರ್ತಕರು ಮತ್ತು ಸಾರ್ವಜನಿಕರು ಎಚ್ಚರಿಸಿದ್ದಾರೆ.
ಹರಡುತ್ತಿದೆ ಕೆಮ್ಮು, ಅಸ್ತಮಾ, ಕಣ್ಣಿನ ಸೋಂಕು
ಧೂಳಿಗೆ ಹೆದರಿ ಗ್ರಾಹಕರು ಅಂಗಡಿಗಳತ್ತ ಸುಳಿಯುತ್ತಿಲ್ಲ. ಅದರಲ್ಲೂ ಹೋಟೆಲ್​, ಬೇಕರಿ ಹಾಗೂ ದಿನಸಿ ಅಂಗಡಿಗಳ ವ್ಯಾಪಾರ ಸಂಪೂರ್ಣ ನೆಲಕಚ್ಚಿದೆ. ವ್ಯಾಪಾರವಿಲ್ಲದೆ ನಷ್ಟ ಅನುಭವಿಸುತ್ತಿರುವ ವರ್ತಕರು ಅನಿವಾರ್ಯವಾಗಿ ಅಂಗಡಿಗಳಿಗೆ ಬೀಗ ಹಾಕುತ್ತಿದ್ದಾರೆ. ಗಾಂಧಿನಗರ ಸರ್ಕಲ್​ ಪಟ್ಟಣದ ಪ್ರಮುಖ ಜಂಕ್ಷನ್​ ಆಗಿದ್ದು, ನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರು ಇದೇ ಮಾರ್ಗವಾಗಿ ಓಡಾಡುತ್ತಾರೆ. ಸದ್ಯ ಇವರೆಲ್ಲರೂ ಉಸಿರಾಡುತ್ತಿರುವುದು ಆಮ್ಲಜನಕವನ್ನಲ್ಲ, ಬದಲಿಗೆ ಮಾರಣಾಂತಿಕ ಧೂಳನ್ನು!. ಪರಿಣಾಮ ಜನರಲ್ಲಿ ಕೆಮ್ಮು, ಅಸ್ತಮಾ, ಕಣ್ಣಿನ ಸೋಂಕು ಕಾಣಿಸಿಕೊಳ್ಳುತ್ತಿದೆ.
ಅಪಘಾತಕ್ಕೆ ಆಹ್ವಾನ
ಒಂದೆಡೆ ಧೂಳಿನ ಸಮಸ್ಯೆಯಾದರೆ, ಮತ್ತೊಂದೆಡೆ ಸಂಚಾರ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ರಸ್ತೆಯ ಒಂದು ಬದಿಯನ್ನು ಸಂಪೂರ್ಣ ಕಿತ್ತುಹಾಕಿರುವುದರಿಂದ, ಕಿರಿದಾದ ಮತ್ತೊಂದು ಬದಿಯಲ್ಲೇ ಉಭಯ ಮಾರ್ಗದ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಇದರಿಂದ ವಾಹನಗಳು ಮುಖಾಮುಖಿ ಡಿಕ್ಕಿಯಾಗುತ್ತಿದ್ದು, ಸಣ್ಣಪುಟ್ಟ ಅಪಘಾತಗಳು ನಿತ್ಯವೂ ಸಂಭವಿಸುತ್ತಿವೆ. ದೊಡ್ಡ ಅನಾಹುತ ನಡೆದು ಸಾವು&ನೋವು ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು.
ಕಣ್ಮರೆಯಾದ ತಡೆಗೋಡೆಗಳು
ಕೆರೆ ಹಾಗೂ ರಸ್ತೆ ಬದಿಯಲ್ಲಿದ್ದ ಸುರಕ್ಷತಾ ತಡೆಗೋಡೆಗಳನ್ನು ಕಾಮಗಾರಿ ಹೆಸರಲ್ಲಿ ಕಿತ್ತುಹಾಕಲಾಗಿದೆ. ಕನಿಷ್ಠ ರಕ್ಷಣಾ ಬ್ಯಾರಿಕೇಡ್​ಗಳನ್ನಾಗಲಿ ಅಥವಾ ಸೂಚನಾ ಫಲಕಗಳನ್ನಾಗಲಿ ಗುತ್ತಿಗೆದಾರರು ಅಳವಡಿಸಿಲ್ಲ. ಇದರ ನಡುವೆ ಮಳೆಯಿಂದ ರಸ್ತೆಗಳು ಕೆಸರು ಗದ್ದೆಯಂತಾಗಿವೆ. ರಾತ್ರಿ ವೇಳೆ ಸ್ವಲ್ಪ ಆಯತಪ್ಪಿದರೂ ವಾಹನ ಸವಾರರು ನೇರವಾಗಿ ಕೆರೆಗೆ ಅಥವಾ ಬೃಹತ್​ ಕಂದಕಕ್ಕೆ ಬೀಳುವುದು ಗ್ಯಾರಂಟಿ. ಇಷ್ಟೇ ಅಲ್ಲದೇ, ರಸ್ತೆ ದೀಪಗಳು ಕೂಡ ಉರಿಯುತ್ತಿಲ್ಲವಾದ್ದರಿಂದ ಇಡೀ ಪ್ರದೇಶ ಕಗ್ಗತ್ತಲಲ್ಲಿ ಮುಳುಗಿದ್ದು, ವಾಹನ ಸವಾರರು ದಾರಿ ಕಾಣದೆ ತತ್ತರಿಸುತ್ತಿದ್ದಾರೆ.
ಸಾರ್ವಜನಿಕರ ಆಗ್ರಹವೇನು?
* ಧೂಳು ನಿಯಂತ್ರಣಕ್ಕೆ ದಿನಕ್ಕೆ ಕನಿಷ್ಠ 3&4 ಬಾರಿ ರಸ್ತೆಗೆ ನೀರು ಸಿಂಪಡಿಸಬೇಕು.
* ಕೆರೆ ಬದಿಯಲ್ಲಿ ತಾತ್ಕಾಲಿಕ ತಡೆಗೋಡೆ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಬ್ಯಾರಿಕೇಡ್​ ಮತ್ತು ರಿಫ್ಲೆಕ್ಟರ್​ಗಳನ್ನು ಅಳವಡಿಸಬೇಕು.
* ಗಾಂಧಿನಗರ&ಹೊಸಪೇಟೆ ಸರ್ಕಲ್​ ಸುತ್ತಮುತ್ತ ಬೀದಿ ದೀಪಗಳನ್ನು ಸರಿಪಡಿಸಬೇಕು.
* ಯುದ್ಧೋಪಾದಿಯಲ್ಲಿ ಕಾಮಗಾರಿ ಮುಗಿಸಬೇಕು.
"

ಧೂಳಿನಿಂದಾಗಿ ಅಂಗಡಿಗಳನ್ನು ತೆರೆಯಲು ಸಾಧ್ಯವಾಗದೆ ಮುಚ್ಚಿದ್ದೇವೆ. ಗ್ರಾಹಕರು ಬರುವುದೇ ನಿಂತುಹೋಗಿದೆ. ನಮ್ಮ ಕುಟುಂಬಕ್ಕೆ ಆಧಾರವಾಗಿದ್ದ ವ್ಯಾಪಾರವೇ ಇಲ್ಲದಿದ್ದರೆ ನಾವು ಜೀವನ ಸಾಗಿಸುವುದಾದರೂ ಹೇಗೆ?. ಅಧಿಕಾರಿಗಳು ಶ್ರೀವೇ ಕಾಮಗಾರಿ ಪೂರ್ಣಗೊಳಿಸಿ ನಮ್ಮ ಆರೋಗ್ಯ ರಸಲಿ. ಇಲ್ಲವೇ ಕುಟುಂಬ ಸಾಗಿಸಲು ಅವರೇ ಏನಾದರೂ ಕೆಲಸ ಕೊಡಿಸಲಿ.

— > ಶಶಾಂಕ್​ ಜಿ., ಸ್ಥಳಿಯ ಅಂಗಡಿ ಮಾಲೀಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net