ಮಾವುಮೇಳ ಅನಿಶ್ಚಿತ ಸಂಕಷ್ಟ ನಿಶ್ಚಿತ

ಮಾಗಡಿ ತಾಲೂಕಿನ ಮಾವು ಬೆಳೆಗಾರ ನೈಸರ್ಗಿಕವಾಗಿ ಹಣ್ಣು ಮಾಡಿ ಶೇಖರಿಸಿಟ್ಟ ಮಾವು.
ಮಾಗಡಿ ತಾಲೂಕಿನ ಮಾವು ಬೆಳೆಗಾರ ನೈಸರ್ಗಿಕವಾಗಿ ಹಣ್ಣು ಮಾಡಿ ಶೇಖರಿಸಿಟ್ಟ ಮಾವು.
Published on
ಮಾಗಡಿ: ಒಂದೆಡೆ ಇಳುವರಿ ಕುಸಿತ, ಇನ್ನೊಂದೆಡೆ ಕೈಕೊಟ್ಟ ಮಾರುಕಟ್ಟೆ, ದರ ಇಳಿಕೆ, ಮತ್ತೊಂದೆಡೆ ಪರಿಹಾರ ಪಾವತಿಗೆ ಸರ್ಕಾರದ ರ್ನಿಲಕ್ಷ$್ಯ. ಈ ಮಧ್ಯೆ ರೈತರಿಗೆ ಕೊಂಚ ಲಾಭ ಕೊಡುತ್ತಿದ್ದ ಪ್ರಸಿದ್ಧ ಮಾವುಮೇಳ ದಿಢೀರ್​ ಮುಂದೂಡಿಕೆಯಾಗಿದ್ದು, ಸಾಲುಸಾಲು ಆಘಾತಗಳಿಂದಾಗಿ ಆತಂಕದಲ್ಲಿದ್ದ ಮಾವು ಬೆಳೆಗಾರರು ಈಗ ಮತ್ತೆ ಸಂಕಷ್ಟದ ಸುಳಿಗೆ ಸಿಲುಕಿಕೊಂಡಂತಾಗಿದೆ.
ಬೆಂಗಳೂರಿನ ಲಾಲ್​ಬಾಗ್​ನಲ್ಲಿ ಮೇ 27ರಿಂದ ಜೂ. 26ರವರೆಗೆ ತೋಟಗಾರಿಕೆ ಇಲಾಖೆ, ಮಾವು ಅಭಿವೃದ್ಧಿ ಮಂಡಳಿಯಿಂದ ಬೃಹತ್​ ಮಾವಿನ ಮೇಳ ಆಯೋಜಿಸಲು ರೈತರಿಂದ ಅರ್ಜಿ ಸ್ವೀಕರಿಸಲಾಗಿತ್ತು. ಅರ್ಜಿ ಸಲ್ಲಿಸಿದ್ದ ರೈತರು ಮೇಳದಲ್ಲಿ ಭಾಗವಹಿಸಲು ಈಗಾಗಲೇ ಮಾವನ್ನು ನೈಸರ್ಗಿಕವಾಗಿ ಹಣ್ಣು ಮಾಡಲು ಶೇಖರಿಸಿಟ್ಟಿದ್ದರು. ಈಗ ಮೇಳವನ್ನು ಮುಂದೂಡಿದ್ದು, ಜೂನ್​ 4ರಿಂದ ಮೇಳ ಆರಂಭಿಸುತ್ತೇವೆ ಎಂದು ಅಧಿಕಾರಿಗಳು ಮೌಖಿಕವಾಗಿ ಹೇಳುತ್ತಿದ್ದಾರೆಯೇ ವಿನ@ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಪರಿಣಾಮ ಈಗಾಗಲೇ ಶೇಖರಿಸಿರುವ ಹಣ್ಣುಗಳು ಮೇಳ ಆರಂಭವಾಗುವಷ್ಟರಲ್ಲಿ ಕೊಳೆಯುವ ಆತಂಕ ರೈತರಲ್ಲಿ ಮನೆಮಾಡಿದೆ.
ಕುಸಿದ ಬೆಲೆ
ತಾಲೂಕಿನ ಗವಿನಾಗಮಂಗಲ ಗ್ರಾಮದ ರೈತ ರಾಮಚಂದ್ರಯ್ಯ ಅವರು ಏಳೂವರೆ ಎಕರೆಯಲ್ಲಿ ಮಾವು ಬೆಳೆದಿದ್ದರು. ಆದರೆ ಬೆಲೆ ಇಲ್ಲದ ಕಾರಣ 5 ಎಕರೆ ಮಾವನ್ನು ಕೇವಲ 1 ಲಕ್ಷ ರೂ.ಗೆ ಮಾರಾಟ ಮಾಡಿ ನಷ್ಟ ಅನುಭವಿಸಿದ್ದಾರೆ. ಉಳಿದ 2 ಎಕರೆಯ ಮಲ್ಲಿಕಾ ತಳಿಯ ಮಾವನ್ನು ಸ್ಥಳಿಯ ಎಪಿಎಂಸಿ ಮತ್ತು ಹಾಪ್​ಕಾಮ್ಸ್​ನಲ್ಲಿ ಪ್ರತಿ ಕೆ.ಜಿ.ಗೆ 40ರಿಂದ 50 ರೂ. ಮಾರಾಟ ಮಾಡುತ್ತಿದ್ದಾರೆ. ಇಳುವರಿ ಮತ್ತು ಮಾರುಕಟ್ಟೆ ಕುಸಿತದ ಪರಿಣಾಮ ಹೇಗಿದೆ ಎಂಬುದಕ್ಕೆ ಈ ಟನೆಯೇ ನೈಜ ಸ್ಥಿತಿಯೇ ಸಾ. ಬೇಡಿಕೆ ಅನುಗುಣವಾಗಿ ಕಾಯಿ ಹಣ್ಣಾದರೆ 100ರಿಂದ 150 ರೂ.ಗೆ ಮಾರಾಟವಾಗುತ್ತದೆ. ಆದರೆ ಈಗ ಕಾಯಿಯನ್ನೇ ಮಾರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಪರಿಣಾಮ ಖಾಸಗಿ ಮಂಡಿಗಳಲ್ಲಿ ಪ್ರತಿ ಕೆಜಿಗೆ 20ರಿಂದ 25 ರೂ.ಗೆ ಪಡೆಯುತ್ತಿದ್ದಾರೆ. ಅದರಲ್ಲೂ ಮಧ್ಯವರ್ತಿಗಳ ಹಾವಳಿ ಹೆಚ್ಚಿದೆ. ಸಾವಯವ ಕೃಷಿಯಿಂದ ಬೆಳೆದ ಮಾವು ಈಗ ಬರೀ 100 ರೂ.ಗೆ ಮಾರಾಟವಾಗುತ್ತಿದೆ.
ಪರಿಹಾರ ವಿತರಣೆ ತಾರತಮ್ಯ
ಕೋಲಾರ ರೈತರ ಪ್ರತಿಭಟನೆಗೆ ಮಣಿದ ಸರ್ಕಾರ, ಮಾವು ಬೆಳೆ ನಷ್ಟ ಪರಿಹಾರವಾಗಿ 40 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ, ಬೆಂಗಳೂರು ಗ್ರಾಮಾಂತರ ಹಾಗೂ ದಣ ಭಾಗದ ಜಿಲ್ಲೆಗಳಿಗೆ ನಯಾಪೈಸೆ ನೀಡಿಲ್ಲ. ಕಳೆದ ಬಾರಿ ಕಂದಾಯ ಇಲಾಖೆ, ಕೆವಿಕೆ (ಕೃಷಿ ವಿಜ್ಞಾನ ಕೇಂದ್ರ) ವಿಜ್ಞಾನಿಗಳು ಮತ್ತು ತೋಟಗಾರಿಕೆ ಇಲಾಖೆ ಒಳಗೊಂಡ ಜಂಟಿ ಸಮಿತಿ ಭೇಟಿ ನೀಡಿ ಈ ಭಾಗದಲ್ಲಿ ಶೇ. 90 ಮಾವು ನಷ್ಟವಾಗಿದೆ ಎಂದು ವರದಿ ನೀಡಿತ್ತು. ಆದರೂ ಸರ್ಕಾರ ಈ ಭಾಗದ ರೈತರನ್ನು ಸಂಪೂರ್ಣವಾಗಿ ಕೈಬಿಟ್ಟಿದೆ.
ಅಂತರ ಬೆಳೆಯೂ ಇಲ್ಲ
ಮಾವು ದೀರ್ಘಾವಧಿ ಬೆಳೆಯಾಗಿರುವುದರಿಂದ, ಅದರ ಕೆಳಗೆ ಅಂತರ ಬೆಳೆ ಬೆಳೆಯಲು ಸಾಧ್ಯವಾಗಿಲ್ಲ. ಮಾವಿನಿಂದಲೂ ಆದಾಯವಿಲ್ಲ, ಅಂತರ ಬೆಳೆಯೂ ಇಲ್ಲದೆ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಭಾಗದ ಶಾಸಕರು ತಕ್ಷಣವೇ ಸರ್ಕಾರದ ಮೇಲೆ ಒತ್ತಡ ಹೇರಿ ಪರಿಹಾರ ಕೊಡಿಸಬೇಕು ಎಂದು ಮಾವು ಬೆಳೆಗಾರರು ಆಗ್ರಹಿಸಿದ್ದಾರೆ. ಸಾಲ ಮಾಡಿ ಮಾವು ಬೆಳೆದಿದ್ದೇವೆ. ಇದೀಗ ಮಾವಿಗೆ ಬೆಲೆಯಿಲ್ಲದೆ ಬ್ಯಾಂಕ್​ಗೆ ಕಂತಿನ ಸಾಲತೀರಿಸಲು ಸಾಧ್ಯವಾಗುತ್ತಿಲ್ಲ. ಮತ್ತೊಂದೆಡೆ ಸಾಲ ಕಟ್ಟಲು ಸಾಧ್ಯವಾಗದಿದ್ರೆ ನಿಮ್ಮ ಮೇಲೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವುದಾಗಿ ತೊಂದರೆ ನೀಡುತ್ತಾರೆ. ಹೀಗಾದರೆ ನಮ್ಮ ಪಾಡೇನು ಎಂದು ರೈತರು ವಿಜಯವಾಣಿ ಬಳಿ ಅಳಲು ತೊಡಿಕೊಂಡಿದ್ದಾರೆ.
ಸೂಕ್ತ ಮಾರುಕಟ್ಟೆ ಒದಗಿಸಲಿ
ತಾಲೂಕಿನ 6,700 ಹೆಕ್ಟೇರ್​ನಲ್ಲಿ ಶೇ. 96 ಬಾದಾಮಿ ಉಳಿದಂತೆ ಸೇಂದೂರ, ಮಲ್ಲಿಕಾ, ತೋತಾಪುರಿ ಸೇರಿ ನಾಟಿ ತಳಿಯ ಮಾವು ಬೆಳೆಯಲಾಗಿದೆ. ಕಳೆದ ಬಾರಿಗಿಂತ ಈ ಸಲ ಇಳುವರಿ ಅಲ್ಪಮಟ್ಟದಲ್ಲಿ ಹೆಚ್ಚಿದೆ. ಮಾಗಡಿ ಭಾಗದ ಮಾವು ಬೆಳೆಗಾರರ ಬದುಕು ಸದ್ಯ ಜಿಟಿಜಿಟಿ ಮಳೆಯಲ್ಲಿ ಸಿಲುಕಿದ ಹಣ್ಣಿನಂತಾಗಿದೆ. ಸರ್ಕಾರ ಕೇವಲ ಒಂದು ಜಿಲ್ಲೆಗೆ ಸೀಮಿತವಾಗದೆ, ಸಮಿತಿಯ ವರದಿಯನ್ನಾಧರಿಸಿ ಇಡೀ ಜಿಲ್ಲೆಯ ಮಾವು ಬೆಳೆಗಾರರ ನೆರವಿಗೆ ಧಾವಿಸಬೇಕು. ಇಲಾಖೆಯು ತಕ್ಷಣವೇ ಮಾವಿನ ಮೇಳದ ನಿಖರ ದಿನಾಂಕ ಪ್ರಕಟಿಸಿ, ರೈತರ ಹಣ್ಣುಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಬೇಕಿದೆ.
"

ಎಸ್​ಡಿಆರ್​ಎಫ್​, ಎನ್​ಡಿಆರ್​ಎಫ್​ ನಿಧಿಯಿಂದ ಪ್ರತಿ ಎಕರೆ ಮಾವು ಬೆಳೆಗೆ ತಾತ್ಕಾಲಿಕ ಪರಿಹಾರವಾಗಿ ಕನಿಷ್ಠ 32 ಸಾವಿರ ರೂ. ಪರಿಹಾರ ೂಷಿಸಬೇಕು. ಕಂದಾಯ ಇಲಾಖೆ ಪ್ರತಿ ಹೋಬಳಿಯ ರೈತರಿಗೆ ತಕ್ಷಣವೇ ಜಮೀನಿನ ದಾಖಲೆಗಳನ್ನು ಒದಗಿಸಬೇಕು. ಇದರಿಂದ ರೈತರಿಗೆ ಬೆಳೆ ವಿಮೆ ವ್ಯಾಪ್ತಿಗೆ ಒಳಪಡಲು ಅನುಕೂಲವಾಗುತ್ತದೆ.

— > ಡಾ. ಜಿ.ಆರ್​.ರಾಮಚಂದ್ರಯ್ಯ ಪ್ರಗತಿಪರ ಮಾವು ಬೆಳೆಗಾರರು, ಗವಿನಾಗಮಂಗಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net