ತಾಲೂಕು ಆಡಳಿತದ ಇಚ್ಛಾಶಕ್ತಿಯ ಕೊರತೆಯಿಂದಾಗಿ ಹಿರಿಯ ನಾಗರಿಕರು, ಮಹಿಳೆಯರು ಮತ್ತು ವಿದ್ಯಾರ್ಥಿಗಳು ಸೇರಿ ನೂರಾರು ಜನ ದಿನಗಟ್ಟಲೆ ಸರದಿಯಲ್ಲಿ ನಿಲ್ಲಬೇಕಾದ ದುಸ್ಥಿತಿ ಎದುರಾಗಿದ್ದು, ಮಾಗಡಿ ಸಮಸ್ಯೆಗಳ ಮಹಾಗಣಿಯಾಗುತ್ತಿದೆ. ಹೈಟೆಕ್ ಆಸ್ಪತ್ರೆ ನಿರ್ಮಾಣದ ಉದ್ದೇಶದಿಂದ ಹಳೆಯ ತಾಲೂಕು ಕಚೇರಿ ಕಟ್ಟಡ ತೆರವುಗೊಳಿಸಲಾಗಿದ್ದು, ಸದ್ಯ ಕಚೇರಿಯನ್ನು ಶ್ರೀ ಬಸವೇಶ್ವರ ವೃತ್ತದ ಡಾ.ಶಿವಕುಮಾರ ಸ್ವಾಮೀಜಿ ಆಡಿಟೋರಿಯಂ ಕಟ್ಟಡಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ. ಆದರೆ, ಈ ತಾತ್ಕಾಲಿಕ ಕಚೇರಿಯಲ್ಲಿ ಸಮರ್ಪಕ ಕುಡಿಯುವ ನೀರು ಹಾಗೂ ಶೌಚಗೃಹದ ವ್ಯವಸ್ಥೆಯೂ ಇಲ್ಲದಂತಾಗಿದೆ. ಕಚೇರಿ ಮುಂದೆ ಬೇಕಾಬಿಟ್ಟಿ ವಾಹನಗಳನ್ನು ನಿಲ್ಲಿಸಲಾಗುತ್ತಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳು ಓಡಾಡಲು ಪರದಾಡುವಂತಾಗಿದೆ. ಕನಿಷ್ಠ ತುರ್ತು ಸಂದರ್ಭದಲ್ಲಿ ತಹಸೀಲ್ದಾರ್ ವಾಹನವೂ ಸಂಚರಿಸದಷ್ಟು ಟ್ರಾಫಿಕ್ ಕಿರಿಕಿರಿ ಉಂಟಾಗುತ್ತಿದೆ.