

ಪ್ರಮುಖ ಮುಖ್ಯಾಂಶಗಳು
ರಾಮನಗರ
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದಿಂದ ನೀಡಲಾಗುವ ಸೌಲಭ್ಯಗಳನ್ನು ತಲುಪಿಸಲು ಅಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡುವಂತೆ ಪೌರಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಬಾಲಕೃಷ್ಣ ತಾಕೀತು ಮಾಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾರ್ವಜನಿಕರ ಸಮಸ್ಯೆ ಬಗೆಹರಿಸಲು ಪ್ರಜಾಸೇವೆ ಎಂಬ ನೂತನ ಇಲಾಖೆಯನ್ನು ಪ್ರಾರಂಭಿಸಲಾಗಿದೆ. ಇದು ಮುಖ್ಯಮಂತ್ರಿಗಳ ಮಹತ್ವಾಕಾಂಕ್ಷಿ ಇಲಾಖೆಯಾಗಿದ್ದು, ತಾಲೂಕು ಮಟ್ಟದಲ್ಲಿ ಪ್ರಜಾಸೇವೆ ಆಂದೋಲನಾ ಸಭೆಗೆ ಸೆ.5 ರಂದು ಚನ್ನಪಟ್ಟಣದಲ್ಲಿ ಚಾಲನೆ ನೀಡಲಾಗುವುದು. ಸಾರ್ವಜನಿಕರಿಗೆ ಕಾನೂನು ಬದ್ಧವಾಗಿ ಹಾಗೂ ಕಾನೂನಿನ ಚೌಕಟ್ಟಿನಲ್ಲಿ ಒದಗಿಸಬಹುದಾದ ಸವಲತ್ತುಗಳು, ಯೋಜನೆಗಳನ್ನು ನಿಗದಿತ ಕಾಲ ಮಿತಿಯೊಳಗೆ ಒದಗಿಸುವುದು ಅಥವಾ ಸರ್ಕಾರದ ಪÀರಿದಿಗೆ ಅನ್ವಯವಾಗದಿದ್ದಲ್ಲಿ ಅದಕ್ಕೆ ಹಿಂಬರಹ ನೀಡುವಂತಹ ಕೆಲಸ ಮಾಡಬೇಕು, ಇದು ಮುಖ್ಯಮಂತ್ರಿಯವರು ಜನಸ್ನೇಹಿ ಆಡಳಿತಕ್ಕೆ ಉತ್ತಮ ಉದಾಹರಣೆಯಾಗಿದೆ, ಅಧಿಕಾರಿಗಳೆಲ್ಲರೂ ಪಾರದರ್ಶಕವಾಗಿ ಕೆಲಸ ಮಾಡಬೇಕು ಎಂದರು.
ಸಾರ್ವಜನಿಕರಿಗೆ ವಿವಿಧ ಇಲಾಖೆಗಳಲ್ಲಿನ ಸರ್ಕಾರಿ ಸೇವೆಗಳು ಹಾಗೂ ಆಡಳಿತಾತ್ಮಕ ಸೌಲಭ್ಯ ಸಮರ್ಪಕವಾಗಿ ಮತ್ತು ಸಕಾಲದಲ್ಲಿ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳ ಅಧಿಕಾರಿಗಳು ಪ್ರತಿ ದಿನ ಮಧ್ಯಾಹ್ನ 3.30 ರಿಂದ ಸಂಜೆ 5.30ರ ವರೆಗೆ ತಮ್ಮ ಕಚೇರಿಗಳಲ್ಲಿ ಹಾಜರಿರಬೇಕು ಎಂದರು.
ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು, ಗ್ರಾಮ ಮಟ್ಟದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಕಡ್ಡಾಯವಾಗಿ ಸಾರ್ವಜನಿಕರ ಭೇಟಿಗೆ ಲಭಿಸಬೇಕು, ಸರ್ಕಾರಿ ನೌಕರರು ಹಾಗೂ ಸಿಬ್ಬಂದಿಯು ಸರ್ಕಾರದಿಂದ ನೀಡಲಾಗಿರುವ ಗುರುತಿನ ಚೀಟಿಯನ್ನು ಧರಿಸಬೇಕು ಎಂದು ಹೇಳಿದರು.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಪಿ. ಯೋಗೇಶ್ವರ್ ಮಾತನಾಡಿ, ಬರುವ ಸೆಪ್ಟೆಂಬರ್‌ನಲ್ಲಿ ಚನ್ನಪ್ಟಣದಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ, ಕಾರ್ಯಕ್ರಮ ಉದ್ಘಾಟನೆ ಅಥವಾ ಶಂಕುಸ್ಥಾಪನೆಗೆ ಸಿದ್ಧವಿರುವ ಯೋಜನೆಗಳ ವಿವರಗಳನ್ನು ಒದಗಿಸುವಂತೆ ಅಧಿಕಾರಿಗಳಲ್ಲಿ ಕೋರಿದರು.
ವಿಧಾನ ಪರಿಷತ್ ಸದಸ್ಯ ಎಸ್. ರವಿ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ರಾಜು, ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್, ಜಿ.ಪಂ ಸಿಇಓ ಅನ್ಮೋಲ್ ಜೈನ್,ಎಡಿಸಿ ಆರ್. ಚಂದ್ರಯ್ಯ ಇನ್ನಿತರರು ಇದ್ದರು.