ಜಾನಪದ ಲೋಕ ಬಳಿ ಚಿರತೆ ಪ್ರತ್ಯಕ್ಷ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ರಾಮನಗರ: ಜಾನಪದ ಲೋಕ ಬಳಿಯ ಬಾಲಕಿಯರ ವಸತಿ ನಿಲಯದ ಬಳಿ ಬುಧವಾರ ಸಂಜೆ 6 ಗಂಟೆ ಸಮಯದಲ್ಲಿ ಚಿರತೆ ಕಾಣಿಸಿಕೊಂಡು ವಿದ್ಯಾರ್ಥಿಗಳಿಗೆ ಭಯ ಉಂಟುಮಾಡಿದೆ.
ಕಾಲೇಜು ಸಮೀಪದಲ್ಲೇ ದೊಡ್ಡಮಣ್ಣುಗುಡ್ಡೆ ಅರಣ್ಯ ಪ್ರದೇಶವಿದ್ದು, ಆಸುಪಾಸಿನ ಗುಡ್ಡೆಗಳಲ್ಲಿ ಚಿರತೆಗಳಿವೆ ಎನ್ನಲಾಗಿದೆ. ಬುಧವಾರ ಸಂಜೆ ವೇಳೆಯಲ್ಲಿ ಆಹಾರ ಅರಸಿ ಕಾಲೇಜು ಸಮೀಪದ ವಸತಿ ನಿಲಯದ ಸಮೀಪ ಬಂದಿದೆ. ಚಿರತೆ ಕಂಡ ವಿದ್ಯಾರ್ಥಿನಿಯರು ದೂರದಿಂದಲೇ ವಸತಿ ನಿಲಯದಲ್ಲಿ ನಿಂತು ಚಿರತೆ ಓಡಾಟದ ಚಿತ್ರಣವನ್ನು ತಮ್ಮ ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ.
ಚಿರತೆ ವಸತಿ ನಿಲಯದ ಆಸು ಪಾಸಿನಲ್ಲಿ ಕಾಂಪೌಂಡ್​ ಸಮೀಪ ಓಡಾಟ ನಡೆಸಿದ್ದು, ನಂತರ ಗಿಡ&ಮರಗಳ ಮರೆಯಲ್ಲಿ ಮರೆಯಾಗಿದೆ. ಕೂಡಲೇ ವಿದ್ಯಾರ್ಥಿಗಳು ವಾರ್ಡನ್​ ಗಮನಕ್ಕೆ ತಂದಿದ್ದಾರೆ. ಅವರು ಹಿರಿಯ ಅಧಿಕಾರಿಗಳ ಗಮನಕ್ಕೆ ವಿಷಯ ತಂದು ಅರಣ್ಯಾಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ. ಚನ್ನಪಟ್ಟಣ ವಲಯದ ಅರಣ್ಯ ಅಧಿಕಾರಿಗಳು ತಕ್ಷಣವೇ ಧಾವಿಸಿ ಚಿರತೆಯನ್ನು ಹುಡಾಕಾಟ ನಡೆಸಿದರು. ಚಿರತೆ ಎಲ್ಲೂ ಕಾಣದ ಕಾರಣ ವಿದ್ಯಾರ್ಥಿನಿಯರಿಗೆ ಧೈರ್ಯವಾಗಿ ಇರುವಂತೆ ತಿಳಿಸಿ ರಾತ್ರಿ ಇಡೀ ಕಾಲೇಜು ವಸತಿ ನಿಲಯದ ಸಮೀಪವೇ ಗಸ್ತು ಇದ್ದು ವಿದ್ಯಾರ್ಥಿಗಳ ಆತಂಕ ಹೋಗಲಾಡಿಸಿದ್ದಾರೆ.
ವಿದ್ಯಾರ್ಥಿಗಳು ಮೊದಲು ಪೊದೆಯಿಂದ ಹೊರ ಬರುವಾಗ ಹುಲಿ ಎಂದು ಹೆದರಿದ್ದರು ನಂತರ ಅದು ಓಡಾಟ ನಡೆಸಿದ ಮೇಲೆ ಚಿರತೆ ಎಂದು ಕ್ಯಾಮರಾದಲ್ಲಿ ಸೆರೆಯಾದ ಚಿತ್ರ ನೋಡಿ ಒಂದಷ್ಟು ಆತಂಕದಿಂದ ದೂರಾದರು.
ಹತ್ತಿರದಲ್ಲೇ ಅರಣ್ಯ ಪ್ರದೇಶ ಇರುವ ಕಾರಣ ಚಿರತೆ ಆಹಾರ ಅರಸುವ ಸಮಯದಲ್ಲಿ ಇತ್ತ ಬಂದಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಆತಂಕ ನಿವಾರಿಸಲಾಗಿದೆ. ಮತ್ತೆ ಚಿರತೆ ಕಾಣಿಸಿಕೊಂಡರೆ ಬೋನು ಇಟ್ಟು ಚಿರತೆ ಸೆರೆಯಿಡಿಯಲಾಗುತ್ತದೆ. ಜತೆಗೆ ಆಗಿಂದಾಗ್ಗೆ ನಮ್ಮ ಸಿಬ್ಬಂದಿ ನಿಗಾ ವಹಿಸುವ ಕೆಲಸ ಮಾಡಲಿದ್ದಾರೆ ಎನ್ನುತ್ತಾರೆ ಚನ್ನಪಟ್ಟಣ ವಲಯ ಅರಣ್ಯಾಧಿಕಾರಿ ಮಲ್ಲೇಶ್​.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net