ಹಸಿರು ಮೇವಿನ ಕೊರತೆ ರೈತ ಕಂಗಾಲು

ಜಮೀನೊಂದರಲ್ಲಿ ಹಸಿರು ಮೇವು ಬೆಳೆದಿರುವುದು.
ಜಮೀನೊಂದರಲ್ಲಿ ಹಸಿರು ಮೇವು ಬೆಳೆದಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಮಿಲ್ಕು ಸಿಲ್ಕಿಗೆ ಫೇಮಸ್
  • ಬೇಸಿಗೆ ಆರಂಭಕ್ಕೂ ಮುನ್ನವೇ ಸಮಸ್ಯೆ
  • ಹಸಿರು ಮೇವು ಸಿಗುತ್ತಿಲ್ಲ
  • ದುಬಾರಿ ಬೆಲೆ ತೆರಬೇಕಾದ ಅನಿವಾರ್ಯತೆ
ರಾಮನಗರ: ಬೇಸಿಗೆ ಆರಂಭಕ್ಕೂ ಮುನ್ನವೇ ಜಿಲ್ಲೆಯಲ್ಲಿ ಹಸಿರು ಮೇವಿನ ಕೊರತೆ ಎದುರಾಗಿದೆ. ಹಾಲು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರು ದಕ್ಷಿಣ ಜಿಲ್ಲೆಯ ಹೈನೋದ್ಯಮಿಗಳು ಹಸಿರ ಮೇವಿನ ಮೇಲೆಯೇ ಅವಲಂಬಿತಾಗಿರುವ ಕಾರಣ ಸದ್ಯಕ್ಕೆ ಸಮಸ್ಯೆ ಎದುರಿಸುವಂತೆ ಆಗಿದೆ.
ಈ ಬಾರಿ ಜಿಲ್ಲೆಯಲ್ಲಿ ಉತ್ತಮ ಮಳೆ ಆಗಲಿಲ್ಲವಾದರೂ ಬರ ಎನ್ನುವಂತ ಪರಿಸ್ಥಿತಿಯಂತೂ ನಿರ್ಮಾಣವಾಗಿರಲಿಲ್ಲ. ಇದರ ಹೊರತಾಗಿಯೂ ರಾಗಿ ಮತ್ತು ಭತ್ತದ ಒಣ ಹುಲ್ಲು ಲಭ್ಯವಿದ್ದರೂ ಸಹ ಹಸಿರು ಮೇವಿಗೆ ರಾಸುಗಳು ಹೆಚ್ಚಿಗೆ ಒಗ್ಗಿಕೊಂಡಿರುವ ಕಾರಣ, ಕೊರತೆ ರೈತರಿಗೆ ಸಮಸ್ಯೆಯನ್ನು ತಂದೊಡ್ಡಿದೆ.

ಹೆಚ್ಚಿದೆ ಬೆಲೆ

ಜಿಲ್ಲೆಯ ಹಾಲು ಉತ್ಪಾದನೆಯಲ್ಲಿ ನಂಬರ್ 01 ಸ್ಥಾನದಲ್ಲಿ ಇದೆ. ರೈತರು ಮುಸುಕಿನ ಜೋಳ, ಬೇಬಿ ಕಾರ್ನ್‌ನ ಗಿಡಗಳನ್ನೇ ಹೆಚ್ಚಾಗಿ ಮೇವಿಗೆ ಬಳಕೆ ಮಾಡುತ್ತಿದ್ದಾರೆ. ಆದರೆ ಇತ್ತೀಚಿಗೆ ಬೇಬಿ ಕಾರ್ನ್ ಬೆಳೆಯುವವರ ಸಂಖ್ಯೆ ಇಳಿಮುಖವಾಗಿರುವುದು ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ. ಹಸಿರು ಮೇವಿಗೆ ಪ್ರತಿ ಟನ್‌ಗೆ ಈ ಮೊದಲು 2000 - 2500 ರೂ.ಗಳ ವರೆಗೂ ಸಿಗುತ್ತಿತ್ತು. ಆದರೆ ಈಗ ಪ್ರತಿ ಟನ್ ಬೇಬಿ ಕಾರ್ನ್ ಹಸಿರು ಮೇವಿನ ಬೆಲೆ 5 ಸಾವಿರ ರೂ ತಲುಪಿದೆ.

ಕುಸಿದ ಕೃಷಿ

ಜಿಲ್ಲೆಯಲ್ಲಿ ನೀರಾವರಿ ಆಶ್ರಿತ ಹೆಚ್ಚಿನ ಭೂಮಿಯಲ್ಲಿ ಬೇಬಿ ಕಾರ್ನ್ ಬೆಳೆಯಲಾಗುತ್ತಿತ್ತು. ಬೇಬಿ ಕಾರ್ನ್ ಕಟಾವಿನ ನಂತರ ಗಿಡಗಳನ್ನು ಹಸಿರು ಮೇವಾಗಿ ಮಾರಾಟ ಮಾಡಲಾಗುತ್ತಿತ್ತು. ಇದರಿಂದಲೂ ಸಹ ರೈತರಿಗೆ ಲಾಭ ಬರುತ್ತಿತ್ತು. ಆದರೆ ಇದರಿಂದ ರೈತರು ವಿಮುಖರಾಗುತ್ತಿದ್ದಾರೆ. ಇದಕ್ಕೆ ಕಾರಣ ಉತ್ಪಾದನಾ ವೆಚ್ಚ ಹೆಚ್ಚಳ. ಬೇಬಿ ಕಾರ್ನ್ ಬೆಳೆಯಬೇಕಾದರೆ ಹೆಚ್ಚಿನ ರಸಗೊಬ್ಬರ ಬಳಕೆ ಮಾಡಲೇಬೇಕಿದೆ. ಇದು ರೈತರ ಜೇಬಿಗೆ ಭಾರವಾಗಿರುವ ಕಾರಣ ಒಂದಾದರೆ ಮತ್ತೊಂದೆಡೆ ರಸಗೊಬ್ಬರಗಳ ಸರಿಯಾದ ಬಳಕೆಯಿಂದಾಗಿ ಭೂಮಿ ಸಹ ತನ್ನ ಸತ್ವವನ್ನು ಕಳೆದುಕೊಂಡಿದೆ. ಇದರಿಂದಾಗಿ ನಿರೀಕ್ಷಿತ ಫಸಲು ದೊರೆಯದ ಕಾರಣ ನಷ್ಟಕ್ಕೆ ಒಳಾಗುವ ಬದಲು ಸುಮ್ಮನಿದ್ದರೆ ಸಾಕು ಎನ್ನುವಂತೆ ಆಗಿದ್ದಾರೆ.

ಉತ್ಪಾದನೆಯೂ ಕುಸಿತ

ಕೆಲವು ರೈತರು ತಮ್ಮ ಜಮೀನುಗಳಲ್ಲಿ ಸೀಮೆ ಹುಲ್ಲು ಬೆಳೆದುಕೊಂಡಿದ್ದಾರೆ. ಹೆಚ್ಚಿನ ಹೈನೋಧ್ಯಮಿಗಳು ಹಸಿರು ಮತ್ತು ಒಣ ಹುಲ್ಲನ್ನು ಕೊಂಡೇ ರಾಸುಗಳನ್ನು ಸಾಕಬೇಕಿದೆ. ಇಂತವರಿಗೆ ಹಸಿರು ಮೇವಿನ ಬೆಲೆ ಹೆಚ್ಚಳವಾಗಿರುವುದು ದೊಡ್ಡ ಹೊಡೆತ ನೀಡಿದೆ. ಹಸಿರು ಮೇವು ನೀಡಿದರೆ ಹೆಚ್ಚಿನ ಹಾಲು ಉತ್ಪಾದನೆ ಆಗುತ್ತದೆ ಎಂದು ಒಣ ಮೇವಿನ ಪ್ರಮಾಣ ಕಡಿಮೆ ಮಾಡಿದ ಪರಿಣಾಮ ಈಗ ಹಾಲಿನ ಉತ್ಪಾದನೆಯಲ್ಲಿ ಇಳಿಕೆ ಕಾಣಿಸಿದೆ. ಪ್ರತಿ ಹಸು ಪ್ರತಿ ದಿನ ಸರಾಸರಿ 20 ಲೀಟರ್ ಹಾಲು ನೀಡುತ್ತಿದ್ದದ್ದು, ಈಗ ಈಗ 14-15 ಲೀಟರ್‌ಗೆ ಕುಸಿತವಾಗಿದೆ ಎನ್ನುತ್ತಾರೆ ರೈತ ಗಿರೀಶ್.

ಚಳಿಗಾಲದಲ್ಲಿ ಸಾಮಾನ್ಯ

ಆದರೆ ಮೇವಿನ ಕೊರತೆ ಬಗ್ಗೆ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ನೀಡುವ ಕಾರಣವೇ ಬೇರೆ. ಸಾಮಾನ್ಯವಾಗಿ ಚಳಿಗಾಲದ ಎರಡು ಮೂರು ತಿಂಗಳು ಹಸಿರು ಮೇವಿನ ಬೆಳವಣಿಗೆ ಕುಂಠಿತವಾಗುವ ಕಾರಣಕ್ಕೆ ಕೊರತೆ ಎದುರಾಗುತ್ತದೆ. ಫೆಬ್ರವರಿ ನಂತರ ಇದು ಸರಿ ಹೋಗಲಿದೆ. ಬೇಸಿಗೆಯಲ್ಲಿ ಯಾವುದೇ ಸಮಸ್ಯೆ ಎದುರಾಗದು ಎನ್ನುತ್ತಾರೆ. ಇದರ ಜತೆಗೆ ರೈತರು ರಾಸುಗಳಿಗೆ ಸಂಪೂರ್ಣವಾಗಿ ಹಸಿರುವ ಮೇವು ನೀಡುವ ವಿಧಾನವನ್ನು ನಿಲ್ಲಿಸಬೇಕು. ರಸವತ್ತಾದ ಹಸಿರು ಮೇವು ತಿಂದು ಅದಕ್ಕೇ ಒಗ್ಗಿಕೊಂಡ ರಾಸುಗಳು, ಒಣ ಮೇವು ತಿನ್ನಲು ಹಿಂದೇಟು ಹಾಕುತ್ತವೆ. ಇದರಿಂದ ಸಾಮಾನ್ಯವಾಗಿ ಇಳುವರಿ ಕುಸಿತವಾಗುತ್ತದೆ. ರೈತರು 70:30ರ ಅನುಪಾತದಲ್ಲಿ ಹಸಿರು ಮೇವು ಮತ್ತು ಒಣ ಮೇವನ್ನು ರಾಸುಗಳಿಗೆ ನೀಡುವುದನ್ನು ರೂಢಿಸಿಕೊಳ್ಳಬೇಕು ಎನ್ನುತ್ತಾರೆ.
ಇದರ ಜತೆಗೆ ಹಸಿರು ಮೇವು ಹೆಚ್ಚು ಲಭ್ಯವಿರುವ ಸಂದರ್ಭದಲ್ಲಿ ಇದನ್ನು ಸೈಲೇಜ್ ಮಾಡಿಕೊಂಡು ಶೇಖರಣೆ ಮಾಡಿಕೊಂಡರೆ ಕನಿಷ್ಠ 6-12 ತಿಂಗಳವರೆಗೆ ಬಳಕೆ ಮಾಡಿಕೊಳ್ಳಬಹುದು. ಖಂಡಿತವಾಗಿ ಇದು ಮೇವಿನ ಕೊರತೆಯನ್ನು ನೀಗಿಸುತ್ತದೆ ಎನ್ನುವ ಸಲಹೆಯನ್ನು ಸಹ ನೀಡುತ್ತಾರೆ.
ಹಸಿರು ಮೇವಿನ ಕೊರತೆ ಎದುರಾಗಿದೆ. ಈಗ ಪ್ರತಿ ಟನ್ ಮೇವಿಗೆ 5 ಸಾವಿರೂ ಕೊಡಬೇಕಿದೆ. ಇದರಿಂದಾಗಿ ಮೇವು ತರುವುದನ್ನು ನಿಲ್ಲಿಸಿದ್ದೇವೆ. ಮೇವಿನ ಕೊರತೆಯಿಂದಾಗಿ ಹಾಲಿ ಉತ್ಪಾದನೆಯೂ ಸಹ ಕಡಿಮೆ ಆಗಿದೆ.
ಗಿರೀಶ್, ರೈತ, ದೇವರಹಳ್ಳಿ
ಚಳಿಗಾಲದಲ್ಲಿ ಹಸಿರು ಮೇವು ಬೆಳೆಯುವುದು ಕಡಿಮೆ. ಇದರಿಂದ ಸಾಮಾನ್ಯವಾಗಿ ಕೊರತೆ ಉಂಟಾಗುತ್ತದೆ. ಫೆಬ್ರವರಿ ನಂತರ ಇದು ಸರಿ ಹೋಗಲಿದೆ. ರೈತರು 70:30ರ ಅನುಪಾತದಲ್ಲಿ ರಾಸುಗಳಿಗೆ ಹಸಿರು - ಒಣ ಮೇವು ನೀಡುವುದನ್ನು ರೂಢಿಸಿಕೊಳ್ಳಬೇಕು.
ಡಾ. ಕೃಷ್ಣಮೂರ್ತಿ
ಸಹಾಯಕ ನಿರ್ದೇಶಕರು,
ಪಶುವೈಧ್ಯಕೀಯ ಇಲಾಖೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net