ಕೆಂಪೇಗೌಡರ ಪ್ರತಿಮೆ ಸ್ಥಳಾಂತರ

ಹೈಕೋರ್ಟ್​ ಆದೇಶದಂತೆ ಕೆಂಪೇಗೌಡ ಪ್ರತಿಮೆ ಸ್ಥಾಪನೆ.
ಹೈಕೋರ್ಟ್​ ಆದೇಶದಂತೆ ಕೆಂಪೇಗೌಡ ಪ್ರತಿಮೆ ಸ್ಥಾಪನೆ.
Published on
ಮಾಗಡಿ: ಪಟ್ಟಣದ ಪುರಸಭೆ ಆವರಣದ ಕೆಂಪೇಗೌಡರ ಪ್ರತಿಮೆಯನ್ನು ಹೈಕೋರ್ಟ್​ ಆದೇಶದ ಅನ್ವಯ ಸೋಮವಾರ ಗೌರವಯುತವಾಗಿ, ಪೂರ್ವ ನಿರ್ಧರಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, ತಾಲೂಕಿನ ಜನರ ಬಹುದಿನಗಳ ಕನಸು ಸರ್ಕಾರಿ ಆಸ್ಪತ್ರೆ ನಿರ್ಮಾಣದ ಭರವಸೆ ಮೂಡಿಸಿತು.
18 ವರ್ಷಗಳ ಹಿಂದೆ ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್​.ಎಂ.ಕೃಷ್ಣಮೂರ್ತಿ ಅವರು ಪುರಸಭೆ ಬಳಿ ಈ ಪ್ರತಿಮೆಯನ್ನು ಸ್ಥಾಪಿಸಿದ್ದರು. ಆದರೆ, ಪ್ರಸ್ತುತ ಇರುವ ತಾಲೂಕು ಕಚೇರಿ ತೆರವುಗೊಳಿಸಿ ಈ ಸ್ಥಳದಲ್ಲಿ 43 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್​ ಆಸ್ಪತ್ರೆ ನಿರ್ಮಿಸಲು ಶಾಸಕ ಎಚ್​.ಸಿ.ಬಾಲಕೃಷ್ಣ ಮುಂದಾಗಿದ್ದರು. ಆಸ್ಪತ್ರೆ ನೆಯ ಪ್ರಕಾರ ಪ್ರತಿಮೆ ಮತ್ತು ಸುತ್ತಮುತ್ತಲ ಮರಗಳನ್ನು ತೆರವುಗೊಳಿಸುವುದು ಅನಿವಾರ್ಯವಾಗಿತ್ತು. ಆದರೆ ಇದನ್ನು ವಿರೋಧಿಸಿ ಎಚ್​.ಎಂ.ಕೃಷ್ಣಮೂರ್ತಿ ಅವರು ಹೈಕೋರ್ಟ್​ ಮೊರೆ ಹೋಗಿದ್ದರು.
ವಾದ&ವಿವಾದ ಆಲಿಸಿದ ಹೈಕೋರ್ಟ್​, ಪ್ರತಿಮೆಗೆ ಯಾವುದೇ ಧಕ್ಕೆ ಬಾರದಂತೆ ಈಗಿರುವ ಸ್ಥಳದಿಂದ 500ಮೀ ದೂರದಲ್ಲಿ ಮರುಸ್ಥಾಪಿಸುವಂತೆ ಆದೇಶಿಸಿತ್ತು. ಅಂತೆಯೇ ಸೋಮವಾರ ಕ್ರೇನ್​ ಮೂಲಕ ಪ್ರತಿಮೆಯನ್ನು ನ್ಯಾಯಾಲಯ ಸೂಚಿಸಿದ ಸ್ಥಳದಲ್ಲಿ ಪ್ರತಿಷ್ಠಾಪಿಸಲಾಯಿತು. ಜತೆಗೆ ಈ ಹಿಂದಿನ ಪ್ರತಿಮೆ ಮಾದರಿಯಲ್ಲೇ ಗಣ್ಯರು, ಮಠಾಧ್ಯಕ್ಷರ ಹೆಸರನ್ನು ಕೆತ್ತಿಸಲು ಮುಂದಾಗಿದ್ದಾರೆ.
ಸಾರ್ವಜನಿಕರ ಬೆಂಬಲ
ಆಸ್ಪತ್ರೆ ನಿರ್ಮಾಣಕ್ಕೆ ಮರಗಳನ್ನು ತೆರವುಗೊಳಿಸುವ ಕುರಿತು ಅರಣ್ಯ ಇಲಾಖೆ ಇತ್ತೀಚೆಗೆ ಸಾರ್ವಜನಿಕ ಅಹವಾಲು ಸ್ವೀಕರಿಸಿತ್ತು. ಈ ಸಂದರ್ಭದಲ್ಲಿ ಬಹುತೇಕರು ಸಾವಿರಾರು ಜೀವ ಉಳಿಸುವ ಆಸ್ಪತ್ರೆ ನಮಗೆ ಬೇಕು ಎಂದು ಆಸ್ಪತ್ರೆ ನಿರ್ಮಾಣಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ 43 ಕೋಟಿ ರೂ. ವೆಚ್ಚದ ಆಸ್ಪತ್ರೆ ನಿರ್ಮಾಣಕ್ಕೆ ಈಗಾಗಲೇ ಭೂಮಿ ಪೂಜೆ ನೆರವೇರಿದ್ದು, ಶ್ರೀದಲ್ಲೇ ಕಾಮಗಾರಿ ಆರಂಭವಾಗಲಿದೆ.
"

ನನ್ನ ಕುಟುಂಬದವರಿಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆ ನಿರ್ಮಿಸುತ್ತಿಲ್ಲ. ಯಾವೊಬ್ಬ ಬಡವನೂ ಚಿಕಿತ್ಸೆ ಸಿಗದೆ ನರಳಬಾರದು ಎನ್ನುವುದಷ್ಟೇ ಉದ್ದೇಶ. ಹೈಕೋರ್ಟ್​ ಆದೇಶದಂತೆ ಕೆಂಪೇಗೌಡರ ಪ್ರತಿಮೆ ಸ್ಥಳಾಂತರಿಸಲಾಗಿದೆ.

— > ಎಚ್​.ಸಿ.ಬಾಲಕೃಷ್ಣ, ಶಾಸಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net