ಎಸ್ ಸಿ ಎಸ್ ಟಿ ದೌರ್ಜನ್ಯ ಪ್ರಕರಣಗಳನ್ನು ನಿಗಧಿತ ಅವಧಿಯಲ್ಲಿ ತನಿಖೆ ಮಾಡಿ
ರಾಮನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ (ದೌರ್ಜನ್ಯ ಪ್ರತಿಬಂಧ) ತಿದ್ದುಪಡಿ 2015ರ ಅಧಿನಿಯಮದ ಅನುಷ್ಟಾನ ಸಂಬಂಧ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆ ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್ ಅಧ್ಯಕ್ಷತೆಯಲ್ಲಿ ನಡೆಯಿತು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ
ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಡಿಸಿ
ರಾಮನಗರ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ (ದೌರ್ಜನ್ಯ ಪ್ರತಿಬಂಧ) ತಿದ್ದುಪಡಿ ಕಾಯ್ದೆಯನ್ವಯ ಜಿಲ್ಲೆಯಲ್ಲಿ ದಾಖಲಾಗುವ ಪ್ರಕರಣಗಳನ್ನು ವಿಳಂಬಕ್ಕೆ ಆಸ್ಪದ ನೀಡದೆ 60 ದಿನಗಳೊಳಗೆ ಅಥವಾ ಅದಕ್ಕೂ ಮುನ್ನ ತನಿಖೆ ಕೈಗೊಂಡು ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಆದರೆ ಜಿಲ್ಲೆಯಲ್ಲಿ ಈ ರೀತಿಯ ಯಾವುದೇ ಪ್ರಕರಣಗಳು ಬಾಕಿ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ತಿಳಿಸಿದರು.
ಮಂಗಳವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ (ದೌರ್ಜನ್ಯ ಪ್ರತಿಬಂಧ) ತಿದ್ದುಪಡಿ 2015ರ ಅಧಿನಿಯಮದ ಅನುಷ್ಟಾನ ಸಂಬಂಧ ಹಮ್ಮಿಕೊಳ್ಳಲಾಗಿದ್ದ 2ನೇ ತೆಮಾಸಿಕ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಮಾತನಾಡಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ (ದೌರ್ಜನ್ಯ ಪ್ರತಿಬಂಧ) ತಿದ್ದುಪಡಿ ಕಾಯ್ದೆಯನ್ವಯ ದಾಖಲಾಗುವ ಪ್ರಕರಣಗಳಲ್ಲಿ 60 ದಿನಗಳ ಗಡುವು ನೀಡಲಾಗಿದೆ ಆದರೆ ಪ್ರಕರಣಗಳ ಸ್ವರೂಪವನ್ನು ಆಧರಿಸಿ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತಿದೆ. ಕೆಲವೊಂದು ಪ್ರಕರಣಗಳಲ್ಲಿ ಎರಡೇ ದಿನದೊಳಗೆ ತನಿಖೆ ನಡೆಸಿ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತಿದೆ. ಮತ್ತೆ ಕೆಲವು ಪ್ರಕರಣಗಳಲ್ಲಿ ಹೆಚ್ಚಿನ ಅವಧಿ ಬೇಕಾಗುತ್ತದೆ, ಆದರೆ ನಿಗದಿತ ಅವಧಿಯೊಳಗೆ ತನಿಖೆ ನಡೆಸಿ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತಿದೆ ಎಂದು ಹೇಳಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ (ದೌರ್ಜನ್ಯ ಪ್ರತಿಬಂಧ) ತಿದ್ದುಪಡಿಸಿ 2015ರಡಿ ದಾಖಲಾದ ಪ್ರಕರಣಗಳಲ್ಲಿ ಪ್ರಥಮ ವರ್ತಮಾನ ವರದಿ ಹಂತದಲ್ಲಿ ಪೊಲೀಸ್ ಠಾಣೆಗಳಲ್ಲಿ ಸಂತ್ರಸ್ಥರುಗಳಿಗೆ ಪರಿಹಾರ ಒದಗಿಸುವ ಸಂಬಂಧ ಎಫ್ಐಆರ್ ದಾಖಲಾದ ಕೂಡಲೇ ಎಫ್ಐಆರ್ ಪ್ರತಿಯನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗಳು ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸಬೇಕು. ಇದರಿಂದ ಶೀಘ್ರವಾಗಿ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ಥರಿಗೆ ಪರಿಹಾರ ಒದಗಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಪರಿಸರ ರಾಯಭಾರಿ ದಿ. ಸಾಲು ಮರದ ತಿಮ್ಮಕ್ಕ ಅವರು ವಾಸವಿದ್ದ ಮಾಗಡಿ ತಾಲೂಕಿನ ಹುಲಿಕಲ್ ಗ್ರಾಮದಲ್ಲಿ ವಾಸವಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರಿಗೆ ನಿವೇಶನಗಳನ್ನು ಮತ್ತು ಹಕ್ಕು ಪತ್ರಗಳನ್ನು ನೀಡುವ ಸಂಬಂಧ ಈಗಾಗಲೇ ಅಧೀಕೃತ ಜ್ಞಾಪನ ಪತ್ರ ಹೊರಡಿಸಲಾಗಿದ್ದು, ಶೀಘ್ರದಲ್ಲೇ ನೋಂದಣಿ ಕಾರ್ಯವೂ ನಡೆಯಲಿದೆ ಎಂದವರು ಸಭೆಗೆ ತಿಳಿಸಿದರು.
ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಜನಾಂದವರ ಮೇಲೆ ದೌರ್ಜನ್ಯ ನಡೆದಲ್ಲಿ ತುರ್ತಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಅಗತ್ಯ ಸ್ವಚ್ಛತೆ ಕಾಪಾಡಿಕೊಳ್ಳಬೇಕು, ವೈದ್ಯರು ಹಾಗೂ ಸಿಬ್ಬಂದಿಗಳು ಸಮಯ ಪರಿಪಾಲನೆಗೆ ಒತ್ತು ನೀಡಬೇಕು, ಕರ್ತವ್ಯ (ಕಾಮ್ಸ್) ಆಪ್ ಮೂಲಕ ತಮ್ಮ ಹಾಜರಾತಿ ದೃಢೀಕರಿಸಬೇಕು, ಆಂಬುಲೆನ್ಸ್ಗಳು ಡಿಸೇಲ್ ಭರಿಸಿಕೊಂಡು ಸಿದ್ದವಾಗಿರಬೇಕು ಎಂದು ಸೂಚಿಸಿದರು.
ಹೊರ ಜಿಲ್ಲೆಯಿಂದ ಕೂಲಿಗಾಗಿ ಬರುವ ವಲಸಿಗರಿಗೆ ಅವರು ವಾಸಿಸುವ ಸ್ಥಳಗಳಲ್ಲಿ ಅಲ್ಲಿನ ನಗರ ಸ್ಥಳಿಯ ಸಂಸ್ಥೆಗಳು ಅಥವಾ ಪಂಚಾಯತಿ ವ್ಯಾಪ್ತಿಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಪ್ರತ್ಯೇಕ ಶೌಚಾಲಯಗಳ ವ್ಯವಸ್ಥೆ ಮಾಡಿಕೊಡಬೇಕೆಂದು ಸೂಚಿಸಿದ ಜಿಲ್ಲಾಧಿಕಾರಿಯವರು, ಆರ್.ಟಿ.ಇ. ಕಾಯ್ದೆಯನ್ವಯ ಖಾಸಗಿ ಶಾಲೆಗಳು ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದ್ದಲ್ಲೀ ಶಾಲಾ ಹಾಗೂ ಸಾಕ್ಷರತಾ ಇಲಾಖೆಯ ಉಪನಿರ್ದೇಶಕರಿಂದ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಮಾಗಡಿಯಲ್ಲಿ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಅಗತ್ಯ ಭದ್ರತಾ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಹಾರೋಹಳ್ಳಿಯಲ್ಲಿ ಸ್ಮಶಾನಕ್ಕೆ ಅಗತ್ಯವಿರುವ ಭೂಮಿಯನ್ನು ಒದಗಿಸಿಕೊಡುವಂತೆ ಅವರು ಸಂಬಂಧಿಸಿದ ತಹಶೀಲ್ದಾರರಿಗೆ ಸೂಚಿಸಿದರು.
ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರುಗಳಾದ ಚೆಲುವರಾಜು, ಮಹೇಶ್, ಕುಂಬಾಪುರ ಬಾಬು, ಶಿವರಾಜು, ಕೆ. ಶಿವಕುಮಾರ್, ರೋಹಿತ್ ಹಾಗೂ ಗೋಪಾಲಕೃಷ್ಣ ಮಾತನಾಡಿದರು.
ಉಪವಿಭಾಗಾಧಿಕಾರಿ ಬಿನೋಯ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಶಿವಕುಮಾರ್ ಸೇರದಿಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.