ಪಕ್ಷಕ್ಕೆ ಮುಜುಗರ ತರಲು ನನಗೆ ಇಷ್ಟವಿಲ್ಲ - ಡಿಕೆಶಿ

ಕನಕಪುರದಲ್ಲಿ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಮತ ಚಲಾಯಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್.
ಕನಕಪುರದಲ್ಲಿ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಮತ ಚಲಾಯಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್.
Published on

ಪ್ರಮುಖ ಮುಖ್ಯಾಂಶಗಳು

  • ಪಕ್ಷಕ್ಕೆ ಮುಜುಗರ ತರಲು ಇಷ್ಟವಿಲ್ಲ
  • ಕನಕಪುರದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ
  • ಸಚಿವ ಸ್ಥಾನಕ್ಕಾಗಿ ದೆಹಲಿಗೆ ಹೋಗಿದ್ದಾರೆ
  • ನಾನು ಯಾರ ವಕ್ತಾರನೂ ಅಲ್ಲ
ಕನಕಪುರ: ನಾನು ಆತ್ಮಸಾಕ್ಷಿಯನ್ನು ನಂಬಿದ್ದೇನೆ. ಆತ್ಮಸಾಕ್ಷಿಗೆ ತಕ್ಕಂತೆ ನಾವು ಕೆಲಸ ಮಾಡಬೇಕು. ಪಕ್ಷಕ್ಕೆ ಮುಜುಗರ ತರಲು, ಪಕ್ಷವನ್ನು ದುರ್ಬಲಗೊಳಿಸಲು ನನಗೆ ಇಷ್ಟವಿಲ್ಲ. ಪಕ್ಷ ಹಾಗೂ ಕಾರ್ಯಕರ್ತರು ಇದ್ದರೆ ನಾವು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. 
ಕನಕಪುರದಲ್ಲಿ ಮಂಗಳವಾರ ಸುದ್ದಿಗಾರರ ಮಾತನಾಡಿದರು. ಅಧಿಕಾರ ಹಸ್ತಾಂತರ ಸಂಭಂಧ ಮಲ್ಲಿಕಾರ್ಜುನ ಖರ್ಗೆ ಅವರು ರಾಹುಲ್ ಗಾಂಧಿ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆಯೇ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ  ಅವರು, ಈ ವಿಚಾರ ನನಗೆ ಗೊತ್ತಿಲ್ಲ. ಇದು ನಮ್ಮ ಐದಾರು ಜನರ ನಡುವಿನ ಗುಟ್ಟಿನ ವಿಚಾರ. ಇದನ್ನು ನಾನು ಬಹಿರಂಗ ಮಾಡುವುದಿಲ್ಲ. ಸಿಎಂ ಹಿರಿಯ ನಾಯಕರು, ನಮ್ಮ ಪಕ್ಷದ ಆಸ್ತಿ. ಅವರು ಸಿಎಂ ಆಗಿ ಏಳೂವರೆ ವರ್ಷಗಳ ಕಾಲ ಅಧಿಕಾರ ನಡೆಸಿದ್ದಾರೆ. ಮುಂದಿನ ಬಜೆಟ್ ಅನ್ನು ಅವರೇ ಮಂಡಿಸುವುದಾಗಿ ಹೇಳಿದ್ದಾರೆ. ಬಹಳ ಸಂತೋಷ. ಅವರು ವಿರೋಧ ಪಕ್ಷದ ನಾಯಕರಾಗಿ ಶ್ರಮಿಸಿದ್ದಾರೆ. ಪಕ್ಷ ಕಟ್ಟಿದ್ದಾರೆ. ನಾವೆಲ್ಲರೂ ಸೇರಿ 2028 ಹಾಗೂ 2029ರ ಚುನಾವಣೆ ಗುರಿಯತ್ತ ಗಮನ ಹರಿಸಬೇಕು ಎಂದು ತಿಳಿಸಿದರು.

ಕಷ್ಟಕಾಲದಲ್ಲಿ ನನಗಾಗಿ ಪ್ರಾರ್ಥಿಸಿದವರ ಮೆರೆಯಲ್ಲ

ನೀವು ಸಿಎಂ ಆಗಬೇಕು ಎಂದು ಜನರು ಪೂಜೆ ಮಾಡುತ್ತಿದ್ದಾರಲ್ಲಾ ಎಂದಾಗ, ನನಗೆ ಅಧಿಕಾರ ಸಿಗಲಿ ಎಂದು ಈಗ ಪೂಜೆ ಮಾಡುತ್ತಿರುವುದಕ್ಕಿಂತ, ನಾನು ಜೈಲಿಗೆ ಹೋದಾಗ ನನ್ನ ತಾಯಂದಿರು, ಯುವಕರು, ಹಿರಿಯರು ದೇವಾಲಯದ ಅರ್ಚಕರು ಮಾಡಿದ ಪ್ರಾರ್ಥನೆಯನ್ನು ಮರೆಯಲು ಸಾಧ್ಯವಿಲ್ಲ. ಬಿಜೆಪಿ ಅವಧಿಯಲ್ಲಿ ನಾನು ಜೈಲಿಂದ ಬಿಡುಗಡೆ ಆದಾಗ ಪೊಲೀಸರ ಬೆದರಿಕೆಗೂ ಹಿಂಜರಿಯದೇ ನನ್ನನ್ನು ಜನ ಸ್ವಾಗತಿಸಿದರು. ನಾನು ಜೈಲಲ್ಲಿ ಇದ್ದಾಗ ಕರವೇ ನಾರಾಯಣ ಗೌಡರಿಗೆ ಪ್ರತಿಭಟನೆ ನಡೆಸದಂತೆ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಬೆದರಿಕೆ ಹಾಕಿದ್ದರು. ಕೆಲವು ಸ್ವಾಮೀಜಿಗಳು ಬಂದರು, ಕೆಲವರು ಬರಲಿಲ್ಲ. ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಬೇರೆ ಹೇಳಿಕೆ ಕೊಟ್ಟರು. ಅನೇಕರು ನಮ್ಮ ಮನೆಗೆ ಬಂದು ನನ್ನ ಪತ್ನಿ ಹಾಗೂ ಮಕ್ಕಳ ಜೊತೆ ಮಾತನಾಡಿ ಧೈರ್ಯ ತುಂಬಿದ್ದರು. ಅಂದು ಜನ ಹರಕೆ ಹೊತ್ತು ಪ್ರಾರ್ಥಿಸಿದ್ದರು. ಆಗ ಕಟ್ಟಿಕೊಂಡ ಹರಕೆ ಮುಗಿಸಲು ಇನ್ನೂ ನನಗೆ ಆಗುತ್ತಿಲ್ಲ. ಅನೇಕರು ನಾನು ಬಿಡುಗಡೆಯಾಗುವವರೆಗೂ ಕಾಲಿಗೆ ಚಪ್ಪಲಿ ಹಾಕಿರಲಿಲ್ಲ. ನಾನು ಇಂದು ಡಿಸಿಎಂ ಆಗಿದ್ದು, ಪಕ್ಷದ ಅಧ್ಯಕ್ಷನಾಗಿದ್ದೇನೆ. ಕಷ್ಟಕಾಲದಲ್ಲಿದ್ದಾಗ ಮಾಡಿದ ಪ್ರಾರ್ಥನೆ, ಆಗ ಅವರು ನನಗೆ ಆತ್ಮಸ್ಥೈರ್ಯ ತುಂಬಿದ್ದು ನನಗೆ ಬಹಳ ವಿಶೇಷ” ಎಂದು ತಿಳಿಸಿದರು.
ನಿಮ್ಮನ್ನು ಸಿಎಂ ಸ್ಥಾನದಲ್ಲಿ ನೋಡಬೇಕು ಎಂದು ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲೂ ಜನ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ ಅಲ್ಲವೇ ಎಂದು ಕೇಳಿದಾಗ, ನಾನು ಚುನಾವಣೆ ಸಂದರ್ಭದಲ್ಲಿ ಮಹದೇವಪ್ಪ ಅವರ ಕ್ಷೇತ್ರ, ಮಂಡ್ಯ ಸೇರಿದಂತೆ ಎಲ್ಲಾ ಕಡೆಗಳಲ್ಲಿ ನನ್ನ ಮುಖ ನೋಡಿ ಮತ ಹಾಕಿ ಎಂದೂ ಕೇಳಿದ್ದೇನೆ. ಜನ ನಮ್ಮ ಸಾಮೂಹಿಕ ನಾಯಕತ್ವಕ್ಕೆ ಮತ ಹಾಕಿದ್ದಾರೆ. ನನ್ನೊಬ್ಬನಿಗಾಗಿ ಮತ ಹಾಕಿದ್ದಾರೆ ಎಂದು ನಾನು ಹೇಳುವುದಿಲ್ಲ. 224 ಕ್ಷೇತ್ರಗಳಲ್ಲಿ ನಮಗಿಂತ ನಮ್ಮ ಕಾರ್ಯಕರ್ತರು ಹೆಚ್ಚು ಶ್ರಮ ಹಾಕಿದ್ದಾರೆ ಎಂದು ತಿಳಿಸಿದರು. 

ಸಚಿವ ಸ್ಥಾನ ಆಕಾಂಕ್ಷಿಗಳು ದೆಹಲಿಗೆ ಹೋಗಿದ್ದಾರೆ 

ಕೆಲ ಶಾಸಕರು ದೆಹಲಿಗೆ ತೆರಳಿದ್ದು, ನಿಮ್ಮನ್ನು ಸಿಎಂ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಕೇಳಿದಾಗ, ಸಚಿವ ಸ್ಥಾನದ ಆಕಾಂಕ್ಷೆ ಇರುವವರು ಹೋಗಿದ್ದಾರೆ, ನನ್ನನ್ನು ಸಿಎಂ ಮಾಡುವ ಪ್ರಯತ್ನದ ಬಗ್ಗೆ ನನಗೆ ಗೊತ್ತಿಲ್ಲ. ನಾನು ಅವರಿಗೆ ಕರೆ ಮಾಡಿಲ್ಲ, ಅವರನ್ನು ಕಳುಹಿಸಿಲ್ಲ. ಯಾಕೆ ಹೋದಿರಿ ಎಂದು ಪ್ರಶ್ನೆ ಮಾಡುವುದಿಲ್ಲ ಎಂದರು.
ಅಧಿಕಾರ ಹಂಚಿಕೆ ವಿಚಾರವಾಗಿ ಬಸವರಾಜ ರಾಯರೆಡ್ಡಿ, ಸದಾನಂದ ಗೌಡರ ಹೇಳಿಕೆ ಬಗ್ಗೆ ಕೇಳಿದಾಗ, ನಾನು ಯಾರ ಹೇಳಿಕೆಗೂ ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಅವರ ವಕ್ತಾರನಲ್ಲ ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net