ಪ್ರಾಮಾಣಿಕ ರಾಜಕಾರಣಿ ಕೆಂಗಲ್​ ಹನುಮಂತಯ್ಯ

ಕೆಂಗಲ್ ನೆನಪು ಕಾರ್ಯಕ್ರಮ ಉದ್ಘಾಟಿಸಿದ ಗಣ್ಯರು.
ಕೆಂಗಲ್ ನೆನಪು ಕಾರ್ಯಕ್ರಮ ಉದ್ಘಾಟಿಸಿದ ಗಣ್ಯರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಬಣ್ಣನೆ
  • ಜನ ಜಾಗೃತಿ ವೇದಿಕೆ ಮತ್ತು ನಮ್ಮವರು ಬಳಗದಿಂದ ನೆನಪು
ರಾಮನಗರ
ಪ್ರಾಮಾಣಿಕ ರಾಜಕಾರಣಕ್ಕೆ ಮೇಲ್ಪಂಕ್ತಿ ಹಾಕಿದವರು ಕೆಂಗಲ್​ ಹನುಮಂತಯ್ಯ ಅವರು, ಏಕೀಕರಣ ವಿರೋಧಿಯಾಗಿದ್ದ ಅರಸು ಕರ್ನಾಟಕ ಎಂದು ನಾಮಕರಣ ಮಾಡುತ್ತಾರೆ. ಕೆಂಗಲ್​ ಅವರು ಅಧಿಕಾರ ಕಳೆದುಕೊಂಡರೂ ಏಕೀಕರಣದ ರೂವಾರಿಯಾಗುತ್ತಾರೆ. ಕರ್ನಾಟಕದ ನಿಜವಾದ ಶಿಲ್ಪಿ ಕೆಂಗಲ್​ ಎಂದು ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಬಣ್ಣಿಸಿದರು.
ಜನ ಜಾಗೃತಿ ವೇದಿಕೆ ಮತ್ತು ನಮ್ಮವರು ಬಳಗ ರಾಮನಗರದ ಅಂಬೇಡ್ಕರ್​ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೆಂಗಲ್​ ಹನುಮಂತಯ್ಯ ಅವರ ನೆನಪು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಡು ಪ್ರಾಮಾಣಿಕ ರಾಜಕಾರಣಿಯಾಗಿದ್ದ ಕೆಂಗಲ್​ ಅವರನ್ನು ಕಂಡರೆ, ಇಡೀ ಸದನ ಗೌರವಿಸುತ್ತಿತ್ತು. ಬಡತನದ ಕುಟುಂಬದಿಂದ ಬಂದು, ಬೆಂಗಳೂರಿನಲ್ಲಿರುವ ಸಂಬಂಧಿಕರ ಮನೆಯಲ್ಲಿದ್ದುಕೊಂಡು ಓದುತ್ತಾರೆ. ವಿದ್ಯಾರ್ಥಿ ವೇತನದ ಪಡೆದು ಓದುತ್ತಾ, ಪುಣೆಯಲ್ಲಿ ಕಾನೂನು ಪದವಿ ಪಡೆದುಕೊಂಡು ಖ್ಯಾತ ವಕೀಲರಾಗುತ್ತಾರೆ. ದಾಸಪ್ಪ ಅವರು ಸರ್ಕಾರದ ಟೀಕಾಕಾರರಾಗಿದ್ದಾಗ ಅವರ ವಕೀಲಿಕೆ ರದ್ದು ಮಾಡುತ್ತಾರೆ. ಆಗ ದಾಸಪ್ಪ ಅವರ ಪ್ರಕರಣ ಕೈಗೆತ್ತಿಕೊಂಡ ಕೆಂಗಲ್​ ಗೆಲ್ಲುತ್ತಾರೆ. ಆ ಕೇಸ್​ ಗೆದ್ದು ಅವರು ನಾಯಕರಾಗಿ ಹೊರಹೊಮ್ಮುತ್ತಾರೆ. ಮುಖ್ಯಮಂತ್ರಿ ಆಗುವುದಕ್ಕೆ ಮುಂಚೆ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಸಂವಿಧಾನ ರಚನೆ ಸಲಹಾ ಸಮಿತಿ ಸದಸ್ಯರಾಗಿ ಕೆಲಸ ಮಾಡುತ್ತಾರೆ. ಅಂಬೇಡ್ಕರ್​ ಅವರು ಕೆಂಗಲ್​ ಅವರನ್ನು ಮೆಚ್ಚಿಕೊಳ್ಳುತ್ತಾರೆ.
ವಕೀಲರಾಗಿ ಜನಪ್ರಿಯತೆಗಳಿಸಿದ್ದ ಕೆಂಗಲ್​ ಅವರು, ಹಿರಿಯರ ಸಲಹೆ ಮೇರೆಗೆ ವಕೀಲಿಕೆ ಬಿಟ್ಟು ದೇಶಸೇವೆಗೆ ತೊಡಗಿಸಿಕೊಳ್ಳುತ್ತಾರೆ. 1952ರಲ್ಲಿ ರಾಜ್ಯದ ಮೊದಲ ಚುನಾಯಿತ ಮುಖ್ಯಮಂತ್ರಿ ಆಗುತ್ತಾರೆ. ಕೇಂದ್ರ ರೈಲ್ವೆ ಸಚಿವರಾಗಿ ಇಲಾಖೆಯನ್ನು ಹಳಿಗೆ ತರುತ್ತಾರೆ.
ಇಂದಿರಾ ಗಾಂಧಿ ಅವರು ಚೀಟಿ ಕೊಟ್ಟು ಪಕ್ಷಕ್ಕೆ ಹಣ ಕೇಳುತ್ತಾರೆ. ಅದಕ್ಕೆ ಕೆಂಗಲ್​ ಅವರು ಆಗಲ್ಲ. ನಾನು ಬೇರೆಯವರಿಂದ ಹಣ ಸಂಗ್ರಹಿಸಿದರೆ ಆಡಳಿತದಲ್ಲಿ ಬಿಗಿ ಹೋಗುತ್ತದೆ. ಬೇಕಿದ್ದರೆ ರಾಜೀನಾಮೆ ಕೊಡುವೆ. ಆದರೆ, ಹಣ ಕೇಳುವುದಿಲ್ಲ ಎಂದು ರಾಜೀನಾಮೆ ಕೊಡುತ್ತಾರೆ. ಯಾವುದಾದರೂ ರಾಜ್ಯಕ್ಕೆ ರಾಜ್ಯಪಾಲರಾಗಿ ಮಾಡುತ್ತೇವೆ ಎಂದು ಇಂದಿರಾ ಗಾಂಧಿ ಕೇಳಿದರೂ, ಶಾಸಿ ಅವರು ನೀಡಿದ ಡಿಪ್ಲೊಮ್ಯಾಟಿಕ್​ ಹುದ್ದೆಯನ್ನು ಸಹ ನಿರಾಕರಿಸುತ್ತಾರೆ. ಈ ಮೂಲಕ ಸ್ವಾಭಿಮಾನಿ ರಾಜಕಾರಣಿಯಾಗಿ ಇಂದಿಗೂ ನಮಗೆಲ್ಲರಿಗೂ ಆದರ್ಶವಾಗಿದ್ದಾರೆ ಎಂದರು.
ಇತಿಹಾಸ ತಜ್ಞರಾದ ಡಾ.ತಲಕಾದು ಚಿಕ್ಕರಂಗೇಗೌಡ ಮಾತನಾಡಿ, 1947ರಲ್ಲಿ ದೇಶ ಬಿಟ್ಟ ಬ್ರೀಟಿಷರು ಸುಮಾರು 500 ರಾಜ ಮನೆತನಗಳಿಗೆ ಭಾರತ ಅಥವಾ ಪಾಕಿಸ್ತಾನದ ಜತೆ ಸೇರಿಕೊಳ್ಳುವ ಆಮಿಷ ನೀಡುತ್ತಾರೆ. ಆಗ ಕೆಲ ಸಂಸ್ಥಾನದವರು ಹೈದರಾಬಾದ್​ ನಿಜಾಮನ ನೇತೃತ್ವದಲ್ಲಿ ಭಾರತದ ಒಕ್ಕೂಟದ ಸೇರದಿರಲು ತೀರ್ಮಾನಿಸುತ್ತಾರೆ. ಅದರಲ್ಲಿ ಮೈಸೂರು ಸಂಸ್ಥಾನವೂ ಇದೆ ಎನ್ನುವುದು ಗೊತ್ತಾಗುತ್ತಿದ್ದಂತೆ ಕೆ.ಸಿ.ರೆಡ್ಡಿ, ಕೆಂಗಲ್​ ಹನುಮಂತಯ್ಯ ಮತ್ತು ನಿಜಲಿಂಗಪ್ಪ ಅವರ ನೇತೃತ್ವದಲ್ಲಿ ಅರಮನೆ ಅಥವಾ ಮೈಸೂರು ಚಲೋ ಹೋರಾಟ ಆರಂಭಗಳೊಳ್ಳುತ್ತದೆ.
ಈ ವೇಳೆ ಕೆಂಗಲ್​ ಅವರನ್ನು ಮಹಾರಾಜರು ಜೈಲಿಗೆ ಹಾಕುತ್ತಾರಾದರೂ ಹೋರಾಟ ಯಶಸ್ವಿಯಾಗುತ್ತದೆ. ಈ ಮೂಲಕ ಭಾರತದ ಏಕತೆಯೂ ಉಳಿಯುತ್ತದೆ. ಇದೇ ಹೋರಾಟ ವಲ್ಲಭಾಬಾಯಿ ಪಟೇಲರಿಗೂ ಶಕ್ತಿ ತುಂಬುತ್ತದೆ. ಮೈಸೂರು ಚಲೋ ಹೋರಾಟ ಆರಂಭಗೊಳ್ಳದಿದ್ದರೆ ಮೈಸೂರು ಸೇರಿದಂತೆ ಅದೆಷ್ಟೋ ಸಂಸ್ಥಾನಗಳು, ಹೈದ್ರಾಬಾದ್​ ನಿಜಾಮ ಮತ್ತು ನವಾಬರೊಟ್ಟಿಗೆ ಸೇರಿ ಪಾಕಿಸ್ತಾನ ಸೇರುತ್ತಿದ್ದವು ಎಂದರು.
ಸ್ವಾತಂತ್ರ ನಂತರ ಚುನಾಯಿತ ಸರ್ಕಾರ ಅಧಿಕಾರ ಬಂದಾಗ ರಾಜ್ಯದ ಚುನಾಯಿತ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೂ ಕೆಂಗಲ್​ ಹನುಮಂತಯ್ಯ ಪಾತ್ರಾಗಿದ್ದಾರೆ. ನಂತರ ತಮಗೆ ಅಧಿಕಾರ ಹೋಗುತ್ತದೆ ಎನ್ನುವ ಅರಿವಿದ್ದರೂ ಕರ್ನಾಟಕದ ಏಕೀಕರಣಕ್ಕಾಗಿ ದುಡಿದು ಅಧಿಕಾರ ಕಳೆದುಕೊಂಡರು. ಸ್ವಾಭಿಮಾನಿ ರಾಜಕಾರಣಿಯಾಗಿದ್ದ ಅವರು ವಿಧಾನಸೌಧ ಕಟ್ಟಿಸಿದರೂ ಅಲ್ಲಿ ಕೂತು ಒಂದು ದಿನಕ್ಕೂ ಅಧಿಕಾರ ನಡೆಸಲು ಸಾಧ್ಯವಾಗಲಿಲ್ಲ. ಭಾರತ ಸರ್ಕಾರದ ಆಡಳಿತ ಯಂತ್ರ ಹೇಗಿರಬೇಕು ಎಂದು ರೂಪುರೇಷೆ ಹಾಕಿಕೊಟ್ಟಿದ್ದು ಕೆಂಗಲ್​ ಹನುಮಂತಯ್ಯ.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಜನ ಜಾಗೃತಿ ವೇದಿಕೆ ಅಧ್ಯಕ್ಷ ಕೆ.ಶೇಷಾದ್ರಿ, ನಮ್ಮ ನೆಲದ ಸಾಧಕರ ಬಗ್ಗೆ ನಾವು ಅಭಿಮಾನ ಶೂನ್ಯರಾಗಿದ್ದೇವೆ. ಇಂದಿರಾ ಗಾಂಧಿ ಮಾತು ಧಿಕ್ಕರಿಸಿದ ಕಡು ಸ್ವಾಭಿಮಾನಿ ಕೆಂಗಲ್​. ಅವರ ಬಗ್ಗೆ ನಾವು ನೆನೆಯದಿದ್ದರೆ ಅದು ಆತ್ಮವಂಚನೆಯಾಗುತ್ತದೆ. ಅಂತಹ ಧೀಮಂತರ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದರು. ಕೆಂಗಲ್​ ಪ್ರತಿಮೆಗಾಗಿ ಲಿಂಗಪ್ಪ, ಶಿವನಂಜಯ್ಯ ಸೇರಿದಂತೆ ಹಲವರು ಶ್ರಮಿಸಿದರು. ಅದರಲ್ಲಿ ನಾಗರಾಜು ಅವರು ಸುಮಾರು 25 ಲಕ್ಷ ರೂ. ಕೊಟ್ಟು ಪ್ರತಿಮೆ ನಿರ್ಮಾಣಕ್ಕೆ ಕಾರಣರಾದರು. ಕೆಂಗಲ್​ ಅವರ ಸಮಾಧಿ ಸ್ಥಳ ಮತ್ತು ಅವರ ವಿಶ್ರಾಂತಿ ಗೃಹದ ಅಭಿವೃದ್ಧಿಗೆ ಚನ್ನಪಟ್ಟಣ ಶಾಸಕರು, ಸಿಎಂ ಗಮನಕ್ಕೆ ತರಲಾಗುವುದು ಎಂದರು. ಕಾರ್ಯಕ್ರಮದಲ್ಲಿ ರೈತ ಮುಖಂಡರಾದ ಸಿ.ಪುಟ್ಟಸ್ವಾಮಿ, ಅನಸೂಯಮ್ಮ, ಕುಮಾರಸ್ವಾಮಿ, ಯುವ ಸಾಹಿತಿ ಡಾ.ರವಿಕುಮಾರ್​ ಬಾಗಿ, ಚಿಂತಕ ದೊಡ್ಡ ಬೋರಯ್ಯ, ಪ್ರಾಂಶುಪಾಲರಾದ ಕೊತ್ತಿಪುರ ಶಿವಣ್ಣ ಮಾತನಾಡಿದರು. ಕೆಂಗಲ್​ ಹನುಮಂತಯ್ಯ ಪ್ರತಿಮೆ ನಿರ್ಮಾಣಕ್ಕೆ ಸಹಕಾರ ನೀಡಿದ ಬಮುಲ್​ ನಿರ್ದೇಶಕ ಪಿ.ನಾಗರಾಜು ಅವರನ್ನು ಸನ್ಮಾನಿಸಲಾಯಯಿತು.


ರಾಜ್ಯಕ್ಕಾಗಿ ಸಾಕಷ್ಟು ದುಡಿದ ಕೆಂಗಲ್​ ಅವರಿಗೆ ಈ ಮಣ್ಣು ಏನನ್ನೂ ಕೊಡಲಿಲ್ಲ. ವಿಧಾನಸೌಧದಲ್ಲಿ ಕಟ್ಟಿಸಿದ ಕೆಂಗಲ್​ ಪ್ರತಿಮೆಯನ್ನು ಪಿತೂರಿ ನಡೆಸಿ ವಿಧಾನಸೌಧದ ಮುಂಭಾಗ ಸ್ಥಾಪಿಸದಂತೆ ಮಾಡಿ, ಹಿಂಭಾಗ ಇಟ್ಟರು. ಈ ಪ್ರತಿಮೆಯನ್ನು ಮುಂಭಾಗಕ್ಕೆ ತರಲು ಹೋರಾಟ ಅಗತ್ಯವಿದೆ.
> ಡಾ.ತಲಕಾಡು ಚಿಕ್ಕರಂಗೇಗೌಡ,
ಇತಿಹಾಸ ತಜ್ಞರು

ಇಂದಿಗೂ ಜನಮನದಲ್ಲಿ ಉಳಿದಿದ್ದಾರೆ

ಪ್ರಗತಿಪರ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್​ ಮಾತನಾಡಿ, ಕೆಂಗಲ್​ ಅವರ ಕಾಲದ್ದು ಕಟ್ಟುವ ಕಾಲದ ರಾಜಕಾರಣ. ಈಗಿನದು ತಿನ್ನುವ ಮತ್ತು ಕೆಡಗುವ ರಾಜಕಾರಣ. ಒಮ್ಮೆ ಕೆಂಗಲ್​ ಅವರು ಉತ್ತರ ಕರ್ನಾಟಕದ ಬಳ್ಳಾರಿಯಲ್ಲಿ ನಡೆದ ಸಮಾವೇಶದಲ್ಲಿ ಜನರು ಏಕೀಕರಣದ ಬೇಡಿಕೆ ಇಟ್ಟಾಗ ಅದಕ್ಕೆ ಕೆಂಗಲ್​ ಸ್ಪಂದಿಸಿ ಅದಕ್ಕೆ ಜೀವ ತುಂಬುತ್ತಾರೆ. ಅದಕ್ಕೆ ಕುವೆಂಪು ಅವರ ಸಲಹೆ ಪಡೆದರು. ಆದರೆ, ಏಕೀಕರಣ ಆದಾಗ ನಿಜಲಿಂಗಪ್ಪ ಮುಖ್ಯಮಂತ್ರಿ ಆಗಿದ್ದರು. ಆದರೆ, ಕರ್ನಾಟಕ ಇರುವವರಿಗೆ ಕೆಂಗಲ್​ ನೆನಪಿನಲ್ಲಿ ಉಳಿಯುತ್ತಾರೆ. ಅವರು ಮೊದಲ ಚುನಾಯಿತ ಮುಖ್ಯಮಂತ್ರಿ. ಪ್ರಜಾಪ್ರಭುತ್ವದ ಕಲ್ಲನ್ನು ಮೊದಲ ಸಲ ನೆಟ್ಟವರು. ರಾಜ್ಯದಲ್ಲಿ ಪ್ರಜಾಪ್ರಭುತ್ವ ಕಟ್ಟಲು ಮುನ್ನುಡಿ ಬರೆದವರು ಅವರೇ ಎಂದು ಬಣ್ಣಿಸಿದರು. ಆಡಳಿತ ವ್ಯವಸ್ಥೆ ಸುಧಾರಣೆಗೆ ರಾಜ್ಯದಲ್ಲಿ ಟಿಪ್ಪು ಬಿಟ್ಟರೆ, ನಂತರ ಕೊಡುಗೆ ನೀಡಿದ್ದು ಕೆಂಗಲ್​ ಹನುಮಂತಯ್ಯನವರೇ. ಜನರ ಕೆಲಸವನ್ನು ದೇವರ ಕೆಲಸ ಎಂದು ಪರಿಭಾವಿಸಿ ಸರ್ಕಾರದ ಕೆಲಸ ದೇವರ ಕೆಲಸ ಎಂದು ವಿಧಾನಸೌಧದ ಪ್ರವೇಶ ದ್ವಾರದಲ್ಲಿ ಬರೆಯಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯ ಆಡಳಿತದ ದೇವಾಲಯವಾಗಿ ವಿಧಾನಸೌಧವನ್ಮು ಕಟ್ಟಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net