ನಗರಸಭೆ ವಶಕ್ಕೆ ಹೆದ್ದಾರಿ, ರಸ್ತೆಗಳು!

 ರಾಮನಗರ ನಗರಸಭೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಕೆ.ಶೇಷಾದ್ರಿ, ಆಯುಕ್ತ ಜಯಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಮೊಹಮದ್ ಆರೀಫ್ ಇದ್ದರು.
ರಾಮನಗರ ನಗರಸಭೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಕೆ.ಶೇಷಾದ್ರಿ, ಆಯುಕ್ತ ಜಯಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಮೊಹಮದ್ ಆರೀಫ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಶೇಷ ಸಾಮಾನ್ಯ ಸಭೆಯಲ್ಲಿ ನಿರ್ಣಯ
  • ಅಭಿವೃದ್ಧಿ ಉದ್ದೇಶದಿಂದ ಹಸ್ತಾಂತರಿಸಲು ಸರ್ಕಾರಕ್ಕೆ ಪ್ರಸ್ತಾವನೆ

ರಾಮನಗರ

ನಗರಸಭಾ ವ್ಯಾಪ್ತಿಯ ಬೆಂಗಳೂರು- ಮೈಸೂರು ಹೆದ್ದಾರಿ ಸೇರಿ ಲೋಕೋಪಯೋಗಿ ನಿರ್ವಹಣೆಯಲ್ಲಿರುವ ರಸ್ತೆಗಳನ್ನು ನಗರಸಭೆಗೆ ಹಸ್ತಾಂತರಿಸಿಕೊಳ್ಳಲು ಗುರುವಾರ ನಡೆದ ವಿಶೇಷ ಸಾವಾನ್ಯ ಸಭೆಯಲ್ಲಿ ನಗರಸಭಾ ಸದಸ್ಯರು ನಿರ್ಣಯಿಸಿದರು.

ಅಧ್ಯಕ್ಷ ಕೆ.ಶೇಷಾದ್ರಿ ಅವರು ಸಭೆಯಲ್ಲಿ ವಿಷಯ ಮಂಡನೆ ಮಾಡಿದರು, ಈ ವೇಳೆ ಚರ್ಚೆ ನಡೆದು ಅಂತಿಮವಾಗಿ ಸದಸ್ಯರು ಒಪ್ಪಿಗೆಯನ್ನು ಸೂಚಿಸಿದರು.

ಈ ವೇಳೆ ಮಾತನಾಡಿದ ಅಧ್ಯಕ್ಷ ಕೆ.ಶೇಷಾದ್ರಿ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಕೆಂಪೇಗೌಡ ವೃತ್ತದ ಮುಖಾಂತರ ನಗರಸಭೆ ಗಡಿಯವರೆಗೆ, ಕೆಂಪೇಗೌಡ ವೃತ್ತದಿಂದ ಚೆನ್ನೇನಹಳ್ಳಿವರೆಗೆ, ಅರ್ಚಕರ ಹಳ್ಳಿ ಮಹದೇಶ್ವರ ಸ್ವಾಮಿ ದೇವಾಲಯದ ಬಳಿಯಿಂದ ದೊಡ್ಡಮಣ್ಣುಗುಡ್ಡೆ ಮುಖ್ಯರಸ್ತೆವರೆಗೆ ಮತ್ತು ನಗರ ವ್ಯಾಪ್ತಿಯ ಬೆಂಗಳೂರು ಮೈಸೂರು ಹೆದ್ದಾರಿ ರಸ್ತೆಗಳು ಪಿ.ಡಬ್ಲುೃ.ಡಿ ಇಲಾಖೆಯ ನಿರ್ವಹಣೆಯಲ್ಲಿವೆ. ಆದರೆ, ಈ ರಸ್ತೆಗಳ ಸ್ವಚ್ಛತೆ ನಗರಸಭೆಯಿಂದ ನಿರ್ವಹಣೆಯಾಗುತ್ತಿದೆ. ಪ್ಯಾಚ್ ಕೆಲಸಗಳನ್ನು ನಗರಸಭೆಯೇ ವಾಡುತ್ತಿದೆ. ನಗರಸಭೆಯ ನಿರ್ವಹಣೆಗೆ ಪಡೆದುಕೊಂಡು ಅಭಿವೃದ್ಧಿ ವಾಡುವ ಉದ್ದೇಶದಿಂದ ಹಸ್ತಾಂತರಿಸಿಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸೋಣ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪ್ರತಿಪಕ್ಷದ ನಾಯಕ ಮಂಜುನಾಥ್, ಈ ರಸ್ತೆಗಳನ್ನು ಹಸ್ತಾಂತರಿಸಿಕೊಳ್ಳುವ ಪ್ರಕ್ರಿಯೆ ಹಿಂದೆಯೇ ಆಗಬೇಕಾಗಿತ್ತು ಎಂದರು. ತಮ್ಮ ವಾರ್ಡ್ ವ್ಯಾಪ್ತಿಯಲ್ಲಿನ ಪಿ. ಡಬ್ಲುೃ. ಡಿ ರಸ್ತೆಯ ದುರಸ್ಥಿ ನಡೆಯುತ್ತಿದೆ. ಅಲ್ಲಿರುವ 56 ವ್ಯಾನ್ ಹೋಲ್‌ಗಳನ್ನು ಮುಚ್ಚಿಹಾಕಿದ್ದಾರೆ. ಈ ವಿಚಾರದಲ್ಲಿ ಗುತ್ತಿಗೆದಾರ ಮತ್ತು ಸಂಬಂಧಿಸಿದ ಅಧಿಕಾರಿಯ ಗಮನಕ್ಕೆ ತಂದರು ಉಪಯೋಗವಾಗಲಿಲ್ಲ. ಹೀಗಾಗಿ ಕಲ್ಮಶ ನೀರು ಮನೆಗಳಿಗೆ ಹಿಂದಕ್ಕೆ ಹರಿಯುತ್ತಿದೆ. ನಾಗರಿಕರು ನಗರಸಭೆಯನ್ನೇ ಹಳಿಯುತ್ತಿದ್ದಾರೆ. ಜನರಿಗೆ ಯಾವ ರಸ್ತೆ ಯಾರ ನಿರ್ವಹಣೆಯಲ್ಲಿದೆ ಎಂಬುದು ಗೊತ್ತಿಲ್ಲ. ಹೀಗಾಗಿ ನಗರಸಭೆಯನ್ನೇ ದೋಷಿಸುತ್ತಿದ್ದಾರೆ. ಸದರಿ ರಸ್ತೆಗಳನ್ನು ನಗರಸಭಾ ವ್ಯಾಪ್ತಿಗೆ ಪಡೆದುಕೊಂಡರೆ ನಿರ್ವಹಣೆ ಸಾಧ್ಯವಾಗುತ್ತದೆ ಎಂದು ತಮ್ಮ ಒಪ್ಪಿಗೆ ಸೂಚಿಸಿದರು.

ಮತ್ತೊಬ್ಬ ನಗರಸಭಾ ಸದಸ್ಯ ಸೋಮಶೇಖರ್ ವಾತನಾಡಿ, ಗಾಂಧಿನಗರದ ಬಳಿಯ ಬೆಂಗಳೂರು- ಮೈಸೂರು ಹೆದ್ದಾರಿ ರಸ್ತೆಯಲ್ಲಿ ರಸ್ತೆ ಉಬ್ಬುಗಳು ಬೇಕಾಗಿವೆ, ಈ ವಿಚಾರವನ್ನು ಪಿ. ಡಬ್ಲುೃ.ಡಿ ಅಧಿಕಾರಿಗಳ ಗಮನ ಸೆಳೆದರು ಉಪಯೋಗವಾಗಿಲ್ಲ. ಎಚ್.ಡಿ.ಕುವಾರಸ್ವಾಮಿ ಅವರ ಅಧಿಕಾರವಧಿಯಲ್ಲಿ ರೈಲು ನಿಲ್ದಾಣದ ಬಳಿಯಿಂದ ಮುಖ್ಯ ರಸ್ತೆಯನ್ನು ಕಾಂಕ್ರಿಟ್ ರಸ್ತೆಯನ್ನಾಗಿ ನಿರ್ಮಿಸಲಾಗಿದೆ. ಆದರೆ, ತದನಂತರ ಈ ರಸ್ತೆಯೂ ಹಾಳಾಗಿದೆ. ನಗರಸಭೆ ವ್ಯಾಪ್ತಿಯಲ್ಲಿದ್ದರೆ ದುರಸ್ಥಿ ವಾಡಬಹುದು ಎಂದು ಪಿ.ಡಬ್ಲು.ಡಿ ರಸ್ತೆಗಳನ್ನು ನಗರಸಭೆಗೆ ಹಸ್ತಾಂತಿರಿಸಿಕೊಳ್ಳಲು ಸಮ್ಮತಿಸಿದರು.

ನಗರಸಭೆ ವ್ಯಾಪ್ತಿಯಲ್ಲಿರುವ ಖಾಸಗಿ ಆಸ್ತಿಗಳು, ಖಾಲಿ ನಿವೇಶನಗಳ ಸಮೀಕ್ಷೆ ನಡೆಸಿ ನಿಖರ ವಾಹಿತಿ ಸಂಗ್ರಹಿಸಿದರೆ, ಕಂದಾಯ ಲೆಕ್ಕಾಚರಕ್ಕೆ ಅನುಕೂಲವಾಗುತ್ತದೆ. ಸಮೀಕ್ಷೆಗಾಗಿ ಏಜೆನ್ಸಿಯೊಂದಕ್ಕೆ ಗುತ್ತಿಗೆ ನೀಡಲು ಅಧ್ಯಕ್ಷ ಕೆ.ಶೇಷಾದ್ರಿ ಸಭೆಯಲ್ಲಿ ಪ್ರಸ್ತಾಪಿಸಿದರು.

10 ಕೋಟಿ ರೂ. ಕಂದಾಯ ಸಂಗ್ರಹ ಸಾಧ್ಯತೆ:

ಇದೇ ವಿಚಾರದಲ್ಲಿ ವಾಹಿತಿ ನೀಡಿದ ಆಯುಕ್ತ ಡಾ.ಜಯಣ್ಣ, ನಗರಸಭೆಯ ವ್ಯಾಪ್ತಿಯಲ್ಲಿ ಒಟ್ಟು 33000 ಆಸ್ತಿಗಳಿವೆ. ಈ ಪೈಕಿ ಖಾಲಿ ನಿವೇಶನಗಳು ಇವೆ. ಕೆಲವರು ಹೆಚ್ಚುವರಿ ಫ್ಲೋರ್‌ಗಳನ್ನು ನಿರ್ಮಿಸಿಕೊಂಡಿರಬಹುದು. ಕಳೆದ 10 ವಷರ್ಗಳಲ್ಲಿ ಬಡಾವಣೆಗಳೂ ರಚನೆಯಾಗಿವೆ. ವಸತಿ ನಿವೇಶನಗಳು ವಾಣಿಜ್ಯೋದಮ ನಿವೇಶನಗಳಾಗಿ ಪರಿವರ್ತನೆಯಾಗಿರಬಹುದು. ಹೀಗಾಗಿ ಸಮೀಕ್ಷೆ ಅಗತ್ಯವಿದೆ. ಸದ್ಯ 6.80 ಕೋಟಿ ರೂ. ಕಂದಾಯ ಸಂಗ್ರಹವಾಗುತ್ತದೆ. ಸಮೀಕ್ಷೆ ನಂತರ ಕಂದಾಯ ಸಂಗ್ರಹ 10 ಕೋಟಿ ರೂ. ತಲುಪುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದರು. ಇದಕ್ಕೆ ಸಮೀಕ್ಷೆಗೆ ಸದಸ್ಯರು ಒಪ್ಪಗೆ ಸೂಚಿಸಿದರು. ನಗರಸಭೆಯ ಎಲ್ಲ ಕಡತಗಳನ್ನು ಗಣಕೀಕರಿಸುವ ವಿಚಾರವನ್ನು ಅಧ್ಯಕ್ಷರು ಮತ್ತು ಆಯುಕ್ತರು ವಿಷಯ ಪ್ರಸ್ತಾಪಿಸಿ, ಗಣಕೀಕರಣದ ಅಗತ್ಯವನ್ನು ತಿಳಿಸಿದರು. ಸದಸ್ಯರು ತಮ್ಮ ಒಪ್ಪಗೆ ಸೂಚಿಸಿದರು.

ವೇದಿಕೆಯಲ್ಲಿ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಮೊಹಮ್ಮದ್ ಆರಿಫ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net