ಹಾರೋಹಳ್ಳಿ ತಾಲೂಕು ಕೇಂದ್ರವಾದ ನಂತರ ತಹಸೀಲ್ದಾರ್ ಕಚೇರಿ ಕಾರ್ಯಾರಂಭ ಮಾಡಿತು. ನಂತರ ಪಟ್ಟಣ ಪಂಚಾಯಿತಿ ಕಚೇರಿಯನ್ನು ಇದೇ ಕಟ್ಟಡದಲ್ಲಿ ತೆರೆಯಲಾಯಿತು. ನಂತರ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಕಗ್ಗಲಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ತಾಲೂಕು ಪಂಚಾಯಿತಿ ಇಒ ಕಚೇರಿಯನ್ನು ಆರಂಭಿಸಲಾಗಿದೆ. ಇದರ ಹೊರತಾಗಿ ಇಲ್ಲಿ ಯಾವುದೇ ಇಲಾಖೆಗಳು ಕಾರ್ಯನಿರ್ವಹಿಸುತ್ತಿಲ್ಲ. ಈಗಲೂ ಕನಕಪುರ ತಾಲೂಕು ಅಧಿಕಾರಿಗಳೇ ಹಾರೋಹಳ್ಳಿ ತಾಲೂಕಿನ ಸಂಪೂರ್ಣ ಕಾರ್ಯವನ್ನು ನಿಭಾಯಿಸುತ್ತಿದ್ದಾರೆ. ಪ್ರಮುಖವಾಗಿ ಕೃಷಿ, ತೋಟಗಾರಿಕೆ, ಸರ್ವೇ, ಪಶು ಸಂಗೋಪನೆ, ಉಪ ನೋಂದಣಾಧಿಕಾರಿಯಂತಹ ಪ್ರಮುಖ ಇಲಾಖೆಗಳ ತಾಲೂಕು ಕಚೇರಿಗಳು ಮೂರು ವರ್ಷಗಳಾದರೂ ಆರಂಭವಾಗಿಲ್ಲ. ಇದು ಹಾರೋಹಳ್ಳಿಯನ್ನು ಏಕೆ ತಾಲೂಕು ಕೇಂದ್ರವಾಗಿಸಬೇಕಿತ್ತು? ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುವಂತೆ ಮಾಡಿದೆ.