ವೀಲಿಂಗ್​ ಬೈಕ್​ ಢಿಕ್ಕಿಯಾಗಿ ಹಣ್ಣಿನ ವ್ಯಾಪಾರಿ ಸಾವು

ವೆಂಕಟೇಶಪ್ಪ
ವೆಂಕಟೇಶಪ್ಪ
Published on
ಮಾಗಡಿ: ವೀಲಿಂಗ್​ನಲ್ಲಿ ತೊಡಗಿದ್ದ ಯುವಕರ ಗುಂಪಿನ ಬೇಜವಾಬ್ದಾರಿ ಬೈಕ್​ ಚಾಲನೆಯು ಅಮಾಯಕ ಮಾವಿನಹಣ್ಣಿನ ವ್ಯಾಪಾರಿಯನ್ನು ಬಲಿತೆಗೆದುಕೊಂಡಿದೆ.

ವಿಶ್ವನಾಥಪುರ ಗೇಟ್​ ಬಳಿ ಬುಧವಾರ ಸಂಭವಿಸಿದ ಈ ದುರ್ಟನೆಯಲ್ಲಿ ಮಾನಗಲ್​ ಗ್ರಾಮದ ವೆಂಕಟೇಶಪ್ಪ (55) ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಆರ್​.ಬ್ಯಾಡರಹಳ್ಳಿಯ ಆರು ಯುವಕರು ಬೈಕ್​ಗಳಲ್ಲಿ ಅತಿವೇಗವಾಗಿ ವೀಲಿಂಗ್​ ಮಾಡಿಕೊಂಡು ಬರುತ್ತಿದ್ದರು. ವಿಶ್ವನಾಥಪುರ ಗೇಟ್​ಗಿಂತ ಮುಂಚೆ ಕೆಂಪಸಾಗರ ಗೇಟ್​ ಬಳಿ ಬೈಕ್​ಗಳಲ್ಲಿ ಸಾಗುವಾಗ ಅಪಾಯಕಾರಿ ಚಾಲನೆಯನ್ನು ಕಂಡು ಸಾರ್ವಜನಿಕರು ಬೈಕ್​ ತಡೆದು ಬುದ್ಧಿವಾದ ಹೇಳಿ, ಎಚ್ಚರಿಕೆ ನೀಡಿದ್ದರು. ಆದರೆ, ಸಾರ್ವಜನಿಕರ ಮಾತಿಗೆ ಕ್ಯಾರೆ ಎನ್ನದ ಯುವಕರ ಗುಂಪು ಮತ್ತಷ್ಟು ವೇಗವಾಗಿ ವೀಲಿಂಗ್​ ಮಾಡಿಕೊಂಡು ಮುನ್ನುಗ್ಗಿ ವಿಶ್ವನಾಥಪುರ ಗೇಟ್​ ಬಳಿ ವೆಂಕಟೇಶಪ್ಪ ಅವರ ಬೈಕ್​ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ವೆಂಕಟೇಶಪ್ಪ ಇತ್ತೀಚೆಗಷ್ಟೇ ಮಾಗಡಿಯ ಮಂಡಿಗೆ ಮಾವಿನ ಕಾಯಿಗಳನ್ನು ಹಾಕಿದ್ದರು. ಅದರ ಹಣ ಪಡೆದುಕೊಂಡು ಬರಲು ಮಾನಗಲ್ಲು&ಕೊಂಡಹಳ್ಳಿ ಮಾರ್ಗವಾಗಿ ಬೈಕ್​ನಲ್ಲಿ ಹೊರಟಿದ್ದರು. ಆದರೆ ಯುವಕರ ಹುಚ್ಚಾಟ ಇವರನ್ನು ಬಲಿಪಡೆದಿದೆ. ಮೃತರಿಗೆ ಪತ್ನಿ, ಮೂವರು ಪುತ್ರಿಯರಿದ್ದಾರೆ. ವ್ಯಾಪಾರ ಮಾಡಿಕೊಂಡು ಹೆಣ್ಣು ಮಕ್ಕಳನ್ನು ಸಲಹುತ್ತಿದ್ದ ಕುಟುಂಬದ ಏಕೈಕ ಆಧಾರಸ್ತಂಭವನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮಾಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net