ಚಗಚೆ ಗಿಡದಿಂದ ತಗಚಗೆರೆವರೆಗೆ...!

 ಮಾಸ್ತಮ್ಮ ದೇವಿ
ಮಾಸ್ತಮ್ಮ ದೇವಿ
Published on
ಚನ್ನಪಟ್ಟಣ: ನಗರದಿಂದ ಕೇವಲ 4 ಕಿಮೀ ಅಂತರದಲ್ಲಿರುವ ತಗಚಗೆರೆ ವಿವಿಧ ಕಾರಣಗಳಿಂದ ತಾಲೂಕಿನಲ್ಲಿ ತನ್ನನ್ನು ವಿಶೇಷವಾಗಿ ಗುರುತಿಸಿಕೊಂಡಿದೆ.
ಗ್ರಾಮ ಇರುವ ಸ್ಥಳ ಈ ಹಿಂದೆ ಕೆರೆಯಾಗಿತ್ತಂತೆ. ಕೆರೆಯಲ್ಲಿ ಚಗಚೆ ಗಿಡ ಯಥೇಚ್ಛವಾಗಿದ್ದ ಹಿನ್ನೆಲೆಯಲ್ಲಿ ಇಲ್ಲಿ ಕುಟುಂಬಗಳು ನೆಲೆನಿಂತ ಮೇಲೆ ಚಗಚಕೆರೆ ಎಂಬ ಹೆಸರಿನಿಂದ ಗುರುತಿಸಿಕೊಳ್ಳತೊಡಗಿತು. ಕಾಲಕ್ರಮೇಣ ಇದು ತಗಚಗೆರೆಯಾಯಿತು ಎಂಬುದು ಇಲ್ಲಿನ ಹಿರಿಯರ ಮಾತು. ಆದರೆ ಗ್ರಾಮಕ್ಕೆ ಹೆಸರು ಹೇಗೆ ಬಂತು ಎಂಬ ಬಗ್ಗೆ ನಿಖರ ದಾಖಲೆಗಳಿಲ್ಲ. ಅಭಿವೃದ್ಧಿ ಹಾದಿಯಲ್ಲಿ ಸಾಗುತ್ತಿರುವ ತಗಚಗೆರೆ ಗ್ರಾಮದ ಸಮೀಪವೇ ಅವನತಿ ಹೊಂದಿರುವ ಹತ್ತಿಕುಪ್ಪೆ ಎಂಬ ಗ್ರಾಮವಿದೆ. ಹಾಗಾಗಿ ತಗಚಗೆರೆ ಹೊಸದಾಗಿ ನಿರ್ಮಾಣವಾದ ಗ್ರಾಮ ಎನ್ನಲಾಗುತ್ತಿದೆ.
ಒಕ್ಕಲಿಗರೇ ಪ್ರಮುಖವಾಗಿರುವ ಈ ಗ್ರಾಮದಲ್ಲಿ ಇತರ ಸಮುದಾಯದವರು ಸಹಬಾಳ್ವೆಯಿಂದ ಜೀವಿಸುತ್ತಿದ್ದಾರೆ. ಗ್ರಾಮದಲ್ಲಿ 600ಕ್ಕೂ ಹೆಚ್ಚಿನ ಮನೆಗಳಿದ್ದು, 3,500ಕ್ಕೂ ಹೆಚ್ಚಿನ ಜನಸಂಖ್ಯೆ ಇದೆ. ಇದು ಗ್ರಾಪಂ ಹಾಗೂ ತಾಪಂ ಕೇಂದ್ರವಾಗಿದೆ. ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ, ಪಶು ಆಸ್ಪತ್ರೆ, ಎಂಪಿಸಿಎಸ್​, ವಿಎಸ್ಸೆಸ್ಸೆನ್​ ಸೇರಿ ಹಲವು ಸವಲತ್ತುಗಳನ್ನು ಒಳಗೊಂಡಿದೆ. ಕೃಷಿ, ಹೈನುಗಾರಿಕೆ ಹಾಗೂ ರೇಷ್ಮೆ ಈ ಭಾಗದ ಜನರ ಮುಖ್ಯ ಕಸುಬು.
ಗಣೇಶ ಹಬ್ಬದಲ್ಲಿ ಬಾಡೂಟ!
ಗ್ರಾಮದ ವಿಶೇಷ ಎಂದರೆ ಗಣೇಶ ಚತುರ್ಥಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡಿದ ಮರುದಿನ ಸಂಬಂಧಿಗಳಿಗೆ ಮಾಂಸದೂಟ ಹಾಕುವುದು. ಚತುರ್ಥಿಯಂದು ಗ್ರಾಮದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಒಂಬತ್ತು ದಿನ ಪೂಜಿಸಲಾಗುತ್ತದೆ. ಗಣೇಶ ಗ್ರಾಮದಲ್ಲಿ ಇರುವಷ್ಟು ದಿನ ಸಾಮಾನ್ಯವಾಗಿ ಮಾಂಸದ ಅಡುಗೆ ನಿಷಿದ್ಧ. ಆದರೆ ಮೂರ್ತಿಯನ್ನು 9 ದಿನಗಳ ನಂತರ ಗ್ರಾಮದಾದ್ಯಂತ ಅದ್ದೂರಿಯಾಗಿ ಮೆರವಣಿಗೆ ಮಾಡಿ, ವಿಸರ್ಜನೆ ಮಾಡಿದ ಬಳಿಕ ಅತ್ತ ಗಣೇಶ ಕೆರೆಯಲ್ಲಿ ಮುಳುಗುತ್ತಿದ್ದಂತೆ, ಇತ್ತ ಗ್ರಾಮದಲ್ಲಿ ಮಾಂಸದ ಅಡುಗೆಗೆ ಸಿದ್ಧತೆ ಭರದಿಂದ ಸಾಗಿರುತ್ತದೆ.
ಗ್ರಾಮದೇವಿ ಮಾರಮ್ಮ
ಗ್ರಾಮದ ಮುಂಭಾಗದ ತೋಪಿನಲ್ಲಿರುವ ಮಾರಮ್ಮ ತಾಯಿಯನ್ನು ಗ್ರಾಮದೇವತೆಯಾಗಿ ಪೂಜಿಸುವ ಜನ ಪಕ್ಕದ ನೀಲಸಂದ್ರ ಭೈರವೇಶ್ವರ (ಬೋರಪ್ಪ) ಹಾಗೂ ಮಾಸ್ತಮ್ಮ ತಾಯಿಯನ್ನು ವಿಶೇಷವಾಗಿ ಆರಾಧಿಸುತ್ತಾರೆ. ವರ್ಷಕೊಮ್ಮೆ ಬೋರಪ್ಪನ ಜಾತ್ರೆಯಲ್ಲಿ ಗ್ರಾಮದ ಜನರೆಲ್ಲ ಒಗ್ಗೂಡಿ ಮೀಸಲು ಊಟದ ಸೇವೆ ನಡೆಸುತ್ತಾರೆ. ಇತ್ತೀಚೆಗೆ ಬಹಳ ವರ್ಷಗಳ ನಂತರ ಗ್ರಾಮದಲ್ಲಿ ಭೈರವೇಶ್ವರ ಬುಕ್ತಿ ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ನಡೆಸಲಾಯಿತು. ಬಳ್ಳಾರ್​ ದೇವಮ್ಮ, ವೀರಮಾಸ್ತಿ ಕೆಂಪಮ್ಮ, ಕೆಂಗೇರೆ ಲಿಂಗೇಶ್ವರ, ರಾಮಮಂದಿರ, ಕಬ್ಬಾಳಮ್ಮ, ಲಕ್ಷಿ$್ಮದೇವಿ, ಮಂಠೇಸ್ಚಾಮಿ, ಕಾಳೇಶ್ವರ, ಸಿದ್ದೇಶ್ವರ ಸೇರಿ ಹಲವು ದೇವಸ್ಥಾನಗಳ ಜತೆಗೆ ಮಹಾತ್ಮಗಾಂಧೀ ಪ್ರತಿಮೆಯನ್ನೂ ನಿರ್ಮಿಸಲಾಗಿದೆ.
ಮಾಸ್ತಮ್ಮ ದೇವಿಯ ಇತಿಹಾಸ
ಮಾಸ್ತಮ್ಮ ತಾಯಿಯ ಹಿನ್ನೆಲೆ ರೋಚಕವಾಗಿದ್ದು, ಮರದ ನೆರಳೇ ದೇವಿಗೆ ದೇವಾಲಯ. ಯಾವುದೇ ಅರ್ಚಕರಿಲ್ಲ. ಮಾಸ್ತಮ್ಮ ಎಂಬ ದಲಿತ ಯುವತಿಯ ಮೇಲೆ ಗ್ರಾಮದ ಗೌಡನೊಬ್ಬ ಹಲ್ಲೆ ಮಾಡುತ್ತಾನೆ. ಇದರಿಂದ ನೊಂದ ಮಾಸ್ತಮ್ಮ ಆ ಗೌಡನ ಮನೆಯ ಮುಂದೆ ಹೋಗಿ ಶಾಪದ ಮಾತುಗಳನ್ನಾಡಿ ಗ್ರಾಮದ ಮುಂಭಾಗ ಅಗ್ನಿಪ್ರವೇಶ ಮಾಡುತ್ತಾಳೆ. ದಿನಗಳು ಉರುಳಿದಂತೆ ಆ ಜಾಗದಲ್ಲಿ ಹುತ್ತವೊಂದು ಮೂಡುತ್ತದೆ. ಆ ಹುತ್ತವನ್ನು ಎಷ್ಟೇ ಕೆಡವಿದರೂ ಮತ್ತೆ ಮತ್ತೆ ಬೆಳೆಯುತ್ತದೆ. ಒಮ್ಮೆ ಹುತ್ತವನ್ನು ಅಗೆದಾಗ ಅದರಲ್ಲಿ ಹಸಿಕರಗದ ಕುರುಹುಗಳು ಪತ್ತೆಯಾಗುತ್ತವೆ. ಅಂದಿನಿಂದ ಈವರೆಗೂ ದೈವಾಂಶ ಸಂಭೂತೆಯಾದ ಮಾಸ್ತಮ್ಮನನ್ನು ಶ್ರದ್ಧಾಭಕ್ತಿಯಿಂದ ಪೂಜಿಸಲಾಗುತ್ತಿದೆ. ಕೆರೆಯ ಹೆಸರಿನಲ್ಲಿ ಗ್ರಾಮ ಉದಯವಾದರೂ, ಗ್ರಾಮದಲ್ಲಿ ಯಾವುದೇ ಕೆರೆ ಇಲ್ಲ. ಕೆರೆ ಇಲ್ಲದಿದ್ದರೂ ಇಲ್ಲಿ ನೀರಿಗೆ ಯಾವುದೇ ಬರವಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net