ಬೆಂಗಳೂರಿನಿಂದ 100 ಕಿ.ಮೀ. ದೂರದ ಸ್ಥಳಗಳಿಗೆ ಚತುಷ್ಪಥ ರೈಲ್ವೆ: ಸೋಮಣ್ಣ

ಚನ್ನಪಟ್ಟಣಕ್ಕೆ ಆಗಮಿಸಿದ ಕೇಂದ್ರ ಸಚಿವ ವಿ.ಸೋಮಣ್ಣ ಮತ್ತು ರಾಜ್ಯ ಸಚಿವ ಎಂ.ಬಿ.ಪಾಟೀಲ್ ಅವರನ್ನು ಸ್ವಾಗತಿಸಿದ ಶಾಸಕ ಸಿ.ಪಿ.ಯೋಗೇಶ್ವರ್
ಚನ್ನಪಟ್ಟಣಕ್ಕೆ ಆಗಮಿಸಿದ ಕೇಂದ್ರ ಸಚಿವ ವಿ.ಸೋಮಣ್ಣ ಮತ್ತು ರಾಜ್ಯ ಸಚಿವ ಎಂ.ಬಿ.ಪಾಟೀಲ್ ಅವರನ್ನು ಸ್ವಾಗತಿಸಿದ ಶಾಸಕ ಸಿ.ಪಿ.ಯೋಗೇಶ್ವರ್
Published on

ಪ್ರಮುಖ ಮುಖ್ಯಾಂಶಗಳು

  • ಮಂಗಳೂರಿಗೂ ಸುಗಮ ರೈಲು ಸಂಪರ್ಕ
  • 3-4 ತಿಂಗಳಲ್ಲಿ ವಿಜಯಪುರಕ್ಕೆ ವಂದೇ ಭಾರತ್ ಸ್ಪೀಪರ್ ಆರಂಭ
  • ಸಚಿವರಾದ ಸೋಮಣ್ಣ, ಎಂ.ಬಿ.ಪಾಟೀಲ ವಿಶೇಷ ರೈಲಿನಲ್ಲಿ ಪ್ರಯಾಣ
ರಾಮನಗರ :
ಬೆಂಗಳೂರಿನಿಂದ 100 ಕಿ.ಮೀ. ಸುತ್ತಮುತ್ತ ಇರುವ ನಗರಗಳಿಗೆ ಚತುಷ್ಪಥ ರೈಲ್ವೆ ಮಾರ್ಗಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಜತೆಗೆ ರಾಜಧಾನಿಯಿಂದ ಕರಾವಳಿ ಭಾಗದ ಮಂಗಳೂರಿಗೆ ಕೂಡ ಇದೇ ರೀತಿ ಚತುಷ್ಪಥ ಮಾರ್ಗ ಅಭಿವೃದ್ಧಿಯನ್ನೂ ಪರಿಗಣಿಸಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಚನ್ನಪಟ್ಟಣದ ಎಲೆಕೇರಿ ಬಳಿ ನೂತನವಾಗಿ ನಿರ್ಮಿಸಿರುವ ರಸ್ತೆ ಮೇಲ್ಸೇತುವೆ ಉದ್ಘಾಟಿಸಿ ಸೋಮವಾರ ಮಾತನಾಡಿದರು.
ಇದಕ್ಕೂ ಮೊದಲು ರಾಜ್ಯದ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಅವರು ಕರ್ನಾಟಕದ ರೈಲ್ವೇ ಬೇಡಿಕೆಗಳನ್ನು ಸಮಾರಂಭದಲ್ಲಿ ಪ್ರಸ್ತಾಪಿಸಿದ್ದರು. ಇದರಲ್ಲಿ ಅವರು ಬೆಂಗಳೂರಿನಿಂದ ತುಮಕೂರು, ಮೈಸೂರು, ಗೌರಿಬಿದನೂರು ಮಾರ್ಗವಾಗಿ ಹಿಂದೂಪುರ ಮತ್ತು ಕೋಲಾರಕ್ಕೆ ಚತುಷ್ಪಥ ಹಳಿ ನಿರ್ಮಿಸಬೇಕು ಎಂದು ಕೋರಿದ್ದರು.
ಈ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸೋಮಣ್ಣ, ಬೆಂಗಳೂರು-ತುಮಕೂರು ಚತುಷ್ಪಥ ಮಾರ್ಗದ ಸರ್ವೆ ಮುಗಿದಿದ್ದು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆಗಳನ್ನು ಆರಂಭಿಸಲಾಗುವುದು. ಮುಂದಿನ ಒಂದೂವರೆ- ಎರಡು ವರ್ಷದಲ್ಲಿ ಕಾಮಗಾರಿ ಮುಗಿಸುವ ಉದ್ದೇಶ ಇದೆ. ಹಾಗೆಯೇ ಬೆಂಗಳೂರು- ಮೈಸೂರು ಚತುಷ್ಪಥ ನಿರ್ಮಾಣಕ್ಕೆ ಸಮೀಕ್ಷೆ ಮಾಡಲು ತೀರ್ಮಾನಿಸಲಾಗಿದೆ ಎಂದು ಅವರು ವಿವರಿಸಿದರು.
ಎಂ‌ ಬಿ ಪಾಟೀಲರು ಪ್ರಸ್ತಾಪಿಸಿರುವ ಬೇಡಿಕೆಗಳು ಸರಿಯಾಗಿವೆ. ಅವರ ಕೋರಿಕೆಯಂತೆ ಬೆಂಗಳೂರು-ಕೋಲಾರ ನಡುವೆ ನೇರ ರೈಲು ಸಂಪರ್ಕ ಕಲ್ಪಿಸಲಾಗುವುದು. ಸದ್ಯಕ್ಕೆ ವೈಟ್ ಫೀಲ್ಡ್ ತನಕ ಇರುವ ನಾಲ್ಕು ಪಥದ ಮಾರ್ಗವನ್ನು ಮುಂದಕ್ಕೂ ಕೊಂಡೊಯ್ಯಲಾಗುವುದು. ಇದಕ್ಕೆ ಬೇಕಾದ ಭೂಸ್ವಾಧೀನವನ್ನು ಕೇಂದ್ರ ಸರ್ಕಾರವೇ ನಡೆಸುತ್ತದೆ ಎಂದು ಅವರು ಭರವಸೆ ನೀಡಿದ್ದಾರೆ.

ಬೆಂಗಳೂರು-ಮಂಗಳೂರು ಚತುಷ್ಪಥ ಮಾರ್ಗ

ರಾಜಧಾನಿ ಬೆಂಗಳೂರಿನಿಂದ ಕರಾವಳಿಯ ಮಂಗಳೂರಿಗೆ ತ್ವರಿತ ರೈಲು ಸಂಚಾರ ವ್ಯವಸ್ಥೆ ಆಗಬೇಕಿದೆ. ಇದಕ್ಕಾಗಿ ಸಕಲೇಶಪುರ-ಗುಂಡ್ಯ ನಡುವೆ ಸಮಾನಾಂತರವಾಗಿ ರಸ್ತೆ ಮತ್ತು ರೈಲು ಮಾರ್ಗ ಆಗಬೇಕೆಂದು ಪಾಟೀಲ ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಸ್ಪಂದಿಸಿದ ಸೋಮಣ್ಣ ಅವರು ಇದೊಂದು ಉಪಯುಕ್ತ ಸಲಹೆಯಾಗಿದ್ದು, ಈ ಎರಡೂ ನಗರಗಳ ನಡುವೆ ಚತುಷ್ಪಥ ರೈಲು ಮಾರ್ಗ ಅಭಿವೃದ್ಧಿ ಅಗತ್ಯ ಇದೆ. ಬಂದರು ನಗರ ಮಂಗಳೂರಿಗೆ ಸಂಪರ್ಕ ಮಾಡುವುದರಿಂದ ಅನೇಕ ಪ್ರಯೋಜನಗಳು ಆಗಲಿವೆ. ಇದು ಕೂಡ ನಮ್ಮ ಆದ್ಯತೆಯಾಗಿದೆ ಎಂದು ಸೋಮಣ್ಣ ವಿವರಿಸಿದ್ದಾರೆ.
ತುಮಕೂರು- ಚಿತ್ರದುರ್ಗ- ದಾವಣಗೆರೆ ಮಾರ್ಗದಲ್ಲಿ ಭರದಿಂದ ಕಾಮಗಾರಿ ನಡೆಯುತ್ತಿದೆ. ಈಗ ಏಕಪಥವಾಗಿರುವ ಈ ಮಾರ್ಗವನ್ನು ಜೋಡಿಹಳಿ ಮಾಡಬೇಕು ಎಂದು ಪಾಟೀಲರು ಬೇಡಿಕೆ ಇಟ್ಟಿದ್ದಾರೆ. ಇದನ್ನು ಕೂಡ ಪರಿಗಣಿಸಲಾಗುವುದು ಎಂದು ಸೋಮಣ್ಣ ಅವರು ನುಡಿದಿದ್ದಾರೆ.
ಕಾರ್ಯಕ್ರಮದಲ್ಲಿ ಸಂಸದ ಡಾ.ಸಿ.ಎನ್.ಮಂಜುನಾಥ, ಶಾಸಕ ಸಿ ಪಿ ಯೋಗೀಶ್ವರ್, ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಯಶವಂತ ಗುರಿಕಾರ್, ನೈರುತ್ಯ ರೈಲ್ವೆ ಮುಖ್ಯ ಆಡಳಿತಾಧಿಕಾರಿ ಎ.ಕೆ.ಗುಪ್ತ, ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕ ಪ್ರವೀಣ್ ಕಾತರಕಿ, ಮೂಲಸೌಕರ್ಯ ಇಲಾಖೆ ಜಂಟಿ ಕಾರ್ಯದರ್ಶಿ ಚಂದ್ರಶೇಖರ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


ವಿಜಯಪುರಕ್ಕೆ ವಂದೇ ಭಾರತ್ ಸ್ಲೀಪರ್ ರೈಲು

ಕಿತ್ತೂರು ಕರ್ನಾಟಕ ಭಾಗದ ವಿಜಯಪುರಕ್ಕೆ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭಿಸಬೇಕು ಎನ್ನುವ ಸಚಿವ ಎಂ.ಬಿ.ಪಾಟೀಲ ಅವರ ಬೇಡಿಕೆಗೆ ಸ್ಪಂದಿಸಿದ ಸೋಮಣ್ಣ ಅವರು ಇನ್ನು 3-4 ತಿಂಗಳಲ್ಲಿ ಅದು ನನಸಾಗಲಿದೆ ಎಂದು ಘೋಷಿಸಿದರು.
ವಂದೇ ಭಾರತ್ ರೈಲಿಗೆ ಬದಲಾಗಿ ಸ್ಲೀಪರ್ ರೈಲು ಓಡಿಸಲಾಗುವುದು. ಈ ಕುರಿತು ಸದ್ಯದಲ್ಲೇ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.
ಅಲ್ಲದೆ, ಬೆಂಗಳೂರು- ವಿಜಯಪುರ ನಡುವೆ ವಾರಕ್ಕೆ ಎರಡು ಸಲ ಸಂಚರಿಸುತ್ತಿರುವ ವಿಶೇಷ ರೈಲನ್ನು ಕಾಯಂ ಮಾಡಲಾಗುವುದು. ಜತೆಗೆ ಇಲ್ಲಿರುವ ಸಣ್ಣಪುಟ್ಟ ತೊಂದರೆಗಳನ್ನು ನಿವಾರಿಸಲಾಗುವುದು. ಅಲ್ಲದೆ ಐಟಿ ರಾಜಧಾನಿ ಬೆಂಗಳೂರು ಮತ್ತು ಆರ್ಥಿಕ ರಾಜಧಾನಿ ಮುಂಬಯಿಯನ್ನು ಬೆಸೆಯಲು ಬೆಂಗಳೂರು-ಪುಣೆ ಮಧ್ಯೆ ಹೈಸ್ಪೀಡ್ ರೈಲು ಆರಂಭಿಸಬೇಕು ಎನ್ನುವ ಬೇಡಿಕೆ ಸೂಕ್ತವಾಗಿದೆ. ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುವುದು ಎಂದು ಸೋಮಣ್ಣ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net