ಕನಕಪುರ:ತಾಲೂಕಿನ ಮರಳೇಗವಿ ಮಠದ ಮುನೇಶ್ವರಬೆಟ್ಟದಲ್ಲಿ ಭಾನುವಾರ ರಾತ್ರಿ ಬೆಂಕಿ ಕಾಣಿಸಿಕೊಂಡು, ಅಪಾರ ಹಾನಿಯಾಗಿದೆ. ವಿಶಾಲವಾದ ಅರಣ್ಯ ಪ್ರದೇಶದಲ್ಲಿ ಬೆಂಕಿ ವ್ಯಾಪಿಸಿದ್ದರಿಂದ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುವಂತಾಯಿತು.
ಬೆಂಕಿಯು ವ್ಯಾಪಕವಾಗಿ ಹರಡಿ ಹೊತ್ತಿ ಉರಿಯುತ್ತಿದ್ದ ಕಾರಣ ಬೆಟ್ಟದ ಸುತ್ತ ದಟ್ಟ ಹೊಗೆ ಕಾಣಿಸಿಕೊಂಡಿದೆ. ರಸ್ತೆಯಲ್ಲಿ ತೆರಳುತ್ತಿದ್ದವರು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ. ಸಾತನೂರು ವಲಯ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಸೋಮವಾರ ಬೆಳಗಿನ ಹೊತ್ತಿಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಜಗದೀಶ್ಗೌಡ ತಿಳಿಸಿದ್ದಾರೆ. ಕಿಡಿಗೇಡಿಗಳು ಬೆಂಕಿ ಹಾಕಿರಬಹುದು ಎಂದು ಶಂಕಿಸಲಾಗಿದೆ.