ಕನಕಪುರ: ಖಾಸಗಿ ಗಾರ್ಮೆಂಟ್ಸ್ನ ಬಟ್ಟೆಯನ್ನು ಅನಧಿಕೃತವಾಗಿ ಮಾರಾಟ ಮಾಡಿ ಸಂಸ್ಥೆಗೆ ನಷ್ಟ ಮಾಡಿರುವ ಆರೋಪದ ಮೇಲೆ ಸಂಸ್ಥೆ ಸಹಾಯಕ ವ್ಯವಸ್ಥಾಪಕ, ಮೂವರು ಸಿಬ್ಬಂದಿ, ಸರಕು ಸಾಗಣೆ ವಾಹನ ಚಾಲಕ ಸೇರಿ 6 ಮಂದಿ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾರ್ಮೆಂಟ್ಸ್ನಲ್ಲಿ ಫೆ.20ರಂದು ಟ್ರಾನ್ಸ್ಪೋರ್ಟ್ವೊಂದರ ಮೂಲಕ 3072.77ಮೀ ಮತ್ತು 131 ಯಾರ್ಡ್ಸ್ ಫ್ಯಾಬ್ರಿಕ್ ಬಟ್ಟೆಯನ್ನು ದೊಡ್ಡಬಳ್ಳಾಪುರಕ್ಕೆ ಕಳುಹಿಸಿಕೊಡಲಾಗಿತ್ತು. ಆದರೆ ಫ್ಯಾಬ್ರಿಕ್ ವಿಭಾಗದ ಸಹಾಯಕ ವ್ಯವಸ್ಥಾಪಕನ ಸೂಚನೆ ಮೇರೆಗೆ ಜಗದೀಶ್ ಎಂಬಾತ ಬೆಂಗಳೂರಿನ ಯಲಚೇನಹಳ್ಳಿಯ ದಿಲೀಪ್ಗೆ ಮಾರಾಟ ಮಾಡಿದ್ದಾರೆ. ಮೇ 6ರಂದು ಟ್ರಾನ್ಸ್ಪೋರ್ಟ್ ಮೂಲಕ 6968 ಮೀಟರ್ ಬಟ್ಟೆಯನ್ನು ದೊಡ್ಡಬಳ್ಳಾಪುರಕ್ಕೆ ಕಳುಹಿಸಿಕೊಡಲಾಗಿತ್ತು, ಆದರೆ ಫ್ಯಾಬ್ರಿಕ್ ವಿಭಾಗದ ಸಹಾಯಕ ವ್ಯವಸ್ಥಾಪಕರ ಸೂಚನೆ ಮೇರೆಗೆ ವಾಹನದ ಚಾಲಕ ಸಿದ್ದರಾಜು ಅವರು ಬೆಂಗಳೂರಿನ ಯಲಚೇನಹಳ್ಳಿ ಸಪ್ಲೇಯರ್ಗೆ ಮಾರಾಟ ಮಾಡಿದ್ದರು.
ಮತ್ತೆ ಏಪ್ರಿಲ್ 9ರಂದು ಟ್ರಾನ್ಸ್ಪೋರ್ಟ್ವೊಂದರ ಮೂಲಕ 44 ರೀಲ್ಸ್ಗಳ 4205 ಮೀಟರ್ ಬಟ್ಟೆಯನ್ನು ಕನಕಪುರದಿಂದ ದೊಡ್ಡಬಳ್ಳಾಪುರಕ್ಕೆ ಕಳುಹಿಸಿಕೊಡಲಾಗಿತ್ತು, ಆದರೆ ಸದರಿ ವಾಹನದ ಚಾಲಕ ಸಿದ್ದರಾಜು ಬೆಂಗಳೂರಿನ ಯಲಚೇನಹಳ್ಳಿಯಲ್ಲಿರುವ ದಿಲೀಪ್ ಅವರಿಗೆ ಮಾರಾಟ ಮಾಡಿದ್ದರು.
ಗಾರ್ಮೆಂಟ್ಸ್ನಿಂದ ಕಳುಹಿಸಿಕೊಟ್ಟಿದ್ದ ಬಟ್ಟೆ ದೊಡ್ಡಬಳ್ಳಾಪುರಕ್ಕೆ ತಲುಪಿಲ್ಲ ಎಂದು ಮಾಹಿತಿ ತಿಳಿದು ಗಾರ್ಮೆಂಟ್ಸ್ ಅಧಿಕಾರಿಗಳು ಫ್ಯಾಬ್ರಿಕ್ ವಿಭಾಗದ ಸಹಾಯಕ ವ್ಯವಸ್ಥಾಪಕ ಹಾಗೂ ಚಾಲಕರನ್ನು ವಿಚಾರಣೆ ನಡೆಸಿದಾಗ ಬಟ್ಟೆ ಗಾರ್ಮೆಂಟ್ಸ್ನಿಂದ ದೊಡ್ಡಬಳ್ಳಾಪುರಕ್ಕೆ ತಲುಪಿಸದೆ ಅನಧಿಕೃತವಾಗಿ ಮಾರಾಟ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಫ್ಯಾಬ್ರಿಕ್ ವಿಭಾಗದ ಸಹಾಯಕ ವ್ಯವಸ್ಥಾಪಕ ಪ್ರಶಾಂತ್ ಕುಮಾರ್, ವರುಣ್, ಪೃಥ್ವಿ, ಖಾದಿರ್ ಅಹಮದ್ ಹಾಗೂ ಗೂಡ್ಸ್ ವಾಹನದ ಚಾಲಕನ ವಿರುದ್ಧ ಎಫ್ಐಆರ್ ದಾಖಲಾಗಿದೆ.