ಕುದೂರಿನಲ್ಲಿ ಹೆಚ್ಚಿದ ಪಂಪ್​ಸೆಟ್​ ಕೇಬಲ್​ ಕಳ್ಳತನ ಭೀತಿ!

ಕೆಂಪಾಪುರ ಗ್ರಾಮದ ರೈತರ ತೋಟ, ಹೊಲ ಗದ್ದೆಗಳಿಗೆ ಅಳವಡಿಸಿರುವ ಮೋಟಾರ್​ ಪಂಪ್​ಸೆಟ್​ಗಳ ಕೇಬಲ್​ ಕಳ್ಳತನವಾಗಿರುವುದು.
ಕೆಂಪಾಪುರ ಗ್ರಾಮದ ರೈತರ ತೋಟ, ಹೊಲ ಗದ್ದೆಗಳಿಗೆ ಅಳವಡಿಸಿರುವ ಮೋಟಾರ್​ ಪಂಪ್​ಸೆಟ್​ಗಳ ಕೇಬಲ್​ ಕಳ್ಳತನವಾಗಿರುವುದು.
Published on
ಕುದೂರು: ಗ್ರಾಮೀಣ ಭಾಗಗಳಲ್ಲಿ ಕೃಷಿ ಪಂಪ್​ಸೆಟ್​ಗಳಿಗೆ ಅಳವಡಿಸಿರುವ ವಿದ್ಯುತ್​ ಕೇಬಲ್​ ಕಳವು ಪ್ರಕರಣಗಳು ಹೆಚ್ಚುತ್ತಿದ್ದು, ರೈತರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ರಾತ್ರಿ ವೇಳೆ ಹೊಲಗಳಿಗೆ ನುಗ್ಗುತ್ತಿರುವ ಕಳ್ಳರು ಕೇಬಲ್​ಗಳನ್ನು ಕತ್ತರಿಸಿ ಕಳವು ಮಾಡುತ್ತಿರುವುದರಿಂದ ರೈತರು ಸಾವಿರಾರು ರೂ.ನಷ್ಟ ಅನುಭವಿಸುತ್ತಿದ್ದಾರೆ.
ಹೌದು... ಇತ್ತೀಚೆಗೆ ಹೋಬಳಿಯ ಹಲವು ಗ್ರಾಮಗಳಲ್ಲಿ ಪಂಪ್​ ಸೆಟ್​ಗಳ ಕೇಬಲ್​ ಕಳ್ಳತನ ಅವ್ಯಾಹತವಾಗಿ ನಡೆಯುತ್ತಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ತಾಮ್ರದ ತಂತಿಗೆ ಉತ್ತಮ ಬೆಲೆ ಇರುವುದರಿಂದ ಕೇಬಲ್​ ಕಳ್ಳತನ ಹೆಚ್ಚುತ್ತಿದೆ. ಕೇಬಲ್​ ಕಳ್ಳತನದಿಂದ ಪಂಪ್​ಸೆಟ್​ಗಳು ಕಾರ್ಯನಿರ್ವಹಿಸದೆ ನೀರಾವರಿ ಸ್ಥಗಿತಗೊಳ್ಳುತ್ತಿದೆ. ಇದರಿಂದ ಬೆಳೆಗಳಿಗೆ ಸಮಯಕ್ಕೆ ಸರಿಯಾಗಿ ನೀರುಣಿಸಲು ಸಾಧ್ಯವಾಗದೆ ಬೆಳೆ ಹಾನಿಯಾಗುವ ಭೀತಿ ಎದುರಾಗಿದೆ. ಈಗಾಗಲೇ ಮಳೆ ಕೊರತೆ, ಹೆಚ್ಚಿದ ಕೃಷಿ ವೆಚ್ಚ ಮತ್ತು ಕಾರ್ಮಿಕ ಸಮಸ್ಯೆಯಿಂದ ಸಂಕಷ್ಟದಲ್ಲಿರುವ ರೈತರಿಗೆ ಈ ಕಳವು ಪ್ರಕರಣಗಳು ಮತ್ತಷ್ಟು ಆರ್ಥಿಕ ಹೊರೆ ತಂದೊಡ್ಡಿವೆ.
ಕೇಬಲ್​ ಕಳ್ಳತನ ತಡೆಯಲು ಪೊಲೀಸ್​ ಹಾಗೂ ವಿದ್ಯುತ್​ ಇಲಾಖೆ ಸಮನ್ವಯದಿಂದ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ರಾತ್ರಿ ಗಸ್ತು ಹೆಚ್ಚಿಸುವ ಜತೆಗೆ ಹೊಲಗಳ ಸುತ್ತಮುತ್ತ ಪೊಲೀಸ್​ ನಿಗಾ ಬಲಪಡಿಸಬೇಕು ಹಾಗೂ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಶ್ರೀ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.
"

ಕೆಂಪಾಪುರ ಗ್ರಾಮದಲ್ಲಿನ ತೋಟಗಳಿಗೆ ರಾತ್ರೋರಾತ್ರಿ ಕಳ್ಳರು ನುಗ್ಗಿ ಲಾಂತರ ರೂಪಾಯಿ ಮೌಲ್ಯದ ಪಂಪ್​ ಸೆಟ್​ಗಳಿಗೆ ಅಳವಡಿಸಿರುವ ವಿದ್ಯುತ್​ ತಂತಿ ಕದಿಯುತ್ತಿದಾದಾರೆ. ಪೊಲೀಸರು ಕೂಡಲೇ ರಾತ್ರಿ ವೇಳೆ ಬೀಟ್​ ವ್ಯವಸ್ಥೆ ಹೆಚ್ಚಿಸಿ ಕ್ರಮ ಕೈಗೊಳ್ಳಬೇಕು.

— > ಸಾಬೀರ್​ ಪಾಷಾ, ಹುಲಿಕಲ್​ ಗ್ರಾಪಂ ಮಾಜಿ ಸದಸ್ಯ, ಕೆಂಪಾಪುರ.
"

ರೈತರ ಜಮೀನುಗಳಲ್ಲಿ ನಡೆಯುತ್ತಿರುವ ಕಳ್ಳತನ ಇಲಾಖೆಯ ಗಮನಕ್ಕೆ ಬಂದಿದೆ. ಶ್ರೀವೇ ಬೀಟ್​ ವ್ಯವಸ್ಥೆ ಹೆಚ್ಚಿಸಿ ಕಳ್ಳರನ್ನು ಸೆರೆಹಿಡಿಯಲಾಗುವುದು.

— > ಚಂದ್ರಶೇಖರ್​, ಪೊಲೀಸ್​ ಇನ್​ಸ್ಪೆಕ್ಟರ್​, ಕುದೂರು ಪೊಲೀಸ್​ ಠಾಣೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net