ಉದುರುವ ಗೋಡೆ ಚದುರಿದ ಹೆಂಚು

 ಮಳೂರು ನಾಡಕಚೇರಿ
ಮಳೂರು ನಾಡಕಚೇರಿ
Published on
ಚನ್ನಪಟ್ಟಣ: ಉದುರುತ್ತಿರುವ ಗೋಡೆಗಳು, ಚದುರುತ್ತಿರುವ ಹೆಂಚುಗಳು. ಶೌಚಕ್ಕೂ ಸ್ಥಳವಿಲ್ಲ, ಹತ್ತು ಜನ ನಿಲ್ಲುವುದಕ್ಕೂ ಜಾಗವಿಲ್ಲ. ನೂರು ಗ್ರಾಮಗಳ ಸೇವೆಗೆ ಮೂರೇ ಜನ ಸಿಬ್ಬಂದಿ, ಜನರ ಪರದಾಟ, ಸಿಬ್ಬಂದಿ ತೋಳಲಾಟ. ಇವಿಷ್ಟು ತಾಲೂಕಿನ ಮಳೂರು ನಾಡಕಚೇರಿಯ ಅವ್ಯವಸ್ಥೆ.
ಹೌದು, ನಾಡಕಚೇರಿಗಳು ಗ್ರಾಮೀಣ ಮತ್ತು ಹೋಬಳಿ ಜನರಿಗೆ ವಿವಿಧ ಸರ್ಕಾರಿ ಸೇವೆಗಳನ್ನು ಒದಗಿಸುವ ಕೇಂದ್ರಗಳು. ಆದಾಯ, ಜಾತಿ ಪ್ರಮಾಣಪತ್ರ ಮತ್ತು ಕಂದಾಯ ಸೇವೆಗಳನ್ನು ಸುಲಭ, ಪಾರದರ್ಶಕವಾಗಿ ಹಾಗೂ ನೇರವಾಗಿ ಒದಗಿಸುವ ಅತ್ಯಂತ ಪ್ರಮುಖ ಸರ್ಕಾರಿ ಕಚೇರಿಗಳು. ಜನಸಾಮಾನ್ಯರ ದೈನಂದಿನ ಜೀವನದಲ್ಲಿ ಈ ಕಚೇರಿಗಳು ಪ್ರಮುಖ ಪಾತ್ರವಹಿಸುತ್ತವೆ. ಇಂತಹ ಪ್ರಮುಖ ಕಚೇರಿ ಸಂಪೂರ್ಣ ಶಿಥಿಥಿಲಗೊಂಡಿದ್ದರೂ ಅದೇ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಆಡಳಿತ ವ್ಯವಸ್ಥೆಯ ಅಣಕವೇ ಸರಿ.
ಮೂಕವೇದನೆ!: ಮಳೂರು ಹೋಬಳಿಯ ಜನತೆಗೆ ವಿವಿಧ ಸರ್ಕಾರಿ ಯೋಜನೆಗಳ ಸೌಲಭ್ಯ ಹಾಗೂ ಕಂದಾಯ ಇಲಾಖೆಯ ಮೂಲ ದಾಖಲೆಗಳನ್ನು ಪಡೆದುಕೊಳ್ಳಲು ದೊಡ್ಡಮಳೂರು ಗ್ರಾಮದಲ್ಲಿ ಹೆದ್ದಾರಿಗೆ ಆಂಟಿಕೊಂಡಿರುವ ನಾಡಕಚೇರಿಯಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಹಲವು ವರ್ಷಗಳಿಂದ ಹಾಳಾದ ಹೆಂಚಿನ ಮನೆಯೊಂದರಲ್ಲಿ ಈ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಈ ಕಚೇರಿ ಸಾರ್ವಜನಿಕ ಉಪಯೋಗಕ್ಕೆ ಯೋಗ್ಯವಲ್ಲ ಎಂಬುದು ನೋಡಿದ ಣವೇ ಸ್ಪಷ್ಟವಾಗುತ್ತದೆ. ಆದರೂ, ಪಾಳುಮನೆಯಂತಿರುವ ಇಲ್ಲಿಯೇ ಹಲವು ವರ್ಷಗಳಿಂದ ನಾಡಕಚೇರಿ ಕಾರ್ಯನಿರ್ವಹಿಸುತ್ತಿರುವುದು ದುರಂತ.
ಕಚೇರಿಯ ಗೋಡೆಗಳು ಉದುರಿ ಬೀಳುವ ಸ್ಥಿತಿ ತಲುಪಿವೆ. ಹೆಂಚುಗಳು ಚದುರಿಹೋಗಿವೆ. ಮಳೆ ಬಂದಾಗಲಂತೂ ಇಡೀ ಕಚೇರಿ ತುಂಬ ನೀರು ತುಂಬಿಕೊಳ್ಳುತ್ತದೆ. ಒಂದೆಡೆ ಕಚೇರಿ ಶಿಥಿಲಾವಸ್ಥೆಯಲ್ಲಿದ್ದರೆ.., ಮತ್ತೊಂದೆಡೆ ಬಹಳ ಕಿರಿದಾಗಿದ್ದು, ಹತ್ತು ಜನ ಬಂದರೆ ನಿಲ್ಲಲೂ ಜಾಗವಿಲ್ಲ. ನಿತ್ಯ ಈ ಕಚೇರಿಗೆ ಪಹಣಿ, ಜಮೀನು, ದೃಢೀಕರಣ ಪತ್ರ, ಆದಾಯ, ಜಾತಿ ಪ್ರಮಾಣ ಪತ್ರ ಸೇರಿ ವಿವಿಧ ಕೆಲಸಕ್ಕೆ ಅರ್ಜಿ ಸಲ್ಲಿಸಲು ನೂರಾರು ಮಂದಿ ಆಗಮಿಸುತ್ತಾರೆ. ಇಂತಹ ಪ್ರಮುಖ ಜಾಗದಲ್ಲಿ ಸಾರ್ವಜನಿಕರಿಗೆ ಮೂಲ ಸೌಲತ್ತುಗಳಿರಲಿ, ಕೊನೆಯಪ ಕೂರಲು ಸಹ ಜಾಗವಿಲ್ಲ.
ನೂರು ಗ್ರಾಮಗಳ ಸೇವೆಗೆ ಮೂರೇ ಜನ!
ಕಚೇರಿ ಅವ್ಯವಸ್ಥೆ ಒಂದೆಡೆಯಾದರೆ, ಕಚೇರಿ ಆಡಳಿತ ಅವ್ಯವಸ್ಥೆ ಮತ್ತೊಂದೆಡೆ. ಮಳೂರು ಹೋಬಳಿಯಲ್ಲಿ 48 ಕಂದಾಯ ಗ್ರಾಮಗಳು ಸೇರಿ 100ಕ್ಕೂ ಹೆಚ್ಚು ಗ್ರಾಮಗಳಿವೆ. ಸಾವಿರಾರು ಜನರ ಸೇವೆಗೆ ಒಬ್ಬರು ಉಪ ತಹಸೀಲ್ದಾರ್​, ಕಂಪ್ಯೂಟರ್​ ಆಪರೇಟರ್​ ಹಾಗೂ ಡಿ ಗ್ರೂಪ್​ ನೌಕರ ಅಷ್ಟೇ ಇದ್ದಾರೆ. ಪರಿಣಾಮ ಸಾರ್ವಜನಿಕರು ಸಕಾಲದಲ್ಲಿ ಸೇವೆ ಸಿಗದೇ ಪರದಾಡುತ್ತಿದ್ದಾರೆ. ಸಿಬ್ಬಂದಿ ಕೊರತೆ ಕಾರಣ ಜನ ಕೈಯಲ್ಲಿ ಅರ್ಜಿ ಹಿಡಿದು ಕಚೇರಿಗೆ ಬಂದರೆ ಗಂಟೆಗಟ್ಟಲೆ ಕಾಯಬೇಕು. ಇನ್ನು ಕಚೇರಿಯಲ್ಲಿ ಶೌಚಗೃಹದ ವ್ಯವಸ್ಥೆಯೂ ಇಲ್ಲದ ಕಾರಣ, ಸಿಬ್ಬಂದಿ ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ.
ತಾಲೂಕಿಗೆ ಕಪ್ಪುಚುಕ್ಕೆ!
ಈ ಕಚೇರಿಯ ಪಕ್ಕವೇ ಇತಿಹಾಸ ಪ್ರಸಿದ್ಧ ಶ್ರೀ ಅಪ್ರಮೇಯ ಹಾಗೂ ಅಂಬೆಗಾಲು ಶ್ರೀಕೃಷ್ಣನ ದೇವಸ್ಥಾನವಿದೆ. ಈ ದೇವಸ್ಥಾನಕ್ಕೆ ರಾಜ್ಯವಷ್ಟೇ ಅಲ್ಲದೇ ಹೊರರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ. ಇಂತಹ ಸ್ಥಳದಲ್ಲಿ ಪ್ರಮುಖ ಕಚೇರಿಯೊಂದು ದುಸ್ಥಿತಿಯಲ್ಲಿರುವುದು ತಾಲೂಕಿಗಷ್ಟೇ ಅಲ್ಲದೆ ಜಿಲ್ಲೆಗೆ ಅವಮಾನ. ಗ್ರೇಟರ್​ ಬೆಂಗಳೂರು ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿರುವ ಸಮಯದಲ್ಲಿ ಪ್ರಮುಖ ಸರ್ಕಾರಿ ಕಚೇರಿಯೊಂದು ಇಂತಹ ಸ್ಥಿತಿಯಲ್ಲಿರುವುದು ನಿಜಕ್ಕೂ ಕಪ್ಪುಚುಕ್ಕೆ.
ಜಾಗ ಮೀಸಲಿದೆ.. ಇಚ್ಛಾಶಕ್ತಿ ಇಲ್ಲ!
ಮಳೂರು ನಾಡಕಚೇರಿ ಅವ್ಯವಸ್ಥೆ ಇಂದು, ನಿನ್ನೆಯ ಕಥೆಯಲ್ಲ. ಹಲವು ವರ್ಷಗಳಿಂದ ಈ ಕಚೇರಿಯ ಸಮಸ್ಯೆ ಕಾಡುತ್ತಿದೆ. ನಾಡಕಚೇರಿಯ ನಿರ್ಮಾಣಕ್ಕೆ ಸಮೀಪದಲ್ಲಿಯೇ ಮಳೂರು ಸರ್ವೇ ನಂ.522ರಲ್ಲಿ 30 ಕುಂಟೆ ಜಾಗ ಮೀಸಲಿದ್ದು, ಕಚೇರಿಯ ನಿರ್ಮಾಣಕ್ಕೆ ನೀಲನೆ ಹಾಗೂ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿ ವರ್ಷಗಳೇ ಕಳೆದಿವೆ. ಇಷ್ಟಾದರೂ ನೂತನ ಕಬೇರಿ ನಿರ್ಮಾಣಕ್ಕೆ ಗಂಭೀರ ಪ್ರಯತ್ನಗಳು ನಡೆಯದ ಕಾರಣ, ಮುರುಕಲು ಮನೆಯಲ್ಲಿಯೇ ನಾಡಕಚೇರಿ ದಿನ ಕಳೆಯುವಂತಾಗಿದೆ. ಇನ್ನಾದರೂ ೇತ್ರದ ಶಾಸಕರು ಈ ಬಗ್ಗೆ ಅಗತ್ಯ ಕ್ರಮವಹಿಸಲಿ ಎಂಬುದು ಸಾರ್ವಜನಿಕರ ಆಗ್ರಹ.
"

ಕಚೇರಿ ಹಳೆಯದಾಗಿರುವುದು ಹಾಗೂ ಸಮಸ್ಯೆಗಳಿರುವುದು ಸತ್ಯ. ಇರುವ ವ್ಯವಸ್ಥೆಯಲ್ಲಿಯೇ ಸಾರ್ವಜನಿಕ ಸೇವೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಕೆಲಸ ನಿರ್ವಹಿಸಿಕೊಂಡು ಹೋಗುತ್ತಿದ್ದೇವೆ. ಕಚೇರಿಯ ಹೊಸಕಟ್ಟಡ ನಿರ್ಮಾಣಕ್ಕೆ ಮಳೂರು ಸರ್ವೇ ನಂ.522ರ 30 ಗುಂಟೆ ಜಾಗ ಗುರುತಿಸಲಾಗಿದೆ. ರಾಜ್ಯ ಗೃಹಮಂಡಳಿ ಇದರ ನಿರ್ವಹಣೆ ಹೊಣೆಹೊತ್ತಿದೆ. ಆದಷ್ಟೂ ಬೇಗ ಕಟ್ಟಡವಾದರೆ ಎಲ್ಲರಿಗೂ ಅನುಕೂಲವಾಗುತ್ತದೆ.

— > ಮಹೇಶ್​ ಉಪ ತಹಸೀಲ್ದಾರ, ಮಳೂರು ನಾಡಕಚೇರಿ
"

ನೂತನ ಕಟ್ಟಡ ನಿರ್ಮಾಣಕ್ಕೆ ಅಂದಾಜು ಪಟ್ಟಿ ತಯಾರಿಸಿ ಅನುಮೋದನೆಗೆ ಸಲ್ಲಿಸಿದ್ದೇವೆ. ಸಭೆಯಾದ ನಂತರ ನಮ್ಮ ಕೇಂದ್ರ ಕಚೇರಿಯಲ್ಲಿ ಟೆಂಡರ್​ ಕರೆಯುತ್ತಾರೆ. ಟೆಂಡರ್​ ಪ್ರಕ್ರಿಯೆಯಾದ ನಂತರ ಕಾಮಗಾರಿ ಆರಂಭಿಸುತ್ತೇವೆ.

— > ಪ್ರಮೋದ್​ ಎಇಇ ಕೆಎಚ್​ಬಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net