ಅವೈಜ್ಞಾನಿಕ ಓಡಾಟದಿಂದ ಗ್ರಾಮದಲ್ಲಿ ಧೂಳು: ಲಾರಿಗಳನ್ನು ತಡೆದು ಹೆಗ್ಗಡಗೆರೆ ಗ್ರಾಮಸ್ಥರ ಪ್ರತಿಭಟನೆ

Dust in the village due to unscientific movement of vehicles: Heggadagere villagers protest by stopping lorries.
Dust in the village due to unscientific movement of vehicles: Heggadagere villagers protest by stopping lorries.
Published on
ಬಿಡದಿ: ಜಲ್ಲಿ, ಎಂ.ಸ್ಯಾಂಡ್ ಸಾಗಣೆ ಮಾಡುವ ಲಾರಿಗಳ ಅವೈಜ್ಞಾನಿಕ ಓಡಾಟದಿಂದ ಗ್ರಾಮದಲ್ಲಿ ಧೂಳು ಹೆಚ್ಚಾಗಿದೆ ಎಂದು ಹೆಗ್ಗಡಗೆರೆ ಗ್ರಾಮಸ್ಥರು ಶುಕ್ರವಾರ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ಉರಗಹಳ್ಳಿಯಲ್ಲಿನ ಕ್ರಷರ್‌ಗಳಿಂದ ಜೆಲ್ಲಿ, ಎಂ. ಸ್ಯಾಂಡ್‌ಗಳನ್ನ ತುಂಬಿಕೊಂಡು ಓಡಾಡುವ ಲಾರಿಗಳು ಯಾವುದೇ ಕ್ರಮ ಅನುಸರಿಸದೆ ಅವೈಜ್ಞಾನಿಕವಾಗಿ ಓಡಾಟ ನಡೆಸುತ್ತಿವೆ. ಇದರಿಂದ ರಸ್ತೆ ಪಕ್ಕದ ಮನೆಗಳಲ್ಲಿ ಧೂಳು ಹೆಚ್ಚಾಗಿ ಮಕ್ಕಳು ಹಾಗೂ ವೃದ್ಧರಿಗೆ ಅಸ್ತಮಾ ಮತ್ತಿತರ ಕಾಯಿಲೆಗಳು ಬರುತ್ತಿವೆ ಎಂದು ಪ್ರತಿಭಟನಾಕಾರರು ದೂರಿದರು.
ಲಾರಿಗಳಿಂದ ಬರುವ ಧೂಳಿನಿಂದ ರೋಸಿ ಹೋಗಿದ್ದ ಗ್ರಾಮಸ್ಥರು ಏಕಾಏಕಿ ಬಿಡದಿ-ಮುದವಾಡಿ ರಸ್ತೆ ತಡೆದು ನಾವು ಯಾವುದೇ ಕಾರಣಕ್ಕೂ ಲಾರಿಗಳ ಓಡಾಟಕ್ಕೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಪ್ರತಿಭಟಿಸಿದರು. ಪರಿಣಾಮ ಜೆಲ್ಲಿ ಹಾಗೂ ಎಂ.ಸ್ಯಾಂಡ್ ಸಾಗಣೆ ಮಾಡುತ್ತಿದ್ದ ವಾಹನಗಳು ಗಂಟೆಗಟ್ಟಲೇ ನಿಂತಲ್ಲೆ ನಿಂತಿದ್ದವು.
ಲಾರಿಗಳ ಚಾಲಕರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗುತ್ತಾರೆ. ಇದರಿಂದ ಶಬ್ದ ಮಾಲಿನ್ಯ ಹಾಗೂ ಧೂಳು ಒಂದೇ ಸಲ ಮನೆಗಳ ಕಡೆಗೆ ಬರುತ್ತದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಕೆಂಪನಹಳ್ಳಿಯಲ್ಲ್ಲೂ ಪ್ರತಿಭಟನೆ
ಹೆಗ್ಗಡಗೆರೆ ಗ್ರಾಮದಲ್ಲಿ ಟಿಪ್ಪರ್ ಲಾರಿಗಳನ್ನು ತಡೆದು ಅಲ್ಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಕೆಲ ಲಾರಿಗಳು ಬೆಂಗಳೂರು-ಮೈಸೂರು ಹೆದ್ದಾರಿಗೆ ಸೇರಲು ಕೆಂಪನಹಳ್ಳಿ ಮೂಲಕ ಸಂಚಾರ ಮಾಡುತ್ತಿದ್ದ ವೇಳೆ ಅಲ್ಲಿನ ಗ್ರಾಮಸ್ಥರು ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಲಾರಿಗಳ ಸಂಚಾರದಿಂದ ಗ್ರಾಮದ ರಸ್ತೆಗಳು ಹಾಳಾಗುವುದರ ಜತೆಗೆ ಧೂಳಿನ ಸಮಸ್ಯೆ ಬರುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಲಾರಿಗಳ ಸಂಚಾರಕ್ಕೆ ಅವಕಾಶ ಕೊಡುವುದಿಲ್ಲ ಎಂದು ಪಟ್ಟುಹಿಡಿದರು. ವಿಷಯ ತಿಳಿದ ಬಿಡದಿ ಪೊಲೀಸರು ಬಂದು ಗ್ರಾಮಸ್ಥರ ಮನ ಒಲಿಸುವ ಕೆಲಸ ಮಾಡಿದರು.
ಊರಗಹಳ್ಳಿಯಲ್ಲಿ ಬಂಡೆಗಳಿದ್ದು, ಕ್ರಷರ್‌ಗಳು ಕಾರ್ಯ ನಿರ್ವಹಸುತ್ತಿವೆ. ನಿತ್ಯ ನೂರಾರು ಲಾರಿಗಳು ದಿನದ 24 ಗಂಟೆಯೂ ಸಂಚರಿಸುತ್ತವೆ. ಇದರಿಂದ ರಸ್ತೆಯ ಪಕ್ಕದ ಮನೆಗಳಲ್ಲಿ ಧೂಳಿನ ಸಮಸ್ಯೆ ಹಾಗೂ ಶಬ್ದ ಮಾಲಿನ್ಯ ಹೆಚ್ಚಾಗಿದೆ. ಲಾರಿಗಳು ಯಾವುದೇ ಟಾರ್ಪಾಲ್ ಕಟ್ಟಿಕೊಳ್ಳದೇ ಸಂಚಾರ ಮಾಡುವುದರಿಂದ ಧೂಳಿನ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ.
ಚಂದ್ರಶೇಖರ್, ಹೆಗ್ಗಡಗೆರೆ ಗ್ರಾಮಸ್ಥ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net