ಚನ್ನಪಟ್ಟಣ: ನಿಷೇಧಿತ ಮಾದಕವಸ್ತು ಮಾರಾಟ ಮಾಡುತ್ತಿದ್ದ ಆರೋಪಿಗೆ ಎಡೆಮೂರಿ ಕಟ್ಟುವಲ್ಲಿ ಇಲ್ಲಿನ ಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ವಿಜಯನಗರದ ನಿವಾಸಿ ಮಹಮದ್ ಖಾಸಿಂ (25) ಬಂಧಿತ ಆರೋಪಿ. ನಗರದ ತಿಟ್ಟಮಾರನಹಳ್ಳಿ ರಸ್ತೆಯಲ್ಲಿರುವ ಮಹೇಶ್ವರ ಕಲ್ಯಾಣ ಮಂಟಪದ ಎದುರಿನ ಹಿಂದೂ ರುದ್ರಭೂಮಿಯ ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ.
ಈ ಕುರಿತಂತೆ ಮಾಹಿತಿ ಆಧರಿಸಿದ ಪುರಠಾಣೆ ಪಿಎಸ್ಐ ಜಗದೀಶ ನಾಯಕ ಮತ್ತು ಸಿಬ್ಬಂದಿ ದಾಳಿ ನಡೆಸಿದರು. ಈ ವೇಳೆ ಮಾದಕ ವಸ್ತು ಕೊಂಡುಕೊಳ್ಳುತ್ತಿದ್ದ ವ್ಯಕ್ತಿ ಪರಾರಿಯಾಗಿದ್ದು, ಮಾರಾಟ ಮಾಡುತ್ತಿದ್ದವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಮೈಕಾನಿಕ್ ಕೆಲಸ ಮಾಡುತ್ತಿದ್ದ ಆರೋಪಿಯಿಂದ ಮಾದಕ ವಸ್ತು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.