ಬಿಡದಿ ಭಾಗದ ಕಲ್ಲು ಕ್ವಾರಿಗಳಿಗೆ ಬೇಡಿಕೆ!

ಊರಗಹಳ್ಳಿಯಲ್ಲಿನ ಕ್ರಷರ್​ಗಳಿಂದ ಜೆಲ್ಲಿ ತುಂಬಿಕೊಂಡು ಬಂದ ಲಾರಿಗಳನ್ನು ಕೆಂಪನಹಳ್ಳಿ ಹಾಗೂ ಹೆಗ್ಗಡಗೆರೆ ಗ್ರಾಮಗಳಲ್ಲಿ ತಡೆದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಊರಗಹಳ್ಳಿಯಲ್ಲಿನ ಕ್ರಷರ್​ಗಳಿಂದ ಜೆಲ್ಲಿ ತುಂಬಿಕೊಂಡು ಬಂದ ಲಾರಿಗಳನ್ನು ಕೆಂಪನಹಳ್ಳಿ ಹಾಗೂ ಹೆಗ್ಗಡಗೆರೆ ಗ್ರಾಮಗಳಲ್ಲಿ ತಡೆದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
Published on
ಬಿಡದಿ: ಮಾದಪಟ್ಟಣ ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿತ ಪ್ರಕರಣದಿಂದ ಕಲ್ಲು ಕ್ವಾರಿಗಳಿಗೆ ತಾತ್ಕಾಲಿಕ ಬೀಗ ಬಿದ್ದ ಹಿನ್ನೆಲೆಯಲ್ಲಿ ಬಿಡದಿ ಭಾಗದ ಕಲ್ಲು ಕ್ವಾರಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಪರಿಣಾಮ ರಸ್ತೆಗಳಲ್ಲಿ ಲಾರಿಗಳ ಓಡಾಟ ಹೆಚ್ಚಾಗಿ ಜನರು ಲಾರಿಗಳ ತಡೆಗೆ ಮುಂದಾಗಿದ್ದಾರೆ.
ಹೌದು... ತಾವರೆಕೆರೆ ಸಮೀಪದ ಮಾದಾಪಟ್ಟಣ ಸಮೀಪದಲ್ಲಿನ ಕಲ್ಲು ಕ್ವಾರಿಯಲ್ಲಿ ಬೃಹತ್​ ಬಂಡೆ ಬಿದ್ದು 7 ಮಂದಿ ಕೊನೆಯುಸಿರೆಳೆದಿದ್ದರು. ಇದರಿಂದ ಸರ್ಕಾರ ಅಲ್ಲಿನ ಕಲ್ಲು ಗಣಿಗಾರಿಕೆಗೆ ತಾತ್ಕಾಲಿಕ ಬ್ರೇಕ್​ ಹಾಕಿದೆ. ಇದರಿಂದ ಬಿಡದಿಯ ಉರುಗಹಳ್ಳಿಯ ಕ್ವಾರಿಗಳಲ್ಲಿನ ಕಚ್ಚಾ ವಸ್ತುಗಳ ಖರೀದಿ ಹಾಗೂ ಸಾಗಣೆ ಜೋರಾಗಿದೆ.
ಮಾದಾಪಟ್ಟಣದಲ್ಲಿನ ಕಲ್ಲು ಕ್ವಾರಿ ಕೆಲಸಕ್ಕೆ ಬ್ರೇಕ್​ ಬಿದ್ದ ಕಾರಣ ಅಲ್ಲಿನ ಬಂಡೆ ಮಾಲೀಕರು ಹಾಗೂ ಮಧ್ಯವರ್ತಿಗಳು ಬಿಡದಿಯ ಉರುಗಹಳ್ಳಿ ಕ್ರಷರ್​ಗಳತ್ತ ಮುಖ ಮಾಡಿದ್ದು, ಇಲ್ಲಿಂದ ಜೆಲ್ಲಿ, ಎಂ ಸ್ಯಾಂಡ್​ ಸೇರಿ ಇನ್ನಿತರ ಕಲ್ಲಿನ ಸಾಮಗ್ರಿಗಳನ್ನು ಸಾಗಣೆ ಮಾಡುತ್ತಿದ್ದಾರೆ. ಈ ಬಂಡೆಯಲ್ಲಿ ಹಲವು ಕ್ರಷರ್​ಗಳಿದ್ದು, ಇಲ್ಲಿಂದ ನಿತ್ಯ ನೂರಾರು ಲಾರಿಗಳು ಓಡಾಟ ಮಾಡುತ್ತಿವೆ. ಇದೀಗ, ಆ ಭಾಗದ ಲಾರಿಗಳು ಬಂದು ಸರಕು ಸಾಗಾಟ ಮಾಡುತ್ತಿರುವುದರಿಂದ ರಸ್ತೆಗಳಲ್ಲಿ ಲಾರಿಗಳು ಸಂಚಾರ ದುಪ್ಪಟ್ಟಾಗಿದೆ.
ಹೆಚ್ಚಾದ ಧೂಳು
ಜೆಲ್ಲಿ, ಎಂ ಸ್ಟಾ$ಂಡ್​ ತುಂಬಿಕೊಂಡು ಹೋಗುವ ಲಾರಿಗಳು ಟಾರ್ಪಲ್​ ಹಾಗೂ ನೀರು ಹಾಕಿಕೊಳ್ಳದ ಜತೆಗೆ ಯಾವುದೇ ಕ್ರಮಗಳನ್ನ ಅನುಸರಿಸದೆ ಅವೈಾನಿಕವಾಗಿ ಸಂಚರಿಸುತ್ತವೆ. ಇದರಿಂದ ರಸ್ತೆಯ ಧೂಳಿನ ಜತೆಗೆ ಗಾಳಿ ಬೀಸಿದಾಗ ಲಾರಿಗಳಿಂದ ಕಲ್ಲಿನ ಪುಡಿ ರಸ್ತೆ ಮೇಲೆ ಬಿದ್ದು ಧೂಳೂ ಹೆಚ್ಚಾಗುತ್ತಿದೆ. ಇದರಿಂದ ದ್ವಿಚಕ್ರ ವಾಹನಗಳ ಸವಾರರಿಗೆ ತೊಂದರೆಯಾಗುತ್ತಿದೆ.
ಮನೆಗಳು ಧೂಳುಮಯ
ಕ್ರಷರ್​ಗಳಿಂದ ಕಲ್ಲಿನ ಸಾಮಗ್ರಿಗಳನ್ನು ತುಂಬಿಕೊಂಡು ಬರುವ ಲಾರಿಗಳು 3&4 ಗ್ರಾಮಗಳನ್ನು ದಾಟಿ ಬೆಂಗಳೂರು& ಮೈಸೂರು ಮುಖ್ಯ ಹೆದ್ದಾರಿ ತಲುಪಬೇಕಿದೆ. ಹಾಗಾಗಿ ಲಾರಿಗಳು ಮುನ್ನೆಚ್ಚರಿಕೆ ಕ್ರಮ ವಹಿಸದೆ ಇರುವುದರಿಂದ ರಸ್ತೆಯ ಪಕ್ಕದ ಮನೆಗಳಲ್ಲಿ ವಾಸಿಸುವವರಿಗೆ ಧೂಳಿನ ಸಮಸ್ಯೆಯಿಂದ ಅಸ್ತಮಾ ಸೇರಿ ಅನಾರೋಗ್ಯದ ಸಮಸ್ಯೆ ಬಾಧಿಸುತ್ತಿದೆ. ಉರಗಹಳ್ಳಿ ಕ್ರಷರ್​ಗಳಿಂದ ಬರುವ ಬಹುತೇಕ ಲಾರಿಗಳು ಕರಡಿಗೌಡನದೊಡ್ಡಿ, ಭಕ್ತಿಪುರ, ಹೆಗ್ಗಡಗೆರೆ, ಕೆಂಪನಹಳ್ಳಿ, ಕರಿಯಪ್ಪನದೊಡ್ಡಿ ಮಾರ್ಗವಾಗಿ ಬಂದು ಹೆದ್ದಾರಿ ಸೇರುತ್ತವೆ.
ಲಾರಿಗಳ ತಡೆದು ಪ್ರತಿಭಟನೆ
ಲಾರಿಗಳಿಂದ ಬರುತ್ತಿರುವ ಧೂಳಿನಿಂದ ರೋಸಿ ಹೀಗಿದ್ದ ರಸ್ತೆ ಪಕ್ಕದ ಮನೆಗಳ ಜನರು ಲಾರಿಗಳನ್ನು ತಡೆದು ಪ್ರತಿಭಟನೆ ಮಾಡಿದ್ದಾರೆ. ಹೆಗ್ಗಡಗೆರೆ ಗ್ರಾಮದ ಜನರು ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದ್ದರು. ಇದಾದ ನಂತರ ಕೆಂಪನಹಳ್ಳಿ ಮಾರ್ಗವಾಗಿ ಲಾರಿಗಳು ಹಗಲು ರಾತ್ರಿ ಎನ್ನದೆ ಸಂಚರಿಸುತ್ತಿದ್ದವು. ಇದರಿಂದ ಕೆಂಪನಹಳ್ಳಿಯಲ್ಲೂ ಗ್ರಾಮಸ್ಥರು ಲಾರಿಗಳನ್ನ ಅಡ್ಡಗಟ್ಟಿ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಬಿಡದಿ ಪೊಲೀಸರು ಲಾರಿ ಮಾಲೀಕರು, ಕ್ರಷರ್​ ಮಾಲೀಕರು ಹಾಗೂ ಗ್ರಾಮಸ್ಥರ ಸಭೆ ನಡೆಸಿ ಕೆಲವು ಮಾರ್ಗ ಸೂಚಿಗಳನ್ನು ಸೂಚಿಸಿದ್ದಾರೆ. ಅಂತೆಯೇ ದಿನದ 24 ಗಂಟೆಯೂ ಲಾರಿಗಳು ಸಂಚರಿಸುವಂತಿಲ್ಲ. ಬೆಳಗ್ಗೆ 6ರಿಂದ ರಾತ್ರಿ 9ರವರೆಗೆ ಮಾತ್ರ ಸಂಚರಿಸಬೇಕು. ಜತೆಗೆ ಪ್ರತಿ ಲಾರಿಯು ಕ್ರಷರ್​ ಬಿಡುವಾಗ ಹೊದಿಕೆ ಮುಚ್ಚಿಕೊಂಡು ಬರಬೇಕು ಎಂಬ ಕೆಲವು ನಿಬಂಧನೆಗಳನ್ನು ಹಾಕಿದ್ದಾರೆ ಎನ್ನಲಾಗಿದೆ.
"

ಊರಗಹಳ್ಳಿಯಲ್ಲಿನ ಕ್ರಷರ್​ಗಳಿಂದ ನಿತ್ಯ ಸಾವಿರಾರು ಲಾರಿಗಳು ಸಂಚರಿಸುತ್ತವೆ. ಈ ಹಿಂದೆ ರಾತ್ರಿ ವೇಳೆ ಅಷ್ಟಾಗಿ ಲಾರಿಗಳು ಸಂಚಾರ ಮಾಡುತ್ತಿರಲಿಲ್ಲ. ತಾವರೆಕೆರೆ ಬಳಿ ಕಲ್ಲು ಬಂಡೆ ಬಿದ್ದು ಅಲ್ಲಿನ ಕಲ್ಲು ಕ್ವಾರಿಗಳು ಸ್ಥಗಿತಗೊಂಡ ಪರಿಣಾಮ ಈ ಭಾಗದಲ್ಲಿ ಲಾರಿಗಳ ಸಂಚಾರ ಹೆಚ್ಚಾಗಿದೆ. ರಾತ್ರಿ ವೇಳೆ ಹೆಚ್ಚಾಗಿ ಲಾರಿಗಳು ಸಂಚಾರ ಮಾಡುತ್ತಿವೆ. ಇದರಿಂದ ಧೂಳು ಹಾಗೂ ರಾತ್ರಿ ವೇಳೆ ಶಬ್ದ ಮಾಲಿನ್ಯ ಕೂಡ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕಡಿವಾಣ ಹಾಕಬೇಕಿದೆ.

— > ನಾಗರಾಜು, ಹೆಗ್ಗಡಗೆರೆ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net