

ಪ್ರಮುಖ ಮುಖ್ಯಾಂಶಗಳು
ಮಾಗಡಿ: ಪಟ್ಟಣದ ಹೊಸಪೇಟೆ ಗೇಟ್ ಬಳಿಯ ಕ್ಷೀರ ಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಸಭೆಗೆ ಆಗಮಿಸಿದ್ದ ಇಬ್ಬರು ಕಾಂಗ್ರೆಸ್ ಮುಖಂಡರು ತಾಂತ್ರಿಕ ದೋಷದಿಂದಾಗಿ ಲಿಫ್ಟ್ನಲ್ಲಿ ಸಿಲುಕಿಕೊಂಡು, ಆತಂಕದ ಕ್ಷಣಗಳನ್ನು ಎದುರಿಸಿದ ಘಟನೆ ನಡೆಯಿತು. ತಕ್ಷಣವೇ ಕಾರ್ಯಪ್ರವೃತ್ತರಾದ ಸಿಬ್ಬಂದಿ ಕೂಡಲೇ ಪೊಲೀಸರ ಮೂಲಕ ವಿಡಿಯೋ ಕಾಲ್ ತಂತ್ರಜ್ಞಾನದ ನೆರವಿನಿಂದ ಇಬ್ಬರನ್ನೂ ರಕ್ಷಿಸಿದ್ದಾರೆ.
:
ಶಾಸಕ ಹೆಚ್.ಸಿ. ಬಾಲಕೃಷ್ಣ ಅವರ ನೇತೃತ್ವದಲ್ಲಿ ಕ್ಷೀರ ಭವನದ 3 ನೇ ಮಹಡಿಯಲ್ಲಿ ಎಸ್.ಐ.ಆರ್. ನ ಬಿ.ಎಲ್.ಎ-2 ಗಳ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ಭಾಗವಹಿಸಲು ಕಾಂಗ್ರೆಸ್ ಮುಖಂಡರು ಲಿಫ್ಟ್ ಮೂಲಕ ಮೂರನೇ ಮಹಡಿಗೆ ತೆರಳುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಲಿಫ್ಟ್ ಕೆಟ್ಟು ನಿಂತಿದ್ದರಿಂದ ಇಬ್ಬರು ಮುಖಂಡರು ಒಳಗಡೆಯೇ ಸಿಲುಕಿಕೊಂಡರು.
ಲಿಫ್ಟ್ ಸ್ಥಗಿತಗೊಂಡ ತಕ್ಷಣ ಕ್ಷೀರ ಭವನದ ನೌಕರರು ಸಮಯಪ್ರಜ್ಞೆ ಮೆರೆದು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಲಿಫ್ಟ್ ತಂತ್ರಜ್ಞರಿಗೆ ಕರೆ ಮಾಡಿ, ವಿಡಿಯೋ ಕಾಲ್ ಮೂಲಕವೇ ಲಿಫ್ಟ್ನ ತಾಂತ್ರಿಕ ಅಂಶಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ತಂತ್ರಜ್ಞರ ಮಾರ್ಗದರ್ಶನದಂತೆ ಹಂತ-ಹಂತವಾಗಿ ಕಾರ್ಯನಿರ್ವಹಿಸಿ ಲಿಫ್ಟ್ ನಲ್ಲಿದ್ದ ಇಬ್ಬರು ಮುಖಂಡರನ್ನು ಸುರಕ್ಷಿತವಾಗಿ ಹೊರತರಲಾಯಿತು.
ಸುಮಾರು 20 ನಿಮಿಷಗಳ ಕಾಲ ಲಿಫ್ಟ್ನಲ್ಲೇ ಸಿಲುಕಿದ್ದರೂ ಇಬ್ಬರೂ ಮುಖಂಡರು ಯಾವುದೇ ರೀತಿಯ ಭಯ ಅಥವಾ ಆತಂಕಕ್ಕೆ ಒಳಗಾಗಲಿಲ್ಲ. ಬದಲಿಗೆ ಫೋನ್ ಸಂಪರ್ಕದ ಮೂಲಕ ಹೊರಗಿದ್ದವರೊಂದಿಗೆ ಮಾತನಾಡುತ್ತಾ ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸಿದರು. ಮುಖಂಡರು ಸುರಕ್ಷಿತವಾಗಿ ಹೊರಬರುತ್ತಿದ್ದಂತೆ ಸ್ಥಳದಲ್ಲಿದ್ದ ಕಾರ್ಯಕರ್ತರು ಹಾಗೂ ಆಡಳಿತ ಮಂಡಳಿ ನಿಟ್ಟುಸಿರು ಬಿಟ್ಟರು.