ಡಿಕೆಶಿ ಪ್ರಮಾಣವಚನಕ್ಕೆ ದೊಡ್ಡಾಲಹಳ್ಳಿಯ ಮಕ್ಕಳು!

ಕನಕಪುರ ದೊಡ್ಡಆಲಹಳ್ಳಿ ಪಬ್ಲಿಕ್​ ಶಾಲೆ ಮಕ್ಕಳನ್ನು ಮುಖ್ಯಮಂತ್ರಿ ಪದಗ್ರಹಣ ಸಮಾರಂಭದಲ್ಲಿ ಕರೆದೊಯ್ದಿರುವುದು.
ಕನಕಪುರ ದೊಡ್ಡಆಲಹಳ್ಳಿ ಪಬ್ಲಿಕ್​ ಶಾಲೆ ಮಕ್ಕಳನ್ನು ಮುಖ್ಯಮಂತ್ರಿ ಪದಗ್ರಹಣ ಸಮಾರಂಭದಲ್ಲಿ ಕರೆದೊಯ್ದಿರುವುದು.
Published on
ಕನಕಪುರ: ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್​ ಪದಗ್ರಹಣ ಹಿನ್ನೆಯಲ್ಲಿ ಬುಧವಾರ ಹುಟ್ಟೂರು ದೊಡ್ಡಆಲಹಳ್ಳಿಯಲ್ಲಿ ಮಾತ್ರವಲ್ಲದೆ ನಗರದಲ್ಲಿಯೂ ಸಂಭ್ರಮದ ವಾತಾವರಣ ಕಳೆಗಟ್ಟಿದೆ. ದೊಡ್ಡಆಲಹಳ್ಳಿಯ 10 ವಿದ್ಯಾರ್ಥಿಗಳಿಗೆ ಸಿಎಂ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದ್ದು ವಿಶೇಷವಾಗಿತ್ತು.
ಹೌದು, ಕರ್ನಾಟಕ ಪಬ್ಲಿಕ್​ ಶಾಲೆಯ ಐವರು ವಿದ್ಯಾರ್ಥಿನಿಯರು ಹಾಗೂ ಐವರು ವಿದ್ಯಾರ್ಥಿಗಳನ್ನು ಪದಗ್ರಹಣ ಸಮಾರಂಭಕ್ಕೆ ಕರೆದುಕೊಂಡು ಹೋಗುವ ಮೂಲಕ ಡಿಕೆಶಿ ಹುಟ್ಟೂರಿಗೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಪದಗ್ರಹಣದ ಕ್ಷಣ ಕಣ್ತುಂಬಿಸಿಕೊಳ್ಳುವ ಅವಕಾಶ ಕಲ್ಪಿಸಲಾಗಿತ್ತು.
ಈ ಐತಿಹಾಸಿಕ ಕ್ಷಣ ಕಣ್ತುಂಬಿಸಿಕೊಳ್ಳಲು ಕಾತರರಾಗಿ ಸಾವಿರಾರು ಕಾರ್ಯಕರ್ತರು 70ಕ್ಕೂ ಹೆಚ್ಚು ಬಸ್​, ಕಾರು ಇತರ ವಾಹನಗಳಲ್ಲಿ ಬೆಂಗಳೂರಿಗೆ ತೆರಳಿದರು. ಹುಟ್ಟೂರು ದೊಡ್ಡಆಲಹಳ್ಳಿಯಲ್ಲಿ 50 ಅಡಿ ಎತ್ತರದ ಬೃಹತ್​ ಕಟೌಟ್​ ಸೇರಿ ರಸ್ತೆಯುದ್ದಕ್ಕೂ ಬ್ಯಾನರ್​ಗಳನ್ನು ಹಾಕಲಾಗಿತ್ತು. ದೊಡ್ಡಆಲಹಳ್ಳಿ ಮಾರಮ್ಮ ದೇವಾಲಯ, ಕಪನಿಗೌಡನದೊಡ್ಡಿ ಗ್ರಾಮದ ಮಹದೇಶ್ವರ, ಬಸವೇಶ್ವರ ಸ್ವಾಮಿ ಸೇರಿದಂತೆ ಸಾತನೂರು, ಕೋಡಿಹಳ್ಳಿ, ಉಯ್ಯಂಬಳ್ಳಿ ಗ್ರಾಮಗಳಲ್ಲೂ ಕಾರ್ಯಕರ್ತರು ಪೂಜೆ ಸಲ್ಲಿಸಿ ಸಿಹಿ ಹಂಚಿದರು.
ಟ್ರಸ್ಟಿಗಳಾದ ಕಾಂತರಾಜು, ಮರಿಯಣ್ಣ, ಮಾತನಾಡಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರಿಗೆ ಆರೋಗ್ಯ ಹಾಗೂ ಅಧಿಕಾರ ನಡೆಸಲು ಹೆಚ್ಚಿನ ಶಕ್ತಿ ತುಂಬುವಂತೆ ವಿಶೇಷ ಪೂಜೆ ನಡೆಸಲಾಗಿದೆ ಎಂದರು. ಈ ವೇಳೆ ಸಹಸ್ರಾರು ಜನರಿಗೆ ಅನ್ನಸಂತರ್ಪಣೆ ನೆರವೇರಿಸಲಾಗಿತ್ತು. ಪುರಸಭೆ ಮಾಜಿ ಅಧ್ಯಕ್ಷ ಎಂ.ಮಂಜುನಾಥ್​, ಧರ್ಮದರ್ಶಿಗಳಾದ ನಾಗರಾಜು, ಜಗದೀಶ್​, ಪಂಪಸ್ವಾಮಿ, ರಂಗಣ್ಣ ಸ್ವಾಮಿ ನೂತನ ಸಿಎಂಗೆ ಶುಭ ಕೋರಿದರು.
ಮನೆ ದೇವತೆಗೆ ಪೂಜೆ
ಡಿ.ಕೆ.ಶಿವಕುಮಾರ್​ ಮನೆ ದೇವತೆ ನಗರದ ಕೆಂಕೇರಮ್ಮ ದೇವಾಲಯದಲ್ಲಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು, ಪದಾಧಿಕಾರಿಗಳು, ಅರುಣೋದಯಕ್ಕೂ ಮುನ್ನವೇ ದೇವಿಗೆ ಅಭಿಷೇಕ, ಅಲಂಕಾರ, ವಿಶೇಷ ಪೂಜೆ ಪುನಸ್ಕಾರ, ಅಲಂಕಾರ ನೆರವೇರಿಸಿ, ಪ್ರಸಾದ ವಿತರಿಸಿದರು.
ಮಾದರಿ ತಾಲೂಕು
ಪ್ರಾಧಿಕಾರದ ಕೆಂಕೇರಮ್ಮ ಟ್ರಸ್ಟ್​ ಸೇವಾ ಸಮಿತಿ ಹಿರಿಯ ಮುಖಂಡ ಆರ್​. ಕೃಷ್ಣಮುರ್ತಿ ಹಾಗೂ ಅಧ್ಯಕ್ಷ ಚಿಕ್ಕಲಿಂಗಣ್ಣ ಮಾತನಾಡಿ, ಡಿ.ಕೆ.ಶಿವಕುಮಾರ್​ ಶಾಸಕರಾಗಿ, ಸಚಿವರಾಗಿ, ತಾಲೂಕಿಗೆ ಶೇ. 80 ಮೂಲ ಸೌಲಭ್ಯ ಒದಗಿಸುವ ಮೂಲಕ ಮಾದರಿ ತಾಲೂಕನ್ನಾಗಿ ಮಾಡಿದ್ದಾರೆ. ಮುಖ್ಯಮಂತ್ರಿಯಾಗಿ ರಾಜ್ಯದ ಎಲ್ಲ ಹಳ್ಳಿಗಳ ಅಭಿವೃದ್ಧಿಗೆ ಒತ್ತು ನೀಡಲಿದ್ದಾರೆ. ಅವರಿಗೆ ಆರೋಗ್ಯ ಮತ್ತು ಆಡಳಿತ ನಡೆಸಲು ಹೆಚ್ಚಿನ ಶಕ್ತಿ ನೀಡಲೆಂದು ಅವರ ಮನೆ ದೇವತೆಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದರು.
ಉಪಾಧ್ಯಕ್ಷ ರಮೇಶ್​, ಕಾರ್ಯದರ್ಶಿ ಮಹದೇವ್​, ಖಜಾಂಚಿ ಶಂಕರ್​, ಟ್ರಸ್ಟಿಗಳಾದ ಕೃಷ್ಣಪ್ಪ, ಮುದ್ದಹನುಮಯ್ಯ, ಚಿಕ್ಕಭೈರೇಗೌಡ, ನಂಜುಂಡಪ್ಪ, ವೆಂಕಟರಮಣ, ಚನ್ನಕೇಶವ, ಸುರೇಶ್​, ಶ್ರೀನಿವಾಸ್​ ಇದ್ದರು.
ಅನ್ನಸಂತರ್ಪಣೆ
ನಗರದ ಪೇಟೆಕೆರೆ ಬಳಿ ಇರುವ ಅಯ್ಯಪ್ಪಸ್ವಾಮಿ, ದೇವಸ್ಥಾನ ಟ್ರಸ್ಟ್​ ಹಾಗೂ ಶ್ರೀ ಅಚ್ಚುತ ಗುರುಸ್ವಾಮಿ ಶಿಷ್ಯ ವೃಂದದ ವತಿಯಿಂದ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಅರ್ಚಕ ರಮೇಶ್​ ತಂಡದಿಂದ ವಿಶೇಷ ಪೂಜೆ, ಅಭಿಷೇಕ, ಅಲಂಕಾರ ನೆರವೇರಿಸಲಾಗಿತ್ತು.
ಎಲ್​ಇಡಿ ವ್ಯವಸ್ಥೆ
ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಡಿ.ಕೆ. ಶಿವಕುಮಾರ್​ ಕಾರ್ಯಕ್ರಮದ ನೇರಪ್ರಸಾರವನ್ನು ಎಲ್​.ಇ.ಡಿ. ಮೂಲಕ ಸಾರ್ವಜನಿಕರು ವೀಸಿದರು. ನಗರದ ಚೆನ್ನಬಸಪ್ಪ ವೃತ್ತದ ಬಳಿ ತಾಲೂಕು ಕಾಂಗ್ರೆಸ್​ ವತಿಯಿಂದ ಡಿ.ಕೆ. ಶಿವಕುಮಾರ್​ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಕಾರ್ಯಕ್ರಮವನ್ನು ನೇರವಾಗಿ ವೀಸಲು ಎಲ್​.ಇ.ಡಿ.ವ್ಯವಸ್ಥೆ ಮಾಡಲಾಗಿತ್ತು. ಪ್ರಮಾಣವಚನ ಕಾರ್ಯಕ್ರಮದ ನೇರ ಪ್ರಸಾರವನ್ನು ನೂರಾರು ಕಾರ್ಯಕರ್ತರು ಹಾಗೂ ಸಾರ್ವಜನಿಕರು ವೀಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net