ಚಂದೂರಾಯ ಆಳಿದ ಚಂದೂರಾಯನಹಳ್ಳಿ

ಚಂದೂರಾಯನಹಳ್ಳಿಯಲ್ಲಿ ಪತ್ತೆಯಾದ ವೀರಗಲ್ಲುಗಳು.
ಚಂದೂರಾಯನಹಳ್ಳಿಯಲ್ಲಿ ಪತ್ತೆಯಾದ ವೀರಗಲ್ಲುಗಳು.
Published on

ಪ್ರಮುಖ ಮುಖ್ಯಾಂಶಗಳು

  • ಕೆಂಪೇಗೌಡರ ಕಾಲದಿಂದಲೂ ಗುರುತಿಸಿಕೊಂಡ ಗ್ರಾಮ
  • ಮಾಗಡಿ ತಾಲೂಕಿನ ಪುಟ್ಟ ಗ್ರಾಮ
  • ಸಾಧನೆಯಲ್ಲಿ ಅಪ್ರತಿಮ ಊರು
ಮಾಗಡಿ
ತಾಲೂಕು ಕೇಂದ್ರಕ್ಕೆ ಕೂಗಳತೆ ದೂರದಲ್ಲಿರುವ ಚಂದೂರಾಯನಹಳ್ಳಿ ಕೆಂಪೇಗೌಡರ ಕಾಲದಿಂದಲೂ ದೇವಗಣ ಬೀಡಾಗಿ ತನ್ನದೇ ಸೊಗಡನ್ನು ಉಳಿಸಿಕೊಂಡಿದೆ.
ಮಾಗಡಿಯಿಂದ 3 ಕಿಮೀ ಅಂತರದಲ್ಲಿರುವ ಈ ಚಂದೂರಾಯನಹಳ್ಳಿಯಲ್ಲಿ ಚಂದೂರಾಯ ಎಂಬುವರು ಆಳ್ವಿಕೆ ನಡೆಸುತ್ತಿದ್ದ ಕಾರಣ ಗ್ರಾಮಕ್ಕೆ ಈ ಹೆಸರು ಬಂದಿದೆ ಎನ್ನಲಾಗುತ್ತದೆ. ಇಲ್ಲಿ 150ಕ್ಕೂ ಹೆಚ್ಚು ಮನೆಗಳಿವೆ. ಪರಿಶಿಷ್ಟ ಜಾತಿ, ಪಂಗಡ, ವೀರಶೈವ, ಭಜಂತ್ರಿ, ಯಾದವ, ಒಕ್ಕಲಿಗ, ಮರಾಠಿ, ಭೋವಿ... ಹೀಗೆ ಹಲವು ಸಮುದಾಯಗಳು ಸೇರಿ 500ಕ್ಕೂ ಹೆಚ್ಚು ಜನಸಂಖ್ಯೆ, ಈ ಪೈಕಿ 420ಕ್ಕೂ ಅಧಿಕ ಮಂದಿ ಮತದಾನ ಹಕ್ಕು ಹೊಂದಿದ್ದಾರೆ. ಗ್ರಾಮದ ಬಹುತೇಕರು ಕೃಷಿಕರೇ ಆಗಿದ್ದು, ಶಿಕ್ಷಕ, ಆರೋಗ್ಯ ಇಲಾಖೆ ಸೇರಿ ವಿವಿಧ ಇಲಾಖೆಗಳಲ್ಲಿ 30ಕ್ಕೂ ಅಧಿಕ ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತರರು ಪಶುಸಂಗೋಪನೆ, ಹೂವು, ಹಣ್ಣು, ತೆಂಗು, ಅಡಕೆ, ಮಾವಿನಂತಹ ವಾಣಿಜ್ಯ ಬೆಳೆ ಬೆಳೆದು ಆದಾಯ ಕಂಡುಕೊಂಡಿದ್ದಾರೆ.
ರಾಜಕೀಯವಾಗಿಯೂ ಗ್ರಾಮ ಅಸ್ತಿತ್ವ ಉಳಿಸಿಕೊಂಡಿದ್ದು, ಗ್ರಾಮದ ನಾರಾಯಣಪ್ಪ ಹಾಗೂ ಕಾಲನಿಯ ಜಿ.ಕೃಷ್ಣ ಅವರು ತಾಪಂ ಅಧ್ಯಕ್ಷರಾಗಿ, ಸಾಕಷ್ಟು ಕೊಡುಗೆ ನೀಡಿದ್ದಾರೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಅಂಗನವಾಡಿ ಕೇಂದ್ರ, ಹಾಲಿನ ಡೇರಿ, ಕಲ್ಯಾಣ ಮಂಟಪ ಇದೆ. ಶುದ್ಧ ಕುಡಿಯುವ ನೀರಿನ ಘಟಕವೂ ಇದೆ. ಇನ್ನು ಗ್ರಾಮದ ಮಧ್ಯೆ ಮಾಗಡಿ-ಕುಣಿಗಲ್ ರಸ್ತೆ ಹಾದುಹೋಗಿರುವ ಕಾರಣ ಉತ್ತಮ ಸಾರಿಗೆ ಸಂಪರ್ಕ ಹೊಂದಿದೆ.

ಸಾಮರಸ್ಯದ ಬದುಕು

ಗ್ರಾಮದಲ್ಲಿ ಬಸವಣ್ಣ ದೇವಾಲಯ, ಗ್ರಾಮದೇವತೆ ಯಲ್ಲಮ್ಮ, ಅಭಯ ಆಂಜನೇಯ ದೇವಾಲಯ, ಭೋವಿ ಜನಾಂಗದ ಕುಲದೇವತೆ ಮಾಸ್ತಮ್ಮ ದೇವಾಲಯವಿದೆ. ಗ್ರಾಮಕ್ಕೆ ಹೊಂದಿಕೊಂಡಂತೆ ಜನತಾ ಕಾಲನಿ, ಸಿದ್ದಗಂಗಯ್ಯನ ಪಾಳ್ಯ ಇದೆ. ಪ್ರತಿ ವರ್ಷ ಎಲ್ಲ ದೇವರ ಜಾತ್ರಾ ಮಹೋತ್ಸವ ಹಾಗೂ ಹಬ್ಬಗಳಲ್ಲಿ ಸಾಮರಸ್ಯ, ಒಗ್ಗಟ್ಟಿನಿಂದ ಪಾಲ್ಗೊಳ್ಳುವ ಗ್ರಾಮಸ್ಥರು ಸಣ್ಣಪುಟ್ಟ ವ್ಯಾಜ್ಯಗಳು ನಡೆದರೆ ಕೋರ್ಟು, ಕಚೇರಿ, ಪೊಲೀಸ್ ಠಾಣೆ ಎನ್ನದೇ ಹಿರಿಯರ ಸಮ್ಮುಖದಲ್ಲಿ ನ್ಯಾಯ ಪಂಚಾಯಿತಿ ಮೂಲಕ ಇತ್ಯರ್ಥ ಪಡಿಸಿಕೊಳ್ಳುತ್ತಾರೆ.

ಅಪಘಾತಗಳಿಗೆ ಕಡಿವಾಣ, ಕಾಯಿಲೆಯೂ ವಾಸಿ

ಪಟ್ಟಣದಿಂದ ಗ್ರಾಮಕ್ಕೆ ತೆರಳುವ ಮುನ್ನ ಮೆರವಣಿಗೆ ಗ್ರಾಮದೇವತೆ ದೇವಾಲಯ ಇದೆ. ಈ ಹಿಂದೆ ಮಾಗಡಿ-ಕುಣಿಗಲ್ ಕೆಶಿಪ್ ರಸ್ತೆ ವಿಸ್ತರಣೆ ಕಾರಣ ದೇವಾಲಯವನ್ನು ತೆರವುಗೊಳಿಸಲಾಗಿತ್ತು. ನಂತರ ರಸ್ತೆಯಲ್ಲಿ ಸಾಕಷ್ಟು ಅಪಘಾತಗಳು ಸಂಭಂವಿಸುತ್ತಿದ್ದವು. ಪರಿಣಾಮ ಗ್ರಾಮಸ್ಥರೆಲ್ಲರೂ ಸೇರಿ ಹಳೆಯ ದೇವಾಲಯದ ಸಮೀಪ ಬಯಲ್ಲಿನಲ್ಲಿ ದೇವರನ್ನು ಪ್ರತಿಷ್ಠಾಪಿಸಿ, ಪೂಜಿಸಲು ಆರಂಭಿಸಿದರು. ಬಳಿಕ ಅಪಘಾತಗಳು ಕಡಿಮೆಯಾಗಿವೆ ಎಂಬುದು ಸ್ಥಳೀಯರ ನಂಬಿಕೆ.
ಹಾಗೆಯೇ ಗ್ರಾಮದ ಒಳಭಾಗದಲ್ಲಿನ ಯಲ್ಲಮ್ಮ ದೇವಾಲಯದ ಬಳಿ ಕರಿಕಲ್ಲು ಇದ್ದು, ಜನ, ಜಾನುವಾರು ಕಾಯಿಲೆ ಬಿದ್ದರೆ ಕರಿಕಲ್ಲಿಗೆ ಮೊಸರು, ಅನ್ನ ನೈವೇದ್ಯ ಸಮರ್ಪಿಸಿ, ಪೂಜೆ ಸಲ್ಲಿಸಿದರೆ ಕಾಯಿಲೆ ವಾಸಿಯಾಗಲಿದೆ ಎನ್ನುತ್ತಾರೆ ಗ್ರಾಮಸ್ಥರು.

ಕೆರೆಯೆ ಜಲಾಧಾರ

ಗ್ರಾಮಕ್ಕೆ ಹೊಂದಿಕೊಂಡಂತೆ ಕೆರೆ ಇದ್ದು, ಕಳೆದ ಎರಡು ವರ್ಷದಿಂದ ತುಂಬಿದ ಕೆರೆ ಹಾಗೇ ಇದೆ. ಪರಿಣಾಮ ಈ ಭಾಗದಲ್ಲಿ ಅಂತರ್ಜಲ ವೃದ್ಧಿಯಾಗಿದ್ದು, ರೈತರ ಕೊಳವೆಬಾವಿಗಳಲ್ಲಿ ವರ್ಷ ಪೂರ್ತಿ ನೀರು ಲಭ್ಯವಾಗುತ್ತಿದೆ. ಸಾವಿರಾರು ರೈತರು ಕೆರೆಯನ್ನೇ ನಂಬಿ ವ್ಯವಸಾಯ ಮಾಡುತ್ತಾರೆ.

ಕೃಷಿ ವಿಜ್ಞಾನ ಕೇಂದ್ರ

ಗ್ರಾಮದ ಬಳಿ ಕೃಷಿ ವಿಜ್ಞಾನ ಕೇಂದ್ರವಿದ್ದು, ಇಲ್ಲಿನ ಹಿರಿಯ ವಿಜ್ಞಾನಿಗಳು, ಮಣ್ಣು ವಿಜ್ಞಾನಿಗಳು ಕೃಷಿಗೆ ಸಂಬಂಧಿಸಿದಂತೆ ಸಂಶೋಧನೆ, ಜಿಲ್ಲೆಯ ರೈತರ ಮಕ್ಕಳಿಗೆ ಕೃಷಿ ಕುರಿತು ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳುತ್ತಾರೆ. ಬೆಳೆಗಳಿಗೆ ಸೊಂಕು, ಕೀಟಬಾಧೆ ಉಂಟಾದಾಗ ಬೆಳೆಗಳನ್ನು ಪರೀಕ್ಷಿಸಿ, ಪರಿಹಾರ ನೀಡುತ್ತಾರೆ. ಪ್ರತಿ ನಿತ್ಯ ಒಂದಲ್ಲ ಒಂದು ತರಬೇತಿ ಕಾರ್ಯಾಗಾರಗಳು ಆಯೋಜನೆಗೊಳ್ಳುತ್ತಿರುತ್ತವೆ.

ಐತಿಹಾಸಿಕ ವೀರಗಲ್ಲು

ಗ್ರಾಮದ ಬಳಿ 3 ವೀರಗಲ್ಲುಗಳಿವೆ. ಒಂದರಲ್ಲಿ ಯುದ್ಧಮಾಡುವ ಚಿತ್ರಣ, ಇನ್ನೊಂದರಲ್ಲಿ ಪೂಜೆ ಸಲ್ಲಿಸುವ, ಮತ್ತೊಂದರಲ್ಲಿ ಮಹಿಳೆಯೊಂದಿಗೆ ಇಬ್ಬರು ಪುರುಷರು ನಡೆಯುತ್ತಿರುವ ಚಿತ್ರಣವಿದೆ. ಇವುಗಳು ಕೆಂಪೇಗೌಡರ ಕಾಲದವು ಎನ್ನಲಾಗಿದ್ದು, ಗ್ರಾಮದ ಕೆಲವರು ವೀರಗಲ್ಲುಗಳಿಗೆ ನಿತ್ಯ ಪೂಜೆ ಸಲ್ಲಿಸುತ್ತಾರೆ. ಇವುಗಳನ್ನು ರಕ್ಷಿಸಿ ಜೀರ್ಣೋದ್ಧಾಗೊಳಿಸಬೇಕಿದೆ ಎಂಬುದು ಸ್ಥಳಿಯರ ಒತ್ತಾಯ.
ಸ್ವಚ್ಛತೆಗೆ ಒತ್ತು ನೀಡಿ
ಗ್ರಾಮದ ಚರಂಡಿಗಳು ಸ್ವಚ್ಛತೆ ಕಾಣದೆ ಗಬ್ಬುನಾರುತ್ತಿವೆ. ಕೆಲವೆಡೆ ಸತ್ತೆ(ಕಳೆ) ಬೆಳೆದು ಚರಂಡಿಗಳೇ ಕಾಣದಂತಹ ಪರಿಸ್ಥಿತಿ ಇದೆ. ರಾತ್ರಿ ವೇಳೆ ಮಕ್ಕಳು, ವಯೋವೃದ್ಧರು ಚರಂಡಿ ಪಕ್ಕ ನಡೆದುಕೊಂಡು ಹೋಗುವಾಗ ಆಯಾತಪ್ಪಿದರೆ ಶಿವನೇ ಬಲ್ಲ. ಕಲ್ಯ ಗ್ರಾಪಂ ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆ.

ನಾಡಪ್ರಭು ಕೆಂಪೇಗೌಡರ ಕಾಲದ ಚಂದೂರಾಯನಹಳ್ಳಿ ಪಟ್ಟಣಕ್ಕೆ ಹೊಂದಿಕೊಂಡಿದ್ದು, ಗ್ರಾಮವನ್ನು ಪುರಸಭೆ ವ್ಯಾಪ್ತಿಗೆ ಸೇರಿಸಿಕೊಂಡು ಮತಷ್ಟು ಅಭಿವೃದ್ಧಿಗೊಳಿಸಬೇಕಿದೆ.

ನಾರಾಯಣಪ್ಪಗ್ರಾಮದ ನಿವಾಸಿ, ತಾಪಂ ಮಾಜಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net