29ರಿಂದ ಅವ್ವೇರಹಳ್ಳಿ ಜಾತ್ರೆ

 ಶ್ರೀ ರೇವಣ್ಣಸಿದ್ದೇಶ್ವರಸ್ವಾಮಿ ಬೆಟ್ಟ
ಶ್ರೀ ರೇವಣ್ಣಸಿದ್ದೇಶ್ವರಸ್ವಾಮಿ ಬೆಟ್ಟ
Published on

ಪ್ರಮುಖ ಮುಖ್ಯಾಂಶಗಳು

  • 29ರಿಂದ ಅವ್ವೇರಹಳ್ಳಿ ಜಾತ್ರೆ
ರಾಮನಗರ: ತಾಲೂಕು ಕೈಲಾಂಚ ಹೋಬಳಿ, ಅವ್ವೇರಹಳ್ಳಿ ಗ್ರಾಮದ ಶ್ರೀ ರೇವಣ್ಣಸಿದ್ದೇಶ್ವರಸ್ವಾಮಿ ದೇವಸ್ಥಾನದ 2026ನೇ ಸಾಲಿನ ಜಾತ್ರಾ/ಬ್ರಹ್ಮರಥೋತ್ಸವ ಕಾರ್ಯಕ್ರಮಗಳು ಏ.29ರಿಂದ ಮೇ 3ರವರೆಗೆ ನಡೆಯಲಿದ್ದು, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಜಾತ್ರಾ ಮಹೋತ್ಸವಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಕಚೇರಿ ಸಹಾಯಕಿ ಡಾ.ಪ್ರತಿಭಾ ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಾತ್ರೆ ನಡೆಯಲಿರುವ ದಿನಗಳಲ್ಲಿ ನಿರಂತರ ವಿದ್ಯುತ್ ಸರಬರಾಜು ವ್ಯವಸ್ಥೆ ಮಾಡಬೇಕು ಎಂದು ಬೆಸ್ಕಾಂ ಇಲಾಖೆಯವರಿಗೆ, ಸುಸಜ್ಜಿತ ಅಗ್ನಿಶಾಮಕ ವಾಹನದ ವ್ಯವಸ್ಥೆ ಕಲ್ಪಿಸಲು ಅಗ್ನಿಶಾಮಕ ಇಲಾಖೆಯವರಿಗೆ ಹಾಗೂ ರಥ ಸಾಗುವ ಹಾದಿಯಲ್ಲಿ ಬೀಳುವ ಸ್ಥಿತಿಯಲ್ಲಿರುವ ಮರಗಳನ್ನು ಹಾಗೂ ರಥಕ್ಕೆ ಅಡ್ಡ ಬರುವಂತಹ ಮರಗಳ ರೆಂಬೆ-ಕೊಂಬೆಗಳನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆಯವರಿಗೆ ಸೂಚಿಸಿದರು.
ಜಾತ್ರಾ ಕಾಲದಲ್ಲಿ ಸೇರುವ ವಾಹನಗಳಿಗೆ ಪಾಕಿರ್ಂಗ್ ವ್ಯವಸ್ಥೆ ಮಾಡಬೇಕು, ರಥೋತ್ಸವಕ್ಕೆ ಹೆಚ್ಚಿನ ಜನಸಂದಣಿ ಸೇರುವ ನಿರೀಕ್ಷೆಯಿದ್ದು, ನೂಕುನುಗ್ಗಲು ಉಂಟಾಗದಂತೆ ಜನರು ಸರತಿಸಾಲಿನಲ್ಲಿ ಹೋಗಲು ಅನುವು ಮಾಡಿಕೊಟ್ಟು ಮುನ್ನೆಚ್ಚರಿಕಾ ಕ್ರಮವಾಗಿ ಬ್ಯಾರಿಕೇಡ್ ವ್ಯವಸ್ಥೆ ಹಾಗೂ ಬಿಗಿಬಂದೋಬಸ್ತ್ ಮಾಡಬೇಕು ಎಂದು ಆರಕ್ಷಕ ಇಲಾಖೆ ಅಧಿಕಾರಿಗೆ ತಿಳಿಸಿದರು.
ಅರವಟಿಕೆಗಳಲ್ಲಿ ಪ್ರಸಾದ ವಿತರಣೆ ಮತ್ತು ಅನ್ನದಾನ ನಡೆಯುವ ಸ್ಥಳದಲ್ಲಿ ಸುರಕ್ಷತೆ ಪರಿಶೀಲಿಸಿ ಸ್ವಚ್ಛತೆ ಕಾಪಾಡಲು ಹಾಗೂ ತಾತ್ಕಾಲಿಕ ವೈದ್ಯಕೀಯ ಶಿಬಿರ ಸ್ಥಾಪಿಸಲು ಮತ್ತು 108 ಆಂಬುಲೆನ್ಸ್ ವ್ಯವಸ್ಥೆ ಮಾಡಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಜಾತ್ರಾ ಪ್ರಯುಕ್ತ ದೇವಸ್ಥಾನದ ಆವರಣದಲ್ಲಿರುವ ಬೀದಿ ದೀಪಗಳನ್ನು ರಿಪೇರಿ ಮಾಡಿಸಲು ಮತ್ತು ಕುಡಿಯುವ ನೀರು ವ್ಯವಸ್ಥೆ ಕಲ್ಪಿಸುವಂತೆ, ಜಾತ್ರಾ ಮೈದಾನ ಸ್ವಚ್ಛತೆ ಕಾಪಾಡುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಇಲಾಖೆ ಅಧಿಕಾರಿಗೆ ಸೂಚಿಸಿದರು.
ಧಾರ್ಮಿಕ ದತ್ತಿ ಇಲಾಖೆಯಿಂದ ಜಾತ್ರಾ ಪ್ರಯುಕ್ತ ದೇವಸ್ಥಾನಕ್ಕೆ ಮತ್ತು ಜಾತ್ರಾಮೈದಾನಕ್ಕೆ ವಿಶೇಷ ವಿದ್ಯುತ್ ದೀಪಾಲಂಕಾರ ಮತ್ತು ದೇವಸ್ಥಾನಕ್ಕೆ ಹೂವಿನ ಅಲಂಕಾರ ಮಾಡಬೇಕು ಎಂದರು. ಜಾತ್ರಾ ಪ್ರಯುಕ್ತ ಹೆಚ್ಚುವರಿ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ರಾಮನಗರದ ಕೆ.ಎಸ್.ಆರ್.ಟಿ.ಸಿ ಇಲಾಖೆ ಅಧಿಕಾರಿಗೆ ನಿರ್ದೇಶಿಸಿದರು.
ಶ್ರೀ ರೇವಣ್ಣಸಿದ್ದೇಶ್ವರಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಮೇಶ್, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದತ್ತಿಗಳ ಇಲಾಖೆಯ ತಹಸೀಲ್ದಾರ್ ರಮ್ಯಾ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು, ಸಮಿತಿ ಸದಸ್ಯರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net