ಗ್ರಾಮಗಳೇ ಗಾಂಜಾ ಪೆಡ್ಲರ್​ಗಳ ಹಾಟ್​ಸ್ಪಾಟ್​?

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮಾಗಡಿ: ಶಾಂತಿಯುತವಾಗಿದ್ದ ಹಳ್ಳಿಗಳೇ ಈಗ ಗಾಂಜಾ ಪೆಡ್ಲರ್​ಗಳ ಹಾಟ್​ಸ್ಪಾಟ್​ ಆಗುತ್ತಿದ್ದಾವೆಯೇ? ಹೌದು ಎನ್ನುತ್ತಿವೆ ಇತ್ತೀಚಿನ ವಿದ್ಯಮಾನ...
ತಗ್ಗೀಕುಪ್ಪೆ ಗ್ರಾಮದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಬೆಂಗಳೂರು ಮೂಲದ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿರುವುದು ಇಂಥಹದ್ದೊಂದು ಅನುಮಾನ ಬರಲು ಕಾರಣವಾಗಿದೆ.
ಗಾಂಜಾ ಮಾರಾಟ ಮಾಡಿದ ಆರೋಪದ ಮೇಲೆ ಬೆಂಗಳೂರಿನ ಬ್ಯಾಡರಹಳ್ಳಿ ಸಮೀಪದ ಹೀರೋಹಳ್ಳಿ ನಿವಾಸಿಗಳಾದ ವಸಂತ ಕುಮಾರ್​ (30) ಮತ್ತು ವಿಜಯ್​ (27) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಇವರು ವಾರಕ್ಕೊಮ್ಮೆ ತಗ್ಗೀಕುಪ್ಪೆ ಗ್ರಾಮಕ್ಕೆ ಬಂದು, ಸ್ಥಳಿಯ ಯುವಕರ ಸ್ನೇಹಗಳಿಸಿ ಅವರಿಗೆ ಗಾಂಜಾ ಸರಬರಾಜು ಮಾಡುತ್ತಿದ್ದರು. ಮಾಲು ಸಮೇತ ಮಾರಾಟ ಮಾಡುವ ವೇಳೆ ಮಾಗಡಿ ಪೊಲೀಸ್​ ಇನ್​ಸ್ಪೆಕ್ಟರ್​ ಶ್ರೀನಿವಾಸ್​ ನೇತೃತ್ವದ ತಂಡ ದಾಳಿ ನಡೆಸಿ, 210 ಗ್ರಾಂ ಗಾಂಜಾ ಜಪ್ತಿ ಮಾಡಿದೆ. ಮಾಗಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇವಲ ಇಬ್ಬರು ಸಣ್ಣ ಪುಟ್ಟ ಪೆಡ್ಲರ್​ಗಳನ್ನು ಬಂಧಿಸಿದರೆ ಸಾಕೇ? ಈ ಜಾಲದ ಮೂಲ ಎಲ್ಲಿದೆ ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ತೀವ್ರವಾಗಿ ಕೇಳಿಬರುತ್ತಿದೆ.
ಕಣ್ಣು ಮುಚ್ಚಿ ಕುಳಿತಿದೆಯೇ ಅಬಕಾರಿ&ಪೊಲೀಸ್​ ಇಲಾಖೆ?
ಬೆಂಗಳೂರಿನಿಂದ ಹಳ್ಳಿಗಳವರೆಗೆ ಇಷ್ಟೊಂದು ಮುಕ್ತವಾಗಿ ಗಾಂಜಾ ತಲುಪುತ್ತಿದೆ ಎಂದರೆ ಅಧಿಕಾರಿಗಳ ಹದ್ದಿನ ಕಣ್ಣು ಎಲ್ಲಿದೆ? ಬೆಂಗಳೂರಿನ ಪೆಡ್ಲರ್​ಗಳು ವಾರಕ್ಕೊಮ್ಮೆ ಬಂದು ಹಳ್ಳಿಯ ಯುವಕರನ್ನು ಮಾದಕ ವ್ಯಸನಕ್ಕೆ ದೂಡುತ್ತಿದ್ದರೂ ಸ್ಥಳಿಯ ಇಲಾಖೆಗೆ ಇದರ ಸುಳಿವೇ ಸಿಗದಿರುವುದು ಅವರ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಾಗಿದೆ. ಪ್ರತಿ ಬಾರಿಯೂ ಕೇವಲ ನೂರು, ಇನ್ನೂರು ಗ್ರಾಂ ಗಾಂಜಾ ಹಿಡಿದವರನ್ನು ಬಂಧಿಸಿ ಕೈತೊಳೆದುಕೊಳ್ಳಲಾಗುತ್ತಿದೆ. ಆದರೆ ಈವರೆಗೆ ಮಾಲು ಸರಬರಾಜು ಮಾಡುವ "ದೊಡ್ಡ ತಿಮಿಂಗಿಲಗಳು' ಯಾರು? ಅವರನ್ನು ಹಿಡಿಯಲು ಇಲಾಖೆ ಹಿಂಜರಿಯುತ್ತಿರುವುದೇಕೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಬಲಾಢ್ಯ ರಾಜಕಾರಣಿಗಳ ಮಕ್ಕಳೇ ಈ ಗಾಂಜಾ ದಂಧೆಯ ಕಿಂಗ್​ಪಿನ್​ಗಳಾಗಿದ್ದು, ಅಂಥಹ ಸಮಾಜ ಘಾತಕರನ್ನು ಸೆರೆಹಿಡಿಯಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆಯೇ ಎಂಬ ಅನುಮಾನ ನಾಗರಿಕರಲ್ಲಿ ಮೂಡಿದೆ.
ಬೇರು ಸಮೇತ ಕಿತ್ತೊಗೆಯಲು ತನಿಖೆ ಚುರುಕು
ಈ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಕೆಲವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತರ ಮೊಬೈಲ್​ ಕರೆಗಳ ವಿವರ ಟ್ರಾ$್ಯಕ್​ ಮಾಡುವ ಮೂಲಕ ಜಾಲದ ಹಿನ್ನೆಲೆಯಲ್ಲಿರುವ ಇತರ ಪ್ರಭಾವಿ ಆರೋಪಿಗಳ ಪತ್ತೆಗೆ ತನಿಖೆ ತೀವ್ರಗೊಳಿಸಲಾಗಿದೆ. ತಾಲೂಕಿನಾದ್ಯಂತ ಶಾಲಾ&ಕಾಲೇಜುಗಳ ಸುತ್ತಮುತ್ತ ಹಾಗೂ ಹಳ್ಳಿಗಳಲ್ಲಿ ಇಲಾಖೆಯು ನಿರಂತರ ನಿಗಾ ಇಡಬೇಕು. ಕೇವಲ ಪ್ರಕರಣ ದಾಖಲಿಸುವುದಷ್ಟೇ ಅಲ್ಲದೆ, ಗಾಂಜಾ ಮುಕ್ತ ಮಾಗಡಿ ಮಾಡಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ವಿದ್ಯಾರ್ಥಿ ಸಂಟನೆಗಳು ಎಚ್ಚರಿಕೆ ನೀಡಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಅರಿವು:
ಯಾವುದೇ ಪ್ರಭಾವಕ್ಕೆ ಪೊಲೀಸರು ಒಳಗಾಗದೆ ಗಾಂಜಾ ಪೊಲೀಗಳನ್ನು ಎಡಮುರಿ ಕಟ್ಟಬೇಕು. ನಮ್ಮ ಮಾಗಡಿ ಗಾಂಜಾ ಮುಕ್ತ ಮಾಗಡಿ ಮಾಡೋಣ ಯುವಕರಲ್ಲಿ ಭವಿಷ್ಯ ಉಳಿಸೋಣ, ಗಾಂಜಾ ಮುಕ್ತ ಸಮಾಜ ಕಟ್ಟೋಣ ಎಂಬ ಪೊಸ್ಟರ್​ಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್​ ಆಗುತ್ತಿದ್ದು, ಈ ಧಂಧೆಗೆ ಕಡಿವಾಣ ಹಾಕಲು ಪೊಲೀಸರು ಸಾಕಷ್ಟು ತಂಡಗಳನ್ನು ರಚಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net