ಬೇಡಿಕೆಗಳ ಈಡೇರಿಕೆಗೆ ಪ್ರತಿಭಟಿಸಿದ ಅಂಗನವಾಡಿ ಕಾರ್ಯಕರ್ತೆಯರು

ರಾಮನಗರ ಜಿಲ್ಲಾ ಪಂಚಾಯತ್ ಭವನದ ಮುಂಭಾಗ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.
ರಾಮನಗರ ಜಿಲ್ಲಾ ಪಂಚಾಯತ್ ಭವನದ ಮುಂಭಾಗ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ವಿವಿಧ ಬೇಡಿಕೆಗಳ ಈಡೇರಿಗಾಗಿ ಪ್ರತಿಭಟನೆ
  • ರಾಮನಗರ ಜಿಲ್ಲಾಧಿಕಾರಿ ಕಚೇರಿಗೆ ಎದುರು ಪ್ರತಿಭಟನೆ
ರಾಮನಗರ : ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಟ ಕೂಲಿ ಹಾಗೂ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲಗೊಂಡಿವೆ ಎಂದು ಆಗ್ರಹಿಸಿ ರಾಮನಗರದ ಜಿಲ್ಲಾ ಪಂಚಾಯತ್ ಭವನದ ಎದುರು ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಶುಕ್ರವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗೆ ಮನವಿ ಪತ್ರ ನೀಡಿ ಪ್ರತಿಭಟನೆ ನಡೆಸಿದರು.
ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ಕರೆನೀಡಿದ್ದ ದೇಶವ್ಯಾಪಿ ಕರಾಳದಿನಾಚರಣೆ ಅಂಗವಾಗಿ ಪ್ರತಿಭಟನೆ ನಡೆಸಿದ ಅಂಗನವಾಡಿ ಕಾರ್ಯಕರ್ತೆಯರು, ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಯುಕೆಜಿ ತರಗತಿಗಳನ್ನು ಪ್ರಾರಂಭಿಸುವ ಮೂಲಕ ಅಂಗನವಾಡಿಗಳನ್ನು ಬಲಹೀನಗೊಳಿಸಲಾಗುತ್ತಿದೆ. ಮತ್ತೊಂದೆಡೆ ಸರ್ಕಾರ ಅಂಗನವಾಡಿಗಳಲ್ಲಿ ಎಲ್‌ಕೆಜಿ ಯುಕೆಜಿ ಆರಂಭಿಸುವುದಾಗಿ ಘೋಷಿಸಿ ಸುಮ್ಮನಾಗಿದೆ. ಅದಕ್ಕೆ ಬೇಕಾಗಿರುವ ಅನುದಾನವನ್ನು ಇನ್ನೂ ಬಿಡುಗಡೆಮಾಡಿಲ್ಲ ಎಂದು ಆರೋಪಿಸಿದರು.
2017ರಿಂದ ಪೌಷ್ಟಿಕ ಆಹಾರಕ್ಕೆ ನೀಡಬೇಕಾಗಿದ್ದ ಘಟಕ ವೆಚ್ಚ ಹೆಚ್ಚಳಮಾಡದೆ ಅಂಗನವಾಡಿ ವ್ಯವಸ್ಥೆಯನ್ನು ದುರ್ಬಲ ಗೊಳಿಸಲಾಗುತ್ತಿದೆ. ಕನಿಷ್ಟ ಕೂಲಿ ನೀಡುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದರೂ ಇನ್ನೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿರು ವೇತನವನ್ನು ಹೆಚ್ಚಳಮಾಡುವುದಾಗಿ ಹೇಳಿತ್ತಾದರೂ ಇನ್ನೂ ಮಾಡಿಲ್ಲ. ಇನ್ನಾದರೂ ಸರ್ಕಾರ ಕೂಡಲೇ ವೇತನ ಹೆಚ್ಚಳ ಮಾಡಬೇಕು ಎಂದು ಪಟ್ಟುಹಿಡಿದರು.

ಅಂಗನವಾಡಿ ಖಾಸಗೀಕರಣಕ್ಕೆ ಯತ್ನ:

ಸರ್ಕಾರ ಕಾರ್ಪೋರೇಟ್ ಹೊಣೆಗಾರಿಕೆ ಹೆಸರಿನಲ್ಲಿ ಕೂಸಿನ ಮನೆಗಳ ಮೂಲಕ ಅಂಗನವಾಡಿಗಳ ಖಾಸಗೀಕರಣಕ್ಕೆ ಮುಂದಾಗಿದ್ದಾರೆ. ಈ ಹಿಂದೆ ನೀಡಲಾಗುತ್ತಿದ್ದ ಸ್ಥಳೀಯ ತಾಜಾ ಆಹಾರದ ಬದಲಿಗೆ ಸಂಸ್ಕರಿಸಿದ ಪ್ಯಾಕೇಟ್ ಆಹಾರ, ನಗದು ವರ್ಗಾವಣೆ, ಕೇಂದ್ರೀಕೃತ ಕಾರ್ಪೋರೇಟ್ ಅಡಿಗೆ ಮನೆಗಳು ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಹೆಸರಿನಲ್ಲಿ ಅಂಗನವಾಡಿಗಳ ಅಸ್ಥಿತ್ವವನ್ನು ಅಲುಗಾಡಿಸಲಾಗುತ್ತಿದೆ. ಕೂಡಲೇ ಇದನ್ನು ನಿಲ್ಲಿಸಿ ಅಂಗನವಾಡಿಗಳನ್ನು ಉಳಿಸಬೇಕು ಎಂದು ಆಗ್ರಹಿಸಿದರು.

ಆನ್‌ಲೈನ್ ಕೆಲಸದ ಕಿರಿಕಿರಿ:

ಎಫ್‌ಆರ್‌ಎಸ್, ಇ ಕೆವೈಸಿ, ಪೋಷಣ್ ಟ್ರಾ÷?ಯಕರ್, ಮೊದಲಾದ ಆನ್‌ಲೈನ್ ಕೆಲಸಗಳನ್ನು ಅಂಗನವಾಡಿ ಕಾರ್ಯಕರ್ತೆಯರಿಂದ ಮಾಡಿಸಲಾಗುತ್ತಿದೆ. ಆದರೆ, ಅಂಗನವಾಡಿ ಕಾರ್ಯಕರ್ತೆಯರಿಗೆ 5ಜಿ ಡಾಟಾ, ಗುಣಮಟ್ಟದ ಮೊಬೈಲ್‌ಗಳನ್ನು ನೀಡೆದ ಹಳೆಯ ವ್ಯವಸ್ಥೆಗಳನ್ನು ಬಳಸಿ ಕೆಲಸ ಮಾಡಿಸಲಾಗುತ್ತಿದೆ. ಇದರಿಂದಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸಮಸ್ಯೆಯಾಗುತ್ತಿದೆ. ಇದರ ಜೊತೆಗೆ ಜನಗಣತಿ, ಮತದಾರರ ಪಟ್ಟಿ ಪರೀಷ್ಕರಣೆ ಸೇರಿದಂತೆ ಹತ್ತು ಹಲವು ಜವಾಬ್ದಾರಿಗಳನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ವಹಿಸುವ ಮೂಲಕ ಅವರ ಕಾರ್ಯಬಾರದ ಒತ್ತಡವನ್ನು ಹೆಚ್ಚಿಸಲಾಗಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಉಪಾಧ್ಯಕ್ಷೆ ವಿ.ಎಸ್.ಶಿವಮ್ಮ, ಪ್ರಧಾನಕಾರ್ಯದರ್ಶಿ ಭಾಗ್ಯಮ್ಮ, ಖಜಾಂಚಿ ಶಾರದಮ್ಮ, ಪ್ರತಿನಿಧಿಗಳಾದ ಭಾಗ್ಯಮ್ಮ, ಬಿ.ಎಚ್.ಲೀಲಾವತಿ, ಪುಷ್ಪ, ಲತಾ, ಸುವರ್ಣಮ್ಮ, ಗೌರಮ್ಮ, ಮೊಹಮ್ಮದ್ ಉನ್ನೀಸಾ, ಶಾಂತಮ್ಮ, ಹೇಮಾವತಿ, ಲಲಿತಾ, ಹನುಮಕ್ಕ, ಯಶೋಧ, ನಾಗರತ್ನಮ್ಮ ಸಿಐಟಿಯು ರಾಘವೇಂದ್ರ ಇದ್ದರು.

ಪ್ರಮುಖ ಬೇಡಿಕೆಗಳು

1. ರಾಜ್ಯ ಸರ್ಕಾರ ಚುನಾವಣೆ ಸಮಯದಲ್ಲಿ ನೀಡಿದ ಭರವಸೆಯಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ 15ಸಾವಿರರೂ., ಸಹಾಯಕರಿಯರಿಗೆ 10 ಸಾವಿರ ರೂ. ಮಾಸಿಕ ವೇತನ ನೀಡಬೇಕು.
2. ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲೂ ತಕ್ಷಣ ಎಲ್‌ಕೆಜಿ-ಯುಕೆಜಿಯನ್ನು ಆರಂಭಿಸಬೇಕು.
3. 3-6 ವರ್ಷದ ಮಕ್ಕಳಿಗೆ ಆರಂಭಿಕ ಬಾಲ್ಯ ಆರೈಕೆ, ಶಿಕ್ಷಣ ಮತ್ತು ಅಭಿವೃದ್ಧಿ ಹಕ್ಕನ್ನು ಕಾನೂನಿನ ಮೂಲಕ ಖಾತರಿಪಡಿಸಬೇಕು.
4. 2011 ರಿಂದ ನಿವೃತ್ತಿ ಆದವರಿಗೆ ಗ್ರಾಚ್ಯುಟಿ ಪಾವತಿಸಬೇಕು. 3-6 ವರ್ಷದ ಮಕ್ಕಳಿಗೆ ಸಮವಸ್ತç, ಪುಸ್ತಕಗಳು ಮತ್ತು ಆಟಿಕೆಗಳನ್ನು ಒದಗಿಸಬೇಕು. 3 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ ಎಲ್ಲಾ ಅಂಗನವಾಡಿಗಳನ್ನು ಅಂಗನವಾಡಿ-ಕಮ್-ಶಿಶುಪಾಲನಾ ಕೇಂದ್ರಗಳಾಗಿ ಪರಿವರ್ತಿಸಬೇಕು.
5. ಅಂಗನವಾಡಿ ಕಾರ್ಯಕರ್ತೆಯರನ್ನು ಬಿಎಲ್‌ಓ, ಎಸ್‌ಐಆರ್ ಕಾರ್ಯಗಳಿಂದ ಕೈಬಿಡಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ ಇಲಾಖೆಯೇತರ ಕೆಲಸಗಳನ್ನು ನೀಡಬಾರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net