ಚನ್ನಪಟ್ಟಣ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿದ್ದ ಗಂಡಾನೆಗೆ ಅಂಕುಶ

ಚನ್ನಪಟ್ಟಣ ತಾಲೂಕಿನ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದಲ್ಲಿ ಪುಂಡಾನೆ ಸೆರೆ ಹಿಡಿದ ಅರಣ್ಯ ಸಿಬ್ಬಂದಿ.
ಚನ್ನಪಟ್ಟಣ ತಾಲೂಕಿನ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದಲ್ಲಿ ಪುಂಡಾನೆ ಸೆರೆ ಹಿಡಿದ ಅರಣ್ಯ ಸಿಬ್ಬಂದಿ.
Published on
ಚನ್ನಪಟ್ಟಣ: ಚನ್ನಪಟ್ಟಣ ವಲಯ ಅರಣ್ಯ ವ್ಯಾಪ್ತಿಯ ಚಿಕ್ಕಮಣ್ಣುಗುಡ್ಡೆ ಭಾಗದಲ್ಲಿ ಉಪಟಳ ನೀಡುತ್ತಿದ್ದ 25 ವರ್ಷದ ಗಂಡಾನೆಯೊಂದನ್ನು ಸೆರೆ ಹಿಡಿಯುವಲ್ಲಿ ಕಾರ್ಯಾಚರಣೆ ತಂಡ ಶನಿವಾರ ಯಶಸ್ವಿಯಾಗಿದೆ.
ಜಿಲ್ಲೆಯಲ್ಲಿ ಕಾಡಾನೆಗಳ ಸಮಸ್ಯೆ ಅಧಿಕವಾಗಿರುವ ಹಿನ್ನೆಲೆಯಲ್ಲಿ ಎರಡು ಪುಂಡಾನೆಗಳ ಸೆರೆಗೆ ಸರ್ಕಾರ ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ರಾಮನಗರ, ಚನ್ನಪಟ್ಟಣ, ಸಾತನೂರು ವಲಯಗಳಲ್ಲಿ ಅತೀ ಹೆಚ್ಚು ಉಪಟಳ ನೀಡುತ್ತಿರುವ ಎರಡು ಕಾಡಾನೆ ಸೆರೆಗೆ ಗುರುವಾರ ಚಾಲನೆ ನೀಡಲಾಗಿತ್ತು. ಕಾರ್ಯಾಚರಣೆ ಆರಂಭಗೊಂಡ ದಿನವೇ ಪುಂಡಾನೆಯೊಂದನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಗೊಂಡಿತ್ತು. ಆದರೆ, ಸೆರೆಯಾದ ಪುಂಡಾನೆಯನ್ನು ಬೇರೆಡೆಗೆ ಸ್ಥಳಾಂತರಿಸಲು ಆರೋಗ್ಯ ದೃಢವಾಗಿಲ್ಲ ಎಂಬ ಕಾರಣದಿಂದ ಪುನ@ ಕಾಡಿಗೆ ಬಿಡಲಾಗಿತ್ತು.
ಈ ಮಧ್ಯೆ ಶುಕ್ರವಾರ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ ತಂಡ, ಶನಿವಾರ ಮುಂಜಾನೆ ಮತ್ತೆ ಕಾರ್ಯಾಚರಣೆ ಆರಂಭಿಸಿದರು. ಬೆಳಗ್ಗೆ 11 ಗಂಟೆ ಸುಮಾರಿಗೆ ಡ್ರೋನ್​ ಮೂಲಕ ಒಂಟಿಯಾಗಿ ತಿರುಗಾಡುತ್ತಿದ್ದ 25 ವರ್ಷ ಪ್ರಾಯದ ಗಂಡಾನೆಯನ್ನು ಪತ್ತೆಹಚ್ಚಿ, ಅರಿವಳಿಕೆ ಮದ್ದಿನ ಪ್ರಯೋಗ ನಡೆಸಿ, ಖೆಡ್ಡಾಕ್ಕೆ ಬೀಳಿಸುವಲ್ಲಿ ಕಾರ್ಯಾಚರಣೆ ತಂಡ ಯಶಸ್ವಿಯಾಯಿತು. ಸೆರೆಯಾದ ಕಾಡಾನೆಯನ್ನು ಕಾರ್ಯಾಚರಣೆಯಲ್ಲಿರುವ ಮಹೇಂದ್ರ ನೇತೃತ್ವದ ಸಾಕಾನೆಗಳ ಸಹಾಯದಿಂದ ಸ್ಥಳಾಂತರಿಸುವ ಕೆಲಸ ಮಾಡಲಾಯಿತು. ಚನ್ನಪಟ್ಟಣ ವಲಯ ಅರಣ್ಯ ಇಲಾಖೆ ಕಚೇರಿಯ ಸನಿಹವೇ ಗುರುವಾರ ಪುಂಡಾನೆಯೊಂದನ್ನು ಸೆರೆಹಿಡಿಯಲಾಗಿತ್ತು.
ಶನಿವಾರ ಖೆಡ್ಡಾಕ್ಕೆ ಬಿದ್ದಿರುವ ಈ ಕಾಡಾನೆಯೂ ಸಹ ಚಿಕ್ಕಮಣ್ಣುಗುಡ್ಡೆ ಅರಣ್ಯಪ್ರದೇಶದಲ್ಲಿಯೇ ( ವಲಯ ಅರಣ್ಯ ಕಚೇರಿ ಹಿಂಭಾಗ) ಎಂಬುದು ವಿಶೇಷ. ಬೆಂಗಳೂರು ವೃತ್ತದ ಅರಣ್ಯ ಸಂರಣಾಧಿಕಾರಿ ಶಿವಶಂಕರ್​ ಮಾರ್ಗದರ್ಶನದಲ್ಲಿ ಹಾಗೂ ಉಪ ಅರಣ್ಯ ಸಂರಣಾಧಿಕಾರಿ ರಾಮಕೃಷ್ಣಪ್ಪ ನೇತೃತ್ವದಲ್ಲಿ ವಲಯ ಅರಣ್ಯಾಧಿಕಾರಿ ಮಲ್ಲೆಶ್​ ಸೇರಿದಂತೆ ಪಶುವೈದ್ಯರಾದ ಡಾ. ರಮೇಶ್​, ಡಾ. ಕಿರಣ್​ ಹಾಗೂ ಡಾ.ನಜೀರ್​ ಅಹಮದ್​ ಸೇರಿ ಪ್ರಾದೇಶಿಕ ವಿಭಾಗದ ಎಲ್ಲ ಸಹಾಯಕ ಅರಣ್ಯ ಸಂರಣಾಧಿಕಾರಿಗಳು, ವಲಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿ ನೂರಕ್ಕೆ ಅಧಿಕ ಮಂದಿ ಪಾಲ್ಗೊಂಡಿದ್ದರು. ಭಾನುವಾರ ಕಾರ್ಯಾಚರಣೆಗೆ ವಿಶ್ರಾಂತಿ ನೀಡಿ, ಸೋಮವಾರ ಮತ್ತೊಂದು ಕಾಡಾನೆ ಸೆರೆಗೆ ಕಾರ್ಯಾಚರಣೆ ನಡೆಸಲಾಗುವುದು ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net