ಗಜಪಡೆ ಉಪಟಳ ತಡೆಗೆ ಕಂದಕ ದಾರಿ

ರಾಮನಗರ ಅರಣ್ಯದಲ್ಲಿ ಆನೆಗಳ ಗುಂಪು
ರಾಮನಗರ ಅರಣ್ಯದಲ್ಲಿ ಆನೆಗಳ ಗುಂಪು
Published on

ಪ್ರಮುಖ ಮುಖ್ಯಾಂಶಗಳು

  • ಕಾಡಂಚಿನಲ್ಲಿ 3*3.5 ಮೀ ಆಳ, ಅಗಲದ ತಗ್ಗು ನಿರ್ಮಾಣ
  • ಅರಣ್ಯ ಇಲಾಖೆಯಿಂದ ಹೊಸಕ್ರಮ
ರಾಮನಗರ
ಜಿಲ್ಲೆಯಲ್ಲಿ ಆನೆ-ಮಾನವ ಸಂಘರ್ಷಕ್ಕೆ ಕೊನೆಯೇ ಇಲ್ಲವೇನೋ ಎಂಬ ಆತಂಕದ ನಡುವೆ ಅರಣ್ಯ ಇಲಾಖೆ ವಿನೂತನ ಕ್ರಮಕ್ಕೆ ಮುಂದಾಗಿದ್ದು, ಗಜಪಡೆಯು ತೆಂಗಿನಕಲ್ಲು ಅರಣ್ಯದಿಂದ ಚಿಕ್ಕಮಣ್ಣುಗುಡ್ಡೆ ಅರಣ್ಯಪ್ರದೇಶಕ್ಕೆ ಲಗ್ಗೆ ಇಡದಂತೆ ತಡೆಯಲು ಕಾಡಂಚಿನಲ್ಲಿ ಪ್ರಪ್ರಥಮ ಬಾರಿಗೆ 3 ಮೀ ಆಳ, 3.5 ಅಗಲದ ಕಂದಕ(ಇಪಿಟಿ ಕಂದಕ) ನಿರ್ಮಿಸುತ್ತಿದೆ.
ಕಾವೇರಿ ವನ್ಯಜೀವಿಧಾಮ, ಬನ್ನೇರುಘಟ್ಟ ಅರಣ್ಯ, ತಮಿಳುನಾಡು ಅರಣ್ಯ ಪ್ರದೇಶದಿಂದ ಜಿಲ್ಲೆ ಸುತ್ತುವರಿದಿದೆ. ಈ ಅರಣ್ಯ ಪ್ರದೇಶಗಳಿಂದ ಬರುವ ಆನೆಗಳು ತೆಂಗಿನಕಲ್ಲು ಅರಣ್ಯದಲ್ಲಿ ಹಿಂಡುಹಿಂಡಾಗಿ ಸೇರುತ್ತವೆ. ಇಲ್ಲಿಂದ ಚಿಕ್ಕಮಣ್ಣುಗುಡ್ಡೆಗೆ ಬಂದು ರೈತರ ಜಮೀನುಗಳಿಗೂ ನುಗ್ಗಿ ಫಸಲು, ನೀರಾವರಿ ಪರಿಕರ ನಾಶ ಮಾಡುವುದು ಸಾಮಾನ್ಯವಾಗಿದೆ. ಕೆಲವೊಮ್ಮೆ ರಾಮನಗರ ಮತ್ತು ಚನ್ನಪಟ್ಟಣ ನಗರ ಪ್ರದೇಶಗಳತ್ತ ಮುಖ ಮಾಡಿ, ನಡು ರಸ್ತೆಗಳಲ್ಲೇ ಓಡಾಡಿ ಆತಂಕ ಸೃಷ್ಟಿಸಿದ ನಿರ್ದಶನವೂ ಇವೆ. ಬಂದ ದಾರಿಯಲ್ಲೇ ಅವುಗಳನ್ನು ಸ್ವಸ್ಥಾನಕ್ಕೆ ಅಟ್ಟಿದರೂ ಅವು ಮತ್ತೇಮತ್ತೆ ರೈತರ ಜಮೀನುಗಳಿಗೆ ನುಗ್ಗಿ, ದಾಂಧಲೆ ನಡೆಸುತ್ತವೆ. ಇದು ಅರಣ್ಯ ಇಲಾಖೆಯನ್ನು ಹೈರಾಣಾಗಿಸಿದೆ. ಇದಕ್ಕೆ ತಾತ್ಕಾಲಿಕ ಪರಿಹಾರ ಎಂಬಂತೆ ಕಂದಕ ನಿರ್ಮಾಣಕ್ಕೆ ಇಲಾಖೆ ಮುಂದಾಗಿದೆ.

ಜೀವ ಹಾನಿ

ಆನೆಗಳು ರಾತ್ರಿ ವೇಳೆಯೇ ತೆಂಗಿನಕಲ್ಲು ಅರಣ್ಯ ಸೇರುತ್ತವೆ. ಈ ವೇಳೆ ಮಾರ್ಗದ ಪಕ್ಕದ ತೋಟಗಳಿಗೆ ಲಗ್ಗೆ ಇಟ್ಟು, ಫಸಲು ನಾಶ ಮಾಡುತ್ತವೆ. ರೈತರು ಕಾಣಿಸಿಕೊಂಡರೆ ಅವರ ಮೇಲೆ ದಾಳಿ ಮಾಡಿದ ನಿದರ್ಶನಗಳಿವೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಒಟ್ಟು ನಾಲ್ಕು ಆನೆಗಳನ್ನು ಸೆರೆಹಿಡಿದು, ಶಿಬಿರಕ್ಕೆ ಬಿಡಲಾಗಿದೆ.

ಸರ್ಕಾರಕ್ಕೆ ಪ್ರಸ್ತಾವ

ಸುಮಾರು 3,600 ಹೆಕ್ಟೇರ್ ಪ್ರದೇಶವಿರುವ ಚಿಕ್ಕಮಣ್ಣುಗುಡ್ಡೆ ಅರಣ್ಯಕ್ಕೆ ಆನೆಗಳು ಬರುವುದನ್ನು ಆರಂಭದಲ್ಲೇ ತಡೆಗಟ್ಟಲು ಮುಂದಾಗಿರುವ ಅರಣ್ಯ ಇಲಾಖೆ ಮೊದಲ ಹೊಸ ಪ್ರಯತ್ನವಾಗಿ ತೆಂಗಿನಕಲ್ಲು ಅರಣ್ಯದ ಬಿವಿ ಹಳ್ಳಿ ಗಡಿಯ ಲಕ್ಕೊಜನಹಳ್ಳಿ-ಮಲ್ಲಂಗೆರೆ ಗಡಿ ಮಧ್ಯಭಾಗದಿಂದ ಸುಮಾರು 3.5 ಕಿಮೀ ಉದ್ದ ಕಂದಕ ನಿರ್ಮಿಸಲಾಗುತ್ತಿದೆ. ಪ್ರಾರಂಭಿಕವಾಗಿ ಮೂರೂವರೆ ಕಿ.ಮೀ. ಕೆಲಸ ಪ್ರಾರಂಭಿಸಿದ್ದು, ಇನ್ನೂ ಐದು ಕಿಮೀ ಕಂದಕ ನಿರ್ಮಾಣ ಮಾಡಲು ಇಲಾಖೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದೆ ಎನ್ನಲಾಗಿದೆ.

ಆನೆ ಕಂದಕ ಇಲ್ಲಿ ಏಕೆ?

ತೆಂಗಿನಕಲ್ಲು ಅರಣಕ್ಕೆ ಬಂದ ಆನೆಗಳು ಸುಲಭವಾಗಿ ಚಿಕ್ಕಮಣ್ಣುಗುಡ್ಡೆಗೆ ಸೇರುತ್ತವೆ. ಅಲ್ಲಿಂದ ಬ್ರಹ್ಮಣೀಪುರ, ತಗಚಗೆರೆ, ವಿಭೂತಿಕೆರೆ, ದೇವರದೊಡ್ಡಿ, ಕುಂಭಾಪುರ, ಚನ್ನಮಾನಹಳ್ಳಿ, ಅಂಜನಾಪುರ, ಬನ್ನಿಕುಪ್ಪೆ ಗ್ರಾಮಗಳಿಗೆ ದಾಂಗುಡಿ ಇಟ್ಟು, ರೈತರ ಫಸಲು ನಾಶ ಮಾಡಿ ರಸ್ತೆಯಲ್ಲೇ ಓಡಾಡುವುದು ಭಯ ಹುಟ್ಟಿಸಿದೆ. ಹಾಗಾಗಿ ಈ ಪ್ರದೇಶಗಳಿಗೆ ಆನೆಗಳು ಬರದಂತೆ ಕಂದಕ ಸೃಷ್ಟಿಸಿದರೆ ಅದನ್ನು ದಾಟಲಾಗದೆ ಅವು ತೆಂಗಿನಕಲ್ಲು ಅರಣ್ಯದಲ್ಲೇ ಉಳಿಯಲಿವೆ. ಇದರಿಂದ ಆನೆಗಳ ಉಪಟಳ ತಡೆಯಬಹುದು. ನಗರ ಪ್ರದೇಶಕ್ಕೆ ಮುಂದಿನ ದಿನಗಳಲ್ಲಿ ಆನೆಗಳು ಲಗ್ಗೆ ಇಡುವುದನ್ನು ತಪ್ಪಿಸಬಹುದೆಂಬ ಲೆಕ್ಕಾಚಾರ ಇಲಾಖೆಯದಾಗಿದೆ.
ಅನುದಾನ ಬೇಕು
ತೆಂಗಿನಕಲ್ಲು ಅರಣ್ಯ 10 ಸಾವಿರ ಹೆಕ್ಟೇರ್‌ಗೂ ಹೆಚ್ಚಿದ್ದು, ಸುಮಾರು 40 ಕಿಮೀ ಸುತ್ತಳತೆಯಲ್ಲಿದೆ. ಅರಣ್ಯದ ಮಧ್ಯೆ ಬೇಲಿಕೊತ್ತನೂರು, ತೆಂಗಿನಕಲ್ಲು ಗ್ರಾಮಗಳಿದ್ದು ಇವು 10 ಕಿಮೀ ಸುತ್ತಳತೆ ಹೊಂದಿವೆ. ಸುತ್ತಲೂ ಆನೆ ಕಂದಕ ನಿರ್ಮಿಸಿದರೆ ತೆಂಗಿನಕಲ್ಲು ಅರಣಕ್ಕೆ ಆನೆಗಳು ಬರದಂತೆ ತಡೆಗಟ್ಟಬಹುದು. ಆದರೆ ಸರ್ಕಾರ ಹೆಚ್ಚಿನ ರೀತಿಯಲ್ಲಿ ಅನುದಾನ ಒದಗಿಸಿ ಅನುಮತಿ ನೀಡಿದರಷ್ಟೇ ಕಂದಕ ನಿರ್ಮಾಣ ಸಾಧ್ಯ
ಎಲ್ಲೆಲ್ಲೆ ಎಷ್ಟಿವೆ ಆನೆಗಳು
ತೆಂಗಿನಕಲ್ಲು ಅರಣ್ಯಕ್ಕೆ 25ರಿಂದ 30 ಆನೆಗಳು ಬರುತ್ತವೆ. ಇವು ವಿಂಗಡಣೆಯಾಗಿ ಹಂದಿಗೊಂದಿಯಲ್ಲಿ ಐದಾರು, ಚಿಕ್ಕಮಣ್ಣುಗುಡ್ಡೆಯಲ್ಲಿ ಏಳೆಂಟು ಈ ರೀತಿಯಲ್ಲಿ ಅರಣ್ಯದಿಂದ ಅರಣ್ಯಕ್ಕೆ ಓಡಾಡುತ್ತವೆ. ಜತೆಗೆ ಕನಕಪುರ, ಕಬ್ಬಾಳು ಮತ್ತಿತರ ಅರಣ್ಯ ಪ್ರದೇಶದಲ್ಲೂ ಆನೆಗಳು ಇರುತ್ತವೆ. ಸದ್ಯ ತೆಂಗಿನಕಲ್ಲು ಅರಣ್ಯದಲ್ಲಿ 11, ಚಿಕ್ಕಮಣ್ಣಗುಡ್ಡೆಯಲ್ಲಿ 5, ಹಂದಿಗೊಂದಿಯಲ್ಲಿ 3 ಆನೆಗಳಿವೆ. ಕಳೆದ ವಾರ 9 ಆನೆಗಳನ್ನು ತೆಂಗಿನಕಲ್ಲು ಅರಣ್ಯದಿಂದ ಸ್ವಸ್ಥಾನಕ್ಕೆ ಅಟ್ಟಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಆನೆಗಳು ದಾಟಲಾಗದಂತೆ ಕಂದಕವು 3 ಮೀಟರ್ ಆಳ, 3.5 ಮೀಟರ್ ಅಗಲವಿದೆ. ಅವು ಕಂದಕದಲ್ಲಿ ಇಳಿದರೆ ಮೇಲೇರಲು ಆಗುವುದಿಲ್ಲ. ಇದರಿಂದಾಗಿ ಕಾವೇರಿ, ಬನ್ನೇರುಘಟ್ಟ ಅರಣ್ಯದಿಂದ ಬರುವ ಆನೆಗಳು ತೆಂಗಿನಕಲ್ಲು ಅರಣ್ಯದಲ್ಲೇ ಉಳಿಯುತ್ತವೆ. ಅವು ಚಿಕ್ಕಮಣ್ಣುಗುಡ್ಡೆ ಭಾಗಕ್ಕೆ ಬರದಂತೆ ತಡೆಗಟ್ಟುವುದರಿಂದ ಸುಲಭವಾಗಿ ಕಾರ್ಯಾಚರಣೆ ನಡೆಸಬಹುದು. ಮಾನವ ಹಾನಿ, ರೈತರ ಫಸಲು ನಷ್ಟಕ್ಕೆ ಬ್ರೇಕ್ ಬೀಳಲಿದೆ. ಹಾಗಾಗಿ ಆನೆಕಂದಕ ಉಪಯುಕ್ತ ಕ್ರಮ.
| ಎಂ.ರಾಮಕೃಷ್ಣಪ್ಪ
ಡಿಎಫ್‌ಒ, ರಾಮನಗರ
  1. ಮೂರೂವರೆ ಕಿಮೀ ಉದ್ದ ಆನೆ ಕಂದಕ ನಿರ್ಮಾಣಕ್ಕೆ ಸರ್ಕಾರ ಅನುಮತಿ ನೀಡಿತ್ತು. ಅದರಲ್ಲಿ ಇನ್ನೂ ಒಂದು ಕಿಮೀಗೆ ಆಗುವಷ್ಟು ಹಣ ಉಳಿದಿದೆ. ಆ ಒಂದು ಕಿಮೀ ಕಾಮಗಾರಿ ನಡೆಸಲು ಅನುಮತಿ ಕೇಳಲಾಗಿದ್ದು, ಶೀಘ್ರವೇ ಕೆಲಸ ಪ್ರಾರಂಭವಾಗಲಿದೆ. ಸದ್ಯಕ್ಕೆ ಒಟ್ಟಾರೆ ನಾಲ್ಕೂವರೆ ಕಿಮೀ ಕಂದಕ ನಿರ್ಮಾಣವಾಗಲಿದೆ. ಈ ಭಾಗದಲ್ಲಿ ಆನೆ ಕಂದಕ ನಿರ್ಮಾಣ ಮಾಡುತ್ತಿರುವುದರಿಂದ ಚಿಕ್ಕಮಣ್ಣುಗುಡ್ಡೆಗೆ ತೆಂಗಿನಕಲ್ಲು ಅರಣ್ಯದಿಂದ ಆನೆಗಳು ಬರದಂತೆ ತಡೆಗಟ್ಟಬಹುದು. | ಮಲ್ಲೇಶ್ ವಲಯ ಅರಣ್ಯಾಧಿಕಾರಿ ಚನ್ನಪಟ್ಟಣ

ತೆಂಗಿನಕಲ್ಲು ಅರಣ್ಯದ ಗಡಿ ಭಾಗದ ರೇವಣಸಿz್ದÉÃಶ್ವರ ಬೆಟ್ಟ, ನೆಲಮಲೆ, ಕೆರೆಮೇಗಳದೊಡ್ಡಿ ಭಾಗದಲ್ಲಿ ಆನೆ ಕಂದಕ ನಿರ್ಮಾಣ ಮಾಡಿದರೆ ಹಂದಿಗೊAದಿ ಅರಣ್ಯ ಪ್ರದೇಶ ಮತ್ತು ಅವ್ವೇರಹಳ್ಳಿ ಸುತ್ತಮುತ್ತಲ ಗ್ರಾಮಗಳಲ್ಲಿ ಆನೆಗಳ ಉಪಟಳ ತಪ್ಪಿಸಬಹುದು. ಚಿಕ್ಕಮಣ್ಣುಗುಡ್ಡೆ ಭಾಗಕ್ಕೆ ಆನೆ ಹಾವಳಿ ತಪ್ಪಿಸಲು ಕೈಗೊಂಡಿರುವ ಆನೆ ಕಂದಕ ನಿರ್ಮಾಣ ಈ ಭಾಗದಲ್ಲೂ ಆಗಬೇಕಿದೆ. ಆಗಲೇ ರೈತರು ನಿರಾತಂಕವಾಗಿ ಕೃಷಿ ಕಾರ್ಯದಲ್ಲಿ ತೊಡಗಬಹುದು.
| ಪ್ರಶಾಂತ್
ವಿಎಸ್ಸೆಸ್ಸೆನ್ ನಿರ್ದೇಶಕ, ಅವ್ವೇರಹಳ್ಳಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net