ಬಿಸಿಲ ಝಳಕ್ಕೆ ಬಳಲಿದ ತೆಂಗು

 ರಾಮನಗರ ತಾಲೂಕಿನ ಗ್ರಾಮವುಂದರಲ್ಲಿ ತೆಂಗಿನಮರಗಳು ನೀರಿಲ್ಲದೆ ಒಣಗಿರುವುದು.
ರಾಮನಗರ ತಾಲೂಕಿನ ಗ್ರಾಮವುಂದರಲ್ಲಿ ತೆಂಗಿನಮರಗಳು ನೀರಿಲ್ಲದೆ ಒಣಗಿರುವುದು.
Published on
ರಾಮನಗರ: ಮಳೆ ಕೊರತೆ, ಬಿಸಿಲ ಝಳದಿಂದ ತೆಂಗಿನ ಮರಗಳು ಒಣಗಿ, ಬೆಂಡಾಗುತ್ತಿರುವುದು ತೆಂಗುಬೆಳೆಗಾರರನ್ನು ಚಿಂತೆಗೀಡು ಮಾಡಿದೆ.
ಜಿಲ್ಲೆಯಲ್ಲಿ ಸಾವಿರಾರು ಕುಟುಂಬಗಳು ತೆಂಗಿನಲ್ಲೇ ಜೀವನ ಕಟ್ಟಿಕೊಂಡಿವೆ. ಕೀಟಬಾಧೆ ನಿಯಂತ್ರಿಸಿ, ಸಾಲಮಾಡಿ ತೋಟಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರೂ ಫಸಲಿಗೆ ಬೆಲೆ ಇರುವ ಸಮಯದಲ್ಲೇ ಮರಗಳು ಕಣ್ಣಮುಂದೆಯೇ ಒಣಗುತ್ತಿರುವುದು ರೈತರಿಗೆ ನುಂಗಲಾರದ ತುತ್ತಾಗಿದೆ. ಜಿಲ್ಲೆಯಲ್ಲಿ ದೊಡ್ಡ ದೊಡ್ಡ ಕೆರೆಗಳ ಅಚ್ಚುಕಟ್ಟು ಪ್ರದೇಶ, ಅರ್ಕಾವತಿ, ಕಣ್ವ, ವೃಷಭಾವತಿ ನದಿ ತೀರ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತದೆ. ಆದರೆ, ಮೂರು ವರ್ಷಗಳಿಂದ ಕಾಲಕಾಲಕ್ಕೆ ಮಳೆಯಾಗದೆ ಕೆರೆಕಟ್ಟೆಗಳು ಖಾಲಿಯಾಗಿದ್ದು, ಅಂತರ್ಜಲ ಪಾತಾಳಕ್ಕೆ ಕುಸಿದು ಬೋರ್​ವೆಲ್​ಗಳು ಬತ್ತಿಹೋಗಿವೆ. ಪರಿಣಾಮ ತೆಂಗಿನ ತೋಟಗಳು ನೀರಿನ ಕೊರತೆಯಿಂದ ಒಣಗುತ್ತಿವೆ.
ಈಗಾಗಲೇ ಮಾವಿನ ಮರಗಳು ಒಣಗುತ್ತಿದ್ದು, ಮುಂದೆ ತೆಂಗಿನಮರಗಳು ಒಣಗುತ್ತಿದ್ದರೆ ಜಿಲ್ಲೆಯಲ್ಲಿನ ತೆಂಗು, ಮಾವು ಬೆಳೆಗಾರರ ಪಾಡು ಹೇಳತೀರದಂತಾಗುತ್ತದೆ. ಮಳೆ ಬಂದು, ಬಿಸಿಲಿನತಾಪ ಕಡಿಮೆಯಾಗಿ ಕೆರೆಕಟ್ಟೆಗಳು ತುಂಬಿದರಷ್ಟೇ ಮುಂದೆ ತೆಂಗು, ಮಾವಿನ ತೋಟಗಳು ಉಳಿಯಲು ಸಾಧ್ಯ. ಇಲ್ಲದಿದ್ದರೆ ರೈತರು ತೋಟಗಳ ಬದಲಾಗಿ ಒಣಗಿದ ಮರಗಳ ಖಾಲಿ ಜಾಗ ನೋಡಬೇಕು ಎಂದು ತೆಂಗು ಬೆಳೆಗಾರ ನಾಗೋಹಳ್ಳಿ ಎನ್​.ಎಸ್​.ಲಿಂಗೇಗೌಡ ಕಳಕಳ ವ್ಯಕ್ತಪಡಿಸಿದರು.
ರೋಗವೂ ಕಾರಣ
ಕಳೆದ ಹಲವು ವರ್ಷಗಳಿಂದ ತೆಂಗು ಬೆಳೆಗಾರರಿಗೆ ಒಂದಿಲ್ಲೊಂದು ಸಂಕಷ್ಟ ಎದುರಾಗುತ್ತಲೇ ಇದೆ. ಅತಿಯಾದ ಉಷ್ಣತೆ, ಸರಿಯಾದ ವ್ಯವಸಾಯ ಕ್ರಮ ಅನುಸರಿಸದೆ ಇರುವ ಕಾರಣ ಕಾಂಡ ಸೋರುವಿಕೆ, ಅಣಬೆ ಹಾಗೂ ಕೆಂಪು ಮೂತಿ ಕೀಟ ಬಾಧೆ ಜತೆಗೆ ಜಿಲ್ಲೆಯಲ್ಲಿ ಬಿಳಿನೊಣ ಕಾಟ ಹೆಚ್ಚಾಗಿ ಕಾಣುತ್ತಿದೆ. ರೋಗಗಳನ್ನು ಹತೋಟಿಗೆ ತಂದು ಫಸಲು ಪಡೆಯುವ ಸನ್ನಿವೇಶದಲ್ಲೇ ಮರಗಳು ಒಣಗುತ್ತಿರುವುದು ರೈತರ ಜಂಘಾಬಲವನ್ನೇ ಕಸಿದಿದೆ. ಪ್ರಾರಂಭಿಕ ಹಂತದಲ್ಲಿಯೇ ರೈತರು ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ, ಔಷಧೋಪಚಾರ ಮಾಡಿ, ರೋಗ ಪೀಡಿತ ಮರಗಳನ್ನು ತೆರವುಗೊಳಿಸಿದರೆ ಇತರ ಮರಗಳನ್ನು ಉಳಿಸಿಕೊಳ್ಳಬಹುದು ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.
ಮರ ಉಳಿಸಲು ಏನು ಮಾಡಬೇಕು?
ಭೂಮಿಯಲ್ಲಿ ತೇವಾಂಶ ಕೊರತೆಯಿಂದ ಮರಗಳಿಗೆ ಸಮಪ್ರಮಾಣದಲ್ಲಿ ನೀರು ಸಿಗದೆ ಗರಿಗಳು, ಮರದ ಸುಳಿ ಒಣಗುತ್ತಿವೆ. ರೋಗ ಹತೋಟಿಯೊಂದಿಗೆ ಕಾಲಕಾಲಕ್ಕೆ ಮರಗಳಿಗೆ ನೀರುಣಿಸಬೇಕು, ಸೂಕ್ತ ರೀತಿಯಲ್ಲಿ ಮರಗಳ ಸುತ್ತಲೂ ಮಣ್ಣು ಹಾಕಿ, ಉಳುಮೆ ಮಾಡಬೇಕು. ಜತೆಗೆ ಮಳೆಗಾಲದಲ್ಲಿ ಕೊಟ್ಟಿಗೆ ಗೊಬ್ಬರ, ಲು ಪೋಷಕಾಂಶ, ಜೈವಿಕ ಗೊಬ್ಬರ, ಬೇವಿನ ಹಿಂಡಿ ನೀಡುವುದರಿಂದ ಬೇಸಿಗೆಯಲ್ಲಿ ಮರಗಳಿಗೆ ನೀರಿನ ಕೊರತೆ ಉಂಟಾದರೂ ಮರ ಉಳಿಯುತ್ತದೆ ಹಾಗೂ ಕೀಟಬಾಧೆಯಿಂದ ರಕ್ಷಣೆ ನೀಡಬಹುದು ಎನ್ನುತ್ತಾರೆ ಅಧಿಕಾರಿಗಳು.
ಎಳನೀರಿಗೆ ಡಿಮಾಂಡ್​
ಬಿಸಿಲು ಹೆಚ್ಚಾದಂತೆಲ್ಲ ಎಳನೀರಿಗೆ ಬೇಡಿಕೆ ಹೆಚ್ಚುತ್ತಿದೆ. ಒಂದು ಎಳನೀರಿನ ಬೆಲೆ ಸದ್ಯ 50 ರೂ. ದಾಟಿದೆ. ಆದರೆ ನುಸಿ ರೋಗ, ಮರಗಳು ಒಣಗುತ್ತಿರುವ ಕಾರಣ ರೈತರಿಗೆ ಎಳನೀರು ಫಸಲಿನಲ್ಲಿಯೂ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಎಳನೀರಿನಿಂದ ಒಂದಷ್ಟು ಆರ್ಥಿಕ ಚೇತರಿಕೆ ಕಾಣುತ್ತಿದ್ದ ರೈತರ ಕೈ ಈಗ ಖಾಲಿಯಾಗಿದೆ.
ಇಳಿಯುತ್ತಿದೆ ಬೆಲೆ
ತೆಂಗಿನಕಾಯಿ ಬೆಲೆ ಇಳಿಕೆಯೂ ರೈತರಿಗೆ ಶಾಪವಾಗಿ ಪರಿಣಮಿಸುತ್ತಿದೆ. ಕಳೆದ 2&3 ತಿಂಗಳ ಹಿಂದೆ ಕೆಜಿ ತೆಂಗಿನಕಾಯಿ ಬೆಲೆ 65ರಿಂದ 70 ರೂ. ಇತ್ತು. ಕಳೆದ ತಿಂಗಳು 55ರಿಂದ 58 ರೂ. ಆಸುಪಾಸಿಗೆ ಬಂದಿದ್ದ ಬೆಲೆ ಕಳೆದ ವಾರದಿಂದ ದಿಢೀರೆಂದು 38ರಿಂದ 40 ರೂ.ಗೆ ಕುಸಿದಿದೆ.
ಇಳಿಕೆಗೆ ಕಾರಣ?
ಮಾರುಕಟ್ಟೆಗೆ ಈ ಹಿಂದಿಗಿಂತಲೂ ಈಗ ಸರಕು ಕಡಿಮೆ ಬರುತ್ತಿದೆ. ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ದುಬೈ ಸೇರಿದಂತೆ ಇತರ ದೇಶಗಳಿಗೆ ತೆಂಗಿನ ಎಣ್ಣೆ ರ್ತು ನಿಂತಿರುವ ಕಾರಣ ಎಣ್ಣೆ ಉತ್ಪಾದಿಸುವ ಕಾರ್ಖಾನೆಗಳು ಸ್ಥಗಿತಗೊಂಡಿರುವುದರಿಂದ ತೆಂಗಿನಕಾಯಿ ಬೇಡಿಕೆ ಕುಸಿತಕಾಣುತ್ತಿದೆ ಎಂಬುದು ಮಂಡಿ ವರ್ತಕರ ಅಭಿಪ್ರಾಯ.
"

ಜಿಲ್ಲೆಯಲ್ಲಿ ಈಗ ತೆಂಗುಬೆಳೆಗಾರರು ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರ ಕೂಡಲೇ ಸೂಕ್ತ ಪರಿಹಾರ ನೀಡಬೇಕು. ಬರಿದಾದ ಕೆರೆ ಕುಂಟೆಗಳಿಗೆ ನೀರು ತುಂಬಿಸಲು ಶಾಸಕರು ಕ್ರಮವಹಿಸಬೇಕು. ಇದರಿಂದ ಅಂತರ್ಜಲ ಹೆಚ್ಚಾಗಿ ಬೋರ್​ವೆಲ್​ಗಳಲ್ಲಿ ನೀರು ಬರುತ್ತದೆ, ಆಗ ನೆಲಕಚ್ಚುತ್ತಿರುವ ತೆಂಗಿನ ಮರಗಳನ್ನು ಉಳಿಸಿಕೊಳ್ಳಬಹುದು.

— > ಬೋರೇಗೌಡ ರೈತ, ಜಯಪುರ
"

ರಾಮನಗರ ಬಹುಪಾಲು ಪ್ರದೇಶ ಬಂಡೆಗಳಿಂದ ಕೂಡಿರುವುದರಿಂದ ತೇವಾಂಶ ಕಡಿಮೆ. ಕಳೆದ 8 ತಿಂಗಳಿಂದ ಉತ್ತಮ ಮಳೆಯಾಗದೆ ತೆಂಗಿನಮರಗಳಿಗೆ ನೀರಿನ ಕೊರತೆ ಕಾಣುತ್ತಿದೆ. ರೋಗ&ನಿರೋಧಕ ಶಕ್ತಿ ಕಡಿಮೆಯಾಗಿ ಕೀಟಬಾಧೆಯಿಂದ ಗರಿಗಳು ಒಣಗುತ್ತಿವೆ. ರೈತರು ಸೂಕ್ತ ರೀತಿಯಲ್ಲಿ ಮರಗಳ ನಿರ್ವಹಣೆ ಕೈಗೊಂಡಾಗ ರಕ್ಷಣೆ ಸಾಧ್ಯ.

— > ಈಶ್ವರಪ್ಪ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ, ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net