ಸಂವಿಧಾನದ 74ನೇ ತಿದ್ದುಪಡಿ ಕಾಯ್ದೆ ಅನ್ವಯ ಸ್ಥಳೀಯ ಆಡಳಿತದ ಅವಧಿ ಪೂರ್ಣಗೊಂಡ ಬಳಿಕ ಕಾಲಮಿತಿಯೊಳಗೆ ಹೊಸ ಚುನಾಯಿತ ವ್ಯವಸ್ಥೆಗೆ ಅವಕಾಶ ಕಲ್ಪಿಸಬೇಕು. ಇದಕ್ಕೆ ಸರ್ಕಾರದ ಹಸ್ತಕ್ಷೇಪ ಇರಬಾರದು ಎನ್ನುತ್ತದೆ ಕಾಯ್ದೆ. ಆದರೆ, ಆಯಾ ಸರ್ಕಾರಗಳು ತಮ್ಮ ಅವಧಿಯಲ್ಲಿ ಕಾಯ್ದೆಯಲ್ಲಿನ ಅಂಶಗಳನ್ನು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸುವುದರಿಂದ ಸ್ಥಳೀಯ ಸಂಸ್ಥೆಗಳಿಗೆ ಸಕಾಲದಲ್ಲಿ ಎಲೆಕ್ಷನ್ ನಡೆಯುತ್ತಿಲ್ಲ. ಬಿಬಿಎಂಪಿ ವಿಚಾರದಲ್ಲೂ ಈ ಅಂಶವೇ ಮುಳುವಾಯಿತು. ಈಗ ಪಂಚ ಪಾಲಿಕೆಗಳು ಅಸ್ತಿತ್ವಕ್ಕೆ ಬಂದಿದ್ದು, ಪಾಲಿಕೆಗಳ ಗಡಿ ಗುರುತಿಸುವಿಕೆ, ವಾರ್ಡ್‌ವಾರು ವಿಂಗಡಣೆ ಪೂರ್ಣಗೊಂಡಿದೆ. ಮೀಸಲು ನಿಗದಿ ಇನ್ನಷ್ಟೇ ಆಗಬೇಕಿದೆ. ಈ ಪ್ರಕ್ರಿಯೆ ವೇಗ ಪಡೆಯದಿದ್ದಲ್ಲಿ ಮತ್ತೆ ಚುನಾವಣೆ ಅನಿಶ್ಚಿತತೆಯತ್ತ ಹೊರಳದಿರದು. ಮುಖ್ಯವಾಗಿ ಎಲೆಕ್ಷನ್ ನಡೆಯದಿದ್ದಲ್ಲಿ ಅನುದಾನ ಖೋತಾ ಅಗಿ ಅಭಿವೃದ್ಧಿಯಲ್ಲಿ ಹಿನ್ನಡೆ ಉಂಟಾಗಬಹುದು ಎನ್ನುತ್ತಾರೆ ನಗರ ಪರಿಣಿತರು.