ಬೆಂಗಳೂರು: ಪಂಚ ಪಾಲಿಕೆಗಳ ಬಜೆಟ್ ಮಂಡನೆ ಸಂಬಂಧ ಆಯಾ ಕಾರ್ಪೋರೇಷನ್ ವ್ಯಾಪ್ತಿಯಲ್ಲಿ ಬೃಹತ್ ಸಭಾಂಗಣದ ಸ್ಥಳವನ್ನು ಅಂತಿಮಗೊಳಿಸಿದ್ದು, ಅಲ್ಲೇ ಶುಕ್ರವಾರ ಹಾಗೂ ಶನಿವಾರ (ಮಾ.27, 28) ಆಯವ್ಯಯ ಪ್ರಸ್ತುತಿಪಡಿಸಲಾಗುತ್ತದೆ.
ಶುಕ್ರವಾರ (ಮಾ.27) ಪೂರ್ವ ಹಾಗೂ ಕೇಂದ್ರ ಪಾಲಿಕೆಯ ಬಜೆಟ್ ಕ್ರಮವಾಗಿ ಬೆಳಗ್ಗೆ 9.30 ಮತ್ತು ಮ.12.30ಕ್ಕೆ ಮಂಡಿಸಲಾಗುತ್ತದೆ. ಶನಿವಾರ (ಮಾ.28) ಉತ್ತರ, ಪಶ್ಚಿಮ ಹಾಗೂ ದಕ್ಷಿಣ ಪಾಲಿಕೆಯ ಬಜೆಟ್ ಕ್ರಮವಾಗಿ ಬೆಳಗ್ಗೆ 9.30, ಮಧ್ಯಾಹ್ನ 12.30 ಮತ್ತು 2.30ಕ್ಕೆ ಪ್ರಸ್ತುತಿಪಡಿಸಲಾಗುತ್ತದೆ.
ಚೊಚ್ಚಲ ಬಜೆಟ್‌ಅನ್ನು ಸಾರ್ವಜನಿಕರು ವೀಕ್ಷಿಸಲು ಅವಕಾಶ ಕಲ್ಪಿಸಲು ಬೃಹತ್ ಸಭಾಂಗಣದ ಹುಡುಕಾಟದಿಂದಾಗಿ ಬಜೆಟ್ ಮಂಡನೆ ಎರಡು ದಿನ ತಡ ಮಾಡಲಾಗಿತ್ತು. ನಗರಾಭಿವೃದ್ಧಿ ಇಲಾಖೆ ಸೂಚನೆ ಮೇರೆಗೆ ಆಯಾ ಪಾಲಿಕೆಗಳ ವ್ಯಾಪ್ತಿಯಲ್ಲಿ ಗುರುತಿಸಲಾದ ಸ್ಥಳಗಳಲ್ಲೇ ಆಯವ್ಯಯವನ್ನು ಕಾರ್ಪೋರೇಷನ್‌ಗಳ ಹಣಕಾಸು ವಿಭಾಗದ ಮುಖ್ಯಸ್ಥರು ಬಜೆಟ್ ಮಂಡಿಸಲಿದ್ದಾರೆ. ಈ ವೇಳೆ ಎಲ್ಲ ಐದೂ ಕಾರ್ಪೋರೇಷನ್‌ಗಳ ಆಯವ್ಯಯ ಪ್ರಸ್ತುತಿ ವೇಳೆ ಪಾಲಿಕೆಗಳ ಆಡಳಿತಾಧಿಕಾರಿ ಆಗಿರುವ ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ಉಪಸ್ಥಿತರಿರುತ್ತಾರೆ. ಜತೆಗೆ ಆಯಾ ಪಾಲಿಕೆಗಳ ಆಯುಕ್ತರು ಹಾಗೂ ಇತರ ಅಧಿಕಾರಿ ವರ್ಗದವರೂ ಹಾಜರಿರುತ್ತಾರೆ ಎಂದು ಜಿಬಿಎ ತಿಳಿಸಿದೆ.
ಪಾಲಿಕೆವಾರು ಬಜೆಟ್ ಪ್ರಸ್ತುತಿಪಡಿಸುವ ವಿವರ:
ಮಾ.27, ಶುಕ್ರವಾರ:
ಪೂರ್ವ ಪಾಲಿಕೆ - ಎಂಎಲ್ಆರ್ ಕನ್ವೆನ್ಷನ್ ಸೆಂಟರ್, ವೈಟ್‌ಫೀಲ್ಡ್, 4ನೇ ಕ್ರಾಸ್, ಗರುಡಾಚಾರ್‌ಪಾಳ್ಯ, ಮಹದೇವಪುರ. ಬೆಳಿಗ್ಗೆ 9.30
ಕೇಂದ್ರ ಪಾಲಿಕೆ - ಸರ್ ಪುಟ್ಟಣ್ಣಚೆಟ್ಟಿ ಪುರಭವನ (ಟೌನ್ ಹಾಲ್). ಮಧ್ಯಾಹ್ನ 12.30
ಮಾ.28, ಶನಿವಾರ:
ಉತ್ತರ ಪಾಲಿಕೆ - ಬಿ.ಆರ್. ಅಂಬೇಡ್ಕರ್ ಭವನ, ಯಲಹಂಕ ಉಪನಗರ. ಬೆಳಿಗ್ಗೆ 9.30
ಪಶ್ಚಿಮ ಪಾಲಿಕೆ - ಬಿಡಬ್ಲ್ಯುಎಸ್‌ಎಸ್‌ಬಿ ಸುವರ್ಣ ಭವನ (ಅಮ್ಮಣ್ಣಿ ಕಾಲೇಜು ಬಳಿ), ಮಲ್ಲೇಶ್ವರ. ಮಧ್ಯಾಹ್ನ 12.30
ದಕ್ಷಿಣ ಪಾಲಿಕೆ - ಜಿಲ್ಲಾ ಪಂಚಾಯ್ತಿ ಸಭಾಂಗಣ, ಬನಶಂಕರಿ ದೇಗುಲದ ಬಳಿ. ಮಧ್ಯಾಹ್ನ 2.30