ಅಕ್ರಮವಾಗಿ ತ್ಯಾಜ್ಯ ವಿಲೇ ಮಾಡುತ್ತಿದ್ದ ವಾಹನ ಜಪ್ತಿ

waste-disposal-seized
waste-disposal-seized
Published on

ಪ್ರಮುಖ ಮುಖ್ಯಾಂಶಗಳು

  • ಪೂರ್ವ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ಮಾಹಿತಿ
  • ದಕ್ಷಿಣ ಪಿನಾಕಿನಿ ನದಿಗೆ ಕಸ ಸುರಿಯುತ್ತಿರುವ ಬಗ್ಗೆ ದೂರು ಹಿನ್ನೆಲೆ
ಬೆಂಗಳೂರು: ಮಹದೇವಪುರ ವಲಯದ ಕಾಡುಗೋಡಿ ಬಳಿ ಅಕ್ರಮವಾಗಿ ಘನತ್ಯಾಜ್ಯವನ್ನು ಸಾಗಿಸಿ ಖಾಲಿ ಜಾಗಗಳಲ್ಲಿ ಸುರಿಯುತ್ತಿದ್ದ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ 6 ವಾಹನಗಳನ್ನು ವಶಪಡಿಸಿಕೊಂಡು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ತಿಳಿಸಿದ್ದಾರೆ.
ಸಾರ್ವಜನಿಕ ದೂರಿನ ಆಧಾರದ ಮೇಲೆ ಇದೇ ಮೇ 29ರಂದು ಪಾಲಿಕೆಯ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ತ್ಯಾಜ್ಯ ಸುರಿಯಲು ಸ್ಥಳಕ್ಕೆ ಆಗಮಿಸಿದ್ದ 5 ವಾಹನಗಳನ್ನು ವಶಪಡಿಸಿಕೊಳ್ಳಲಾಯಿತು, ವಾಹನ ಚಾಲಕರು ಸ್ಥಳದಿಂದ ಪರಾರಿಯಾಗಿದ್ದು, ಇದೇ ಸ್ಥಳದಲ್ಲಿ ಮೇ 30ರಂದು ಮತ್ತೊಂದು ವಾಹನವನ್ನು ವಶಕ್ಕೆ ಪಡೆಯಲಾಗಿದೆ.

ಪ್ರಕರಣದ ಹಿನ್ನೆಲೆ:

ಪೂರ್ವ ಪಾಲಿಕೆಯ ವಿವಿಧ ಪ್ರದೇಶಗಳ ವಾಣಿಜ್ಯ ಮತ್ತು ವಸತಿ ಸಮುಚ್ಚಯಗಳಿಂದ ಸಗಟು ಕಸ ಸಂಗ್ರಹಿಸಿ ವಿಲೇವಾರಿ ಮಾಡಲು ಇಕೋ ಸ್ಪೀಯರ್ ವೆಸ್ಟ್ ಸೆಲ್ಯೂಷನ್ ಕಂಪನಿಗೆ ಕಾರ್ಯಾದೇಶ ನೀಡಲಾಗಿದೆ. ನೌಶಾದ್ ಮತ್ತು ಇತರರ ತಂಡ ಕಂಪನಿ ಹೆಸರಿನಲ್ಲಿ ನಕಲಿ ಗುರುತಿನ ಚೀಟಿ ಬಳಸಿಕೊಂಡು ಅನಧಿಕೃತವಾಗಿ ಬಲ್ಕ್ ತ್ಯಾಜ್ಯ ಸಂಗ್ರಹಿಸಿ ಕಾಡುಗೋಡಿ ವ್ಯಾಪ್ತಿಯ ಸಿದ್ದಾರ್ಥ ಲೇಔಟ್ ಸಮೀಪದಲ್ಲಿರುವ ದಕ್ಷಿಣ ಪಿನಾಕಿನಿ ನದಿಗೆ ಅಕ್ರಮವಾಗಿ ತ್ಯಾಜ್ಯ ಸುರಿಯಲಾಗುತ್ತಿದೆ ಎಂದು ನಾಗರಿಕರ ದೂರು ಆಧರಿಸಿ ಪಾಲಿಕೆ ಅಧಿಕಾರಿಗಳು ನಿರಂತರ ನಿಗಾವಹಿಸಿ ಕಾರ್ಯಾಚರಣೆ ಕೈಗೊಳ್ಳಲಾಯಿತು ಎಂದು ಆಯುಕ್ತರು ಮಾಹಿತಿ ನೀಡಿದರು.

ಕಾಡುಗೋಡಿ ಠಾಣೆಯಲ್ಲಿ ಎಫ್‌ಐಆರ್:

ನಗರ ಪಾಲಿಕೆಯ ಸಹಾಯಕ ಪ್ರಧಾನ ವ್ಯವಸ್ಥಾಪಕರಿಂದ ನೀಡಲಾದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದ್ದು, ವಾಹನಗಳ ಮಾಲೀಕರು, ಚಾಲಕರು, ಸಂಬಂಧಪಟ್ಟ ವ್ಯಕ್ತಿಗಳು ಹಾಗೂ ತ್ಯಾಜ್ಯ ಸುರಿಯಲು ಅವಕಾಶ ನೀಡಿದ ಭೂ ಮಾಲೀಕರ ವಿರುದ್ಧವೂ ಕಾನೂನು ಕ್ರಮ ಜರುಗಿಸಲು ಕಾಡುಗೋಡಿ ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಘನತ್ಯಾಜ್ಯ ನಿರ್ವಹಣಾ ವಿಭಾಗದ ಸಹಾಯ ಪ್ರಧಾನ ವ್ಯವಸ್ಥಾಪಕರು, ಮಾರ್ಷಲ್ ಸೂಪರ್ವೈಸರ್, ವಾರ್ಡ್ ಮಾರ್ಷಲ್, ಆರೋಗ್ಯ ಪರಿವೀಕ್ಷಕರು ಪಾಲ್ಗೊಂಡಿದ್ದರು.
"

ಅಕ್ರಮವಾಗಿ ತ್ಯಾಜ್ಯ ಸುರಿಯುವ ಚಟುವಟಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ. ತ್ಯಾಜ್ಯವನ್ನು ಅನಧಿಕೃತ ಸ್ಥಳಗಳಲ್ಲಿ ಸುರಿಯುವುದು, ಖಾಲಿ ಜಾಗಗಳನ್ನು ಕಸದ ತೊಟ್ಟಿಗಳಾಗಿ ಬಳಸುವುದು ಹಾಗೂ ಅಕ್ರಮ ಸಾಗಣೆ ನಡೆಸುವವರ ವಿರುದ್ಧ ದಂಡಾತ್ಮಕ ಹಾಗೂ ಕ್ರಿಮಿನಲ್ ಕ್ರಮ ಕೈಗೊಳ್ಳಲಾಗುವುದು.

- ಡಿ.ಎಸ್. ರಮೇಶ್, ಪೂರ್ವ ಪಾಲಿಕೆ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net