ಪೀಣ್ಯದ ಕೈಗಾರಿಕೆಗಳಿಗೆ ಅಲ್ಟ್ರಾ ಪ್ಯೂರ್​ ನೀರು | ULTRA PURE WATER

ಜಲಮಂಡಳಿ ಸಂಸ್ಕರಣಾ ಘಟಕ
ಜಲಮಂಡಳಿ ಸಂಸ್ಕರಣಾ ಘಟಕ
Published on

ಪ್ರಮುಖ ಮುಖ್ಯಾಂಶಗಳು

  • ಯೋಜನೆಗೆ ಟೆಂಡರ್​ ಆಹ್ವಾನ
  • ಜಲಮಂಡಳಿ ಅಧ್ಯಕ್ಷ ರಾಮ್​ ಪ್ರಸಾತ್​ ಮನೋಹರ್​ ಮಾಹಿತಿ
ಬೆಂಗಳೂರು: ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಸಂಸ್ಕರಿಸಿದ ನೀರನ್ನು ಪೂರೈಸಲು ಬೆಂಗಳೂರು ಜಲಮಂಡಳಿ ಟೆಂಡರ್​ ಕರೆದಿದೆ. 
ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷ ಡಾ.ರಾಮ್​ ಪ್ರಸಾತ್​ ಮನೋಹರ್​ ಈ ಕುರಿತು ಮಾಹಿತಿ ನೀಡಿ, ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶವಾಗಿರುವ ಪೀಣ್ಯಕ್ಕೆ ಅಡೆತಡೆಯಿಲ್ಲದೆ ಗುಣಮಟ್ಟದ ಸಂಸ್ಕರಿಸಿದ ನೀರನ್ನು ಸರಬರಾಜು ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. "ಮನೆಗಳಿಗೆ ಕಾವೇರಿ, ಕೈಗಾರಿಕೆಗಳಿಗೆ ಅಲ್ಟ್ರಾ ಪ್ಯೂರ್​ ಸಂಸ್ಕರಿಸಿದ ನೀರು' ಎಂಬ ಧ್ಯೇಯದೊಂದಿಗೆ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕಡಿಮೆ ದರದಲ್ಲಿ ನೀರು ಪೂರೈಸುವುದು ನಮ್ಮ ಗುರಿ ಎಂದರು. 
ನಾಗಸಂದ್ರ ತ್ಯಾಜ್ಯ ನೀರು ಸಂಸ್ಕರಣಾ ಘಟಕದಿಂದ ಪಡೆಯಲಾಗುವ 4 ಎಂಎಲ್​ಡಿ ನೀರನ್ನು ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿ ಸಂಸ್ಕರಿಸಲಾಗುತ್ತದೆ. ಅಲ್ಲದೇ ಈ ತ್ಯಾಜ್ಯ ನೀರನ್ನು ಅಲ್ಟ್ರಾ ಪ್ಯೂರ್​ ವಾಟರ್​ ಗುಣಮಟ್ಟಕ್ಕೆ ಶುದ್ಧೀಕರಿಸಿ ಈ ನೀರು ಸರಬರಾಜು ಮಾಡಲಾಗುವುದು. ಈ ಭಾಗದಲ್ಲಿರುವ ಲಕ್ಷಾಂತರ ಕಾರ್ಮಿಕರ ದಿನನಿತ್ಯದ ಬಳಕೆಗಾಗಿ (ಫ್ಲಶಿಂಗ್​ ಮತ್ತು ಇತರೆ ಸ್ವಚ್ಛತಾ ಕಾರ್ಯಗಳಿಗೆ) ಬಳಸಲಾಗುತ್ತಿರುವ ಕುಡಿಯುವ ನೀರನ್ನು ಉಳಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಉತ್ಪಾದನಾ ಪ್ರಕ್ರಿಯೆಯನ್ನು ಹೊರತುಪಡಿಸಿ, ಇತರೆ ಉದ್ದೇಶಗಳಿಗೆ ಈ ಗುಣಮಟ್ಟದ ಸಂಸ್ಕರಿಸಿದ ನೀರನ್ನು ಬಳಸುವುದರಿಂದ, ಲಕ್ಷಾಂತರ ಲೀಟರ್​ ಶುದ್ಧ ಕಾವೇರಿ ನೀರನ್ನು ಉಳಿಸಿ, ಅದನ್ನು ಬೆಂಗಳೂರಿನ ಮನೆಗಳಿಗೆ ಒದಗಿಸಲು ಸಾಧ್ಯವಾಗುತ್ತದೆ ಎಂದರು.
ಟೆಂಡರ್​ ವಿವರ
ಸಂಸ್ಕರಿಸಿದ ನೀರು ಕಲುಷಿತಗೊಳ್ಳದಂತೆ ಮತ್ತು ಅದರ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಮಂಡಳಿಯು ಪ್ರತ್ಯೇಕ ಮೂಲಸೌಕರ್ಯವನ್ನು ನಿರ್ಮಿಸುತ್ತಿದೆ. ಟೆಂಡರ್​ ಅನ್ವಯ ಈ ಕೆಳಗಿನ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು.
* ಪ್ರತ್ಯೇಕ ವಿತರಣಾ ಜಾಲ: ಕೈಗಾರಿಕೆಗಳಿಗೆ ನೀರು ತಲುಪಿಸಲು 27 ಕಿ.ಮೀ. ಉದ್ದದ ಪ್ರತ್ಯೇಕ ಎಚ್​ಡಿಪಿಇ ಕೊಳವೆಮಾರ್ಗ ಜಾಲ
* ಶೇಖರಣೆ ಮತ್ತು ಪಂಪಿಂಗ್​: ಸಂಪ್​ ಮತ್ತು ಪಂಪ್​ಹೌಸ್​ ನಿಮಾರ್ಣ, ಪಂಪಿಂಗ್​ ಯಂತ್ರೋಪಕರಣಗಳು, ಡಿಐ ರೈಸಿಂಗ್​ ಮೇನ್​ ಮತ್ತು 5 ಲಕ್ಷ ಲೀಟರ್​ ಸಾಮರ್ಥ್ಯದ ಮೇಲ್ಮಟ್ಟದ ಜಲಸಂಗ್ರಹಾಗಾರ ನಿಮಾರ್ಣ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net