ಮೋಹನ್‌ದಾಸ್ ಪೈ ಸೇರಿ ಮೂವರು ಸಾಧಕರಿಗೆ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ

national-awards
national-awards
Published on

ಪ್ರಮುಖ ಮುಖ್ಯಾಂಶಗಳು

  • ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನದಿಂದ ಪ್ರಶಸ್ತಿ ಪ್ರಕಟ
  • ಜೂ.27ರಂದು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರಿಂದ ಪ್ರದಾನ
ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸಾಧಕರಿಗೆ ಕೆಂಪೇಗೌಡರ 517ನೇ ಜಯಂತಿ ನಿಮಿತ್ತ ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನ ನೀಡುವ ವಾರ್ಷಿಕ ಪ್ರಶಸ್ತಿಗೆ ಇನ್ಫೋಸಿಸ್ ಸಂಸ್ಥೆಯ ಹಣಕಾಸು ವಿಭಾಗದ ಮಾಜಿ ಮುಖ್ಯಸ್ಥ ಟಿ.ವಿ. ಮೋಹನ್‌ದಾಸ್ ಪೈ, ಚಿತ್ರದುರ್ಗದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿ ಹಾಗೂ ಐಎಫ್​ಎಸ್ ನಿವೃತ್ತ ಅಧಿಕಾರಿ ಎ.ಸಿ. ಲಕ್ಷ್ಮಣ್ ಅವರು ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಈ ತಿಂಗಳ 27ರಂದು ನಾಡಪ್ರಭು ಕೆಂಪೇಗೌಡರ ಜಯಂತಿ ಪ್ರಯುಕ್ತ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಸೇರಿ ಮತ್ತಿತರ ಗಣ್ಯರು ಪುರಸ್ಕೃತರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ. ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಿಗೆ 2 ಲಕ್ಷ ರೂ., 200 ಗ್ರಾಂ ಬೆಳ್ಳಿಯ ಸ್ಮರಣಿಕೆ ಮತ್ತು ರಾಜ್ಯಮಟ್ಟದ ಪುರಸ್ಕೃತರಿಗೆ 25 ಸಾವಿರ ರೂ. ನಗದು ನೀಡಿ ಗೌರವಿಸಲಾಗುತ್ತಿದೆ.
ಈ ಕುರಿತು ಜಂಟಿ ಮಾಧ್ಯಮಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಶಾಸಕ ಡಾ. ಸಿ.ಎನ್. ಅಶ್ವಥ್‌ನಾರಾಯಣ ಹಾಗೂ ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನದ ಅಧ್ಯಕ್ಷ ಕೃಷ್ಣೇಗೌಡ ಅವರು ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದರು. ಜೂ.27ರ ಸಂಜೆ 4 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದು, ರಾಜ್ಯಪಾಲ ಥಾವರಚಂದ್ ಗೆಹಲೋತ್, ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸೇರಿ ಇನ್ನಿತರರು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಧೀರಜ್ ಮುನಿರಾಜು, ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷ ರಾಮಚಂದ್ರಗೌಡ, ಪ್ರತಿಷ್ಠಾನದ ಸಂಚಾಲಕ ಕಾಂತರಾಜ್, ಸಹಸಂಚಾಲಕ ಶಿವನಹಳ್ಳಿ ಮಂಜುನಾಥ್ ಹಾಜರಿದ್ದರು.

15 ಮಂದಿಗೆ ರಾಜ್ಯಪ್ರಶಸ್ತಿ:

ನಾಡಪ್ರಭು ಕೆಂಪೇಗೌಡ ರಾಜ್ಯ ಮಟ್ಟದ ಪ್ರಶಸ್ತಿಗೆ 15 ಅರ್ಹರನ್ನು ಆಯ್ಕೆ ಸಮಿತಿಯು ಆಯ್ಕೆ ಮಾಡಿದೆ. ಆಡಳಿತ, ಶಿಕ್ಷಣ, ಸಂಸ್ಕೃತಿ, ಕೃಷಿ, ಪತ್ರಿಕೋದ್ಯಮ, ಸಾಹಿತ್ಯ, ಸಂಶೋಧನೆ, ಮಹಿಳಾ ಸಬಲೀಕರಣ ಸೇರಿ ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಗುರುತಿಸಲಾಗಿದೆ. ಎಸ್.ವಿ. ರಂಗನಾಥ್, ಎಚ್.ಎ. ರಂಗನಾಥ್, ಎಂ.ಆರ್. ಜೈಶಂಕರ್, ಬಿ.ಎಂ. ಕೊಕರೆ, ಡಾ. ವಾಮದೇವಪ್ಪ, ಕೇಶವ ಆಮೈ, ವಿಕ್ರಮ್ ಮುತ್ತಣ್ಣ, ಜಯಪ್ರಕಾಶ ಗೌಡ, ರವಿಕುಮಾರ್, ಯಶಸ್ವಿನಿ ಶರ್ಮ, ಪ್ರೇಮಾ ಗಣೇಶ್, ರಶ್ಮಿ ಸಾವಂತ್, ತ್ರಿಸ್ಟಾ ರಾಮಮೂರ್ತಿ, ಧರ್ಮೇಂದ್ರ ಹಾಗೂ ಮಹೇಶ್ ಗೌಡ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net